ಹಾಸನ: ಕಸ್ತೂರಿರಂಗನ್ ವರದಿಯನ್ನು ಜಾರಿಗೊಳಿಸಿದರೆ ಪಶ್ಚಿಮಘಟ್ಟದ ಅಪಾರ ನೈಸರ್ಗಿಕ ಸಂಪತ್ತು ಕೇಂದ್ರ ಸರ್ಕಾರದ ಸುಪರ್ದಿಗೆ ಹೋಗಲಿದ್ದು, ಇದರಿಂದ ರೈತರಿಗೆ ಅಪಾಯ ಎದುರಾಗಲಿದೆ ಎಂದು ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಆತಂಕ ವ್ಯಕ್ತಪಡಿಸಿದರು. ಕಸ್ತೂರಿರಂಗನ್
ನಗರದಲ್ಲಿ ಬಿಜಿವಿಎಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಶ್ಚಿಮಘಟ್ಟಗಳು ಇಡೀ ನಾಡಿನ ಜೀವಸೆಲೆಯಾಗಿದ್ದು, ಬಹುತೇಕ ನದಿಗಳ ಉಗಮಕ್ಕೆ ಕಾರಣವಾಗಿರುವುದರ ಜೊತೆಗೆ ಕೋಟ್ಯಂತರ ಜೀವಸಂಕುಲಗಳಿಗೆ ಆಶ್ರಯ ನೀಡಿವೆ. ಇಂತಹ ಅಮೂಲ್ಯ ಪರಿಸರ ಸಂಪತ್ತನ್ನು ಉಳಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.
ಕಸ್ತೂರಿರಂಗನ್ ವರದಿಯನ್ನು ಅಂಗೀಕರಿಸುವುದರ ಹಿಂದೆ ಪಶ್ಚಿಮಘಟ್ಟದ ಸಂಪತ್ತನ್ನು ಬಂಡವಾಳ ಹೂಡಿಕೆದಾರರ ಕೈಗೆ ಒಪ್ಪಿಸಿ ಲೂಟಿ ಮಾಡಲು ಅವಕಾಶ ಕಲ್ಪಿಸುವ ಉದ್ದೇಶವಿದೆ ಎಂಬುದು ತಮ್ಮ ಆತಂಕ ಎಂದು ಅವರು ಹೇಳಿದರು. ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸುವುದರಿಂದ ರೈತರಿಗೆ ಅನುಕೂಲವಾಗುವುದಕ್ಕಿಂತ ಬಂಡವಾಳಶಾಹಿಗಳ ಕೈಗಾರಿಕೆಗಳಿಗೆ ನೀರು ಪೂರೈಸುವ ಉದ್ದೇಶವೇ ಪ್ರಮುಖವಾಗುತ್ತಿದೆ ಎಂದು ಆರೋಪಿಸಿದರು.
ಉತ್ತರ ಕರ್ನಾಟಕದ ಕೈಗಾರಿಕೆಗಳಿಂದ ಹೊರಬರುತ್ತಿರುವ ಅಪಾಯಕಾರಿ ಕಲ್ಮಶಗಳಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದರೂ ಯಾವುದೇ ಸರ್ಕಾರವೂ ಜನರ ಸಮಸ್ಯೆಗಳ ಬಗ್ಗೆ ಅಗತ್ಯ ಕಾಳಜಿ ವಹಿಸುತ್ತಿಲ್ಲ ಎಂದು ಕುಂ. ವೀರಭದ್ರಪ್ಪ ಹೇಳಿದರು. ಪರಿಸರ ಸಂರಕ್ಷಣೆಯ ವಿಚಾರದಲ್ಲಿ ಯಾವುದೇ ಸರ್ಕಾರ ಬಂದರೂ ಪರಿಣಾಮಕಾರಿ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಪದೇಪದೇ ಸಾಬೀತಾಗುತ್ತಿದೆ ಎಂದರು.
ಸಾಂಸ್ಕೃತಿಕ ಮತ್ತು ರಾಜಕೀಯ ಪ್ರಜ್ಞೆಯ ಕೊರತೆಯಿಂದಾಗಿ ದೇಶದಲ್ಲಿ ತಪ್ಪು ನಿರೂಪಣೆಗಳು ರೂಪುಗೊಳ್ಳುತ್ತಿವೆ. ಬೇರೆ ದೇಶಗಳನ್ನು ಸುತ್ತಿ ಡಾಲರ್, ಪೌಂಡ್ಗಳ ಭಾಷೆಯನ್ನು ರೂಢಿಸಿಕೊಳ್ಳುವುದಕ್ಕಿಂತ ನಮ್ಮ ದೇಶವನ್ನೇ ಅರಿಯುವ ಅಗತ್ಯವಿದೆ ಎಂದು ಹೇಳಿದರು. ಕಸ್ತೂರಿರಂಗನ್
ಇದನ್ನೂ ಓದಿ : ಪಶ್ಚಿಮ ಬಂಗಾಳ | ಕ್ರೈಸ್ತರ ಮೇಲೆ ದಾಳಿ ಆರೋಪ: ಮೂರು ತಿಂಗಳಲ್ಲಿ 36 ಪ್ರಕರಣ ದಾಖಲು
ಔರಂಗಜೇಬ್ ಕುರಿತು ವಿಭಿನ್ನ ಅಭಿಪ್ರಾಯ
ಭಾರತದ ಇತಿಹಾಸದ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, ಮೊಘಲ್ ಚಕ್ರವರ್ತಿ ಔರಂಗಜೇಬ್ ಕುರಿತು ಸಮಾಜದಲ್ಲಿ ರೂಪುಗೊಂಡಿರುವ ಚಿತ್ರಣವನ್ನು ಪ್ರಶ್ನಿಸಿದರು. ಔರಂಗಜೇಬ್ ಕ್ರೂರಿ ಎಂಬ ಕಥನವನ್ನು ಕಟ್ಟಲಾಗಿದೆ. ಆದರೆ ಅವರು ತಮ್ಮ ಜೀವನದ ಕೊನೆಯ ಹಂತದಲ್ಲಿಯೂ ಸರಳವಾಗಿ ಬದುಕಿದ್ದರು ಎಂದು ಹೇಳಿದರು.
ಸರ್ಕಾರದ ತೆರಿಗೆ ಹಣವನ್ನು ವೈಯಕ್ತಿಕ ವೈಭವಕ್ಕೆ ಬಳಸದೆ, ಕುರಾನ್ ಪ್ರತಿಗಳನ್ನು ಬರೆದು ಮಾರಾಟ ಮಾಡುವುದರ ಮೂಲಕ ಹಾಗೂ ಟೋಪಿಗಳನ್ನು ಹೊಲಿದು ಸಂಪಾದನೆ ಮಾಡುತ್ತಿದ್ದರು ಎಂಬ ಮಾಹಿತಿಯನ್ನು ಉಲ್ಲೇಖಿಸಿದ ಅವರು, ತಮ್ಮದೇ ದುಡಿಮೆಯಿಂದ ಬದುಕಿದ ರಾಜ-ಚಕ್ರವರ್ತಿಗಳ ಉದಾಹರಣೆಗಳು ಇತಿಹಾಸದಲ್ಲಿ ಅಪರೂಪ ಎಂದರು.
‘ನನ್ನ ಅರಮನೆ’ ಕಾದಂಬರಿ ಭಾಷೆಯ ಪ್ರಯೋಗ
ತಮ್ಮ ‘ನನ್ನ ಅರಮನೆ’ ಕಾದಂಬರಿಯನ್ನು 15 ವರ್ಷಗಳ ಕಾಲ ಬರೆದಿರುವುದಾಗಿ ತಿಳಿಸಿದ ಕುಂ. ವೀರಭದ್ರಪ್ಪ, “ಕಾದಂಬರಿ ಬರೆದೆ ಎನ್ನುವುದಕ್ಕಿಂತ ಭಾಷೆಯನ್ನು ಬರೆದೆ ಎನ್ನುವುದು ಸೂಕ್ತ” ಎಂದರು. ನಾವು ಭಾಷೆಯನ್ನು ದುಡಿಸಿಕೊಂಡಷ್ಟು ಶ್ರೀಮಂತರಾಗುತ್ತೇವೆ. ನಮ್ಮ ಸೀಮೆ ಮತ್ತು ಪ್ರಾದೇಶಿಕತೆಯನ್ನು ಸಾಹಿತ್ಯದಲ್ಲಿ ಬಿಂಬಿಸುವ ಕೆಲಸವಾಗಬೇಕು ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯನ್ನು ಈ ಹಿಂದೆ ವಿರೋಧಿಸಿದ್ದಕ್ಕೆ ತಮ್ಮದೇ ಆದ ಸ್ವತಂತ್ರ ನಿಲುವಿಗಿಂತ ಬಡತನವನ್ನು ಹತ್ತಿರದಿಂದ ಕಂಡ ಅನುಭವ ಕಾರಣವಾಗಿತ್ತು ಎಂದು ಅವರು ಹೇಳಿದರು. ಅನ್ನವನ್ನು ದುಡಿದು ತಿನ್ನಬೇಕು ಎಂಬ ಆಶಯದಿಂದ, ಎಸ್.ಎಲ್. ಭೈರಪ್ಪ ಅವರ ಅಭಿಪ್ರಾಯವನ್ನು ಅನುಸರಿಸಿ ತಾವೂ ವಿರೋಧ ವ್ಯಕ್ತಪಡಿಸಿದ್ದೆ. ಆದರೆ ಸರ್ಕಾರದ ಇತರೆ ಕಾರ್ಪೊರೇಟ್ ಪರ ಯೋಜನೆಗಳು ಮತ್ತು ಸೌಲಭ್ಯಗಳಿಗೆ ಹೋಲಿಸಿದರೆ ಅನ್ನಭಾಗ್ಯದ ಬಗ್ಗೆ ಮಾತ್ರ ಮಾತನಾಡುವುದು ತಪ್ಪು ಎಂಬುದನ್ನು ಈಗ ಅರಿತುಕೊಂಡಿದ್ದೇನೆ ಎಂದು ಹೇಳಿದರು.
ಸಾಹಿತ್ಯ ಪರಿಷತ್ತಿಗೆ ಅಧಿಕಾರಶಾಹಿಗಳು ಬೇಡ
ಕನ್ನಡ ಸಾಹಿತ್ಯ ಪರಿಷತ್ತು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಹಿಡಿತಕ್ಕೆ ಸಿಲುಕಿ ನರಳುತ್ತಿದೆ ಎಂದು ಕುಂ. ವೀರಭದ್ರಪ್ಪ ಆರೋಪಿಸಿದರು. ಮುಂದಿನ ದಿನಗಳಲ್ಲಿ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅಧಿಕಾರಶಾಹಿಗಳು ಬರಬಾರದು ಎಂಬುದು ಕನ್ನಡಿಗರ ನಿಲುವಾಗಬೇಕು ಎಂದರು.
ಹಿಂದೆ ಜಾಣಗೆರೆ ವೆಂಕಟರಾಮಯ್ಯ ಅವರು, ತಾವು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದರಿಂದ ನೊಂದುಕೊಂಡಿದ್ದೆ. ಆ ಹಿನ್ನೆಲೆಯಲ್ಲಿ ಕಸಾಪ ಅಂಗಳಕ್ಕೆ ಹೋಗದಿರುವುದೇ ಉತ್ತಮ ಎಂಬ ನಿಲುವಿಗೆ ಬಂದಿದ್ದೆ ಎಂದು ಅವರು ಹೇಳಿದರು.
ಸಂವಾದದಲ್ಲಿ ಸುಮಾರು 35ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಬಿಜಿವಿಎಸ್ನ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ನೋಡಿ : ಮತದಾರರ ಹಕ್ಕಿಗಾಗಿ ಹೋರಾಟ: SIR ವಿರುದ್ಧ ಪ್ರತಿರೋಧ ಪ್ರವಾಸ! Janashakthi Media
