ಮಂಡ್ಯ : ಧರ್ಮಸ್ಥಳ ಸೌಜನ್ಯ ಪ್ರಕರಣದ ಮರುತನಿಖೆಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ನೀಡಿರುವ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ನಿಷ್ಪಕ್ಷಪಾತ ಹಾಗೂ ನ್ಯಾಯಪರ ತನಿಖೆ ನಡೆಸಲು ಉನ್ನತ ಶ್ರೇಣಿಯ, ದಕ್ಷ ಮತ್ತು ಅಕಳಂಕ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.
ಮಂಡ್ಯ ಸಂಜಯ್ ಸರ್ಕಲ್ ನಲ್ಲಿ ಜನವಾದಿ ಮಹಿಳಾ ಸಂಘಟನೆಯಿಂದ ನಡೆದ ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಕಳೆದ 14 ವರ್ಷಗಳಿಂದ ಸೌಜನ್ಯ ಪ್ರಕರಣ ಸೇರಿದಂತೆ ಧರ್ಮಸ್ಥಳದ ಸುತ್ತಮುತ್ತ ನಡೆದ ಅಸಹಜ ಸಾವುಗಳ ಕುರಿತು ಸತ್ಯವನ್ನು ಬಯಲಿಗೆಳೆಯಬೇಕು ಎಂದು ಕುಟುಂಬಸ್ಥರು ಹಾಗೂ ಜೀವಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಸರ್ವೋಚ್ಚ ನ್ಯಾಯಾಲಯದ ಆದೇಶ ಬಲ ತುಂಬಿದೆ ಎಂದು ಸಂಘಟನೆ ಹೇಳಿದೆ. ಪದ್ಮಲತಾ ಪ್ರಕರಣದ ಕಾಲದಿಂದಲೂ ನ್ಯಾಯಕ್ಕಾಗಿ ಹೋರಾಟ ನಡೆಸಿಕೊಂಡು ಬಂದಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಕರ್ನಾಟಕ ಸರ್ಕಾರ ಯಾವುದೇ ಮರ್ಜಿ, ಮುಲಾಜಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮರುತನಿಖೆ ನಡೆಸಲು ಬದ್ಧವಾಗಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಇಂತಹ ಗಂಭೀರ ಪ್ರಕರಣದಲ್ಲಿ ನ್ಯಾಯದ ಪರ ನಿಲ್ಲುವ ಬದಲು ಇದುವರೆಗಿನ ಸರ್ಕಾರಗಳು ಪ್ರಕರಣಗಳನ್ನು ಮುಚ್ಚಿಹಾಕಲು ಪ್ರಯತ್ನಿಸಿವೆ ಎಂದು ಆರೋಪಿಸಿದರು.
ಧರ್ಮಸ್ಥಳದ ಸುತ್ತಮುತ್ತ ನಡೆದ ಹಲವು ಸಾವುಗಳನ್ನು ‘ಅಸಹಜ ಸಾವು’ ಎಂಬ ಹಣೆಪಟ್ಟಿಯೊಂದಿಗೆ ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಹಾಗೂ ಸೌಜನ್ಯ ಪ್ರಕರಣದಲ್ಲಿ ಸಂತೋಷ್ ರಾವ್ ಅವರನ್ನು ಯಾರನ್ನೋ ರಕ್ಷಿಸುವ ಉದ್ದೇಶದಿಂದ ಆರೋಪಿಯಾಗಿ ಸಿಕ್ಕಿಹಾಕಿಸಲಾಯಿತು ಎಂದು ಸಂಘಟನೆ ದೂರಿದೆ. ಈ ಪ್ರಕರಣದ ಆರಂಭಿಕ ಹಂತದಿಂದಲೂ ಜನವಾದಿ ಮಹಿಳಾ ಸಂಘಟನೆ ಪ್ರತಿಪಾದಿಸುತ್ತಿದ್ದ ಹಲವು ಅಂಶಗಳನ್ನು 2023ರಲ್ಲಿ ಸಿಬಿಐ ನ್ಯಾಯಾಲಯ ಹಾಗೂ ಇದೀಗ ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿರುವುದು ಸಮಾಧಾನ ತಂದಿದೆ ಎಂದರು.
ಇದನ್ನೂ ಓದಿ : ಪಶ್ಚಿಮ ಬಂಗಾಳ | ಕ್ರೈಸ್ತರ ಮೇಲೆ ದಾಳಿ ಆರೋಪ: ಮೂರು ತಿಂಗಳಲ್ಲಿ 36 ಪ್ರಕರಣ ದಾಖಲು
ಈವರೆಗೆ ನಡೆದ ತನಿಖೆ ಹಾಗೂ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಸಾಕ್ಷ್ಯ ನಾಶಪಡಿಸಿ ನ್ಯಾಯ ದೊರೆಯದಂತೆ ಮಾಡಲಾಗಿದೆ ಎಂಬ ಆರೋಪಗಳನ್ನು ಸಂಘಟನೆ ಮುಂದಿಟ್ಟಿದೆ. ಇದು ನಾಡಿನ ಸಾಕ್ಷಿ ಪ್ರಜ್ಞೆಗೇ ಅಪಚಾರವೆಸಗಿದಂತಾಗಿದೆ ಎಂದು ಪ್ರತಿಭಟನೆಕಾರರು ಆರೋಪಿಸಿದರು.
ಸರ್ವೋಚ್ಚ ನ್ಯಾಯಾಲಯವು ಹಿಂದಿನ ತನಿಖೆಯಲ್ಲಿನ ಲೋಪಗಳನ್ನು ಗುರುತಿಸಿ, ಯಾವುದೇ ವ್ಯತ್ಯಯಕ್ಕೆ ಅವಕಾಶ ನೀಡದೆ ಮೂರು ತಿಂಗಳೊಳಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಅಲ್ಲದೆ, ಹಿಂದಿನ ತನಿಖಾ ತಂಡದಲ್ಲಿದ್ದ ಅಧಿಕಾರಿಗಳನ್ನು ಹೊಸ ತಂಡದಲ್ಲಿ ಸೇರಿಸಬಾರದು ಹಾಗೂ ದಕ್ಷ ಮತ್ತು ತಾಂತ್ರಿಕ ಪರಿಣತಿ ಹೊಂದಿರುವ ತಂಡ ರಚಿಸಬೇಕು ಎಂದು ನ್ಯಾಯಾಲಯ ಸೂಚಿಸಿರುವುದಾಗಿ ಸಂಘಟನೆ ಉಲ್ಲೇಖಿಸಿದೆ.
ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿರುವುದನ್ನು ಸ್ವಾಗತಿಸಿರುವ ಸಂಘಟನೆ, ಆದರೆ ಈಗ ರಚಿಸಲಾಗಿರುವ ತಂಡದಲ್ಲಿರುವ ಕೆಲವು ಅಧಿಕಾರಿಗಳ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಆಕ್ಷೇಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ. ಪ್ರಸ್ತುತ ತಂಡದಿಂದ ನ್ಯಾಯಯುತ ತನಿಖೆ ಸಾಧ್ಯವೇ ಎಂಬ ಕುರಿತು ಜನರಲ್ಲಿ ಮೂಡಿರುವ ಅನುಮಾನಗಳನ್ನು ಸರ್ಕಾರ ಗೌರವಿಸಬೇಕು ಎಂದು ಹೇಳಿದೆ.
ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಉನ್ನತ ಶ್ರೇಣಿಯ, ದಕ್ಷ, ತಜ್ಞ, ಅಕಳಂಕ ಹಾಗೂ ಸತ್ಯ-ನ್ಯಾಯನಿಷ್ಠ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯನ್ನು ಪುನರ್‌ರಚಿಸಬೇಕು. ಯಾವುದೇ ಹಂತದಲ್ಲೂ ಯಾರದ್ದೇ ಪ್ರಭಾವಕ್ಕೆ ಒಳಗಾಗದೆ ಸತ್ಯವನ್ನು ಬಯಲಿಗೆಳೆಯಲು ತನಿಖಾ ತಂಡಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸಿದೆ.
ರಾಜ್ಯದ ಮಹಿಳೆಯರು ಘನತೆಯ ಬದುಕು ಮತ್ತು ನ್ಯಾಯಯುತ ನಡವಳಿಕೆಯ ಭರವಸೆಯನ್ನು ನಿರೀಕ್ಷಿಸುತ್ತಿದ್ದಾರೆ. ಸರ್ಕಾರ ಈ ಪ್ರಕರಣದಲ್ಲಿ ಯಾವುದೇ ಹುಸಿತನಕ್ಕೆ ಅವಕಾಶ ನೀಡದೆ ನ್ಯಾಯನಿಷ್ಠೆಯನ್ನು ಸಾಬೀತುಪಡಿಸಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಡಿ.ಕೆ. ಲತಾ, ಜಿಲ್ಲಾ ಕಾರ್ಯದರ್ಶಿ ಸುಶೀಲಾ, ಉಪಾಧ್ಯಕ್ಷರಾದ ಶೋಭಾ ಹಾಗೂ ಜಯಲಕ್ಷ್ಮಿ ಸೇರಿದಂತೆ ಅನೇಕರಿದ್ದರು.
ಇದನ್ನೂ ನೋಡಿ : ಸೌಜನ್ಯ ಪ್ರಕರಣಕ್ಕೆ ಮರುಜೀವ! | ಮತ್ತೆ ಚಿಗುರಿದ ನ್ಯಾಯದ ನಿರೀಕ್ಷೆ Janashakthi Media
