ಶಾ ಜೊತೆಗಿನ ಅನೌಪಚಾರಿಕ ಮಾತುಕತೆ’ ವಿಫಲ : ಸರಕಾರದ ಸಭೆ ಬಹಿಷ್ಕರಿಸಿದ ರೈತರು

6 ನೇ ಸುತ್ತಿನ ಮಾತುಕತೆ ವಿಫಲ

ದೆಹಲಿ: ತಮ್ಮ ಪಾಲಿಗೆ ಮರಣಶಾಸನವಾಗಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದು  ಪ್ರತಿಭಟನೆ 15 ನೇ ದಿನಕ್ಕೆ ಕಾಲಿಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆ ಮಂಗಳವಾರ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿದೆ.

ಅಮಿತ್ ಶಾ  ರೈತ ಸಂಘಟನೆಗಳ 13 ಪ್ರತಿನಿಧಿಗಳ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗಿರುವ ಹಿನ್ನೆಲೆಯಲ್ಲಿ ಬುಧವಾರ ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳೊಂದಿಗೆ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ರೈತರು ಬಹಿಷ್ಕರಿಸಿದ್ದಾರೆ.

ಇದಕ್ಕೂ ಮೊದಲು ರೈತ ಪ್ರತಿನಿಧಿಗಳು ಮತ್ತು ಕೇಂದ್ರ ಸರ್ಕಾರದ ನಡುವೆ 5 ಸಭೆಗಳಾಗಿದ್ದು 5 ಸಭೆಗಳೂ ವಿಫಲವಾಗಿದ್ದವು. ಡಿಸೆಂಬರ್ 9ರಂದು 6ನೇ ಸಭೆ ಕರೆಯಲಾಗಿತ್ತು. ಆದರೆ ಅಮಿತ್ ಶಾ ಜೊತೆ ನಡೆಸಿದ ಸಭೆಯಲ್ಲಿ ಕೇಂದ್ರ ಸರ್ಕಾರ ರೈತರಿಗೆ  ಮರಣಶಾಸನವಾಗಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಲು ಸಿದ್ದವಿಲ್ಲ ಎಂಬುದು ಖಾತರಿಯಾಗುತ್ತಿದ್ದಂತೆ ರೈತರು ಕೇಂದ್ರ ಸರ್ಕಾರದ 6ನೇ ಅಧಿಕೃತ ಸಭೆಯನ್ನು ಬಹಿಷ್ಕರಿಸಿದ್ದಾರೆ ಎಂದು‌ ತಿಳಿದು ಬಂದಿದೆ.

ಈವರೆಗೆ ನಡೆದ 5 ಸಭೆಗಳಲ್ಲಿ ದೇಶದ ವಿವಿಧ ಭಾಗದ ‌35 ರೈತ ಸಂಘಟನೆಗಳ  ಪ್ರತಿನಿಧಿಗಳು ಹಾಗೂ  ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ವಾಣಿಜ್ಯ ವ್ಯವಹಾರಗಳ ಖಾತೆಯ ಸಂಪುಟ ಸಚಿವ ಪಿಯೂಷ್ ಗೋಯಲ್, ರಾಜ್ಯ ಖಾತೆ ಸಚಿವ ಸೋಮ್ ಪ್ರಕಾಶ್ ಭಾಗವಹಿಸಿದ್ದರು.

ಪ್ರತ್ಯೇಕ ಸಭೆ ನಡೆಸಲಿರುವ ರೈತರು :
ಅಮಿತ್ ಶಾ ಜೊತೆ ನಡೆಸಿದ ‘ಅನೌಪಚಾರಿಕ ಮಾತುಕತೆ’ ವಿಫಲವಾಗುತ್ತಿದ್ದಂತೆ ಕೇಂದ್ರ ಸರ್ಕಾರ ರೈತ ಪ್ರತಿನಿಧಿಗಳೊಂದಿಗೆ ಅಧಿಕೃತವಾಗಿ ಕರೆದಿದ್ದ 6ನೇ ಸಭೆಯನ್ನು ರೈತರು ಬಹಿಷ್ಕರಿಸಿದರಲ್ಲದೆ ಇಂದು ತೀವ್ರವಾಗಿ ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಸಿಂಘು  ಗಡಿಯಲ್ಲಿ ಎಲ್ಲಾ ರೈತ ಸಂಘಟನೆಗಳ ಜೊತೆ ಸೇರಿ ಮಾತುಕತೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.

ಇಂದು ಎಲ್ಲಾ ರೈತ ಸಂಘಟನೆಗಳ ಜೊತೆ ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದು ಹೋರಾಟದ ನೇತೃತ್ವ ವಹಿಸಿರುವ  ಎಐಕೆಎಸ್ ಸಿಸಿ  ರಾಷ್ಟ್ರ ಮುಖಂಡರಾದ ಹನನ್ ಮುಲ್ಲಾ ತಿಳಿಸಿದ್ದಾರೆ.  ಈಗಾಗಲೇ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಧರಣಿ, ದೇಶಾದ್ಯಂತ ಹೋರಾಟ ಹಾಗೂ ಭಾರತ್ ಬಂದ್ ನಡೆಸಲಾಗಿತ್ತು. ಇಷ್ಟಾದರು ಸರಕಾರ ಎಚ್ಚೆತ್ತುಕೊಳ್ಳದ ಹಿನ್ನಲೆಯಲ್ಲಿ ರೈತರ ಪ್ರತಿಭಟನೆ ತಾರಕಕ್ಕೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

Donate Janashakthi Media

Leave a Reply

Your email address will not be published. Required fields are marked *