ಜಾದವ್ಪುರದಲ್ಲಿ ಬೀದಿ ವ್ಯಾಪಾರಿಗಳು ಮತ್ತು ಕಾರ್ಮಿಕರ ಉಚ್ಚಾಟನೆ ವಿರೋಧಿ ಹೋರಾಟದ ಮೇಲೆ ಪೊಲೀಸ್ ದಾಳಿ: ಎಸ್‌ಎಫ್‌ಐ ಖಂಡನೆ

ಕೋಲ್ಕತ್ತಾ: ಜಾದವ್ಪುರದಲ್ಲಿ ಬೀದಿ ವ್ಯಾಪಾರಿಗಳು ಮತ್ತು ಅಸಂಘಟಿತ ವಲಯದ ಕಾರ್ಮಿಕರ ಉಚ್ಚಾಟನೆ ವಿರುದ್ಧ ನಡೆಯುತ್ತಿರುವ ಹೋರಾಟದ ಮೇಲೆ ಪೊಲೀಸರು ದಾಳಿ ನಡೆಸಿರುವುದನ್ನು ಭಾರತೀಯ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಕೇಂದ್ರ ಕಾರ್ಯಕಾರಿ ಸಮಿತಿ ತೀವ್ರವಾಗಿ ಖಂಡಿಸಿದೆ. ಶಾಂತಿಯುತ ಪ್ರತಿಭಟನೆಯ ಮೇಲೆ ಬಲಪ್ರಯೋಗ ನಡೆಸಲಾಗಿದ್ದು, ಸಂಘಟನೆಯ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಸೃಜನ್ ಭಟ್ಟಾಚಾರ್ಯ ಅವರನ್ನು ಬಂಧಿಸಿರುವುದನ್ನೂ ಎಸ್‌ಎಫ್‌ಐ ಖಂಡಿಸಿದೆ. ಜಾದವ್ಪುರ

ರೈಲು ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಿಂದ ಬೀದಿ ವ್ಯಾಪಾರಿಗಳು ಹಾಗೂ ಅಸಂಘಟಿತ ವಲಯದ ಕಾರ್ಮಿಕರನ್ನು ತೆರವುಗೊಳಿಸುವ ಕ್ರಮದ ವಿರುದ್ಧ ಹಲವು ಕಾರ್ಮಿಕ ಸಂಘಟನೆಗಳು, ವಿದ್ಯಾರ್ಥಿ ಸಂಘಟನೆಗಳು, ಸಾಂಸ್ಕೃತಿಕ ಕಾರ್ಯಕರ್ತರು ಮತ್ತು ಪ್ರಜಾಸತ್ತಾತ್ಮಕ ಸಂಘಟನೆಗಳು ದೀರ್ಘಕಾಲದಿಂದ ಹೋರಾಟ ನಡೆಸುತ್ತಿವೆ. ಅದರ ಭಾಗವಾಗಿ ಜಾದವ್ಪುರದಲ್ಲಿ ಪ್ರತಿಭಟನಾಕಾರರು ಶಾಂತಿಯುತವಾಗಿ ಸೇರಿದ್ದರು ಎಂದು ಎಸ್‌ಎಫ್‌ಐ ಹೇಳಿದೆ.

ನ್ಯಾಯಾಲಯದ ನಿರ್ದೇಶನಗಳನ್ನು ಪಾಲಿಸದೇ ಉಚ್ಚಾಟನೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಆರೋಪಿಸಿರುವ ಎಸ್‌ಎಫ್‌ಐ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಸಾಂಸ್ಕೃತಿಕ ಕಾರ್ಯಕರ್ತರು, ಕಾರ್ಮಿಕ ಸಂಘಟನೆಗಳ ಸದಸ್ಯರು ಮತ್ತು ಸ್ಥಳೀಯ ನಿವಾಸಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ರಾಜ್ಯಸಭೆಗೆ ಪವನ್ ಖೇರಾ ಆಯ್ಕೆ: “ಕನ್ನಡಿಗರಿಗೆ ಅವಮಾನ” – ಮೋಹನದಾಸ್ ಪೈ ಕಿಡಿ

ಈ ಸಂದರ್ಭದಲ್ಲಿ ಸೃಜನ್ ಭಟ್ಟಾಚಾರ್ಯ ಅವರ ಬಂಧನದ ಜೊತೆಗೆ ಸಿಪಿಐ(ಎಂ) ನಾಯಕ ಹಾಗೂ ಎಸ್‌ಎಫ್‌ಐನ ಮಾಜಿ ಪ್ರಧಾನ ಕಾರ್ಯದರ್ಶಿ ಸುಜನ್‌ ಚಕ್ರವರ್ತಿ ಅವರ ಮೇಲೂ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಸಂಘಟನೆ ಆರೋಪಿಸಿದೆ.

ಈ ಘಟನೆಯನ್ನು ಪ್ರಜಾಸತ್ತಾತ್ಮಕ ಹಕ್ಕುಗಳು ಹಾಗೂ ಪ್ರತಿಭಟನೆಯ ಸಾಂವಿಧಾನಿಕ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಎಸ್‌ಎಫ್‌ಐ ಕೇಂದ್ರ ಸಮಿತಿ ಬಣ್ಣಿಸಿದೆ. ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಜನಾಂದೋಲನಗಳ ಕಾರ್ಯಕರ್ತರ ವಿರುದ್ಧ ಬಲಪ್ರಯೋಗ ನಡೆಸುವುದು ಜನಹೋರಾಟಗಳನ್ನು ಹತ್ತಿಕ್ಕುವ ಪ್ರವೃತ್ತಿಯ ಸಂಕೇತವಾಗಿದೆ ಎಂದು ಹೇಳಿದೆ.

ಬಂಧಿತರಾಗಿರುವ ಸೃಜನ್ ಭಟ್ಟಾಚಾರ್ಯ ಸೇರಿದಂತೆ ಎಲ್ಲರನ್ನೂ ಯಾವುದೇ ಷರತ್ತಿಲ್ಲದೆ ಬಿಡುಗಡೆ ಮಾಡಬೇಕು, ಪ್ರತಿಭಟನಾಕಾರರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯಬೇಕು, ಉಚ್ಚಾಟನೆ ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸಂಕಷ್ಟಕ್ಕೆ ಸಿಲುಕಿರುವ ಬೀದಿ ವ್ಯಾಪಾರಿಗಳು ಮತ್ತು ಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ. ಜೊತೆಗೆ ಪೊಲೀಸ್ ಕ್ರಮದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ದೇಶದಾದ್ಯಂತ ವಿದ್ಯಾರ್ಥಿ-ಯುವಜನರು ಕಾರ್ಮಿಕರು, ಬೀದಿ ವ್ಯಾಪಾರಿಗಳು ಮತ್ತು ಪ್ರಜಾಸತ್ತಾತ್ಮಕ ಹೋರಾಟಗಾರರ ಪರವಾಗಿ ನಿಲ್ಲಬೇಕು ಎಂದು ಎಸ್‌ಎಫ್‌ಐ ಕರೆ ನೀಡಿದ್ದು, ಜೀವನೋಪಾಯದ ಹಕ್ಕು, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ವ್ಯಾಪಕ ಐಕ್ಯ ಹೋರಾಟವನ್ನು ಕಟ್ಟಬೇಕಾಗಿದೆ ಎಂದು ತಿಳಿಸಿದೆ.

ಇದನ್ನೂ ನೋಡಿ : ಇಬ್ಬರು ಬಾಲಕಿಯರ ಬದುಕು ಉಳಿಸಿದ ಹೋರಾಟ | ದೇವದಾಸಿ ಪದ್ಧತಿಗೆ ತಡೆ Janashakthi Media

Donate Janashakthi Media

Leave a Reply

Your email address will not be published. Required fields are marked *