ವಚನ ಚಳವಳಿಯ ಜೀವಪರ ಮೌಲ್ಯಗಳನ್ನು ನಾಶಪಡಿಸುವ ಪ್ರಯತ್ನ; ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ
ಬೆಂಗಳೂರು: ಕನ್ನಡದ ಸಾಂಸ್ಕೃತಿಕ ರಾಯಭಾರಿ ಬಸವಣ್ಣನವರ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿರುವ ಲೇಖಕ ರವಿ ಹಂಜ್ ಹಾಗೂ ಅದಕ್ಕೆ ವೇದಿಕೆ ಒದಗಿಸಿದ ವಿಶ್ವೇಶ್ವರ ಭಟ್ ಅವರ ನಡೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಕರ್ನಾಟಕ ರಾಜ್ಯ ಸಮಿತಿ ತೀವ್ರ ಖಂಡನೆ ವ್ಯಕ್ತಪಡಿಸಿದೆ. ಬಸವಣ್ಣ
ರವಿ ಹಂಜ್ ಅವರು ಬಸವಣ್ಣನವರ ಕುರಿತು ಸುಳ್ಳುಗಳನ್ನು ಬರೆದು ಅದನ್ನೇ ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ಬಸವಣ್ಣ ಮತ್ತು ಕಾಯಕ ಶರಣರಿಗೆ ದ್ರೋಹ ಎಸಗಿದ್ದಾರೆ. ಬಸವಣ್ಣನವರನ್ನು ಕೊಲೆಗಾರ, ಮೋಸಗಾರ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವುದನ್ನು ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ಸಿಪಿಐ(ಎಂ) ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇಂತಹ ಹೇಳಿಕೆಗಳು ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ಉಂಟುಮಾಡುವುದಲ್ಲದೆ, ವಚನ ತತ್ವಗಳಿಗೆ ವಿರುದ್ಧವಾದ ಒಳಸಂಚಿನ ಭಾಗವಾಗಿವೆ. ಬಸವಣ್ಣನವರ ಜೀವಪರ ಮೌಲ್ಯಗಳನ್ನು ತಿರಸ್ಕರಿಸುವ ಪ್ರಯತ್ನವನ್ನು ಪಕ್ಷ ಖಂಡಿಸುತ್ತದೆ ಎಂದು ಹೇಳಿದೆ.
ಕಳೆದ ಹಲವು ವರ್ಷಗಳಿಂದ ಕೋಮುವಾದಿ ನೆಲೆಯ ಬುದ್ಧಿಜೀವಿಗಳು ವಚನ ಚಳವಳಿಯನ್ನು ಅಪ್ರಸ್ತುತಗೊಳಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಗುರುತಿಸಿರುವುದರಿಂದ ಕೋಮುವಾದಿ ಶಕ್ತಿಗಳಿಗೆ ಇದು ನುಂಗಲಾರದ ತುತ್ತಾಗಿದೆ. ವಚನ ಸಾಹಿತ್ಯದ ಮೇಲೆ ದಾಳಿ ನಡೆಸುವ ಮೂಲಕ ಬಸವಣ್ಣನವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವೀಯತೆಯ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಬಸವಣ್ಣ
ಇದನ್ನೂ ಓದಿ : ಕೋಲ್ಕತ್ತಾದಲ್ಲಿ ಪುಸ್ತಕ ಮಳಿಗೆ ಮೇಲಿನ ದಾಳಿ ಖಂಡಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಮೆರವಣಿಗೆ
ಮನುಸ್ಮೃತಿಯ ಮೌಲ್ಯಗಳನ್ನು ಎತ್ತಿಹಿಡಿಯಲು ಸಂವಿಧಾನ ಮತ್ತು ವಚನ ತತ್ವಗಳನ್ನು ತಿರಸ್ಕರಿಸುವ ಪ್ರಯತ್ನಗಳು ನಡೆಯುತ್ತಿವೆ. ಇತ್ತೀಚೆಗೆ ಕನೇರಿಯ ಸ್ವಾಮಿಯ ಮೂಲಕ ವಚನ ತತ್ವಗಳನ್ನು ಮನುವಾದೀಕರಣಗೊಳಿಸುವ ಹುನ್ನಾರಕ್ಕೆ ರಾಜ್ಯದ ಜನತೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ವರ್ಗ, ವರ್ಣ, ಲಿಂಗ ಮತ್ತು ಜಾತಿ ತಾರತಮ್ಯಗಳನ್ನು ತೊಡೆದುಹಾಕಿ ಸಮಾನತೆಯ ನಾಡು ಕಟ್ಟುವ ಉದ್ದೇಶದಿಂದ ನಡೆದ ಚಳವಳಿಯನ್ನು ಇಲ್ಲವಾಗಿಸುವ ಕುತಂತ್ರದ ಹಿಂದೆ ಬಿಜೆಪಿ ಮತ್ತು ಸಂಘಪರಿವಾರದ ರಾಜಕೀಯ ಕೈವಾಡವಿದೆ ಎಂದು ಪಕ್ಷ ದೂರಿದೆ.
ಕನೇರಿಯ ಸ್ವಾಮಿಯ ಕಾರ್ಯಕ್ರಮ ಆಯೋಜಿಸಿರುವುದು ಹಾಗೂ ‘ವಚನ ದರ್ಶನ’ ಎಂಬ ವಚನ ತತ್ವ ವಿರೋಧಿ ಕೃತಿಯ ಬಿಡುಗಡೆಗೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಮುಖಂಡರು ಭಾಗವಹಿಸಿರುವುದು ಈ ಹುನ್ನಾರಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.
ಬಸವಣ್ಣನವರ ಮತ್ತು ವಚನ ತತ್ವಗಳ ಮೇಲೆ ದಾಳಿ ನಡೆಸುತ್ತಿರುವ ಎಲ್ಲ ಶಕ್ತಿಗಳನ್ನು ಸರ್ಕಾರ ಮಟ್ಟಹಾಕಬೇಕು. ರವಿ ಹಂಜ್ ಬಂಧನದೊಂದಿಗೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸುಳ್ಳುಗಳನ್ನು ಪ್ರಕಟಿಸುವ ಮೂಲಕ ರಾಜ್ಯದ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ಉಂಟುಮಾಡಲು ಕಾರಣವಾಗಿರುವ ವಿಶ್ವೇಶ್ವರ ಭಟ್ ಅವರ ಮೇಲೆಯೂ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಡಾ. ಪ್ರಕಾಶ್ ಕೆ. ಅವರು ನವೆಂಬರ್ 21ರಂದು ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಈ ಆಗ್ರಹಗಳನ್ನು ಮಾಡಿದ್ದಾರೆ.
ಇದನ್ನೂ ನೋಡಿ : ‘ಬಸವ ಮಂಟಪ’ ಕೃತಿ ಮುಟ್ಟುಗೋಲು; ರವಿ ಹಂಜ್, ವಿಶ್ವೇಶ್ವರ ಭಟ್ ವಿರುದ್ಧ ಕಾನೂನು ಕ್ರಮ : ಸಂಪುಟ ಸಭೆ ನಿರ್ಣಯ
