ಬೆಂಗಳೂರು:ಕನ್ನಡ ಭಾಷೆ ವಿನಾಶದ ಅಂಚಿನಲ್ಲಿದ್ದು, ಕನ್ನಡದ ಉಳಿವಿಗಾಗಿ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ವಲಸೆ ಬರುವವರು ಕನ್ನಡ ಕಲಿಯಬೇಕು, ಅವರಿಗೆ ಕನ್ನಡ ಕಲಿಸುವ ಜವಾಬ್ದಾರಿ ನಮ್ಮದಾಗಿದೆ. ಆದರೆ ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ ಎಂದು ಚಿತ್ರನಟ ಶ್ರೀನಾಥ್ ವಸಿಷ್ಟ ಕಳವಳ ವ್ಯಕ್ತಪಡಿಸಿದರು.
ತ್ಯಾಗರಾಜ ನಗರ ನಿವಾಸಿಗಳ ಸಂಘ ಹಾಗೂ ನಡಿಗೆದಾರರ ಸಂಘದ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಸಮೃದ್ಧವಾಗಬೇಕಾದರೆ ಎಲ್ಲರೂ ಕನ್ನಡ ಮಾತನಾಡಬೇಕು. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನಗಳನ್ನು ನಾವು ಅನುಸರಿಸಬೇಕು. ಕನ್ನಡದ ಕೆಲಸ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ನಿರಂತರವಾಗಿ ನಡೆಯಬೇಕು. ನಾಗರಿಕರ ಹಕ್ಕುಗಳನ್ನು ಕಾಪಾಡಲು ಹಾಗೂ ರಕ್ಷಿಸಲು ನಾವೆಲ್ಲರೂ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ಕನ್ನಡ ಹೋರಾಟಗಾರ ಹಾಗೂ ಚಿಂತಕ ನಾಗರಾಜ ಕೆ.ಎಸ್. ಮಾತನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಅನೇಕರು ತ್ಯಾಗ ಮಾಡಿದ್ದಾರೆ, ಹೋರಾಟಗಳನ್ನು ನಡೆಸಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ನಾಗರಿಕ ಸಂಘಟನೆಗಳು ಹಾಗೂ ಕನ್ನಡ ಸಂಘಟನೆಗಳು ಮಾತೃಭಾಷೆಯ ಶಿಕ್ಷಣದ ಹಕ್ಕಿಗಾಗಿ ಸರ್ಕಾರಗಳನ್ನು ಎಚ್ಚರಿಸುವ ಹೋರಾಟಗಳನ್ನು ರೂಪಿಸಬೇಕು ಎಂದು ಹೇಳಿದರು.

ಸರ್ಕಾರಿ ಶಾಲೆ ಉಳಿಸಲು ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ನಡೆಸುತ್ತಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನೂರಾರು ಜನರು ಅಭಿಯಾನಕ್ಕೆ ಬೆಂಬಲ ಸೂಚಿಸಿ ಸಹಿ ದಾಖಲಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರಾದ ಚಂದ್ರಶೇಖರ್, ಮುಖಂಡರಾದ ಗಿರಿವಾಸಲು, ಬಸವನಗುಡಿ ಗ್ಯಾರಂಟಿ ಸಮಿತಿ ಅಧ್ಯಕ್ಷ ತೇಜಸ್ ಕುಮಾರ್, ಕಾಳೇಗೌಡ, ಕುಮಾರ ಟೂಲ್ಸ್, ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಭಾಕರ, ಚಲುವಮ್ಮ, ಯೋಗ ಶಿಕ್ಷಕಿ ರುಕ್ಮಿಣಿ, ಕಳಕಪ್ಪ, ಮುಕುಂದ್, ಭಾಸ್ಕರ್, ರಾಜು, ಸಂಪತ್, ಪ್ರಕಾಶ್, ಶಿವಕುಮಾರ್, ಶ್ರೀಕಾಂತ್, ಶ್ರೀನಿವಾಸ, ನರಸಿಂಹಲು, ಎಸ್ಎಫ್ಐ ರಾಜ್ಯಾಧ್ಯಕ್ಷ ಗಣೇಶ್, ವೆಂಕಟೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
