ಭದ್ರಾವತಿ : ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿನ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಮುಚ್ಚುವ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಭದ್ರಾವತಿಯಲ್ಲಿ ಇಂದು ವಿವಿಧ ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಭದ್ರಾವತಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದವು. ಬೆಳಗ್ಗೆ 6 ಗಂಟೆಯಿಂದ ನೀಡಿದ್ದ ಬಂದ್ ಕರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈ ಕಾರ್ಖಾನೆಯನ್ನು ಮುಚ್ಚಲು ಬಿಡುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.
ನಗರದ ಜೀವನಾಡಿಯಾಗಿರುವ ಕಾರ್ಖಾನೆಯ ಉಳಿವಿಗಾಗಿ ಕರೆ ನೀಡಿದ್ದ ಭದ್ರಾವತಿ ಬಂದ್ ಗೆ ಬಹುತೇಕ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದರು. ಬೆಳಗ್ಗೆಯಿಂದಲೇ ಬಂದ್ ಕರೆಗೆ ಒಳ್ಳೆಯ ಪ್ರತಿಕ್ರಿಯೆ ದೊರೆಯಿತು. ಬಸ್ ನಿಲ್ದಾಣದ ಎದುರಿನ ವೃತ್ತ ಹಾಗೂ ಅಂಡರ್ ಬ್ರಿಡ್ಜ್ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾಕಾರರು ಟೈಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಮತ್ತು ಕೇಂದ್ರ ಸರ್‍ಕಾರಗಳ ವಿರುದ್ಧ ಘೋಷಣೆ ಕೂಗಿದರು.
ವಿಐಎಸ್‌ಎಲ್‌ನ ಅಪಾರ ಕಾರ್ಮಿಕರ ಜೀವನ ನಿರ್ವಹಣೆಗೆ ಕಾರಣವಾಗಿದ್ದ ಈ ಕಾರ್ಖಾನೆ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. 100 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಹೆಮ್ಮೆಯ ಆಸ್ತಿಯನ್ನು ತನ್ನ ನೀತಿಯ ಹೊರತಾಗಿಯೂ ಈಗಿನ ತಂತ್ರಜ್ಞಾನ ಬಳಸಿ ಆಧುನೀಕರಣಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಹೆಚ್ಚಿನ ಬಂಡವಾಳ ತೊಡಗಿಸಿ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸಬೇಕು ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಭದ್ರಾವತಿ ಉಕ್ಕು ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಲು ಪ್ರಧಾನಿಗೆ ಹೆಚ್.ಡಿ.ದೇವೇಗೌಡ ಪತ್ರ
ಸ್ವಯಂ ಪ್ರೇರಿತ ಬಂದ್, ಉಕ್ಕಿನ ನಗರಿ ಸ್ತಬ್ಧ : ಬಂದ್ ಗೆ ಸ್ವಯಂಪ್ರೇರಿತಾಗಿ ವ್ಯಾಪಾರಸ್ಥರು ಬೆಂಬಲ ನೀಡಿದ್ದ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲದೇ, ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತ ಬಂದ್ ಮಾಡಿದ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರ ಬಿಸಿ ಸಾರ್ವಜನಿಕರಿಗೆ ತಟ್ಟಿತ್ತು. ಬಸ್, ಆಟೋ ಸಂಚಾರ ನಗರದಲ್ಲಿ ಕಂಡುಬರಲಿಲ್ಲ. ಶಾಲಾ, ಕಾಲೇಜ್ ಗಳನ್ನು ಬಂದ್ ಮಾಡಲಾಗಿತ್ತು. ಕಚೇರಿಗಳಲ್ಲಿ ಜನಸಂದಣಿ ಇರಲಿಲ್ಲ. ಬಂದ್ ಗೆ ವಕೀಲರು ಬೆಂಬಲಿಸಿ ಕಲಾಪದಿಂದ ದೂರ ಉಳಿದಿದ್ದರು. ಆಸ್ಪತ್ರೆ, ಮೆಡಿಕಲ್ ಶಾಪ್, ತುರ್ತು ಸೇವೆಗಳು ಮಾತ್ರ ಲಭ್ಯವಾಗಿತ್ತು. ಅಲ್ಲದೆ ನಗರ ವ್ಯಾಪ್ತಿಯ ಎಲ್ಲಾ ಬ್ಯಾಂಕುಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು. ನಗರ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ, ನಗರಸಾರಿಗೆ ಹಾಗೂ ರಸ್ತೆ ಸಂಚಾರ ಇರಲಿಲ್ಲ.
ವಿಐಎಸ್‌ಎಲ್ ಗೇಟ್ ಮುಂಭಾಗದಿಂದ ಹೊರಟ ಪ್ರತಿಭಟನೆಕಾರರು, ಅಂಬೇಡ್ಕರ್ ವೃತ್ತ, ಬಿ.ಹೆಚ್. ರಸ್ತೆ, ರಂಗಪ್ಪ ವೃತ್ತದ ಮೂಲಕ ತಾಲೂಕು ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು. ಇಂದಿನ ಮುಷ್ಕರಕ್ಕೆ ನಗರ ವರ್ತಕರ ಸಂಘ, ವಿತರಕರ ಸಂಘ, ಮೊಬೈಲ್ ವರ್ತಕರ ಸಂಘ ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಬಲ ನೀಡಿದ್ದವು. ಪ್ರತಿಭಟನೆಯಲ್ಲಿ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್ ಸೇರಿದಂತೆ ನೂರಾರು ಜನರಿದ್ದರು.