ಕಲ್ಕತ್ತಾ ಫೆ 12 : ಪಶ್ಚಿಮ ಬಂಗಾಳದಲ್ಲಿನ ಶಿಕ್ಷಣ ಸುಧಾರಣೆಗೆ ಹಾಗೂ ಉದ್ಯೋಗಗಳ ಸೃಷ್ಟಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿ ಯುವಜನರ ಮೇಲೆ ಮಮತಾ ಬ್ಯಾನರ್ಜಿ ಸರಕಾರ ಲಾಠೀ ಬೀಸಿ ಅಮಾನವೀಯವಾಗಿ ನಡೆದುಕೊಂಡಿದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ನಿವಾರಿಸುವಂತೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಲು ಉದ್ಯೋಗ ಸೃಷ್ಟಿಗೆ ಆಗ್ರಹಿಸಿ ಎಸ್‌ಎಫ್‌ಐ, ಡಿವೈಎಫ್‌ಐ ಮತ್ತು ಇತರ ಎಡ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ರ‌್ಯಾಲಿಯನ್ನು ಆಯೋಜಿಸಿದ್ದವು. ಶಾಂತಿಯುತವಾಗಿ ಹೊರಟಿದ್ದ ಮೆರವಣಿಗೆಯ ಮೇಲೆ ಪೊಲೀಸರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಲಾಠಿ ಚಾರ್ಜ್ ನಡೆಸಿ, ಜಲ ಫಿರಂಗಿ ಹಾಗೂ ಅಶ್ರುವಾಯು ಬಳಸಿ ಅಮಾನವೀಯವಾಗಿ ಪ್ರತಿಭಟನೆಕಾರರ ಮೇಲೆ ಮನಬಂದಂತೆ ಥಳಿಸಲಾಗಿದೆ.
ಪೊಲೀಸರು ನಡೆಸಿದ ದೌರ್ಜನ್ಯದಲ್ಲಿ ನೂರಾರು ಜನರು ಗಾಯಗೊಂಡಿದ್ದು, ಬಹಳಷ್ಟು ಜನರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಬಂದಿಸಲಾಗಿದೆ. ಎಸ್‌ಎಫ್‌ಐನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಮಯೂಕ್ ಬಿಸ್ವಾಸ್, ಅಖಿಲ ಭಾರತ ಜಂಟಿ ಕಾರ್ಯದರ್ಶಿ ದೀಪ್ಸಿತಾ ಧಾರ್, ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಸೃಜನ್ ಭಟ್ಟಾಚಾರ್ಯ ಮತ್ತು ಎಸ್‌ಎಫ್‌ಐ ರಾಜ್ಯ ಅಧ್ಯಕ್ಷ ಪ್ರತಿಕೂರ್ ರೆಹಮಾನ್ ಸೇರಿದಂತೆ ಅನೇಕ ಎಸ್‌ಎಫ್‌ಐ ಮುಖಂಡರಿಗೆ ಸಾಕಷ್ಟು ಗಾಯಗಳಾಗಿವೆ.
ಮಮತಾ ಬ್ಯಾನರ್ಜಿ ಸರ್ಕಾರವು ತನ್ನ ಆಡಳಿತದಲ್ಲಿ ಪಶ್ಚಿಮ ಬಂಗಾಳದಲ್ಲಿ ಉದ್ಯೋಗ ಸೃಷ್ಟಿ ಮತ್ತು ಶೈಕ್ಷಣಿಕ ಸೌಲಭ್ಯಗಳನ್ನು ಸುಧಾರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಪರಿಣಾಮ, ರಾಜ್ಯ ಸರ್ಕಾರವು ಈ ಹಿಂದೆ ಇದ್ದ ಅನುಕೂಲಕರ ಪರಿಸ್ಥಿತಿಗಳನ್ನು ನಾಶಪಡಿಸಲು ಮುಂದಾಗಿದೆ ಎಂದು ಎಸ್.ಎಫ್.ಐ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಮಯೂಕ್ ಬಿಸ್ವಾಸ್ ಆರೋಪಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಮತ್ತು ಉದ್ಯೋಗ ಸೌಲಭ್ಯಗಳನ್ನು ನಾಶಮಾಡುವಲ್ಲಿ ಟಿಎಂಸಿ ಸರ್ಕಾರ ಕೇಂದ್ರ ಬಿಜೆಪಿ ಸರ್ಕಾರದ ಪಾಲುದಾರ ಪಾತ್ರವನ್ನು ವಹಿಸಿತ್ತು. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ವಿದ್ಯಾರ್ಥಿಗಳು ಮತ್ತು ಯುವಕರ ಧ್ವನಿಯ ಬಗ್ಗೆ ಯಾವುದೇ ಗಮನ ಹರಿಸದ ಸರ್ಕಾರ ಈಗ ಹಿಂಸಾತ್ಮಕ ವಿಧಾನಗಳನ್ನು ಬಳಸಿಕೊಂಡು ಅವರ ಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ. ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ – ಯುವಜನರ ಮೇಲೆ ಹಲ್ಲೆ ನಡೆಸಿರುವುದು ಟಿಎಂಸಿ ಸರಕಾರದ ಗೂಂಡಾಗಿರಿಯನ್ನು ಪ್ರದರ್ಶಿಸುತ್ತದೆ ಎಂದು ಪಶ್ಚಿಮ ಬಂಗಾಳ ಎಸ್.ಎಪ್.ಐ ಕಾರ್ಯದರ್ಶಿ ಸೃಜನ್ ಭಟ್ಟಾಚಾರ್ಯ ತಿಳಿಸಿದ್ದಾರೆ.
“ಸರ್ವರಿಗೂ ಶಿಕ್ಷಣ ಮತ್ತು ಸರ್ವರಿಗೂ ಉದ್ಯೋಗ” ಬೇಡಿಕೆಗಾಗಿ ನಡೆಸುತ್ತಿರುವ ಹೋರಾಟದಿಂದ ಎಸ್‌ಎಫ್‌ಐ ಹಿಂದೆ ಸರಿಯುವುದಿಲ್ಲ. ಮಮತಾ ಬ್ಯಾನರ್ಜಿ ಸರ್ಕಾರದ ದಾಳಿ, ದಬ್ಬಳಿಕೆ, ವಿದ್ಯಾರ್ಥಿ – ಯುವಜನ, ಕಾರ್ಮಿಕ, ರೈತ ವಿರೋಧಿ ನೀತಿಗಳ ವಿರುದ್ಧ ಇನ್ನಷ್ಟು ಪ್ರಭಲ ಹೋರಾಟಗಳನ್ನು ಸಂಘಟಿಸುವುದಾಗಿ ಸಂಘಟನೆಗಳು ತಿಳಿಸಿವೆ.