ಬಿಜೆಪಿ ಸರ್ಕಾರವನ್ನು ಸಾರ್ವಜನಿಕರ ಕೋಪದಿಂದ ಕಾಪಾಡಲು ಆರ್‌ಎಸ್‌ಎಸ್ ಮುಖ್ಯಸ್ಥರು ವಿಭಜನಕಾರಿ ವಿಷಯಗಳನ್ನು ಎತ್ತುತ್ತಿದ್ದಾರೆ – ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ

ನವದೆಹಲಿ: ಆರ್‌ಎಸ್‌ಎಸ್ ಸರಸಂಘಚಾಲಕ್ ಮೋಹನ್ ಭಾಗವತ್ ಆಗಸ್ಟ್ 28ರಂದು ದಿಲ್ಲಿಯಲ್ಲಿ ಮಾಡಿದ ಭಾಷಣದಲ್ಲಿನ ಹೇಳಿಕೆಗಳು ಭಾರತೀಯ ಸಂವಿಧಾನದ ಬಗ್ಗೆ ಆರ್‌ಎಸ್‌ಎಸ್‌ನ ಅನಾದರವನ್ನು ಪ್ರತಿಬಿಂಬಿಸುತ್ತವೆ ಮತ್ತು ಅವು ನಾಡಿನ ಕಾನೂನನ್ನು ಉಲ್ಲಂಘಿಸುತ್ತವೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಬಿಜೆಪಿ

ದೆಹಲಿಯಲ್ಲಿ ಆಯ್ದ ಪ್ರೇಕ್ಷಕರ ಮುಂದೆ ತಮ್ಮ ಮೂರು ದಿನಗಳ ಭಾಷಣದಲ್ಲಿ, ಮೋಹನ್ ಭಾಗವತ್ ಮಥುರಾ ಮತ್ತು ಕಾಶಿ ವಿವಾದಗಳನ್ನು ಮತ್ತೆ ಪ್ರಚೋದಿಸಲು ಪ್ರಯತ್ನಿಸಿದರು. ‘ಸಹೋದರತ್ವ’ದ ಒಂದು ಪೂರ್ವಭಾವಿ ಷರತ್ತಾಗಿ ಮುಸ್ಲಿಮರು ಈ ಎರಡು ಸ್ಥಳಗಳಲ್ಲಿನ ಮಸೀದಿಗಳನ್ನು ‘ಬಿಟ್ಟುಕೊಡಬೇಕು’ ಎಂದು ಅವರು ಆಗ್ರಹಿಸಿದರು.

ಆರ್‌ಎಸ್‌ಎಸ್ ಭಾಗಿಯಾಗಿದ್ದ ಬಾಬರಿ ಮಸೀದಿ ಧ್ವಂಸದ ನಂತರ, ಸಂಸತ್ತು 1947 ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಯಾವುದೇ ಧಾರ್ಮಿಕ ಸ್ಥಳವನ್ನು ಬದಲಾಯಿಸುವುದನ್ನು ನಿಷೇಧಿಸುವ ಕಾನೂನನ್ನು ಅಂಗೀಕರಿಸಿತು.

ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಒತ್ತಾಯಿಸಿ ಸಿಎಂ ಗೆ ಪತ್ರ

ಈ ಕಾನೂನಿನ ಪ್ರಕಾರ, ಬಹುಸಂಖ್ಯಾತ ಕೋಮುವಾದಿ ಶಕ್ತಿಗಳ ದಾವೆಗಳೇನೇ ಇದ್ದರೂ, ಮಥುರಾ ಮತ್ತು ಕಾಶಿ ಎರಡರಲ್ಲೂ ಮತ್ತು ಇತರ ಎಲ್ಲಾ ಪೂಜಾ ಸ್ಥಳಗಳಲ್ಲಿಯೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಅಂತಹ ಬೇಡಿಕೆಗಳು ಕೋಮು ಭಾವೋದ್ವೇಗಗಳನ್ನು ಕೆರಳಿಸುವ, ಸಾರ್ವಜನಿಕ ಗಮನವನ್ನು ಬೇರೆಡೆಗೆ ತಿರುಗಿಸುವ ಮತ್ತು ಸಮಾಜವನ್ನು ಮತೀಯವಾಗಿ ಧ್ರುವೀಕರಿಸುವ ಗುರಿಯನ್ನು ಹೊಂದಿವೆ.

ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಬಿಜೆಪಿ ಸರ್ಕಾರವನ್ನು ಸಾರ್ವಜನಿಕರ ಕೋಪದಿಂದ ಕಾಪಾಡಲು ಆರ್‌ಎಸ್‌ಎಸ್ ಮುಖ್ಯಸ್ಥರು ಈ ವಿಭಜನಕಾರಿ ವಿಷಯಗಳನ್ನು ಎತ್ತುತ್ತಿದ್ದಾರೆ. ಬಹಳ ಕಾಲದಿಂದಲೂ, ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುವಾಗಲೆಲ್ಲಾ ಕೋಮು ವಿಭಜನೆಗಳನ್ನು ಪ್ರಚೋದಿಸುವುದು ಆರ್‌ಎಸ್‌ಎಸ್ ಮತ್ತು ಅದರ ಅಂಗಸಂಸ್ಥೆಗಳ ಚಾಳಿಯಾಗಿದೆ.

ಹೆಚ್ಚಿನ ಯುಎಸ್ ಸುಂಕಗಳು, ದುರ್ಬಲಗೊಳ್ಳುತ್ತಿರುವ ಅರ್ಥವ್ಯವಸ್ಥೆ, ರೈತರು ಮತ್ತು ಕಾರ್ಮಿಕರ ಮೇಲೆ ಹೆಚ್ಚುತ್ತಿರುವ ದಾಳಿಗಳು ಮತ್ತು ಚುನಾವಣಾ ದುರಾಚರಣೆಗಳು ಹಾಗೂ ಕೈವಾಡಗಳ ಬಗ್ಗೆ ಹೆಚ್ಚುತ್ತಿರುವ ಪುರಾವೆಗಳಿಂದಾಗಿ, ಸಾರ್ವಜನಿಕರು ಬಿಜೆಪಿ ನೇತೃತ್ವದ ಸರ್ಕಾರದ ಬಗ್ಗೆ ಹೆಚ್ಚೆಚ್ಚು ಭ್ರಮನಿರಸನಗೊಳ್ಳುತ್ತಿದ್ದಾರೆ ಮತ್ತು ಅದರ ವೈಫಲ್ಯಗಳನ್ನು ಹೆಚ್ಚು ಸ್ಪಷ್ಟವಾಗಿ ನೋಡುತ್ತಿದ್ದಾರೆ.

ಆರ್‌ಎಸ್‌ಎಸ್‌ನ ವಿಭಜನಕಾರಿ ಧೋರಣೆಗಳ ವಿರುದ್ಧ ಜಾಗರೂಕರಾಗಿರಲು ಸಿಪಿಐ(ಎಂ) ದೇಶದ ಜನರಿಗೆ ಕರೆ ನೀಡುತ್ತದೆ ಎಂದಿರುವ ಪೊಲಿಟ್‍ಬ್ಯುರೊ, ಭಾರತದ ಐಕ್ಯತೆ ಮತ್ತು ಸಮಗ್ರತೆಯು ಅತ್ಯಂತ ಮಹತ್ವದ್ದಾಗಿದೆ ಮತ್ತು ಯಾವುದೇ ಬೆಲೆ ತೆತ್ತಾದರೂ ಅದನ್ನು ರಕ್ಷಿಸಬೇಕು ಮತ್ತು  ಇದನ್ನು ಸಾಧಿಸಲು, ಎಲ್ಲಾ ಜನವಿಭಾಗಗಳ ಜನರನ್ನು ಒಗ್ಗೂಡಿಸಿ ವಿಶಾಲ ಆಧಾರದ ಪ್ರತಿರೋಧವನ್ನು ಕಟ್ಟುವುದು ತುರ್ತು ಅಗತ್ಯವಾಗಿದೆ ಎಂದು ಹೇಳಿದೆ.

ಇದನ್ನೂ ನೋಡಿ: ಧರ್ಮಸ್ಥಳ | ದೂರುದಾರರಿಗೆ ರಕ್ಷಣೆ – ಸಾಕ್ಷಿ ರಕ್ಷಣಾ ಸ್ಕೀಮ್ ಏನು ಹೇಳುತ್ತದೆ?Janashakthi Media

Donate Janashakthi Media

Leave a Reply

Your email address will not be published. Required fields are marked *