ವಸಾಹತುಶಾಹಿ ‘ದೇಶದ್ರೋಹ ಕಾನೂನು’ ರದ್ದು; ಕಠಿಣ ಶಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಪರಿಚಯ?

ವಶಾಹತುಶಾಹಿ ಕಾಲದ ದೇಶದ್ರೋಹ ಕಾನೂನೆಂಬ ತೋಳವು ಕುರಿಗಳ ಉಡುಪಿನಲ್ಲಿ ಮರಳಿ ಬಂದಿದೆ ಎಂದು ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ

ನವದೆಹಲಿ: ಒಕ್ಕೂಟ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಂಡಿಸಿದ ಹೊಸ ಮಸೂದೆಯು “ದೇಶ ದ್ರೋಹ ಕಾನೂನನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತದೆ” ಎಂದು ಘೋಷಿಸಿದ್ದಾರೆ. ದೇಶ ದ್ರೋಹ ಕಾನೂನನ್ನು ರದ್ದು ಮಾಡಬೇಕು ಎಂದು ಮಾನವ ಹಕ್ಕುಗಳ ಗುಂಪುಗಳು ಬಹುಕಾಲದಿಂದ ಆಗ್ರಹಿಸುತ್ತಲೆ ಬಂದಿದ್ದವು. ಆದರೆ ಹೊಸದಾಗಿ ಪರಿಚಯಿಸಲಾದ ಮಸೂದೆಯಲ್ಲಿ ‘ದೇಶದ್ರೋಹ’ ಕಾನೂನನ್ನು ಕೇಂದ್ರ ಸರ್ಕಾರ ಹೊಸ ರೂಪದಲ್ಲಿ ವಾಪಾಸು ತಂದಿದೆ ಎಂದು ತೀವ್ರ ಆಕ್ರೋಶಗಳು ವ್ಯಕ್ತಪವಾಗಿವೆ.

ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆಗೆ ಬದಲಿಯಾಗಿ ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ ಮಸೂದೆ, ಭಾರತೀಯ ನ್ಯಾಯ ಸಂಹಿತಾ ಮಸೂದೆ ಮತ್ತು ಭಾರತೀಯ ಸಾಕ್ಷಿ ಮಸೂದೆಗಳನ್ನು ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಈ ಹೊಸ ಮೂರು ಮಸೂದೆಗಳ ಅಂಗೀಕಾರಕ್ಕಾಗಿ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗುತ್ತದೆ.

ಇದನ್ನೂ ಓದಿ: ದೇಶ ದ್ರೋಹ – ರಾಜ್ಯದೊಂದಿಗೆ ಸರ್ಕಾರದ ಅತಾರ್ಕಿಕ ಸಮೀಕರಣ

ಇದಕ್ಕಾಗಿ ನಾಲ್ಕು ವರ್ಷಗಳಿಂದ ತಯಾರಾಗಿದ್ದೇವೆ, ಈ ಮಸೂದೆಯು ಶಿಕ್ಷೆಯ ಬದಲು ನ್ಯಾಯದ ಮೇಲೆ ಕೇಂದ್ರೀಕರಿಸುತ್ತೇವೆ ಎಂದು ಅಮಿತ್‌ ಶಾ ಹೇಳಿದ್ದು, “ಈ ಮಸೂದೆ ಶಾಸನವಾದರೆ ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ದೇಶದ್ರೋಹ ಕಾನೂನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A ಅಡಿಯಲ್ಲಿ ಇದೆ. ಆದರೆ ಇಂದು ಮಂಡಿಸಿದ ಹೊಸ ಮಸೂದೆಯಾದ ‘ಭಾರತೀಯ ನ್ಯಾಯ ಸಂಹಿತೆ’ಯಲ್ಲಿ ಇದು ಸೆಕ್ಷನ್ 150ರಲ್ಲಿ ಪರಿಚಯಿಸಲಾಗಿದ್ದು, ಈ ಸೆಕ್ಷನ್ “ದೇಶದ ವಿರುದ್ಧದ ಅಪರಾಧಗಳ” ಕುರಿತು ಮಾತನಾಡುತ್ತದೆ.

 

ಭಾರತೀಯ ನ್ಯಾಯ ಸಂಹಿತೆ ಮಸೂದೆಯು ಗುಂಪು ಹತ್ಯೆಗೆ ಮರಣದಂಡನೆ ಶಿಕ್ಷೆ ನೀಡುವುದನ್ನು ಕೂಡಾ ಒಳಗೊಂಡಿದೆ. ಹೊಸ ಮಸೂದೆಗಳ ಬಗ್ಗೆ ದೇಶದ ಖ್ಯಾತ ಜನಪರ ವಕೀಲರು ಮತ್ತು ಪತ್ರಕರ್ತರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಹೊಸ ರೂಪದಲ್ಲಿ ದೇಶ

ದ್ರೋಹ ಕಾನೂನನ್ನು ಪರಿಚಯಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ಚಳುವಳಿಯಿಂದ ಹಿಂದೆ ಸರಿಯಲು ಬ್ರಿಟಿಷರಿಗೆ ಮುಚ್ಚಳಿಕೆ ಬರೆದುಕೊಟ್ಟ ದೇಶ ದ್ರೋಹಿ ಸಾವರ್ಕರ್ !

 

ಪತ್ರಕರ್ತೆ ಧನ್ಯಾ ರಾಜೇಂದ್ರನ್ ಅವರು ಹೊಸ ಮಸೂದೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, “ದೇಶ ದ್ರೋಹ ಕಾನೂನು ಹಿಂಪಡೆಯಲಾಗಿದೆ ಎಂದು ಅಮಿತ್ ಶಾ ಹೇಳುತ್ತಾರೆ. ಜನರು ಮಸೂದೆಯನ್ನು ಓದುವುದಿಲ್ಲ ಎಂದು ಅವರು ಭಾವಿಸಿದ್ದಾರೆಯೆ?” ಎಂದು ಪ್ರಶ್ನಿಸಿದ್ದಾರೆ.

ಕಾನೂನು ಪತ್ರಕರ್ತ ಉತ್ಕರ್ಷ್ ಆನಂದ್ ಕೂಡಾ ತಮ್ಮ ಅಸಮಾಧಾನ ಹೊರ ಹಾಕಿದ್ದು, “ದೇಶದ್ರೋಹ ಕಾನೂನನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರವು ಹೇಳುತ್ತಿದೆ. ಆದರೆ ಭಾರತೀಯ ಸಂಹಿತಾ ಸುರಕ್ಷಾ ಮಸೂದೆಯ ಅಡಿಯಲ್ಲಿ ಮತ್ತೊಂದು ನಿಬಂಧನೆಯ ರೂಪದಲ್ಲಿ ಅದನ್ನು ತರಲಾಗಿದೆ. ಈ ಮಸೂದೆಯಲ್ಲಿ ಶಿಕ್ಷೆಯನ್ನು 3 ವರ್ಷದಿಂದ 7 ವರ್ಷಕ್ಕೆ ಹೆಚ್ಚಿಸುವ ಕಾನೂನು ಆಯೋಗದ ಶಿಫಾರಸನ್ನು ಸೆಕ್ಷನ್ 150 ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕಳೆದ ಹತ್ತು ವರ್ಷಗಳಲ್ಲಿ ದೇಶ ದ್ರೋಹಿ ಪ್ರಕರಣ ದಾಖಲಾಗಿದ್ದು ಎಷ್ಟು ಗೊತ್ತೆ?

ಖ್ಯಾತ ವಕೀಲರಾದ ಪ್ರಶಾಂತ್ ಭೂಷನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, “ಅದ್ಭುತ! ಯಾವುದೇ ಬಹಿರಂಗಪಡಿಸುವಿಕೆ ಅಥವಾ ಚರ್ಚೆಯಿಲ್ಲದೆ ನಮ್ಮೆಲ್ಲರ ಮೇಲೆ ಪರಿಣಾಮ ಬೀರುವ 3 ಪ್ರಮುಖ ಕಾನೂನುಗಳನ್ನು ಈ ಅಧಿವೇಶನದ ಕೊನೆಯಲ್ಲಿ ಪರಿಚಯಿಸಲಾಗಿದೆ. ವಶಾಹತುಶಾಹಿ ಕಾಲದ ದೇಶದ್ರೋಹ ಕಾನೂನೆಂಬ ತೋಳವು ಕುರಿಗಳ ಉಡುಪಿನಲ್ಲಿ ಮರಳಿ ಬಂದಿದೆ. ಇದು ಮೋದಿಯವರ ನವಭಾರತದ ಹೊಸ ಪ್ರಜಾಪ್ರಭುತ್ವ!” ಎಂದು ಹೇಳಿದ್ದಾರೆ.

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಅವರು, “ಐಪಿಸಿಯ ಸೆಕ್ಷನ್ 124 ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ದೇಶ ದ್ರೋಹ ಕಾನೂನನ್ನು ‘ಸಂಪೂರ್ಣವಾಗಿ’ ರದ್ದುಗೊಳಿಸಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ತಿಳಿಸಿದರು. ಆದರೆ ಸಂಸತ್ತಿನಲ್ಲಿ ಪರಿಚಯಿಸಲಾದ ಹೊಸ ಭಾರತೀಯ ಸಂಹಿತಾ ಸುರಕ್ಷಾ ಬಿಲ್‌ನ ಸೆಕ್ಷನ್ 150 ‘ದೇಶ ದ್ರೋಹ’ದಂತಹ ಪ್ರಕರಣಗಳನ್ನು ಮುಂದುವರಿಸಲು ಸಾಕಷ್ಟು ಅವಕಾಶವನ್ನು ನೀಡುತ್ತದೆ. ಇದು ಸುಪ್ರೀಂಕೋರ್ಟ್‌ನ ಪರಿಶೀಲನೆಯಲ್ಲಿ ತೇರ್ಗಡೆಯಾಗುವುದೇ? ಅಂದಹಾಗೆ, ಸುಧಾರಣೆಯು ಮೊದಲು 2006 ರಲ್ಲಿ ಸುಪ್ರೀಂಕೋರ್ಟ್‌ ಕಡ್ಡಾಯಗೊಳಿಸಿದ ಪೊಲೀಸ್ ಸುಧಾರಣೆಯೊಂದಿಗೆ ಪ್ರಾರಂಭವಾಗಬೇಕು. ಕಾನೂನು ಜಾರಿ ಮಾಡುವವರು ಬದಲಾಗದಿದ್ದರೆ ಕಾನೂನಿನ ಬದಲಾವಣೆಯಿಂದ ಏನು ಪ್ರಯೋಜನ?” ಎಂದು ಅವರು ಪ್ರಶ್ನಿಸಿದ್ದಾರೆ.

ವಸಾಹತುಶಾಹಿ ಕಾಲದ ದೇಶ ದ್ರೋಹ ಕಾನೂನನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ ಎಂದು ಒಕ್ಕೂಟ ಸರ್ಕಾರವು ಹೇಳಿದ್ದರೂ, ಅದೇ ರೀತಿಯ ಕಾನೂನಗಳಾದ UAPA ಮತ್ತು NSA ನಂತಹ ಇತರ ಕಾನೂನುಗಳು ಹಾಗೆ ಮುಂದುವರಿಯಲಿವೆ. ಈ ಕಾನೂನು ಕೂಡಾ ಸರ್ಕಾರದ ವಿರುದ್ಧ ಮಾತನಾಡುವ ಜನರ ವಿರುದ್ಧ ದುರ್ಬಳಕೆಯಾಗುತ್ತಿದೆ ಎಂದು ವ್ಯಾಪಕ ಆರೋಪಗಳಿವೆ.

ಇದನ್ನೂ ಓದಿ:ವಿಡಿಯೊ ನೋಡಿ: ಸೌಜನ್ಯ ಕೊಲೆ ಪ್ರಕರಣ : ಧರ್ಮಾಧಿಕಾರಿಗಳೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಿರಾ? ಪತ್ರಕರ್ತ ಅಗ್ನಿ ಶ್ರೀಧರ ಪ್ರಶ್ನೆ

Donate Janashakthi Media

Leave a Reply

Your email address will not be published. Required fields are marked *