ಕೆರೆಯ ಮಣ್ಣನ್ನು ನುಂಗಿದ “ಸರ್ಕಾರಿ ನೌಕರರ ಸಂಘದ ಅಧ್ಯಕ್ಷ”! 71 ಲಕ್ಷರೂ ವಂಚನೆ!!

ಗುರುರಾಜ ದೇಸಾಯಿ

ಸಂಘದ ಅಧ್ಯಕ್ಷರಾದವರು, ಸದಸ್ಯರ ಸಮಸ್ಯೆಗಳನ್ನು ಆಲಿಸುವುದು, ಅವರಿಗೆ ನ್ಯಾಯ ಕೊಡಿಸುವುದು ಕರ್ತವ್ಯ,  ಆದರೆ ಆ ಅಧ್ಯಕ್ಷನಿಗೆ ರಾಜಕೀಯ ಅಮಲು ಏರಿದರೆ ಏನೆಲ್ಲ ಅನಾಹುತವಾಗಲಿದೆ ಎಂಬುದಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಈಗ ಸಾಕ್ಷಿಯಾಗಿದ್ದಾರೆ.

ಹೌದು, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮತ್ತು ಶಿವಮೊಗ್ಗ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಸಿ ಎಸ್‌ ಷಡಕ್ಷರಿ, ಶಿವಮೊಗ್ಗದ ಅಬ್ಬಲಗೆರೆಯ ಹೊರವಲಯದಲ್ಲಿರುವ ಮುದ್ದಣ್ಣನಕೆರೆಯಲ್ಲಿ ಕಾನೂನುಬಾಹಿರವಾಗಿ ಹೂಳು (ಮಣ್ಣು) ತೆಗೆಯುವ ಮೂಲಕ ಭ್ರಷ್ಟಾಚಾರದಲ್ಲಿ ಸಿಲುಕಿಕೊಂಡಿದ್ದಾರೆ.

ಆಗಸ್ಟ್‌ 10 ರಂದು ರಾಯಚೂರು ಜಿಲ್ಲೆಯ ವಿಶ್ವವಿದ್ಯಾಲಯದ ತನಿಖಾ ವರದಿ ಕುರಿತು ಜನಶಕ್ತಿ ಮೀಡಿಯಾ ವರದಿ ಮಾಡಿತ್ತು, ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಹಗರಣದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇಂದು ಇಂತದ್ದೆ ತನಿಖಾ ವರದಿ ಜನಶಕ್ತಿ ಮೀಡಿಯಾಗೆ ಲಭ್ಯವಾಗಿದೆ.  ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ ಸಿ ಶಿವಪ್ಪರವರು ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಆರ್.ಸೆಲ್ವಮಣಿಯವರಿಗೆ ಜುಲೈ 13 ರಂದು ವರದಿ ನೀಡಿದ್ದಾರೆ. ವರದಿ ನೀಡಿ ಬರೋಬ್ಬರಿ ಎರಡು ತಿಂಗಳಾಗುತ್ತಾ ಬರುತ್ತಿದೆ, ಆದರೆ ಆ ವರದಿ ಇನ್ನೂ ಸರ್ಕಾರದ ಕೈ ಸೇರಿದಂತೆ ಕಾಣುತ್ತಿಲ್ಲ. “ವೀರಾ”ರಿಬ್ಬರ ಕರಾಮತ್ತಿನಿಂದಾಗಿ ಷಡಕ್ಷರಿಗೆ ರಕ್ಷಣೆ ಸಿಕ್ಕಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಅಕ್ರಮ ಬಯಲಿಗೆ ಬಂದಿದ್ದು ಹೇಗೆ?: ಅಬ್ಬಲಗೆರೆ ಗ್ರಾಮದ ಮುಖಂಡ ಜಗದೀಶ್‌ ಎನ್ನುವವರು, ಕೆರೆಯ ಹೂಳನ್ನು ಅಕ್ರಮವಾಗಿ ತೆಗೆಯಾಲಿಗಿದ್ದು, ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಮೇ 25, 2023  ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತಾರೆ.  ಜೂನ್‌ 09 ರಂದು ಸ್ಥಳಕ್ಕೆ ಭೇಟಿ ನೀಡಿ ತನಿಖಾ ವರದಿ ನೀಡುವಂತೆ ಶಿವಮೊಗ್ಗ ಜಿ.ಪಂ ಮುಖ್ಯ ಕಾರ್ಯನಿರ್ವಾಕ ಅಧಿಕಾರಿಗಳಿಗೆ ಸೂಚಿಸುತ್ತಾರೆ. ಅದರಂತೆ ಸಿಇಒ ಕೆ.ಸಿ.ಶಿವಪ್ಪ ರವರು ಜಿಲ್ಲಾಧಿಕಾರಿಗಳಿಗೆ ಜುಲೈ 13, 2023 ರಂದು ವರದಿ ನೀಡಿರುತ್ತಾರೆ. ಈ ವರದಿ  ಷಡಕ್ಷರಿಯವರ ಅಕ್ರಮಗಳನ್ನು ಬಯಲು ಮಾಡಿದ್ದು, ಸರ್ಕಾರಿ ನೌಕರರ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ವರದಿಯಲ್ಲಿ ಏನಿದೆ? ಬಿ ಜಗದೀಶ್ ಅವರ ದೂರನ್ನು ಆದರಿಸಿ ತನಿಖೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ಆದೇಶಿಸಿದ್ದರು. ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಅವರ ಸಿಬ್ಬಂದಿ 35 ಎಕರೆ 4 ಗುಂಟೆ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯವನ್ನು ಕೈಗೊಂಡು ವರದಿ ನೀಡಿತ್ತುಆ ವರದಿಯ ಪ್ರಕಾರ ಲೇಔಟ್ ಕೆಲಸಕ್ಕೆ ಷಡಕ್ಷರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 500 ಟ್ರಕ್ ಮಣ್ಣು ತೆಗೆಯಲು ಅನುಮತಿ ಪಡೆದಿದ್ದು ಅಬ್ಬಲಗೆರೆ ಗ್ರಾಮ ಪಂಚಾಯಿತಿಯಿಂದ ನಿರಾಕ್ಷೇಪಣೆ ಪತ್ರವನ್ನು ಪಡೆದಿರುತ್ತಾರೆ. ಅನುಮತಿ ಪಡೆದಿದ್ದು 500 ಟ್ರಕ್ ಮಣ್ಣು ಎತ್ತಲು ಆದರೆ,  ಎತ್ತಿದ ಮಣ್ಣಿನ ಪ್ರಮಾಣ 15004 ಟ್ರಕ್ ಗಳಷ್ಟು.  10 ಎಕರೆ ಪ್ರದೇಶದಲ್ಲಿ 1, 20, 032,00 ಕ್ಯೂಬಿಕ್ ಮೀಟರ್‌ನಷ್ಟು ಮಣ್ಣನ್ನು ತೆಗೆಯಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಕಾನೂನು ಬಾಹಿರವಾಗಿ ಮಣ್ಣು ತೆಗೆದು ಖಾಸಗಿ ಲೇಔಟ್ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲಾಗಿದೆ ಹಾಗೂ ಇದರಿಂದಾಗಿ 71 ಲಕ್ಷ ರೂ, ಯಷ್ಟು ರಾಯಧನ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿರಾಯಚೂರು ವಿವಿಯಲ್ಲಿ ಕೋಟ್ಯಾಂತರ ರೂ. ಅನುದಾನ ದುರ್ಬಳಕೆ : ಶೇ 900 ಹೆಚ್ಚುವರಿ ಹಣ ಪಾವತಿ!

ಶಿವಮೊಗ್ಗ ನೌಕರರ ಗೃಹ ನಿರ್ಮಾಣ ಸಹಕಾರಿ ಸಂಘವು ಕೇವಲ  56 ಸಾವಿರ ರೂಪಾಯಿಗಳನ್ನು ಮಾತ್ರ  ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ರಾಯಧನ ಪಾವತಿಸಿದೆ.  ತೆಗೆದಿರುವ ಮಣ್ಣಿನ ಪ್ರಮಾಣಕ್ಕೆ ಲೆಕ್ಕ ಹಾಕಿದರೆ 72 ಲಕ್ಷ ರಾಯಧನವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಲೇಔಟ್ ಕೆಲಸಕ್ಕೆ ಮುನ್ನು ತೆಗೆದಿರುವ ಈ ಕಾರ್ಯವು ಸಂಪೂರ್ಣ ಕಾನೂನುಬಾಹಿರವಾಗಿದೆ ಎಂದು ಸಹ ವರದಿಯಲ್ಲಿ ಹೇಳಲಾಗಿದೆ.

ಸದರಿ ಕೆರೆಯನ್ನು 1921 ರಲ್ಲಿ ನಿರ್ಮಾಣ ಮಾಡಲಾಗಿದೆ. 103 ವರ್ಷಗಳ ಹಳೆಯದಾದ ಈ ಕೆರೆಯಲ್ಲಿ 3 ಅಡಿಯಷ್ಟು ಮಾತ್ರ ಹೂಳು ಸಂಗ್ರಹವಾಗಿತ್ತು. ಈ ಮೂರು ಅಡಿ ಹೂಳನ್ನು ಮಾತ್ರ ಅನುಮತಿ ಪಡೆದು ತೆಗೆಯಲು ಅವಕಾಶವಿರುತ್ತದೆ. ಆದರೆ ಇಲ್ಲಿ ಬರೋಬ್ಬರಿ 15 ಅಡಿ ಆಳದ ವರೆಗೆ ಹೂಳನ್ನು ತೆಗೆಯಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹೂಳು ತೆಗೆದರೆ ನೀರಿನ ಸಂಗ್ರಹ ಹೆಚ್ಚಾಗಿ, ಕೆರೆಯ ಏರಿಯ ಮುಖಾಂತರ ನೀರು ಸೋರಿಕೆಯಾಗಿ ಕೆರೆ ಒಡೆಯುವ ಅಪಾಯ ಹೆಚ್ಚಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನಶಕ್ತಿ ಮೀಡಿಯಾಗೆ ಲಭ್ಯವಾದ ವರದಿಯ ಪ್ರತಿ 

 

ಈ ಕುರಿತು ದೂರುದಾರ ಹಾಗೂ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್‌ರವರು ಜನಶಕ್ತಿ ಮೀಡಿಯ ಜೊತೆ ದೂರವಾಣಿ ಮೂಲಕ ಮಾತನಾಡಿ, ಷಡಕ್ಷರಿಯವರು ಕೋಟ್ಯಾಂತರ ರೂ ಭ್ರಷ್ಟಾಚಾರ ಮಾಡಿದ್ದಾರೆ. ತನಿಖಾ ವರದಿಯಿಂದ ಅದು ಬಹಿರಂಗ ಗೊಂಡಿದೆ.  ವರದಿ ಸಲ್ಲಿಸಿ 25 ದಿನಗಳಾದರೂ ಷಡಕ್ಷರಿ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಇನ್ನೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ವಿಳಂಬ ಮಾಡುತ್ತಿದ್ದಾರೆ. ಅವರು ತಮ್ಮ ಅಧಿಕಾರದ ಪ್ರಭಾವವನ್ನು, ರಾಜಕೀಯ ಪ್ರಭಾವವನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಹಾಗೂ ಇಲಾಖೆ ಕಟ್ಟುನಿಟ್ಟಿ ತನಿಖೆ ನಡೆಸಿದರೆ ಇನ್ನಷ್ಟು ಅಕ್ರಮಗಳು ಬಯಲಿಗೆ ಬರಲಿವೆ. ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದೇನೆ, ನನ್ನ ಹೋರಾಟ ನಿರಂತರವಾಗಿರಲಿದೆ ಎಂದು ತಿಳಿಸಿದ್ದಾರೆ.

ಈ ಕುರಿತು ಸಿ.ಎಸ್‌. ಷಡಕ್ಷರಿಯವರು ಜನಶಕ್ತಿ ಮೀಡಿಯ ಜೊತೆ ಸ್ಪಷ್ಟನೆ ನೀಡಿದ್ದು, ಇನ್ನೂ ಜಿಲ್ಲಾಧಿಕಾರಿಗಳಿಂದ ತನಿಖಾ ವರದಿ ಬಂದಿಲ್ಲ. ಈ ಅಕ್ರಮಕ್ಕೂ ನನಗೂ ಯಾವುದೆ ಸಂಬಂಧವಿಲ್ಲ. ನಾನು ತಪ್ಪಿತಸ್ಥ ಎಂದು ಸಾಬೀತಾದರೆ ಶಿಕ್ಷೆ ಅನುಭವಿಸಲು ಸಿದ್ದನಿದ್ದೇನೆ ಎಂದು ತಿಳಿಸಿದ್ದಾರೆ.

ಮೇರಿ ದೇವಾಸಿಯೋ ಎಂಬ ಪ್ರಾಮಾಣಿಕ ಮಹಿಳಾ ನೌಕರರೊಬ್ಬರು ಕಟ್ಟಿದ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಷಡಕ್ಷರಿಯವರು ಕಳಂಕ ತಂದಿದ್ದಾರೆ, ನೌಕರರ ಹಿತಾಸಕ್ತಿಯನ್ನು ಗಮನಿದಲ್ಲಿಟ್ಟುಕೊಂಡು ವರದಿಯಲ್ಲಿನ ಸತ್ಯಾಂಶವನ್ನು ಒಪ್ಪಿಕೊಂಡು ಸಂಘದ ಘನೆತೆಯನ್ನು ಕಾಪಾಡಬೇಕಿದೆ. ಇಂತಹ ನೌಕರರು ರಾಜಕೀಯ ಪ್ರಭಾವ ಬಳಸಿ ನಡೆಸುವ ಭ್ರಷ್ಟಾಚಾರವನ್ನು ಸರ್ಕಾರ ಬೇರು ಸಮೇತ ಕಿತ್ತು ಹಾಕಬೇಕಿದೆ ಎಂದು ಹೆಸರು ಹೇಳಲಿಚ್ಚಿಸದ ನೌಕರರೊಬ್ಬರು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಕ್ರಮದ ಬಗ್ಗೆ ಇನ್ನಷ್ಟು ತನಿಖೆಯನ್ನು ನಡೆಸಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *