ರೈತರಿಗೆ ₹20 ಸಾವಿರ ಕೋಟಿ ಸಾಲ ವಿತರಿಸುವ ಗುರಿ: ಮುಖ್ಯಮಂತ್ರಿ ಬಿ.ಎಸ್.ವೈ

ಕಲಬುರಗಿ: ‘ಪ್ರಸಕ್ತ ವರ್ಷದಲ್ಲಿ ರಾಜ್ಯದ ಸುಮಾರು 90 ಲಕ್ಷ ರೈತರಿಗೆ ₹20,810 ಕೋಟಿ ಸಾಲ ನೀಡುವ ಗುರಿಯನ್ನು ಹೊಂದಿರುವುದಾಗಿ’’ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಕಲಬುರ್ಗಿ–ಯಾದಗಿರಿ ಜಿಲ್ಲೆಯ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ರೈತರಿಗೆ ಸಾಲ ವಿತರಣೆ ಯೋಜನೆಯ ಅಂಗವಾಗಿ ರೈತರಿಗೆ ಸಾಲದ ಚೆಕ್‌ ವಿತರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ರಾಜ್ಯದ 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ₹ 19,370 ಕೋಟಿ ಅಲ್ಪಾವದಿ ಬೆಳ ಸಾಲ, 60 ಲಕ್ಷ ರೈತರಿಗೆ ಶೇ 3ರಷ್ಟು ಬಡ್ಡಿ ದರದಲ್ಲಿ ₹ 1,440 ಕೋಟಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ನೀಡಲಾಗುವುದು’ ಎಂದರು.

ಇದನ್ನು ಓದಿ: ದಾಯ ಕೊರತೆ ಅನುದಾನ: ಕೇಂದ್ರದಿಂದ ರಾಜ್ಯಕ್ಕೆ 135.92 ಕೋಟಿ ರೂ. ಬಿಡುಗಡೆ

ರಾಜ್ಯದಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆ ಆಗುತ್ತಿದೆ. ಉತ್ತಮ ಬೆಳೆ ನಿರೀಕ್ಷೆಯಲ್ಲಿರುವ ರೈತರು ಹಾಗೂ ಜನಸಾಮಾನ್ಯರ ನೆರವಿಗಾಗಿ ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಲಬುರಗಿ, ಯಾದಗಿರಿ ಜಿಲ್ಲೆಗಳ 1,437 ಗ್ರಾಮದ ರೈತರಿಗೆ ಕೃಷಿ, ಕೃಷಿಯೇತರ ಸಾಲ ವಿತರಣೆ ಮಾಡಲಾಗುತ್ತಿದೆ. ರೈತರು, ಗ್ರಾಹಕರ ನೆರವಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ 10 ಸಾವಿರ ರೈತರಿಗೆ ₹50 ಕೋಟಿ ಸಾಲ ನೀಡುತ್ತಿರುವ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಬ್ಯಾಂಕ್ ನ ಕಾರ್ಯ ಉತ್ತಮವಾದ ಬೆಳವಣಿಗೆ ಎಂದು ಶ್ಲಾಘಿಸಿದರು.

ರಾಜ್ಯದಲ್ಲಿ 5,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕಾರ್ಯಕ್ಷಮತೆ ಹೆಚ್ಚಿಸಲು ₹198 ಕೋಟಿ ವೆಚ್ಚದಲ್ಲಿ ಕಂಪ್ಯೂಟರೀಕರಣ ಮಾಡಲಾಗುತ್ತಿದೆ ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಾತನಾಡಿ “ಕಳೆದ ವರ್ಷ 17 ಲಕ್ಷ ರೈತರಿಗೆ ₹ 15,300 ಕೋಟಿ ಸಾಲ ನೀಡಬೇಕು ಎಂಬ ಗುರಿಯನ್ನು ಮುಖ್ಯಮಂತ್ರಿ ಅವರು ನೀಡಿದ್ದರು. ಆದರೆ, ₹ 16,795 ಕೋಟಿ ಸಾಲ ನೀಡಿದ್ದೇವೆ. ಶೇ 95ರಷ್ಟು ಸಾಲ ವಸೂಲಿ ಮಾಡಲಾಗಿದೆ. ಈ ವರ್ಷ 30 ಲಕ್ಷ ರೈತರಿಗೆ ₹ 20,810 ಕೋಟಿ ಸಾಲ ನೀಡುವ ಗುರಿಯನ್ನು ನೀಡಲಾಗಿದೆ’’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜ ಕುಮಾರ ಪಾಟೀಲ ತೆಲ್ಕೂರ ಸಂಸದ ಡಾ.ಉಮೇಶ ಜಾಧವ ಸಹ ಮಾತನಾಡಿದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಆರ್.ಸಜ್ಜನ, ನಿರ್ದೇಶಕರಾದ ಸೋಮಶೇಖರ ಗೋನಾಯಕ, ಗೌತಮ ವೈ.ಪಾಟೀಲ, ಶರಣಬಸಪ್ಪ ಪಾಟೀಲ ಅಷ್ಟಗಿ, ಸೋಮಶೇಖರ ಗೋನಾಯಕ, ಅಶೋಕ ಸಾವಳೇಶ್ವರ, ಬಾಪುಗೌಡ ಡಿ.ಪಾಟೀಲ, ಶಿವಾನಂದ ಎ.ಮಾನಕರ, ಗುರುನಾಥರೆಡ್ಡಿ ಪಿ.ಹಳಿಸಗರ, ಬಸವರಾಜ ಎ.ಪಾಟೀಲ, ಸಿದ್ರಾಮರೆಡ್ಡಿ ಎ.ಕೌಳೂರು ಉಪಸ್ಥಿತರಿದ್ದರು.

Donate Janashakthi Media

Leave a Reply

Your email address will not be published. Required fields are marked *