ಪುರುಷಾಧಿಕಾರದ ಅಮಲೇರಿದರೆ…

ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು
ಹೆಣ್ಣೆಂದರೆ ಗಂಡಿನ ಸ್ವತ್ತು ಎಂದೇ ತಿಳಿದಿರುವ ಈ ಜಗತ್ತಿನಲ್ಲಿ… ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಿಗೆಲ್ಲ ಬಹಳ ಸುಲಭವಾಗಿ ಸಬೂಬು ದೊರಕಿಬಿಡುತ್ತದೆ. ಅಷ್ಟೇ ಸುಲಭವಾಗಿ ಅದನ್ನು ಸಮಾಜವು ಒಪ್ಪಿಬಿಡುತ್ತದೆ.

ಹೆಣ್ಣು ಧಾರ್ಮಿಕವಾಗಿ, ಜಾತೀಯತೆಯಿಂದಾಗಿ, ವರ್ಗ – ವರ್ಣ ಪ್ರಣೀತವಾಗಿ, ನಡವಳಿಕೆಗಳಿಗೆ ತಕ್ಕಂತೆ ಈ ಸಮಾಜದಲ್ಲಿ ಗೌರವವನ್ನು ಪಡೆಯುತ್ತಾಳೆ ಅದೂ ಲಾಭದ ಉದ್ದೇಶವಿದ್ದಾಗ ಮಾತ್ರ. ಒತ್ತಡಗಳು, ಶ್ರೀಮಂತಿಕೆ, ಜಾತೀಯತೆಯ ಅಮಲೇರಿದರೆ ಹೆಣ್ಣಿನ ಎಷ್ಟೋ ಕೊಲೆಗಳು ಹೇಳ ಹೆಸರಿಲ್ಲದಂತೆ ಹೋಗಿಬಿಡುತ್ತದೆ.

ಪ್ರೀತಿಸಿ ಮದುವೆಯಾದರೆ ಹುಡುಗ ಕೆಳಜಾತಿಯವನಾದರೆ ತಂದೆ, ಅಣ್ಣ, ತಮ್ಮಂದಿರಿಂದಲೇ ಮರ್ಯಾದಾಗೇಡು ಹತ್ಯೆಗಳು ನಡೆಯುತ್ತವೆ. ಈ ನಾಚಿಕೆಗೇಡಿನ ಕೆಲಸಕ್ಕೆ ಕೊಲೆ ಮಾಡಿದರೂ ಅದಕ್ಕೊಂದು ಗೌರವಯುತವಾದ ಪದ ಬೇರೆ ಇದೆ. ಅದೇ “ಮರ್ಯಾದೆ”. ಅಂತಹ ಕೊಲೆಗಳಿಗೆಲ್ಲಿದೆ ನ್ಯಾಯ? ಹೆಣ್ಣು ಪ್ರೀತಿಯನ್ನು ಒಪ್ಪಲಿಲ್ಲವೆಂದರೆ ಬರ್ಬರವಾಗಿ ಕೊಲೆಯಾಗುತ್ತಾಳೆ ಇಂತಹ ಮಾನಸಿಕ ಅಸ್ವಸ್ಥರು ಅದೆಷ್ಟು ಕ್ರೂರಿಗಳಾಗಿರುತ್ತಾರೆ… ಅದೂ ಜೊತೆಯಲ್ಲಿದ್ದುಕೊಂಡೇ… ಪ್ರೀತಿಗೆ ಜಾತಿ, ಧರ್ಮದ ಗಡಿರೇಖೆಗಳು ಅಡ್ಡ ಬಂದರೂ ಅದನ್ನು ಮೀರಿ ಬದುಕಿದವರೂ, ಬದುಕುತ್ತಿರುವವರೂ ನಮ್ಮ ನಡುವೆ ಇದ್ದಾರೆ. ಹೆಣ್ಣು ಒಪ್ಪಲಿಲ್ಲ ಎಂದಾಗ ಒಂದು ಕಾಲದಲ್ಲಿ ಆಸಿಡ್ ದಾಳಿಗೆ ಬಲಿಯಾಗುತ್ತಿದ್ದಳು, ಸಾಮೂಹಿಕ ಅತ್ಯಾಚಾರಕ್ಕೆ ಈಡಾಗುತ್ತಿದ್ದಳು, ಆದರೆ ಈಗ ಕೊಲೆಯಾಗುತ್ತಿದ್ದಾಳೆ. ಅಂದಿನಿಂದ ಇಂದಿನವರೆಗೂ ಏನಾದರೂ ಬದಲಾವಣೆ ಆಗಿದೆಯಾ ಎಂದು ಗಮನಿಸಿದಾಗ, ಬದಲಾಗಿರುವುದು ಶೋಷಣೆಯ ರೂಪಗಳು ಮಾತ್ರವೇ ಹೊರತು ಬೇರೇನೂ ಅಲ್ಲ.

ಪುರುಷ ಹೆಣ್ಣನ್ನು ತನ್ನ ಅಧಿಕಾರ ಕೇಂದ್ರ ಅಂತ ತಿಳಿದುಕೊಂಡಿರುವ ಮನಸ್ಥಿತಿ ಸಡಿಲವಾಗುವ ಸ್ಥಿತ್ಯಂತರಗಳು ಮಾತ್ರ ಎದುರಾಗುತ್ತಿಲ್ಲ. ಹೆಣ್ಣಿನ ಆಯ್ಕೆಗಳಿಗೆ ಗೌರವ ಕೊಡುವ, ಆಕೆಯ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುವ ಮನಸ್ಥಿತಿಯೇ ರೂಪುಗೊಳ್ಳದಿರುವಾಗ ಇನ್ನೂ ಮಾನವೀಯತೆ ಎಂಬುದು ದೂರದ ಮಾತೇ ಸರಿ. ಹೆಣ್ಣು ಗಂಡಿನ ಪರಿಧಿಯಲ್ಲಿ ಮಾನವೀಯತೆಯ ನೆಲೆಯ ಹೊರಗಿದ್ದಾಳೆ. ಹೆಣ್ಣಿಗೆ ಪುರುಷ ವಿಧಿಸಿರುವ ಕಟ್ಟುಪಾಡುಗಳನ್ನು ಮೀರದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮತ್ತದೇ ಹೆಣ್ಣಿಗೆ ವಹಿಸಲಾಗಿದೆ… ಬೇರೆಯವರ ಕಣ್ಣಿನ ಮೂಲಕ ನೋಡುವ ಜಗತ್ತು ಯಾವತ್ತೂ ತನಗೆ ಬೇಕಾದದ್ದನ್ನೂ ನೋಡುವುದೂ ಇಲ್ಲ. ಕೊಡುವುದೂ ಇಲ್ಲ. ಪುರುಷ ಪಾರಮ್ಯ ನೆಲೆಯಲ್ಲಿ ಹೆಣ್ಣಿಗೆ ಸ್ವಂತ ಆಯ್ಕೆಗಳಿಲ್ಲವೆ? ಎಂಬ ಪ್ರಶ್ನೆ ಕಾಡುತ್ತದೆ.

ಪೋಷಕರು ಮಕ್ಕಳನ್ನು ಹೆತ್ತರಷ್ಟೇ ಸಾಲದು…

ಮಕ್ಕಳನ್ನು ಬೆಳೆಸುವ ಪೋಷಕರು ಮಕ್ಕಳ ಕಡೆ ಗಮನವಹಿಸಬೇಕು, ಅವರ ಸ್ನೇಹವಲಯ, ನಡವಳಿಕೆ, ಒಡಾಟದ ಬಗ್ಗೆ ಕಾಳಜಿವಹಿಸಬೇಕು. ಒಂದು ಹಂತಕ್ಕೆ ಬಂದಾಗ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು ಎಂದು ಹೇಳುತ್ತಾರೆ, ಮನೆಯಲ್ಲಿ ಪೋಷಕರು ಮಕ್ಕಳಿಗೆ ಮುಕ್ತವಾತಾವರಣ ನಿರ್ಮಾಣ ಮಾಡಬೇಕು. ಯಾವ ಭಯವಿಲ್ಲದೆ ಅವರ ಜೀವನದಲ್ಲಿ ನಡೆಯುವ ಘಟನೆಗಳನ್ನು ಸ್ನೇಹಿತರ ಜೊತೆಗೆ ಹಂಚಿಕೊಳ್ಳುವಂತೆ ಹಂಚಿಕೊಂಡರೆ ಅವರನ್ನು ತಿದ್ದಲು, ಸರಿದಾರಿಗೆ ತರಲು ಅನುಕೂಲವಾಗುತ್ತದೆ.

 

Donate Janashakthi Media

Leave a Reply

Your email address will not be published. Required fields are marked *