ಬೆಂಗಳೂರು: ಕಬ್ಬು ಬೆಲೆ ನಿಗದಿ ಮತ್ತು ಹಳೇ ಬಾಕಿ ಪಾವತಿಗೆ ಆಗ್ರಹಿಸಿ ರಾಜ್ಯ ರೈತ ಸಂಘ ಸೋಮವಾರ ಕರೆ ನೀಡಿದ್ದ ಮುಖ್ಯಮಂತ್ರಿ ಮನೆ ಮುತ್ತಿಗೆ ಕಾರ್ಯಕ್ರಮಕ್ಕೆ ಮುನ್ನ ರೈತರನ್ನು ರೈಲ್ವೆ ನಿಲ್ದಾಣ ಬಳಿ ಬಂಧಿಸಿ ಆಡುಗೋಡಿ ಮೈದಾನಕ್ಕೆ ಕರೆದೊಯ್ಯಲಾಯಿತು.
ಕಬ್ಬು ಬೆಲೆ ನಿಗದಿಗಾಗಿ ಹಳೇ ಬಾಕಿ ಪಾವತಿಗಾಗಿ ಒತ್ತಾಯಿಸಿ ಮತ್ತು ಕರ ನಿರಾಕರಣೆ ಚಳುವಳಿಯಲ್ಲಿ ಕಟ್ಟದ ಗೃಹ ವಿದ್ಯತ್ ಬಿಲ್ ಬಲವಂತದ ವಸೂಲಿ ಕ್ರಮದ ವಿರುದ್ಧ ಇಂದು ರಾಜ್ಯ ರೈತ ಸಂಘ ಬೆಂಗಳೂರಿನ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟು ಮುಖ್ಯಮಂತ್ರಿಗಳ ಮನೆ ಮುತ್ತಿಗೆ ಹಾಕಲು ಸಿದ್ಧತೆಯನ್ನು ಮಾಡಿಕೊಂಡಿತ್ತು. ಪ್ರತಿಭಟನೆಗಾಗಿ ವಿವಿಧ ಭಾಗಗಳಿಂದ ಬಂದಿದ್ದ ರೈತರು ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ್ದರು. ಪೊಲೀಸರು ನಾಲ್ಕು ಬಸ್‌ಗಳ ಸಮೇತ ಅಲ್ಲಿಗೆ ಬಂದು ರೈತರನ್ನು ಬಸ್‌ನೊಳಗೆ ಎಳೆದೊಯ್ದರು. ಅಲ್ಲಿಂದ ಅವರನ್ನು ಹೊಸೂರು ರಸ್ತೆಯ ಆಡುಗೋಡಿ ಮೈದಾನಕ್ಕೆ ಕರೆದುಕೊಂಡು ಹೋದರು. ಪೊಲೀಸರ ಈ ಕ್ರಮವನ್ನು ಖಂಡಿಸಿ ರೈತರು ಆಡುಗೋಡಿ ಮೈದಾನದಲ್ಲಿಯೇ ಪ್ರತಿಭಟನೆ ನಡೆಸಿದರು.
ಕಬ್ಬು ಬೆಳಗಾರರು ಬೆಲೆ ಮೋಸ, ತೂಕದಲ್ಲಿ ವಂಚನೆ, ಬಾಕಿ ಪಾವತಿಯಲ್ಲಿ ವಿಳಂಬ ಇನ್ನೂ ಹತ್ತಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಕಬ್ಬಿನ ಬೆಲೆ ನಿಗದಿ ಮಾಡಲು ಶೇ.10 ಇಳುವರಿಯ ಮಾನದಂಡ ಮಾಡಿಕೊಂಡು ಕಾರ್ಖಾನೆಗೆ ಅನುಕೂಲವಾಗುವ ನೀತಿಯನ್ನು ಅನುಸರಿಸಿ ರೈತರಿಗೆ ಅನ್ಯಾಯವೆಸಗಿದೆ ಎಂದು ಆರೋಪಿಸಿದೆ. 2022 ಫೆಬ್ರವರಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ರಸಗೊಬ್ಬರ ಮತ್ತು ಕೃಷಿಯ ಇತರೆ ಪರಿಕರಗಳ ಬೆಲೆ ಗಗನಕ್ಕೇರಿಸಿ ವ್ಯವಸಾಯದ ಉತ್ಪದನಾ ವೆಚ್ಚ ದ್ವಿಗುಣಗೊಳಿಸಿದೆ ಎಂದು ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದನ್ನೂ ಓದಿ : ಕಬ್ಬು ಬೆಳೆಗಾರರಿಗೆ ವಂಚನೆ-ಜುಲೈ 11ಕ್ಕೆ ಮುಖ್ಯಮಂತ್ರಿ ನಿವಾಸ ಮುತ್ತಿಗೆ: ಕರ್ನಾಟಕ ರಾಜ್ಯ ರೈತ ಸಂಘ
ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಎಂ.ಎಸ್.ಪಿ ಬೆಲೆ ನಿಗದಿ ಮಾಡದ ಕೇಂದ್ರ ಸರ್ಕಾರ ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಈ ಸಂಕಷ್ಟದಿಂದಾಗಿ ನಾವು ಕಬ್ಬಿಗೆ ಕೇಳುತ್ತಿರುವುದು ಟನ್ನಿಗೆ ಕನಿಷ್ಟ ಬೆಲೆ 4500ರೂಪಾಯಿ ಮಾತ್ರ ಎಂದಿದ್ದಾರೆ. ಜೊತೆಗೆ ರಾಜ್ಯ ಸರ್ಕಾರ ರೈತ ಪ್ರತಿನಿಧಿಗಳನ್ನೊಳಗೊಂಡ ಕಬ್ಬು ನಿಯಂತ್ರಣ ಸಮಿತಿಯನ್ನು ಇದುವರೆಗೂ ನಡೆಸಿಲ್ಲ. ಎಸ್.ಎ.ಪಿ.ಯನ್ನು ಕಳೆದ 4 ವರ್ಷಗಳಿಂದಲೂ ಘೋಷಿಸಿಲ್ಲ. ಉತ್ತರ ಕರ್ನಾಟಕದ ಬಹುತೇಕ ಕಾರ್ಖಾನೆಗಳನ್ನು ಬಿಜೆಪಿ, ಕಾಂಗ್ರೆಸ್, ಜನತಾದಳದಲ್ಲಿರುವ ರಾಜಕಾರಣಿಗಳೇ ನಡೆಸುತ್ತಿದ್ದು, ಸರ್ಕಾರದಲ್ಲಿ ಮಂತ್ರಿಗಳಾಗಿಯೂ ಕೂಡ ಕಾರ್ಯಭಾರ ನಡೆಸುತ್ತಿದ್ದಾರೆ. ಈ ಮಂತ್ರಿಗಳು ನಡೆಸುತ್ತಿರುವ ಕಾರ್ಖಾನೆಗಳಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವ ಎಫ್.ಆರ್.ಪಿ ಬೆಲೆಗಿಂಲೂ ಕಡಿಮೆ ಬೆಲೆಗೆ ರೈತರಿಂದ ಕಬ್ಬನ್ನು ಕೊಳ್ಳಲಾಗುತ್ತಿದೆ. ಮತ್ತು ಈ ಬೆಲೆಯನ್ನು ಸಹ ವಿಳಂಬವಾಗಿ ಪಾವತಿಸುತ್ತಿದ್ದಾರೆ. ಇವೆಲ್ಲವೂ ಸರ್ಕಾರಕ್ಕೆ ಗೊತ್ತಿದ್ದರೂ ಸರ್ಕಾರ ಜಾಣ ಮೌನ ಅನುರಿಸುತ್ತಾ ಕಬ್ಬು ಬೆಳಗಾರರಿಗೆ ದ್ರೋಹ ಬಗೆದಿದೆ ಎಂದು ರೈತ ಸಂಘ ಆರೋಪಿಸಿದೆ.