ಮನರೇಗಾದಲ್ಲಿ ಹಾಜರಾತಿ “ಆ್ಯಪ್” ಪರಿಹಾರದ ಬದಲು ಅವ್ಯವಸ್ಥೆ ಸೃಷ್ಟಿ

ಚಕ್ರಧರ್ ಬುದ್ಧ ಮತ್ತು ಲಾವಣ್ಯ ತಮಂಗ್
(ಲೇಖನ ಕೃಪೆ: ದಿ ಹಿಂದು, ಜೂನ್ 25, 2022) ಅನು: ಶೃಂಶನಾ

ಮನರೇಗಾದಲ್ಲಿ ಹಾಜರಾತಿಯ ಮೇಲೆ ನಿಗಾ ಇಡಲು ತಂದಿರುವ  NMMS ಆ್ಯಪ್ ಗೆ ಈ ಸ್ಕೀಮ್ ಹೇಗೆ ನಿಜವಾಗಿ ಕೆಲಸ ಮಾಡುತ್ತದೆ ಎಂಬುದರ ಅರಿವೇ ಇದ್ದಂತಿಲ್ಲ. ಸೋಶಿಯಲ್ ಆಡಿಟಿಂಗ್ ಎಂಬುದನ್ನು ಮತ್ತು ಗ್ರಾಮಸಭಾಗಳನ್ನು ಬಲಪಡಿಸುವ ಬದಲು, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಸುಲಭವಾಗಿ ಅರ್ಥವಾಗದ ಹಾಗೂ ಮೂಲಭೂತವಾಗಿ ಕೆಲಸಗಾರರಿಗೆ ಎಟುಕದ ತಂತ್ರಜ್ಞಾನ ಸುಧಾರಣೆಗಳನ್ನು ಜಾರಿ ಮಾಡಲು ಉತ್ಸುಕವಾಗಿರುವಂತಿದೆ. ಇದು ಮನರೇಗಾದಲ್ಲಿ ಅಡಕವಾಗಿರುವ ಪಾರದರ್ಶಕತೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ತತ್ವಗಳಿಗೆ ವಿರುದ್ಧವಾಗಿದೆ. ಈ ಆ್ಯಪ್ ಮನರೇಗಾ ಕಾಯಿದೆಯ ಬುನಾದಿಯಾಗಿರುವ ಕೆಲಸದ ಹಕ್ಕು ತತ್ವವನ್ನು ಶಿಥಿಲಗೊಳಿಸುತ್ತದೆ ಎನ್ನುತ್ತಾರೆ ಇದರ ಅಧ್ಯಯನ ಮಾಡಿರುವ ಲಿಬ್‌ಟೆಕ್ ಇಂಡಿಯ ಸಂಸ್ಥೆಯ ಚಕ್ರಧರ್ ಬುದ್ಧ ಮತ್ತು ಲಾವಣ್ಯ ತಮಂಗ್.

ಮೇ 2021 ರಲ್ಲಿ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಕಾಯ್ದೆ(ಮನರೇಗಾ) ಕೆಲಸಗಳಲ್ಲಿ ‘ರಾಷ್ಟ್ರೀಯ ಮೊಬೈಲ್ ನಿಗಾ ವ್ಯವಸ್ಥೆ’ (NMMS) ಆ್ಯಪ್ ಎಂಬ ಹೊಸ ಅಪ್ಲಿಕೇಷನ್ ಅನ್ನು ಪ್ರಾರಂಭಿಸಿತು. ಇದನ್ನು “ನಾಗರಿಕ ನಿಗಾ ಮತ್ತು ಪಾರದರ್ಶಕತೆ ಹೆಚ್ಚಿಸುವ” ಉದ್ದೇಶದಿಂದ ಇದನ್ನು ತರಲಾಗಿದೆ ಎಂದು ಅದು ಹೇಳಿದೆ. ಮನರೇಗಾ ಕೆಲಸದ ಸ್ಥಳಗಳ ನಿಗಾವಹಿಸಲು ತರಬೇತಿ ನೀಡಲಾಗುವ ಮನರೇಗಾ ಸಹ-ಕೆಲಸಗಾರರು(Mates) ಮತ್ತು ಪಂಚಾಯತಿ ಮಟ್ಟದ ಸ್ಥಳೀಯ ಮಹಿಳೆಯರು ಇದನ್ನು ನಿಯೋಜಿಸಬೇಕು. ಈ ಆ್ಯಪ್ ನ ಪ್ರಮುಖ ಲಕ್ಷಣವೆಂದರೆ ಪ್ರತಿ ದಿನದಲ್ಲಿ ಅರ್ಧ ದಿನಕ್ಕೊಮ್ಮೆ ನಿಜ ಸಮಯದಲ್ಲಿ ಪ್ರತಿ ಕಾರ್ಮಿಕನ / ಕಾರ್ಮಿಕಳ ಪೋಟೋ ಮತ್ತು ಜಿಯೋ ಲೇಬಲ್ ಹಾಜರಾತಿಯನ್ನು ತೆಗೆದುಕೊಳ್ಳುವುದು. ನಾವು ಹಲವು ರಾಜ್ಯಗಳ ಮನರೇಗಾ ಸಹ-ಕೆಲಸಗಾರರು, ಕೆಲಸಗಾರರು ಮತ್ತು ಚಳುವಳಿಕಾರರ ಜೊತೆ ಈ ಆ್ಯಪ್ ಕುರಿತಾದ ಅವರ ಅನುಭವಗಳನ್ನು ಅರಿಯುವ ಪ್ರಯತ್ನ ಮಾಡಿದೆವು.

ಕಾರ್ಮಿಕರನ್ನು ಬಾಧಿಸುವ ಶರತ್ತುಗಳು

ಇಂತಹ ಆ್ಯಪ್ ನಿಗದಿತ ದುಡಿಮೆಯ ಸಮಯ ಹೊಂದಿರುವ ಕಾರ್ಮಿಕರ ಹಾಜರಾತಿಯ ಬಗ್ಗೆ ನಿಗಾ ಇಡಲು ಅನುಕೂಲವಾಗಬಹುದೇನೋ. ಆದರೆ ಹಲವು ರಾಜ್ಯಗಳಲ್ಲಿ ಮನರೇಗಾ ಕೂಲಿಯನ್ನು ದಿನವೊಂದರಲ್ಲಿ ನಿಗದಿತ ಕೆಲಸದ ಪ್ರಮಾಣದ ಮೇಲೆ ಲೆಕ್ಕ ಹಾಕಲಾಗುತ್ತದೆ ಮತ್ತು ಕಾರ್ಮಿಕರು ನಿಗದಿತ ಸಮಯಕ್ಕೆ ಬದ್ಧರಾಗಬೇಕೆಂದೇನೂ ಇಲ್ಲ. ಹೀಗಾಗಿಯೇ ಮನರೇಗಾಗೆ ವ್ಯಾಪಕ ಬೇಡಿಕೆ ದೊರೆತಿರುವುದು. ಆದರೆ ಈ ಆ್ಯಪ್ ಮೂಲಕ ಹಾಜರಾತಿ ಕಡ್ಡಾಯವಾಗಬೇಕಾದರೆ ಕೆಲಸಗಾರರು ತಮ್ಮ ಕೆಲಸದ ಸ್ಥಳದಲ್ಲಿ ದಿನವಿಡೀ ಇರಲೇಬೇಕು. ಇದು ಮನರೇಗಾ ಕೆಲಸಗಾರರಿಗೆ ಬಹಳ ತೊಂದರೆ ಉಂಟು ಮಾಡುತ್ತದೆ.

ರಾಜಸ್ಥಾನದ ಪ್ರಿಯಾದೇವಿ ತನ್ನ ಮನರೇಗಾ ಕೆಲಸವನ್ನು ಬೆಳಿಗ್ಗೆ 9 ಗಂಟೆಗೆ ಮುಗಿಸಿ, ತಾನು ಮನೆಯಂಗಳದಲ್ಲಿ ಬೆಳೆದ ಉತ್ಪನ್ನಗಳನ್ನು ಮಾರಲು ಸ್ಥಳೀಯ ಮಾರುಕಟ್ಟೆಯಲ್ಲಿ ಅಂಗಡಿ ತೆರೆಯುತ್ತಾರೆ. ಈ ಆ್ಯಪ್ ಬಂದ ಮೇಲೆ ಆಕೆ ಒಂದೋ ತನ್ನ ಕೆಲಸದ ಸ್ಥಳದಲ್ಲಿ ದಿನವಿಡೀ ಇರಬೇಕು, ಇಲ್ಲವೇ ತನ್ನ ಹಾಜರಾತಿ ಹಾಕಲು ಎರಡು ಬಾರಿ ಪ್ರಯಾಣಿಸಬೇಕು. ತನ್ನ ಅನುಪಸ್ಥಿತಿಯಲ್ಲಿ ಅಂಗಡಿಗೆ ಬರುವ ಗ್ರಾಹಕರನ್ನು ತಾನು ಕಳೆದುಕೊಳ್ಳುತ್ತೇನೆ ಎನ್ನುವ ಆತಂಕ ಆಕೆಯದು. ಆಂಧ್ರ ಪ್ರದೇಶದ ಇನ್ನೋರ್ವ ಕೆಲಸಗಾರರು, ಅವರ ಮಗಳು ತ್ಯಾಪಿಯು ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿರುವುದರಿಂದ ಶಾಲೆಗೆ ಸರಿಯಾಗಿ ಹೋಗುತ್ತಿಲ್ಲ ಎಂದರು.

ಐತಿಹಾಸಿಕವಾಗಿ ಮನರೇಗಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಿದೆ(2021-22 ರಲ್ಲಿ ಶೇ. 54.7 ರಷ್ಟು) ಮತ್ತು ಗ್ರಾಮೀಣ ಭಾಗಗಳಲ್ಲಿ ಮಹಿಳೆಯರ ದುಡಿಯುವ ಸ್ಥಿತಿಯನ್ನು ಬದಲಿಸುವಲ್ಲಿ ಮನರೇಗಾ ಮುಖ್ಯಪಾತ್ರ ವಹಿಸಿದೆ. ಪಾರಂಪರಿಕವಾಗಿ ಮಹಿಳೆಯ ಮೇಲೆ ಬೀಳುವ ಮನೆಯ ಜವಾಬ್ದಾರಿಗಳು ಮತ್ತು ಮನೆಯವರನ್ನು ನೋಡಿಕೊಳ್ಳುವ ಜವಬ್ದಾರಿ ಬೀಳುವುದರಿಂದ, ಈ ಆ್ಯಪ್ ಮಹಿಳಾ ಕೆಲಸಗಾರರ ಮೇಲೆ ಅಸಮ ಪ್ರಮಾಣದಲ್ಲಿ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಆ್ಯಪ್ ಮೂಲಕ ಮನರೇಗಾ ಗೆ ಹಾಜರಾತಿ ಹಾಕುವ ಶರತ್ತುಗಳಿಂದಾಗಿ, ಇವರು ಮನರೇಗಾ ಕೆಲಸವನ್ನೇ ಕೈಬಿಡಬೇಕಾದ ಗೊಂದಲಕ್ಕೆ ಈಡಾಗುತ್ತಾರೆ. ಇಂತಹುದೇ ಭಾವನೆಯನ್ನು ದೇಶದಾದ್ಯಂತ ಹಲವು ಮಹಿಳಾ ಕೆಲಸಗಾರರು ನಮಗೆ ತಿಳಿಸಿದರು. ಉದಾ: ಪ್ರಿಯಾದೇವಿ, ತನ್ನ ಇಡೀ ದಿನವನ್ನು ಕೇಳುವ ಮನರೇಗಾ ಗೆ ಬದ್ಧವಾಗುವುದು ಅಥವಾ ಮಾರುಕಟ್ಟೆಯಲ್ಲಿಯೇ ಅಂಗಡಿ ನೋಡಿಕೊಂಡು ಉಳಿಯುವ ಈ ಎರಡು ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೇನೋ ಎನ್ನುವ ಆತಂಕ ವ್ಯಕ್ತಪಡಿಸಿದರು.

ಇತರೆ ಸವಾಲುಗಳು:

ಈ ಆ್ಯಪ್ ಅನ್ನು ಜಾರಿಗೊಳಿಸುವಲ್ಲಿಯೂ ಸವಾಲುಗಳಿವೆ. ನಿಜ ಸಮಯದ ನಿಗಾ ಇಡಲು ಒಂದು ಸುಭದ್ರ ನೆಟ್‍ವರ್ಕ್ ಅಗತ್ಯವಿದೆ. ದುರದೃಷ್ಟವಶಾತ್ ಗ್ರಾಮೀಣ ಭಾರತದ ಹಲವೆಡೆ ನೆಟ್‌ವರ್ಕ್ ಸರಿಯಾಗಿಲ್ಲ. ಇದರಿಂದಾಗಿ ಕೆಲಸಗಾರರು ತಮ್ಮ ಹಾಜರಾತಿ ದಾಖಲಿಸಲಾಗದೆ ತಮ್ಮ ಒಂದು ದಿನದ ಕೂಲಿಯನ್ನು ಕಳೆದುಕೊಳ್ಳುವಂತೆ ಆಗುತ್ತದೆ. ಈಗಾಗಲೇ ಕೇರಳ ಮತ್ತು ಝಾರ್ಖಂಡ್ ನ ಕೆಲಸಗಾರರು ತಮ್ಮ ಹಾಜರಾತಿಯನ್ನು ಆ್ಯಪ್ ನಲ್ಲಿ ದಾಖಲಿಸಲು ತೊಂದರೆ ಎದುರಿಸುತ್ತಿದ್ದಾರೆ. ಮೇಲಾಗಿ ತಮಿಳುನಾಡಿನ ಭಿನ್ನ-ಚೇತನ ಕೆಲಸಗಾರರು ತಮ್ಮ ಹಾಜರಾತಿ ದಾಖಲಿಸಲು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನ್ಯೂಸ್‌ಕ್ಲಿಕ್ ವರದಿ ಮಾಡಿದೆ.

ಈ ಆ್ಯಪ್ ಮನ್‌ರೇಗಾ ಸಹ-ಕೆಲಸಗಾರರ ಮೇಲೂ ದುಷ್ಪರಿಣಾಮ ಬೀರಿದೆ. ಪಂಚಾಯತಿ ಮಟ್ಟದಲ್ಲಿ ಸ್ಥಳೀಯ ಮಹಿಳೆಯರಿಗೆ ಹಾಜರಾತಿ ಮತ್ತು ಕೆಲಸದ ಪ್ರಮಾಣವನ್ನು ನೋಡಿಕೊಳ್ಳುವಂತೆ ಅಧಿಕಾರ ವಹಿಸುವ ಕೆಲಸ ಈ ಸಹ-ಕೆಲಸಗಾರರದು. ಆದರೆ, ಈಗ ಸಹ-ಕೆಲಸಗಾರ ಆಗಬೇಕಾದರೆ ಅವರ ಬಳಿ ಸ್ಮಾರ್ಟ್ ಪೋನ್ ಇರಲೇಬೇಕು. ಈ ಶರತ್ತು ಸ್ಮಾರ್ಟ್ ಪೋನ್ ಹೊಂದಿರದ ಸಹಸ್ರಾರು ಮಹಿಳೆಯರನ್ನು ಸಹಕೆಲಸಗಾರರಾಗದಂತೆ ತಡೆಯುತ್ತದೆ.

ಇದೇ ಕಾರಣಕ್ಕಾಗಿ ಈಗಾಗಲೇ ಝಾರ್ಖಂಡ್ ಮತ್ತು ಆಂಧ್ರಪ್ರದೇಶದ ಮಹಿಳೆಯರನ್ನು ಈ ಕೆಲಸದ ಆಯ್ಕೆಯಿಂದ ಹೊರಗಿಡಲಾಗಿದೆ ಎಂಬ ವರದಿ ಇದೆ. ಈಗ ಸ್ಮಾರ್ಟ್ ಫೋನ್ ಹೊಂದಿರುವ ಪುರುಷರಿಗೆ ಸಹಕೆಲಸಗಾರರಾಗಿ ತೆಗೆದುಕೊಳ್ಳಲು ಆದ್ಯತೆ ನೀಡಬಹುದು. ಇಲ್ಲವೇ, ಮಹಿಳೆಯರು proxy ಅಂದರೆ ಬದಲಿ-ಸಹಕೆಲಸಗಾರರಾಗಬಹುದು-ಅಂದರೆ ಅಧಿಕೃತವಾಗಿ ಮಹಿಳೆಯರು ನೋಂದಾಯಿಸಲ್ಪಡುವುದು, ಆದರೆ ಕೆಲಸ ಮಾಡುವ ಮತ್ತು ಕೂಲಿ ಪಡೆಯುವ ಪುರುಷರಿಗೆ ಹಸ್ತಾಂತರಿಸುವುದು. ಆಯ್ಕೆಯಾದ ಹಲವರು ತಮಗೆ ಸರಿಯಾದ ತರಬೇತಿ ನೀಡಿಲ್ಲ ಎನ್ನುತ್ತಿದ್ದಾರೆ. ಇದರಿಂದಾಗಿ ಕೆಲಸಗಾರರ ಹಾಜರಾತಿಯನ್ನು ದಾಖಲಿಸುವಲ್ಲಿ ಲೋಪಗಳಾಗಬಹುದು ಮತ್ತು ಕೂಲಿ ಪಾವತಿ ವಿಳಂಬವಾಗಬಹುದು ಅಥವಾ ದೊರಕದಿರಬಹುದು.

ಪ್ರಾಯೋಗಿಕ ಪ್ರಕ್ರಿಯೆಯಲ್ಲಿ ಲೋಪಗಳು:

ರಾಜ್ಯಗಳು ಸ್ವಯಂ ಆಗಿ ಈ ಆ್ಯಪ್ ಬಳಸುವ ಮೂಲಕ ಕಳೆದ ವರ್ಷ ಈ ಆ್ಯಪ್ ಅನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು. ಅಧಿಕಾರಿಗಳು ಮತ್ತು ಚಳುವಳಿಗಾರರು ಈ ಇಡೀ ಪ್ರಾಯೋಗಿಕ ಪ್ರಕ್ರಿಯೆಯ ಜಾರಿಯಲ್ಲಿ ಲೋಪಗಳಿದ್ದವು ಎಂದು ಖಾತ್ರಿ ಪಡಿಸಿದ್ದಾರೆ. ಆದರೆ ಈ ಲೋಪಗಳನ್ನು ಗುರುತಿಸಿದ್ದ ಬಗ್ಗೆಯಾಗಲೀ, ಲೋಪ ಸರಿಪಡಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆಯಾಗಲೀ ಸಾರ್ವಜನಿಕ ಮಾಹಿತಿ ದೊರೆತಿಲ್ಲ. ನಾವು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರೂ, ಯಾವುದೇ ಸಮಾಧಾನಕರ ಪ್ರತಿಕ್ರಿಯೆ ದೊರೆತಿಲ್ಲ. ಈ ಲೋಪಗಳು ಇರುವ ನಡುವೆಯೇ, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಮೇ 13, 2022 ರಂದು ಸುತ್ತೋಲೆಯನ್ನು ಹೊರಡಿಸಿ ಇಪ್ಪತ್ತು ಕೆಲಸಗಾರರಿಗಿಂತ ಮೇಲ್ಪಟ್ಟು ಕೆಲಸ ಮಾಡುವ ಸ್ಥಳಗಳಲ್ಲಿ ಇದನ್ನು ಕಡ್ಡಾಯ ಮಾಡಿದೆ ಮತ್ತು ಅಸಾಧಾರಣ ಪರಿಸ್ಥಿತಿ ಹೊರತುಪಡಿಸಿ ಯಾವುದೇ ಕಾರಣಕ್ಕೂ ದೈಹಿಕ ಹಾಜರು ದಾಖಲಿಸಲು ಅವಕಾಶವಿಲ್ಲ ಎಂದಿದೆ. ಈ ಕಡ್ಡಾಯದ ಘೋಷಣೆಯಾದ ಒಂದು ವಾರದೊಳಗೆ ಹಲವು ರಾಜ್ಯಗಳು ಪ್ರಾಯೋಗಿಕ ಹಂತದಲ್ಲಿದ್ದ ಲೋಪಗಳೇ ಈಗಲೂ ಇವೆ ಎಂದು ದೂರುಗಳು ಮತ್ತು ವರದಿಯನ್ನು ಸಲ್ಲಿಸಿದವು. ಈವರೆಗೂ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಯಾವುದೇ ಪರಿಹಾರ ಭರವಸೆಯಾಗಲೀ ಅಥವಾ ಕನಿಷ್ಟ ಪ್ರತಿಕ್ರಿಯೆಯನ್ನಾಗಲೀ ನೀಡಿಲ್ಲ.

ಭೌತಿಕ ದಾಖಲೆಗಳಿಲ್ಲ:

ಜಾರಿಯಲ್ಲಿದ್ದ ತೊಂದರೆಗಳಲ್ಲದೆ, ಈ ಆ್ಯಪ್ ನ ಉದ್ದೇಶ ಮತ್ತು ಪರಿಣಾಮಗಳು ಈಗಲೂ ಅಸ್ಪಷ್ಟವಾಗಿವೆ. ಘೋಷಿತ ಉದ್ದೇಶಕ್ಕೆ ವಿರುದ್ಧವಾಗಿ ಈ ಆ್ಯಪ್ ಕಾರ್ಯ ನಿರ್ವಹಿಸುತ್ತಿದೆ. ಕೆಲಸಗಾರರು ದೈಹಿಕ ಹಾಜರಾತಿ ದಾಖಲಿಸಲು ಆಗದಿರುವುದರಿಂದ ಯಾವುದೇ ಭೌತಿಕ ದಾಖಲೆಗಳಿಲ್ಲದೆ ಕೆಲಸಗಾರರಿಗೆ ತಾವು ಹಾಜರಾಗಿದ್ದಕ್ಕೆ ಮತ್ತು ಕೆಲಸ ಮಾಡಿದ್ದಕ್ಕೆ ಯಾವುದೇ ಪುರಾವೆಗಳು ದೊರೆಯುತ್ತಿಲ್ಲ. ಝಾರ್ಖಂಡ್ ನ ಪಶ್ಚಿಮ ಸಿಂಘ್‌ಭುಮ್ ಜಿಲ್ಲೆಯಲ್ಲಿ ಕೆಲಸಗಾರರು ಮನರೇಗಾ ಪ್ರಾಜೆಕ್ಟ್ ಒಂದರಲ್ಲಿ ತಾವು ಕೆಲಸ ಮಾಡಿದ್ದಾಗಿ ಹೇಳಿದರೂ, ಮನರೇಗಾ ಅಂತರ್ಜಾಲದಲ್ಲಿ ಇವರ ಹಾಜರಾತಿ ದಾಖಲೆ ದೊರೆಯುತ್ತಿಲ್ಲ. ಯಾವುದೇ ಭೌತಿಕ ದಾಖಲೆಗಳನ್ನು ಪುರಾವೆಗಳನ್ನಾಗಿ ನೀಡುವ ಅವಕಾಶ ಇಲ್ಲದಿರುವುದರಿಂದ ಇವರುಗಳು ತಾವು ಕೆಲಸವನ್ನು ಮಾಡಿರುವುದಾಗಿ ಪುರಾವೆ ಒದಗಿಸಲಾಗುತ್ತಿಲ್ಲ ಮತ್ತು ಹೀಗಾಗಿ ಪೂರ್ಣ ಎರಡು ವಾರಗಳ ಕೆಲಸದ ಕೂಲಿಯನ್ನು ಕಳೆದುಕೊಳ್ಳುತ್ತಾರೆ. ಇದು ಪಾರದರ್ಶಕತೆ ಮತ್ತು ನಾಗರೀಕ ನಿಗಾ ಎಂಬ ಈ ಆ್ಯಪ್ ನ ಘೋಷಿತ ಉದ್ದೇಶಗಳ ಕಡೆಗಣನೆ ಎಂಬುದು ಬಹಳ ಸ್ಪಷ್ಟ.

ಮನರೇಗಾದಲ್ಲಿ ಹುಸಿ ಹಾಜರಾತಿ ದಾಖಲೆಗಳನ್ನು ನಿರ್ಮಿಸಿ ಹಣವನ್ನು ಕೊಳ್ಳೆ ಹೊಡೆಯುವ ಮೂಲಕ ಭ್ರಷ್ಟಾಚಾರ ಹೆಚ್ಚುತ್ತಲೇ ಇದೆ. ಈ ಭ್ರಷ್ಟಾಚಾರವನ್ನು ತಡೆಯಲು ಇದರ ಮೂಲಕ ದಾಖಲಾಗುವ ನಿಜ ಸಮಯದ ಜಿಯೋ ಲೇಬಲ್ ಹಾಜರಾತಿ ಒಂದು ವಿಧಾನವಾದರೂ, ಭ್ರಷ್ಟಾಚಾರದ ವ್ಯಾಪಕತೆ ಬಗ್ಗೆಯಾಗಲೀ ಅಥವಾ ಈ ಆ್ಯಪ್ ಇದನ್ನು ನಿರ್ಮೂಲಗೊಳಿಸುವಲ್ಲಿ ನಿರ್ವಹಿಸುವ ಪಾತ್ರದ ಕುರಿತಾಗಲೀ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಹೆಚ್ಚು ಸ್ಪಷ್ಟತೆ ನೀಡುತ್ತಿಲ್ಲ. ಈ ಆ್ಯಪ್ ನ ಸಾಧನೆಯನ್ನು ಅಳೆಯಲು-ಪಾರದರ್ಶಕತೆ ಬಗ್ಗೆಯಾಗಲೀ ಅಥವಾ ವಿಳಂಬರಹಿತ ಪಾವತಿ ಪ್ರಕ್ರಿಯೆಯನ್ನಾಗಲೀ – ಯಾವುದೇ ಮಾನದಂಡಗಳನ್ನು ನಿಗದಿಪಡಿಸಿಲ್ಲ.

ಸಾಮಾಜಿಕ ಪರಿಶೋಧನೆ ಬಲಪಡಿಸಿ:

ಈ ಆ್ಯಪ್ ಬಗ್ಗೆ ಗಮನ ಹರಿಸುವುದರ ಬದಲು ಅಥವಾ ಇನ್ನಾವುದೇ ಸಂಕೀರ್ಣವಾದ ತಂತ್ರಜ್ಞಾನದ ಸುಧಾರಣೆಗಳನ್ನು ಜಾರಿ ಮಾಡುವ ಬದಲು, ಮನರೇಗ ಕಾಯ್ದೆಯಲ್ಲೇ ವಿಧಿಸಿರುವ ಸಾಮಾಜಿಕ ಪರಿಶೋಧನೆ(ಸೋಶಿಯಲ್ ಆಡಿಟಿಂಗ್)ಯನ್ನು ಬಲಪಡಿಸುವುದು ಅಗತ್ಯ ಎಂದು ನಾವು ಬಲವಾಗಿ ನಂಬುತ್ತೇವೆ. ಸಾಮಾಜಿಕ ಪರಿಶೋಧನೆಗಳು ನಾಗರಿಕ-ಕೇಂದ್ರಿತ ಸಂಸ್ಥೆಗಳು ಮತ್ತು ಇಲ್ಲಿ ತಮ್ಮ ಪಂಚಾಯತಿಗಳಲ್ಲಿ ಮನರೇಗಾ ಕಾರ್ಯ ಹೇಗೆ ನಿರ್ವಹಿಸುತ್ತಿದೆ ಎಂಬುದರ ಬಗ್ಗೆ ನೇರವಾಗಿ ಹೇಳಲು, ಪಾತ್ರ ವಹಿಸಲು ಅಲ್ಲಿನ ನಾಗರೀಕರಿಗೆ ಅವಕಾಶವಿರುತ್ತದೆ. ಸ್ಥಳೀಯ ಹಕ್ಕುದಾರರಿಗೆ ನಿರ್ಧಾರಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡುವ ಮೂಲಕ ಮತ್ತು ಆಡಳಿತಗಾರರನ್ನು ಹೊಣೆಯಾಗಿಸುವ ಮೂಲಕ ಈ ಹಿಂದೆ ಆಡಿಟ್‌ಗಳು ಚೆನ್ನಾಗಿ ಕೆಲಸ ಮಾಡಿವೆ. ಇಂತಹ ಸಾಮಾಜಿಕ ಪರಿಶೋಧನೆಗಳು ಮತ್ತು ಗ್ರಾಮಸಭಾಗಳನ್ನು ಬಲಪಡಿಸುವ ಬದಲು, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯವು ಸುಲಭವಾಗಿ ಅರ್ಥವಾಗದ ಹಾಗೂ ಮೂಲಭೂತವಾಗಿ ಕೆಲಸಗಾರರಿಗೆ ಎಟುಕದ ತಂತ್ರಜ್ಞಾನ ಸುಧಾರಣೆಗಳನ್ನು ಜಾರಿ ಮಾಡಲು ಉತ್ಸುಕವಾಗಿರುವಂತಿದೆ.

ನಾಗರಿಕ ನಿಗಾ ಮತ್ತು ಪಾರದರ್ಶಕತೆಯನ್ನು ಉತ್ತಮಗೊಳಿಸಲೆಂದು ತರಲಾದ ಈ ಆ್ಯಪ್ ಅನ್ನು ಜಾರಿಗೊಳಿಸುವ ಮೊದಲು ಮನರೇಗಾ ಕೆಲಸಗಾರರು, ಕಾರ್ಯನಿರ್ವಾಹಕರು ಅಥವಾ ಸರ್ಕಾರಿ ಮಾರುಕಟ್ಟೆ ಅಧಿಕಾರಿಗಳ ಜೊತೆ ಚರ್ಚಿಸದಿರುವುದು ಒಂದು ಅಣಕವೇ ಸರಿ.

ಈ  ಆ್ಯಪ್ ಗೆ ಮನರೇಗಾ ಹೇಗೆ ನಿಜವಾಗಿ ಕೆಲಸ ಮಾಡುತ್ತದೆ ಎಂಬುದರ ಅರಿವಿಲ್ಲ. ಸುಧಾರಣೆಗಳನ್ನು ಜಾರಿ ಮಾಡುವ ಮೊದಲು ಸಂಬಂಧಪಟ್ಟ ಹಿತಾಸಕ್ತಿದಾರರನ್ನು ಸಂಪರ್ಕಿಸದ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಈ ಅಭ್ಯಾಸ ಮನರೇಗಾದಲ್ಲಿ ಅಡಕವಾಗಿರುವ ಪಾರದರ್ಶಕತೆ ಮತ್ತು ನಾಗರಿಕರ ಪಾಲ್ಗೊಳ್ಳುವಿಕೆಯ ತತ್ವಗಳಿಗೆ ವಿರುದ್ಧವಾಗಿದೆ. ಇದರಲ್ಲಿರುವ ಸ್ಪಷ್ಟ ಸಮಸ್ಯೆಗಳಿಂದಾಗಿ ಕೆಲಸಗಾರರಿಗೆ ಮನರೇಗಾದಲ್ಲಿ ದುಡಿಯುವುದು ಇನ್ನಷ್ಟು ಕಷ್ಟವಾಗುತ್ತದೆ ಮತ್ತು ಇದು ಮನರೇಗಾ ಕಾಯಿದೆಯ ಬುನಾದಿಯಾಗಿರುವ ಕೆಲಸದ ಹಕ್ಕು ತತ್ವವನ್ನು ಶಿಥಿಲಗೊಳಿಸುತ್ತದೆ.

Donate Janashakthi Media

Leave a Reply

Your email address will not be published. Required fields are marked *