ಅಪಾರ್ಟ್‌ಮೆಂಟ್‌ ನಿವಾಸಿಗಳಲ್ಲಿ ಮತಯಾಚಿಸಿದ ಪ್ರೊ.ರಾಜೀವ್‌ ಗೌಡ

ಬೆಂಗಳೂರು: ನಗರದ ಅಪಾರ್ಟ್‌ಮೆಂಟ್‌ ನಿವಾಸಿಗಳು ತಪ್ಪದೇ ಮತಚಲಾಯಿಸುವ ಮೂಲಕ ಈ ಬಾರಿ ಮತದಾನದ ಪ್ರಮಾಣ ಹೆಚ್ಚಿಸಿ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾದ ಪ್ರೊ. ಎಂ.ವಿ. ರಾಜೀವ್ ಗೌಡ ಅವರು ಹೇಳಿದರು. ರಾಜೀವ್‌

ಹೆಬ್ಬಾಳದ ಗೋದ್ರೇಜ್‌ ವುಡ್ಸ್‌ಮನ್‌, ಥಣಿಸಂದ್ರದ ಶೋಭಾ ಸಿಟಿ ಹಾಗೂ ಭಾರತೀಯ ಸಿಟಿ ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿದ ಪ್ರೊ. ರಾಜೀವ್‌ ಗೌಡ ಅವರು ಎಲ್ಲಾ ನಿವಾಸಿಗಳೊಂದಿಗೆ ಸಂವಾದ ನಡೆಸಿ, ಮತಯಾಚಿಸಿದರು.

ನಗರದಲ್ಲಿ ನೀರಿನ ಸಮಸ್ಯೆ ಉಲ್ಭಣದ ಬಗ್ಗೆ ಪ್ರಸ್ತಾಪಿಸಿದ ರಾಜೀವ್‌ಗೌಡ ಅವರು, ಎಲ್ಲಾ ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆ ನೀರು ಕೊಯ್ಲು ಅಳವಡಿಕೆ ಮಾಡುವ ಮೂಲಕ ಅಂತರ್ಜಲ ಮರುಪೂರಣ ಮಾಡಬೇಕು, ಇದರಿಂದ ಬೇಸಿಗೆ ಸಂದರ್ಭದಲ್ಲೂ ಸಹ ನೀರು ಲಭ್ಯವಾಗಲಿದೆ, ಈ ಎಲ್ಲದರ ಬಗ್ಗೆಯೂ ಸಾಕಷ್ಟು ಆಲೋಚನೆ ಹೊಂದಿದ್ದೇನೆ, ಭವಿಷ್ಯದಲ್ಲಿ ಖಂಡಿತ ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲಾಗುವುದು ಎಂದರು.

ಇದನ್ನು ಓದಿ : ಮೊದಲ ಬಾರಿಗೆ ಮೋದಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ ಎನ್ಡಿಎ ಪಾಲುದಾರ ಶಿರೋಮಣಿ ಅಕಾಲಿದಳ(ಬಾದಲ್):” ಇಂದು ಅವರು..ನಾಳೆ ನಾವು” ಎಂದು ಆತಂಕ ವ್ಯಕ್ತಪಡಿಸಿದ ಬಾದಲ್‌

ಕಾಂಗ್ರೆಸ್‌ ಪಕ್ಷವನ್ನು ಆಯ್ಕೆ ಮಾಡದಿದ್ದರೆ ಏನಾಗಲಿದೆ ಎಂಬ ನಿವಾಸಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ರಾಜೀವ್‌ ಗೌಡ ಅವರು, ನಮ್ಮ ನಗರವನ್ನು ಇನ್ನಷ್ಟು ಎತ್ತರಮಟ್ಟಕ್ಕೆ ಕೊಂಡೊಯ್ಯಲು, ಪ್ರಮುಖ ಯೋಜನೆಗಳನ್ನು ಜಾರಿಗೆ ತರಲು ಹಾಗೂ ಬೆಂಗಳೂರನ್ನು ವಿಶ್ವ ದರ್ಜೆ ನಗರವನ್ನಾಗಿ ಅಭಿವೃದ್ಧಿ ಪಡಿಸಲು ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ನಿಮ್ಮೆಲ್ಲರ ಸಹಕಾರದಿಂದ ನಾನು ಆಯ್ಕೆಯಾದರೆ, ಸಾರ್ವಜನಿಕ ನೀತಿಯ ಖಾಸಗಿ ಸದಸ್ಯರ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ನನಗೆ ಅವಕಾಶ ಸಿಗಲಿದೆ. ಹೀಗಾಗಿ ಪ್ರತಿಯೊಬ್ಬರು ನನಗೆ ಈ ಬಾರಿ ಆಶೀರ್ವದಿಸಬೇಕು ಎಂದು ಮತಯಾಚಿಸಿದರು.

ಇನ್ನು, ಥಣಿಸಂದ್ರ ರೈಲು ನಿಲ್ದಾಣವನ್ನು ಪುನಶ್ಚೇತನಗೊಳಿಸುವ ಯೋಜನೆ ಇದೆಯೇ ಎಂಬ ನಿವಾಸಿಗಳ ಪ್ರಶ್ನೆಗೆ ಉತ್ತರಿಸಿದ ಪ್ರೊ. ರಾಜೀವ್‌ಗೌಡ ಅವರು, ಉಪನಗರದ ರೈಲು ಜಾಲದ ಭಾಗವಾಗಿ ಅದರ ಪುನರುಜ್ಜೀವನದ ಕಾರ್ಯವನ್ನು ಖಂಡಿತವಾಗಿಯೂ ಕೈಗೆತ್ತಿಕೊಳ್ಳವ ಬಗ್ಗೆ ಅಧ್ಯಯನ ನಡೆಸುತ್ತೇವೆ ಎಂದರು.

ಕಿರಿದಾದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳಿಂದ ಸದಾ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದ್ದು, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಪ್ರಶ್ನೆಸಿದರು, ಇದಕ್ಕೆ ಉತ್ತರಿಸಿದ ಅವರು, ಸ್ಥಳೀಯ ಶಾಸಕರಾದ ಕೃಷ್ಣಭೈರೇಗೌಡ ಅವರ ಬಳಿ ಈ ಕಾಳಜಿಯನ್ನು ಪ್ರಸ್ತಾಪಿಸಿ, ಸಮಸ್ಯೆ ಬಗೆಹರಿಸಲು ಸಹಕರಿಸುವುದಾಗಿ ತಿಳಿಸಿದರು.

ಇದನ್ನು ನೋಡಿ : ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸಿದ ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕು- ಎಂ ಎ ಬೇಬಿ

Donate Janashakthi Media

Leave a Reply

Your email address will not be published. Required fields are marked *