ಹಾವೇರಿಯಲ್ಲಿ ಪ್ರೀತಿಸಿ ಮದುವೆಯಾದ ಯುವಕನ ಮೇಲೆ ಹಲ್ಲೆ: ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ DYFI ಆಗ್ರಹ

ರಟ್ಟೀಹಳ್ಳಿ:  ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಬತ್ತಿಕೊಪ್ಪದಲ್ಲಿ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾದ ಯುವಕ ಹಾಗೂ ಆತನ ಸ್ನೇಹಿತರನ್ನು ಕಂಬಕ್ಕೆ ಕಟ್ಟಿ ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಅತ್ಯಂತ ಖಂಡನೀಯ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನರ ಫೆಡರೇಷನ್ (ಡಿವೈಎಫ್ಐ) ಹಾವೇರಿ ಜಿಲ್ಲಾ ಸಮಿತಿಯು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ನಾಗರಿಕ ಸಮಾಜ ತಲೆತಗ್ಗಿಸುವಂತಹ ಇಂತಹ ಕೃತ್ಯಗಳು ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಇಬ್ಬರು ವಯಸ್ಕರು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗುವುದು ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ. ಈ ವಿಚಾರದಲ್ಲಿ ಯಾರಿಗಾದರೂ ಆಕ್ಷೇಪಗಳಿದ್ದರೆ ಕಾನೂನುಬದ್ಧ ಮಾರ್ಗವನ್ನು ಅನುಸರಿಸಬೇಕೇ ಹೊರತು, ಕಾನೂನನ್ನು ಕೈಗೆತ್ತಿಕೊಂಡು ಯುವಕ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸುವುದು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ.

ಪೊಲೀಸರ ಮುಂದೆಯೇ ಅಮಾನವೀಯ ಕೃತ್ಯ

ಯುವಕ ಹಾಗೂ ಆತನ ಸ್ನೇಹಿತರನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಅದನ್ನು ತಡೆಯಲು ವಿಫಲರಾಗಿರುವುದು ಗಂಭೀರ ಕರ್ತವ್ಯಲೋಪದ ಆರೋಪಕ್ಕೆ ಕಾರಣವಾಗಿದೆ. ಜನರ ಸುರಕ್ಷತೆಯನ್ನು ಕಾಪಾಡಬೇಕಾದ ಸಿಬ್ಬಂದಿಯ ಸಮ್ಮುಖದಲ್ಲೇ ಇಂತಹ ಘಟನೆ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ದೂರ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದು ಸ್ವಾಗತಾರ್ಹ. ಆದರೆ, ತನಿಖೆ ಕೇವಲ ಔಪಚಾರಿಕವಾಗದೆ, ಹಲ್ಲೆ ನಡೆಸಿದ ಎಲ್ಲರ ವಿರುದ್ಧವೂ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಮಾನವ ಹಕ್ಕುಗಳು ಉಲ್ಲಂಘನೆ ನಡು ಬೀದಿಯಲ್ಲಿ ಆಗಿವೆ. ಈ ಘನಘೋರ ಅಪಾರವಾದ ಘಟನೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗ ಮಧ್ಯಪ್ರವೇಶ ಮಾಡಬೇಕು.

ಕಾನೂನು ಕ್ರಮಕ್ಕೆ ಒತ್ತಾಯ

ಯುವಕ ಮತ್ತು ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಎಲ್ಲ ಆರೋಪಿಗಳನ್ನು ಗುರುತಿಸಿ, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತರಿಗೆ ಸೂಕ್ತ ರಕ್ಷಣೆ ಒದಗಿಸಿ, ನ್ಯಾಯ ದೊರಕಿಸಿಕೊಡಬೇಕು.ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪರಸ್ಪರ ಒಪ್ಪಿಗೆಯ ಮದುವೆಯ ಹಕ್ಕನ್ನು ರಕ್ಷಿಸಲು ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು.ಇಂತಹ ಕಾನೂನುಬಾಹಿರ ಹಲ್ಲೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕಾನೂನಿಗಿಂತ ದೊಡ್ಡವರಲ್ಲ. ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುವ ಮತ್ತು ಕಾನೂನನ್ನು ಕೈಗೆತ್ತಿಕೊಳ್ಳುವ ಪ್ರವೃತ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಬತ್ತಿಕೊಪ್ಪದ ಘಟನೆಯಲ್ಲಿ ಸಂತ್ರಸ್ತರಿಗೆ ನ್ಯಾಯ ದೊರಕಬೇಕು ಹಾಗೂ ತಪ್ಪಿತಸ್ಥರು ಕಾನೂನಿನ ಪ್ರಕಾರ ಶಿಕ್ಷೆಗೆ ಒಳಗಾಗಬೇಕು ಎಂದು ಡಿವೈಎಫ್ಐ ಅಖಿಲ ಭಾರತ ಸದಸ್ಯರಾದ ಬಸವರಾಜ ಪೂಜಾರ, ಜಿಲ್ಲಾಧ್ಯಕ್ಷ ಬಸವರಾಜ ಎಸ್, ಜಿಲ್ಲಾ ಕಾರ್ಯದರ್ಶಿ ಖಲಂದರ್ ಅಲ್ಲಿ ಗೌಡ್ರು ಆಗ್ರಹಿಸಿದರು.

Donate Janashakthi Media

Leave a Reply

Your email address will not be published. Required fields are marked *