- ಬಿಡದಿ ಟೌನ್ ಶಿಪ್(ಜಿಬಿಐಟಿ) ನಿರ್ಮಾಣಕ್ಕೆ ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ
- ಕಂಚುಗಾರನಹಳ್ಳಿ ಮತ್ತು ಬೈರಾಮಂಗಲ ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದ ಸರ್ಕಾರ
- 1,895 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ
ರೈತರ ತೀವ್ರ ವಿರೋಧ ಮಧ್ಯೆಯೂ ಬಿಡದಿ ಟೌನ್ ಶಿಪ್(ಜಿಬಿಐಟಿ) ನಿರ್ಮಾಣಕ್ಕೆ ಸರ್ಕಾರ ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಿದೆ. ಸದ್ಯ ಕಾಂಗ್ರೆಸ್ ಸರ್ಕಾರದ ಈ ನಡೆ ವಿರುದ್ಧ ರೈತ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
‘ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್ಶಿಪ್’ ಯೋಜನೆಗಾಗಿ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕಂಚುಗಾರನಹಳ್ಳಿ ಮತ್ತು ಬೈರಮಂಗಲ ಗ್ರಾಮಗಳಲ್ಲಿ 1,895 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಕರ್ನಾಟಕ ಸರ್ಕಾರವು ಅಂತಿಮ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 30ರಂದು ಹೊರಡಿಸಲಾದ ಈ ಅಧಿಸೂಚನೆಯಲ್ಲಿ ಒಟ್ಟು 3,271 ಭೂಮಾಲೀಕರನ್ನು ಗುರುತಿಸಲಾಗಿದೆ. ಇವರ ಪರಿಹಾರವನ್ನು ‘ನ್ಯಾಯಯುತ ಪರಿಹಾರ ಹಾಗೂ ಭೂಸ್ವಾಧೀನದಲ್ಲಿ ಪುನರ್ವಸ್ಥೆ ಮತ್ತು ಪುನರ್ನಿರ್ಮಾಣ ಕಾಯ್ದೆ, 2013’ರ ಅಡಿಯಲ್ಲಿ ನಿರ್ಧರಿಸಲಾಗುತ್ತದೆ. ಇದರ ಜೊತೆಗೆ, ಭೂಮಾಲೀಕರು ಹಣದ ಪರಿಹಾರ ಬದಲಿಗೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಯೋಜನೆಗಾಗಿ ಈಗಾಗಲೇ 9 ಕಂದಾಯ ಗ್ರಾಮಗಳ ಪೈಕಿ 7 ಗ್ರಾಮಗಳ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿತ್ತು. 2026 ಜೂನ್10ರಂದು ವಡೇರಹಳ್ಳಿ ಮಂಡಲಹಳ್ಳಿ, ಕೆಂಪಯ್ಯನಪಾಳ್ಯ ಹಾಗೂ ಜೂನ್ 15ರಂದು ಅರಳಾಳುಸಂದ್ರ, ಬನ್ನಿಗಿರಿ, ಹೊಸೂರು, ಕೆ.ಜಿ.ಗೊಲ್ಲರಪಾಳ್ಯ ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಅಧಿಸೂಚನೆ ನೀಡಲಾಗಿತ್ತು.
‘ವರ್ಕ್-ಲೈವ್-ಪ್ಲೇ’ ಮಾದರಿಯ ಟೌನ್ಶಿಪ್ ಯೋಜನೆ
ಈ ಯೋಜನೆಯನ್ನು ಜಾರಿಗೊಳಿಸುತ್ತಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು , ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಹಾಗೂ ಹಾರೋಹಳ್ಳಿ ನಡುವಿನ ಗ್ರಾಮಗಳಲ್ಲಿ ‘ವರ್ಕ್-ಲೈವ್-ಪ್ಲೇ’ಮಾದರಿಯಲ್ಲಿ ಈ ಟೌನ್ಶಿಪ್ ಅನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಆದರೆ, ರೈತರು ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಸ್ಥಳೀಯ ನಿವಾಸಿಗಳು ಮತ್ತು ರೈತರಿಂದ ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ಯೋಜನೆಗೆ ಸತತ ವಿರೋಧ ವ್ಯಕ್ತವಾಗುತ್ತಿದೆ. ಈ ಮಧ್ಯೆಯೂ ಸರ್ಕಾರವು ಅಧಿಸೂಚನೆ ಹೊರಡಿಸಿರುವುದು, ಮುಂದಿನ ದಿನಗಳಲ್ಲಿ ಭಾರೀ ಹೋರಾಟಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಎಸ್ಐಆರ್ ಬಳಿಕ ಬೆಂಗಳೂರಿನ ಮತದಾರರ ಸಂಖ್ಯೆ 1.03 ಕೋಟಿಯಿಂದ 59.08 ಲಕ್ಷಕ್ಕೆ ಇಳಿಕೆ!
ಯೋಜನೆಯ ಹಿನ್ನೆಲೆ ಬಗ್ಗೆ
2025 ಜನವರಿಯಂದು ಸಚಿವ ಸಂಪುಟವು ಟೌನ್ಶಿಪ್ ಪ್ರಸ್ತಾವನೆಗೆ ಅನುಮೋದನೆ ಕೊಟ್ಟಿತು. ಇನ್ನೂ 2025 ಮಾರ್ಚ್ನಲ್ಲಿ 9 ಗ್ರಾಮಗಳ 7,481 ಎಕರೆ ಭೂ ಸ್ವಾಧೀನಕ್ಕೆ ಜಿಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು. ಮೇ 2026ರಂದು ಅದೇ ವ್ಯಾಪ್ತಿಯ ಪರಿಷ್ಕೃತ ಪ್ರಸ್ತಾವನೆಗೆ ಸಚಿವ ಸಂಪುಟದಿಂದ ಅನುಮೋದನೆ ಸಿಕ್ಕಿತ್ತು. ಕೆಂಪಯ್ಯನಪಾಳ್ಯ, ಮಂದಹಳ್ಳಿ ಮತ್ತು ವಡೇರಹಳ್ಳಿ ಗ್ರಾಮಗಳ 499 ಎಕರೆ ಪ್ರದೇಶಕ್ಕಾಗಿ ಮೊದಲ ಅಂತಿಮ ಅಧಿಸೂಚನೆ 2026 ಜೂನ್ನಲ್ಲಿ ನೀಡಲಾಗಿತ್ತು. ನಾಲ್ಕು ಗ್ರಾಮಗಳ 4,941 ಎಕರೆಗೂ ಅಧಿಕ ಪ್ರದೇಶಕ್ಕಾಗಿ 2026 ಜುಲೈ 15ರಂದು ಎರಡನೇ ಅಂತಿಮ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿತು.
ರೈತರ ಆಕ್ರೋಶ
ಬಿಡದಿ ಟೌನ್ಶಿಪ್ ಯೋಜನೆ ಕುರಿತ ಭಿನ್ನಾಭಿಪ್ರಾಯಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರವು ಕಳೆದ ಆಗಸ್ಟ್ನಲ್ಲಿ ನ್ಯಾಯಮೂರ್ತಿ ಗುಹನಾಥನ್ ನರೇಂದರ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಯೋಜನೆಯ ಕಾನೂನಾತ್ಮಕ, ಮಾನವೀಯ ಹಾಗೂ ಅಭಿವೃದ್ಧಿ ಮಗ್ಗಲುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸಬೇಕಿತ್ತು. ಆದರೆ, ಸರ್ಕಾರ ನೇಮಿಸಿದ ಈ ಪರಿಶೀಲನಾ ಸಮಿತಿಯು ವರದಿ ಸಲ್ಲಿಸುವ ಮುನ್ನವೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬಾಧಿತ ಗ್ರಾಮಗಳ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
