ಅಣ್ಣಾ ಹಜಾರೆ ಭ್ರಷ್ಟಾಚಾರ ವಿರೋಧಿ ಹೋರಾಟದಿಂದ ರೈತರ ಪ್ರತಿಭಟನೆ, ಸಿಎಎ ವಿರೋಧಿ ಚಳವಳಿವರೆಗೆ ಹಲವು ಐತಿಹಾಸಿಕ ಹೋರಾಟಗಳಿಗೆ ಸಾಕ್ಷಿಯಾಗಿದ್ದ ಜಂತರ್ ಮಂತರ್ ಪ್ರದೇಶಕ್ಕೆ ಹೊಸ ನಿಯಮ ಸರಿಯೇ ಎಂಬ ಚರ್ಚೆ ನಡೆಯುತ್ತಿದೆ..
ನವದೆಹಲಿ: ದೇಶದ ಹಲವು ಪ್ರಮುಖ ಜನಾಂದೋಲನಗಳು, ಪ್ರತಿಭಟನೆಗಳು ಮತ್ತು ಉಪವಾಸ ಸತ್ಯಾಗ್ರಹಗಳಿಗೆ ವೇದಿಕೆಯಾಗಿದ್ದ ದೆಹಲಿಯ ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ದೆಹಲಿ ಪೊಲೀಸರು ಕೈಬಿಟ್ಟಿದ್ದಾರೆ. ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನ ಆಧಾರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರತಿಭಟನೆ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸಲು ಪರ್ಯಾಯವಾಗಿ ಮೂರು ಸ್ಥಳಗಳನ್ನು ಗುರುತಿಸಲಾಗಿದೆ.
ದೆಹಲಿಯ ಮಧ್ಯಭಾಗದಲ್ಲಿರುವ ರಾಮಲೀಲಾ ಮೈದಾನ, ಉತ್ತರ ದೆಹಲಿಯ ಬುರಾರಿ ಮೈದಾನ ಮತ್ತು ಪೂರ್ವ ದೆಹಲಿಯ ಸಿಬಿಡಿ ಮೈದಾನಗಳನ್ನು ಹೊಸ ಪ್ರತಿಭಟನಾ ಸ್ಥಳಗಳನ್ನಾಗಿ ಗುರುತಿಸಲಾಗಿದೆ. ಈ ಕುರಿತು ದೆಹಲಿ ಪೊಲೀಸ್ ಆಯುಕ್ತ ಅನುರಾಗ್ ಕುಮಾರ್ ಅವರ ಹೆಸರಿನಲ್ಲಿ ಪ್ರಕಟವಾದ ಸೂಚನೆಯಲ್ಲಿ, ಪ್ರತಿಭಟನೆಗಳನ್ನು ಆಯೋಜಿಸಲು ಸೂಕ್ತ ಪರ್ಯಾಯ ಸ್ಥಳಗಳನ್ನು ಪರಿಶೀಲಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವಾಲಯ ಸಮಿತಿಯನ್ನು ರಚಿಸಿತ್ತು ಎಂದು ತಿಳಿಸಲಾಗಿದೆ. ಸಮಿತಿಯ ಶಿಫಾರಸಿನ ಮೇರೆಗೆ ಜಂತರ್ ಮಂತರ್ನ ಅಧಿಕೃತ ಸ್ಥಾನಮಾನವನ್ನು ರದ್ದುಗೊಳಿಸಲಾಗಿದೆ.
1993ರಲ್ಲಿ ಆರಂಭವಾದ ಪ್ರತಿಭಟನಾ ಇತಿಹಾಸ
18ನೇ ಶತಮಾನದಲ್ಲಿ ನಿರ್ಮಿಸಲಾದ ಖಗೋಳ ವೀಕ್ಷಣಾಲಯದ ಸಮೀಪವಿರುವ ಜಂತರ್ ಮಂತರ್, 1993ರಿಂದ ದೆಹಲಿಯ ಪ್ರಮುಖ ಪ್ರತಿಭಟನಾ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಅದಕ್ಕೂ ಮೊದಲು ಇಂಡಿಯಾ ಗೇಟ್ ಸಮೀಪದ ಬೋಟ್ ಕ್ಲಬ್ ಪ್ರದೇಶವು ಪ್ರತಿಭಟನೆಗಳ ಪ್ರಮುಖ ತಾಣವಾಗಿತ್ತು.
1988ರಲ್ಲಿ ರೈತ ನಾಯಕ ಮಹೇಂದ್ರ ಸಿಂಗ್ ಟಿಕಾಯತ್ ನೇತೃತ್ವದಲ್ಲಿ ನಡೆದ ಬೃಹತ್ ರೈತರ ಪ್ರತಿಭಟನೆಯ ನಂತರ ಬೋಟ್ ಕ್ಲಬ್ ಪ್ರದೇಶದಲ್ಲಿ ಸಭೆಗಳಿಗೆ ನಿರ್ಬಂಧ ವಿಧಿಸುವ ಪ್ರಕ್ರಿಯೆ ಆರಂಭವಾಯಿತು. 1993ರ ವೇಳೆಗೆ ಆ ಪ್ರದೇಶದಲ್ಲಿ ಪ್ರತಿಭಟನೆ ನಡೆಸುವುದು ಕಷ್ಟವಾದ ಹಿನ್ನೆಲೆಯಲ್ಲಿ ಜಂತರ್ ಮಂತರ್ ಪ್ರಮುಖ ಪರ್ಯಾಯ ತಾಣವಾಗಿ ಹೊರಹೊಮ್ಮಿತು.
ಸಂಸತ್ತಿಗೆ ಸಮೀಪದಲ್ಲಿದ್ದರೂ, ಬೃಹತ್ ಜನಸಮೂಹವನ್ನು ನಿಯಂತ್ರಿಸಲು ಅನುಕೂಲವಾಗುವ ಭೌಗೋಳಿಕ ವಿನ್ಯಾಸ ಹೊಂದಿದ್ದ ಜಂತರ್ ಮಂತರ್, ಮುಂದಿನ ಹಲವು ದಶಕಗಳಲ್ಲಿ ವಿವಿಧ ಸಂಘಟನೆಗಳು ಮತ್ತು ಜನಸಾಮಾನ್ಯರ ಹೋರಾಟದ ಕೇಂದ್ರವಾಯಿತು.
ಇದನ್ನೂ ಓದಿ :
ಅಣ್ಣಾ ಹಜಾರೆ ಹೋರಾಟದಿಂದ ರೈತರ ಆಂದೋಲನದವರೆಗೆ
2011ರ ಏಪ್ರಿಲ್ 5ರಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಲೋಕಪಾಲ ಮಸೂದೆ ಜಾರಿಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಈ ಹೋರಾಟ ದೇಶಾದ್ಯಂತ ವ್ಯಾಪಕ ಗಮನ ಸೆಳೆಯಿತು. ಪ್ರಶಾಂತ್ ಭೂಷಣ್ ಮತ್ತು ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಕಾರ್ಯಕರ್ತರು ಚಳವಳಿಯಲ್ಲಿ ಭಾಗವಹಿಸಿದ್ದರು. ನಂತರದ ರಾಜಕೀಯ ಬೆಳವಣಿಗೆಗಳಲ್ಲಿ ಆಮ್ ಆದ್ಮಿ ಪಕ್ಷದ ಉದಯಕ್ಕೂ ಈ ಚಳವಳಿ ಹಿನ್ನೆಲೆಯಾಯಿತು.
2014 ರಲ್ಲಿ 19 ವರ್ಷದ ಅರುಣಾಚಲ ಪ್ರದೇಶದ ವಿದ್ಯಾರ್ಥಿ ನಿಡೋ ತಾನಿಯಾ ಸಾವಿನ ವಿರುದ್ಧ ನಡೆದ ಪ್ರತಿಭಟನೆಗಳು; 2012 ರಲ್ಲಿ ನಿರ್ಭಯಾಗೆ ನ್ಯಾಯ ಅಭಿಯಾನ ಸೇರಿದಂತೆ ಇತರ ಪ್ರತಿಭಟನೆಗಳಿಗೂ ಈ ಪ್ರತಿಭಟನಾ ಸ್ಥಳ ಸಾಕ್ಷಿಯಾಗಿತ್ತು.
2017ರಲ್ಲಿ ತಮಿಳುನಾಡಿನ ಸಾಲಬಾಧಿತ ರೈತರು ಸುಮಾರು 40 ದಿನಗಳ ಕಾಲ ಇಲ್ಲಿ ಪ್ರತಿಭಟನೆ ನಡೆಸಿದರು. ಬರ ಪರಿಹಾರ ಪ್ಯಾಕೇಜ್, ಸಾಲಮನ್ನಾ ಮತ್ತು ಕಾವೇರಿ ನಿರ್ವಹಣಾ ಮಂಡಳಿ ರಚನೆ ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದರು. ತಮ್ಮ ಸಂಕಷ್ಟದತ್ತ ಸರ್ಕಾರದ ಗಮನ ಸೆಳೆಯಲು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದ ರೈತರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು.
2019ರ ಆಗಸ್ಟ್ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿ ರದ್ದತಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರು ಇಲ್ಲಿ ಪ್ರತಿಭಟನೆ ನಡೆಸಿದರು. ಅದೇ ವರ್ಷದ ಡಿಸೆಂಬರ್ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳೂ ಜಂತರ್ ಮಂತರ್ನಲ್ಲಿ ನಡೆದವು.
ಇದರ ಜೊತೆಗೆ ನಿರ್ಭಯಾ ಪ್ರಕರಣಕ್ಕೆ ನ್ಯಾಯಕ್ಕಾಗಿ ನಡೆದ ಪ್ರತಿಭಟನೆ, ರೈತರ ಬೇಡಿಕೆಗಳು ಮತ್ತು ವಿವಿಧ ಸಾಮಾಜಿಕ ಚಳವಳಿಗಳು ಈ ಸ್ಥಳದ ಇತಿಹಾಸದ ಭಾಗವಾಗಿವೆ.
ನ್ಯಾಯಾಲಯದ ಮಧ್ಯಪ್ರವೇಶವೂ ನಡೆದಿತ್ತು
ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳಿಂದ ಶಬ್ದ ಮಾಲಿನ್ಯ ಮತ್ತು ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ 2017ರಲ್ಲಿ ಪ್ರತಿಭಟನೆಗಳನ್ನು ರಾಮಲೀಲಾ ಮೈದಾನಕ್ಕೆ ಸ್ಥಳಾಂತರಿಸುವಂತೆ ಸೂಚಿಸಿತ್ತು.
ಆದರೆ, 2018ರ ಜುಲೈನಲ್ಲಿ ಸುಪ್ರೀಂ ಕೋರ್ಟ್ ಜಂತರ್ ಮಂತರ್ ಮತ್ತು ಬೋಟ್ ಕ್ಲಬ್ ಪ್ರದೇಶದಲ್ಲಿ ಪ್ರತಿಭಟನೆಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಕ್ರಮವನ್ನು ಒಪ್ಪಲಿಲ್ಲ. ಸೂಕ್ತ ನಿಯಂತ್ರಣ ಮತ್ತು ನಿಯಮಗಳೊಂದಿಗೆ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನೀಡಬೇಕೆಂದು ನ್ಯಾಯಾಲಯ ಸ್ಪಷ್ಟಪಡಿಸಿತ್ತು.
ನಿರ್ಧಾರಕ್ಕೆ ವಿರೋಧ
ಜಂತರ್ ಮಂತರ್ನ ಅಧಿಕೃತ ಪ್ರತಿಭಟನಾ ತಾಣದ ಸ್ಥಾನಮಾನ ರದ್ದುಗೊಳಿಸಿರುವ ನಿರ್ಧಾರಕ್ಕೆ ಕೆಲವು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಕಾಕ್ರೋಚ್ ಜನತಾ ಪಾರ್ಟಿಯ ವಕ್ತಾರ ಸೌರವ್ ದಾಸ್, ಈ ಕ್ರಮವು ಶಾಂತಿಯುತ ಪ್ರತಿಭಟನೆ ಮತ್ತು ಸಭೆ ನಡೆಸುವ ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಆಕ್ಷೇಪಿಸಿದ್ದಾರೆ. ಸಂಬಂಧಿತ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.
ಜಂತರ್ ಮಂತರ್ ಅನ್ನು ಅಧಿಕೃತ ಪಟ್ಟಿಯಿಂದ ಕೈಬಿಟ್ಟಿರುವುದು ಅಲ್ಲಿ ಎಲ್ಲ ರೀತಿಯ ಪ್ರತಿಭಟನೆಗಳಿಗೂ ಸಂಪೂರ್ಣ ನಿಷೇಧ ವಿಧಿಸಲಾಗಿದೆ ಎಂಬುದಕ್ಕೆ ಸಮಾನವಲ್ಲ. ಆದರೆ ಇನ್ನು ಮುಂದೆ ಅಧಿಕೃತವಾಗಿ ಗುರುತಿಸಲಾದ ಪ್ರತಿಭಟನಾ ಸ್ಥಳಗಳ ಪಟ್ಟಿಯಲ್ಲಿ ಅದು ಇರುವುದಿಲ್ಲ. ಹೊಸ ಸ್ಥಳಗಳಲ್ಲಿ ಪ್ರತಿಭಟನೆ ಆಯೋಜಿಸುವ ವಿಧಾನ ಮತ್ತು ನಿಯಮಗಳ ಕುರಿತು ದೆಹಲಿ ಪೊಲೀಸರು ಪ್ರತ್ಯೇಕ ಮಾರ್ಗಸೂಚಿ ಪ್ರಕಟಿಸುವ ನಿರೀಕ್ಷೆಯಿದೆ.
ದಶಕಗಳ ಕಾಲ ಜನರ ಅಸಮಾಧಾನ, ಹಕ್ಕುಗಳ ಹೋರಾಟ ಮತ್ತು ರಾಜಕೀಯ ಚಳವಳಿಗಳಿಗೆ ವೇದಿಕೆಯಾಗಿದ್ದ ಜಂತರ್ ಮಂತರ್ನ ಈ ಬದಲಾವಣೆ ಚಳವಳಿಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಸರಕಾರದ ನಡೆ ವಿರೋಧಿಸಿ
ಇದನ್ನೂ ನೋಡಿ : ಬೆಂಗಳೂರಿನಲ್ಲಿ ಎಸ್ಐಆರ್ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ; ಪತ್ರಕರ್ತರ ಮೇಲೂ ಹಲ್ಲೆ
