ಬಡತನದ ಅಂಕಿ ಅಂಶಗಳ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ

ಪ್ರೊ.ಪ್ರಭಾತ್ ಪಟ್ನಾಯಕ್

ಮೊನ್ನೆ ಮೊನ್ನೆ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಒಂದು ಅತಿರೇಕದ ಹೇಳಿಕೆಯನ್ನು ನೀಡಿದ್ದಾರೆ. ಭಾರತದಲ್ಲಿ ಬಡತನದ ಅನುಪಾತವು, 2022-23ರ ಬಳಕೆ ವೆಚ್ಚ ಸಮೀಕ್ಷೆಯ ಅಂಕಿ-ಅಂಶಗಳ ಪ್ರಕಾರ, ಶೇ. 5ಕ್ಕಿಂತಲೂ ಕೆಳಗಿದೆ ಎಂಬುದು ಅವರ ದಾವೆ. 2022-23ರಲ್ಲಿ ಒಟ್ಟು ಜನಸಂಖ್ಯೆಯ ಕೇವಲ ಶೇ. 5ರಷ್ಟು ಮಂದಿಯ (ಗ್ರಾಮೀಣದ ಮತ್ತು ನಗರ ಭಾರತದ) ತಲಾ ಬಳಕೆಯ ವೆಚ್ಚವು ಆ ವರ್ಷದ ಬಡತನ ರೇಖೆಯ ಮಟ್ಟಕ್ಕಿಂತ ಕೆಳಗಿದೆ ಎಂದೂ ಮತ್ತು ಈ ಅಂಶವು, ಸುರೇಶ್ ತೆಂಡೂಲ್ಕರ್ ನೇತೃತ್ವದ ಸಮಿತಿಯು 2011-12ರ ವರ್ಷಕ್ಕಾಗಿ ಸೂಚಿಸಿದ ಬಡತನ ರೇಖೆಯ ಅಂಕಿ-ಸಂಖ್ಯೆಯನ್ನು ಗ್ರಾಹಕ ಬೆಲೆ ಸೂಚ್ಯಂಕದೊಂದಿಗೆ ನವೀಕರಿಸಿದ ನಂತರ ಲಭಿಸಿದ ಸಂಖ್ಯೆಯನ್ನು ಆದರಿಸಿದೆ ಎಂದು ಅವರು ಹೇಳಿದ್ದಾರೆ.

ತೆಂಡೂಲ್ಕರ್ ಸಮಿತಿಯು ಈ 2011-12ರ ಬಡತನದ ರೇಖೆಗಳನ್ನು ನಿರ್ಧರಿಸುವಾಗ ಯಾವ ವಸ್ತುನಿಷ್ಠ ಮಾನದಂಡವನ್ನೂ ಗಣನೆಗೆ ತೆಗೆದುಕೊಂಡಿರಲಿಲ್ಲ. ಉದಾಹರಣೆಗೆ, ಕನಿಷ್ಠ ಪ್ರಮಾಣದ ಕ್ಯಾಲೋರಿ ಸೇವನೆಯನ್ನಾಗಲಿ ಅಥವಾ ಒಂದು ಕನಿಷ್ಠ ಅಗತ್ಯಗಳ ಬುಟ್ಟಿಯ ಸರಕುಗಳ ಬೆಲೆಗಳನ್ನಾಗಲಿ ಆಧರಿಸಿರಲಿಲ್ಲ. ತಳ ಬುಡ ಇಲ್ಲದ ಒಂದು ನಾಮಕಾವಸ್ತೆಯ ಬಡತನದ ರೇಖೆಯನ್ನು ಅದು ಪ್ರಕಟಿಸಿತು. ಇದಲ್ಲದೆ, ಈ ತೆಂಡೂಲ್ಕರ್ ಸಮಿತಿ ನಿರ್ಧರಿಸಿದ  ಬಡತನ ರೇಖೆಗಳನ್ನು ನವೀಕರಿಸಲು ಬಳಸುತ್ತಿರುವ ಗ್ರಾಹಕ ಬೆಲೆ ಸೂಚ್ಯಂಕಗಳು ಶಿಕ್ಷಣ ಮತ್ತು ಆರೋಗ್ಯದಂತಹ ಅಗತ್ಯ ಸೇವೆಗಳ ಖಾಸಗೀಕರಣವನ್ನು ಸಮರ್ಪಕವಾಗಿ ಪರಿಗಣಿಸದ ಕಾರಣ, ಅವು ಒಂದು ಗಂಭೀರವಾದ ಕೀಳಂದಾಜು ಪಕ್ಷಪಾತ ಹೊಂದಿವೆ. ಅದಕ್ಕಿಂತಲೂ ಮಿಗಿಲಾಗಿ, 2022-23ರ ಬಳಕೆಯ ವೆಚ್ಚ ಸಮೀಕ್ಷೆಯನ್ನು ಹಿಂದಿನ ಎಲ್ಲಾ ಸಮೀಕ್ಷೆಗಳಿಗಿಂತಲೂ ಒಂದು ವಿಭಿನ್ನವಾದ ರೀತಿಯಲ್ಲಿ ನಡೆಸಲಾಗಿದೆ. ಈ ಕಾರಣದಿಂದಾಗಿ, ಈ ಸಮೀಕ್ಷೆಯ ಅಂಕಿ-ಅಂಶಗಳನ್ನು ಹಿಂದಿನ ಫಲಿತಾಂಶಗಳೊಂದಿಗೆ ಹೋಲಿಸುವಂತಿಲ್ಲ. ಮತ್ತು, ಈ ಸಮೀಕ್ಷೆಯ ಅಂಕಿ-ಅಂಶಗಳನ್ನು ಪೂರ್ಣವಾಗಿ ಪ್ರಕಟಿಸದ ಕಾರಣದಿಂದಾಗಿ ಈ ಸಮೀಕ್ಷೆಯ ಅದೆಷ್ಟು ಪಕ್ಷಪಾತಿಯಾಗಿದೆ ಎಂಬುದನ್ನು ನಿಖರವಾಗಿ ಹೇಳಲಾಗದು.

ಬಡತನವು ಶೇ. 5ರ ಮಟ್ಟಕ್ಕಿಂತಲೂ ಕೆಳಗಿದೆ ಎನ್ನುವ ನೀತಿ ಆಯೋಗದ ಹೇಳಿಕೆಗೆ ಯಾವ ವಿಶ್ವಾಸಾರ್ಹತೆಯೂ ಇಲ್ಲ. ಏಕೆಂದರೆ, ಲಭ್ಯವಿರುವ ಬೆಟ್ಟದಷ್ಟು ಮಾಹಿತಿಯ ಪ್ರಕಾರ ಅರ್ಥವ್ಯವಸ್ಥೆಯು ಅಧೋಗತಿಗೆ ಇಳಿಯುತ್ತಿದೆ. ಹಾಗಾಗಿ, ಚುನಾವಣೆಯ ಸಂಧರ್ಭದಲ್ಲಿ ಜನರನ್ನು ಮರುಳು ಮಾಡಲು ಬಡತನಕ್ಕೆ ಸಂಬಂಧಿಸಿದ ಈ ಅಂಕಿ ಅಂಶಗಳನ್ನು ಸರ್ಕಾರವು ತೇಲಿ ಬಿಟ್ಟಿದೆ ಎಂದು ಊಹಿಸುವುದು ಅನಿವಾರ್ಯವಾಗುತ್ತದೆ. ಈಗ,  ಅರ್ಥವ್ಯವಸ್ಥೆಯ ಪರಿಸ್ಥಿತಿಗೆ ಸಂಬಂಧಿಸಿದ ಮಾಹಿತಿಯನ್ನು ನೋಡೋಣ.

ಇದನ್ನೂ ಓದಿ: ಕರ್ನಾಟಕ ರಾಷ್ಟ್ರೀಯ ಅಂತರರಾಷ್ಟ್ರೀಯ ಇತರೆ ವಿದ್ಯಮಾನ ಮೋದಿ ಹತ್ತು ವರ್ಷ ಪ್ರಧಾನಿಯಾಗಿ ಕೊಟ್ಟ ಮಾತಲ್ಲಿ ಒಂದನ್ನಾದರೂ ಈಡೇರಿಸಿದ್ದಾರಾ? ಎದೆ ಮುಟ್ಟಿಕೊಂಡು ಹೇಳಿ: ಸಿ.ಎಂ. ಸವಾಲು

2017-18ರ ಬಳಕೆಯ ವೆಚ್ಚದ ಸಮೀಕ್ಷೆಯ ಮೂಲಕ ಕಂಡು ಬಂದ ಅಂಶಗಳು ಕಳವಳಕಾರಿಯಾಗಿದ್ದವು. ಆದ್ದರಿಂದ, ಸರ್ಕಾರವು ಈ ಸಮೀಕ್ಷೆಯ ವರದಿಯನ್ನು ಬಹಿರಂಗಪಡಿಸಲಿಲ್ಲ. ಆದರೆ, ಮಾಧ್ಯಮಗಳಲ್ಲಿ ಸೋರಿಕೆಯಾದ ವರದಿಯ ಪ್ರಕಾರ, ಯೋಜನಾ ಆಯೋಗವು ಹಲವು ವರ್ಷಗಳ ಹಿಂದೆ ನಿಗದಿಪಡಿಸಿದ ಕ್ಯಾಲೊರಿ ಮಾನದಂಡದ ಅನುಗುಣವಾಗಿ, ಪ್ರತಿ ವ್ಯಕ್ತಿಯು ದಿನಕ್ಕೆ 2100 ಕ್ಯಾಲೊರಿಗಳನ್ನು ಸೇವಿಸಲು ಸಾಧ್ಯವಾಗದ ನಗರ ಭಾರತದ ವ್ಯಕ್ತಿಗಳ ಸಂಖ್ಯೆಯ ಶೇ. 60ಕ್ಕಿಂತಲೂ ಅಧಿಕವಾಗಿತ್ತು. ಈ ಅನುಪಾತವು 1993-94ರಲ್ಲಿದ್ದ ಶೇ. 57ಕ್ಕಿಂತ ಮೇಲಿದೆ ಮತ್ತು 2011-12ರಲ್ಲಿದ್ದ ಶೇ. 65ಕ್ಕಿಂತ ಕೆಳಗಿದೆ. ಅದೇ ರೀತಿಯಲ್ಲಿ, ಪ್ರತಿ ವ್ಯಕ್ತಿಯು ದಿನಕ್ಕೆ 2200 ಕ್ಯಾಲೊರಿಗಳನ್ನು ಸೇವಿಸಲು ಸಾಧ್ಯವಾಗದ ಗ್ರಾಮೀಣ ಭಾರತದ ವ್ಯಕ್ತಿಗಳ ಸಂಖ್ಯೆಯ ಶೇ. 80ಕ್ಕಿಂತಲೂ ಅಧಿಕವಾಗಿತ್ತು. ಈ ಅನುಪಾತವು 1993-94ರಲ್ಲಿದ್ದ ಶೇ. 5೮ಕ್ಕಿಂತ ಮತ್ತು 2011-12ರಲ್ಲಿದ್ದ ಶೇ. 6೮ಕ್ಕಿಂತ ಮೇಲಿದೆ. ಹಾಗಾಗಿ, 2017-18ರ ನಿಜ ಬಡತನದ ಅನುಪಾತವು 2011-12ರ ಅನುಪಾತಕ್ಕೆ ಹೋಲಿಸಿದರೆ ಗಮನಾರ್ಹವಾಗಿ ಏರಿಕೆಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ. (ಈ ಅಂಕಿ-ಅಂಶಗಳನ್ನು ಉತ್ಸಾ ಪಟ್ನಾಯಕ್ ಅವರ ಮುಂಬರುವ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ).

ಸಂಕ್ಷಿಪ್ತವಾಗಿ ಹೇಳುವುದಾದರೆ, ಬಡತನವು 2011-12 ಮತ್ತು 2017-18ರ ನಡುವೆ ಗಮನಾರ್ಹವಾಗಿ ಏರಿಕೆಯಾಗಿತ್ತು. 2017-18ರ ನಂತರ ಕೊವಿಡ್‌-19 ಮತ್ತು ಅದರಿಂದ ಪ್ರೇರಿತವಾದ ಲಾಕ್‌ಡೌನ್ ಕಾರಣದಿಂದಾಗಿ ನೆಲಕಚ್ಚಿದ್ದ ಅರ್ಥವ್ಯವಸ್ಥೆಯು ಈಗ ಚೇತರಿಸಿಕೊಳ್ಳುತ್ತಿದೆ. ಆದಾಗ್ಯೂ, ಈಗ ನಿರುದ್ಯೋಗವು ಕೊವಿಡ್‌-19 ಹರಡುವ ಮೊದಲು ಇದ್ದುದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ಹಾಗಾಗಿ, ಈ ಸನ್ನಿವೇಶದಲ್ಲಿ, ಬಡತನದ ಅನುಪಾತವು 2011-12ಕ್ಕೆ ಹೋಲಿಸಿದರೆ ಇಳಿಕೆಯಾಗಿದೆ ಎಂಬ ದಾವೆಯು ವಿಶ್ವಾಸಾರ್ಹವಲ್ಲ.

ಕ್ಯಾಲೋರಿ ಸೇವನೆಯ ಮಟ್ಟವೇ ಬಡತನದ ಒಂದು ಸೂಚಕವಲ್ಲ ಎಂದು ವಾದಿಸಬಹುದು. ಈ ವಾದವು ಒಂದು ತಪ್ಪು ತಿಳುವಳಿಕೆಯನ್ನು ಆಧರಿಸಿದೆ. ಬಡತನವನ್ನು ಅಂದಾಜು ಮಾಡಲು ಕ್ಯಾಲೋರಿ ಸೇವನೆಯ ಅಂಶವನ್ನು ಮಾತ್ರ ಪರಿಗಣಿಸಬೇಕು ಎಂಬುದು ವಿಷಯವಲ್ಲ. ವಿಷಯವೆಂದರೆ, ವರಮಾನವು ಏರಿಕೆಯಾದಂತೆಲ್ಲಾ ಕ್ಯಾಲೋರಿ ಸೇವನೆಯ ಹೆಚ್ಚಳವು ಸ್ವತಃ ಪ್ರಕಟಗೊಳ್ಳುತ್ತದೆ.  ವಿಷಯವನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ನಮ್ಮಂತಹ ದೇಶಗಳಲ್ಲಿ ಒಬ್ಬ ವ್ಯಕ್ತಿಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದರೂ ಸಹ ಕ್ಯಾಲೋರಿ ಸೇವನೆಯ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂಬ ಪ್ರತಿಪಾದನೆಯನ್ನು ಒಪ್ಪಲಾಗದು. ಏಕೆಂದರೆ, ತಲಾ ವರಮಾನ ಮತ್ತು ತಲಾ ಧಾನ್ಯ ಸೇವನೆಯ ನಡುವೆ ಒಂದು ಸ್ಪಷ್ಟ ಧನಾತ್ಮಕ ಸಂಬಂಧವಿದೆ (ಇದು ತಲಾ ಕ್ಯಾಲೋರಿ ಸೇವನೆ ಎಂದರ್ಥ). ಈ ಪ್ರತಿಪಾದನೆಯನ್ನು ಅನುಭವ ಸಾಕ್ಷ್ಯವು ಸಂಪೂರ್ಣವಾಗಿ ಬೆಂಬಲಿಸುತ್ತದೆ. ಆದ್ದರಿಂದ, ಒಂದು ವೇಳೆ ಕ್ಯಾಲೋರಿ ಸೇವನೆಯಲ್ಲಿ ಇಳಿಕೆ ಸಂಭವಿಸಿದರೆ ಅದನ್ನು ನಿಜ ವರಮಾನದ ಇಳಿಕೆ ಎಂದು ಪರಿಗಣಿಸಬೇಕಾಗುತ್ತದೆ.

ವರಮಾನಗಳ ಬಗ್ಗೆ ನಿಖರ ದತ್ತಾಂಶ ಲಭ್ಯವಿಲ್ಲ. ಹಾಗಾಗಿ, ಲಭ್ಯವಿರುವ ಬಳಕೆಯ ವೆಚ್ಚಗಳ ದತ್ತಾಂಶವನ್ನು ಕೆಲವು ಬೆಲೆ ಸೂಚ್ಯಂಕಗಳ ಮೂಲಕ ಲೆಕ್ಕ ಹಾಕಿ ದೊರೆತ ಅಂಕಿ ಅಂಶಗಳನ್ನು ಬಳಸಿಕೊಂಡು, ಅವುಗಳನ್ನು ಒಂದು ನಿರ್ದಿಷ್ಟ ಕಾಲಾವಧಿಗೆ ಸಂಬಂಧಿಸಿ, ಒಂದು ಅರ್ಥಪೂರ್ಣ ಹೋಲಿಕೆಯನ್ನು ಮಾಡಬಹುದು. ಆದರೆ, ಈ ಸೂಚ್ಯಂಕಗಳು ಪೂರ್ಣವಾಗಿ ವಿಶ್ವಾಸಾರ್ಹವಲ್ಲ. ಹಾಗಾಗಿ, ಕ್ಯಾಲೊರಿ ಸೇವನೆಯನ್ನು ನಿಜ ವರಮಾನದ ಒಂದು ಬದಲಿ (proxy) ಎಂದು ಪರಿಗಣಿಸಿ, ಈ ಕ್ಯಾಲೊರಿ ಸೇವನೆಯನ್ನು ಒಂದು ದೀರ್ಘ ಕಾಲಾವಧಿಗೆ ಸಂಬಂಧಿಸಿ ಹೋಲಿಕೆ ಮಾಡುವ ಕ್ರಮವು ಅರ್ಥಪೂರ್ಣವಾಗುತ್ತದೆ. ಈ ರೀತಿಯಲ್ಲಿ ಒಂದು ಹೋಲಿಕೆಯನ್ನು ನಾವು ಕೈಗೊಂಡರೆ, 2017-18 ರವರೆಗೆ ದೇಶದಲ್ಲಿ ಬಡತನವು ಏರಿಕೆಯಾಗಿದೆ ಎಂಬುದು ಕಂಡುಬರುತ್ತದೆ. ಆನಂತರ ಏನಾಗಿದೆ ಎಂಬುದು ನಮಗೆ ತಿಳಿದಿಲ್ಲ (ಅಂದರೆ, ಮಾಹಿತಿ ಲಭ್ಯವಿಲ್ಲ). 2022-23ರ ಬಳಕೆಯ ಸಮೀಕ್ಷೆಯು ಒಳಗೊಂಡಿರುವ ಕ್ಯಾಲೊರಿ ಸೇವನೆಯ ಮಾಹಿತಿಯನ್ನು ಸರ್ಕಾರವು ಇನ್ನೂ ಬಹಿರಂಗಪಡಿಸಿಲ್ಲ. ಅದನ್ನು ಬಹಿರಂಗಪಡಿಸಿದಾಗ, 2017-18ರ ನಂತರ ಬಡತನ ಪರಿಸ್ಥಿತಿ ಏನಾಗಿದೆ ಎಂಬುದು ತಿಳಿದುಬರುತ್ತದೆ.

ಖಚಿತ ದತ್ತಾಂಶವು ದೊರಕುವ ಸಮಯದವರೆಗೂ ಬಿಡಿ ಬಿಡಿಯಾಗಿ ದೊರಕುವ ಪರೋಕ್ಷ ಪುರಾವೆಗಳನ್ನು ಮಾತ್ರವೇ ನಾವು ಅವಲಂಬಿಸಬೇಕಾಗುತ್ತದೆ. ಲಭ್ಯವಿರುವ ಇಂತಹ ಎಲ್ಲಾ ಪುರಾವೆಗಳೂ ದೇಶದಲ್ಲಿ ಬಡತನ ಇಳಿಕೆಯಾಗಿಲ್ಲ, ಬದಲಿಗೆ, ಗಣನೀಯವಾಗಿ ಏರಿಕೆಯಾಗಿದೆ ಎಂಬುದನ್ನು ಸೂಚಿಸುತ್ತವೆ.

ಇಂತಹ ಪರೋಕ್ಷ ಪುರಾವೆಗಳ ಪೈಕಿ ಮೊದಲನೆಯದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ (NFHS) ದೊರಕುತ್ತದೆ. 2019-21 ವರ್ಷಗಳ ಅವಧಿಯನ್ನು ಒಳಗೊಂಡ NFHS-5ರಲ್ಲಿ, 15-49 ವಯೋಮಾನದ ಮಹಿಳೆಯರಲ್ಲಿ ರಕ್ತಹೀನತೆಯ ಪ್ರಕರಣಗಳು, 2015-16 ವರ್ಷಗಳ ಅವಧಿಯನ್ನು ಒಳಗೊಂಡ NFHS-4ಗೆ ಹೋಲಿಸಿದರೆ, ಏರಿಕೆಯಾಗಿರುವುದು ಕಂಡುಬರುತ್ತದೆ. NFHS-4ರಲ್ಲಿ ಈ ವಯೋಮಾನದ ಶೇ. 53 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರು. NFHS-5ರಲ್ಲಿ, ರಕ್ತಹೀನತೆಯಿಂದ ಬಳಲುತ್ತಿದ್ದ ಮಹಿಳೆಯರ ಸಂಖ್ಯೆಯು ಶೇ. 57ರಷ್ಟಿತ್ತು. NFHS-4ರಲ್ಲಿ, 21 ರಾಜ್ಯಗಳಲ್ಲಿ, ಆ ರಾಜ್ಯಗಳ ಮಹಿಳೆಯರ ಒಟ್ಟು ಸಂಖ್ಯೆಯಲ್ಲಿ ಅರ್ಧ ಭಾಗಕ್ಕಿಂತಲೂ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದರು. NFHS-5ರಲ್ಲಿ, ಅರ್ಧ ಭಾಗಕ್ಕಿಂತಲೂ ಹೆಚ್ಚು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದ ರಾಜ್ಯಗಳ ಸಂಖ್ಯೆಯು 25ಕ್ಕೆ ಏರಿಕೆಯಾಗಿತ್ತು. ಪಶ್ಚಿಮದ ದೇಶಗಳಲ್ಲಿ ಬಳಸುವ ಮಾನದಂಡಗಳನ್ನೇ ಭಾರತದಲ್ಲೂ ಬಳಸುವ ಕಾರಣದಿಂದಾಗಿ, ಭಾರತದ ಮಹಿಳೆಯರ ರಕ್ತಹೀನತೆಯ ಪ್ರಕರಣಗಳ ಸಂಖ್ಯೆಯು ಅಧಿಕವಾಗಿ ತೋರುತ್ತದೆ; ಈ ಕ್ರಮವು ಸರಿಯಲ್ಲ ಎಂದು ವಾದಿಸಲಾಗುತ್ತದೆ. ಒಂದು ನಿರ್ದಿಷ್ಟ ಸಮಯಕ್ಕಾಗಿ ಈ ವಾದವನ್ನು ಒಪ್ಪಿಕೊಂಡರೂ ಸಹ, ಅದು ಕಾಲ ಕಾಲದ ಹೋಲಿಕೆಗಳಿಗೆ ಅನ್ವಯವಾಗುವುದಿಲ್ಲ. ಭಾರತದ ಮಹಿಳೆಯರ ರಕ್ತಹೀನತೆಯ ಸಂಬಂಧವಾಗಿ ಹೇಳುವುದಾದರೆ, ಕಾಲಕ್ರಮದಲ್ಲಿ ಪರಿಸ್ಥಿತಿ ನಿಜಕ್ಕೂ ಹದಗೆಟ್ಟಿದೆ.

ಪರೋಕ್ಷ ಪುರಾವೆಯ ಎರಡನೇ ತುಣುಕು ಜಾಗತಿಕ ಹಸಿವು ಸೂಚ್ಯಂಕದಲ್ಲಿ(GHI) ದೊರಕುತ್ತದೆ. 2023ರಲ್ಲಿ ಭಾರತವು, ಹಸಿವಿನ ಅಗಾಧತೆಯನ್ನು ಲೆಕ್ಕ ಹಾಕುವ ಜಾಗತಿಕ ಹಸಿವು ಸೂಚ್ಯಂಕದಲ್ಲಿರುವ 125 ದೇಶಗಳ ಪಟ್ಟಯಲ್ಲಿ 111ನೇ ಸ್ಥಾನಕ್ಕೆ ಇಳಿದಿದೆ. ಈ ಸೂಚ್ಯಂಕವು ಒಳಗೊಂಡ ಅಂಶಗಳಲ್ಲಿ ದೋಷವಿರುವುದರಿಂದ ಈ ಸೂಚ್ಯಂಕವು ದೋಷಪೂರಿತವಾಗಿದೆ ಎಂದು ಹೇಳುವ ಮೂಲಕ ಭಾರತ ಸರ್ಕಾರವು ಸೂಚ್ಯಂಕದ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಸೂಚ್ಯಂಕದಲ್ಲಿ ಸೇರಿಸಿರುವ ಬದಲಾಯಿಸಬಹುದಾದ ಅಂಶಗಳು ಮತ್ತು ಅವುಗಳಿಗೆ ನೀಡಲಾದ ಮಹತ್ವವನ್ನು (weights) ಒಪ್ಪುವುದು ಮುಖ್ಯವಲ್ಲ. ಹಸಿವಿನ ಸೂಚ್ಯಂಕದ ಪಟ್ಟಿಯಲ್ಲಿ ದೇಶವು ನಿಜಕ್ಕೂ ಉನ್ನತ ಸ್ಥಾನ ಪಡೆಯುವುದೇ ಮುಖ್ಯವಾದ ವಿಷಯ. ತಳ ಮಟ್ಟದ ಜನರ ನಿಜ ತಲಾ ವರಮಾನವು ಒಂದು ಗಮನಾರ್ಹ ಹೆಚ್ಚಳವನ್ನು ಕಂಡಾಗ ಮಾತ್ರವೇ ದೇಶದ ಬಡತನದ ತೀವ್ರ ಕುಸಿತವನ್ನು ವಿವರಿಸಬಹುದು.

ಇದಿಷ್ಟೇ ವಿಷಯವಲ್ಲ. ಜಾಗತಿಕ ಹಸಿವಿನ ಸೂಚ್ಯಂಕವು ಬದಲಾಯಿಸಬಹುದಾದ ಕೆಲವು ಅಂಶಗಳಿಂದ ಕೂಡಿದೆ. ಅಂದರೆ, ಜನರ ಅಪೌಷ್ಟಿಕತೆ (undernourishment) – ಅಸಮರ್ಪಕ ಕ್ಯಲೊರಿ ಆಹಾರ ಸೇವನೆ; ಶಿಶು ಕಳಾಹೀನತೆ (child wasting) – ಐದು ವರ್ಷದೊಳಗಿನ ಶಿಶುಗಳ ಒಟ್ಟು ಸಂಖ್ಯೆಯಲ್ಲಿ ಶರೀರ ತೂಕವು ಶಿಶುಗಳ ಎತ್ತರಕ್ಕೆ ಅನುಗುಣವಾಗಿಲ್ಲದಿರುವುದು; ಕುಂಠಿತ ಶಿಶು ಬೆಳವಣಿಗೆ (child stunting) – ಐದು ವರ್ಷಗಳ ಕೆಳಗಿನ ಶಿಶುಗಳ ಒಟ್ಟು ಸಂಖ್ಯೆಯಲ್ಲಿ ಶರೀರ ತೂಕವು ಅವರ ವಯಸ್ಸಿಗೆ ಅನುಗುಣವಾಗಿಲ್ಲದಿರುವುದು ಅಥವಾ ಲಘು ತೂಕದ ಶಿಶುಗಳು; ಮತ್ತು, ಶಿಶು ಮರಣ (child mortality) – ಐದು ವರ್ಷದೊಳಗಿನ ಶಿಶುಗಳ ಒಟ್ಟು ಸಂಖ್ಯೆಯಲ್ಲಿ ಮರಣ ಹೊಂದುವ ಶಿಶುಗಳು ಪ್ರಮಾಣ. 2023ರಲ್ಲಿ ಈ ಅಂಶಗಳಿಗೆ ಸಂಬಂಧಿಸಿದ ಪರಿಸ್ಥಿತಿಯು 2008ರಲ್ಲಿ ಇದ್ದುದಕ್ಕಿಂತಲೂ ಕೆಟ್ಟದಾಗಿದೆ. ಇವುಗಳ ಪೈಕಿ ಅಪವಾದ ಎನ್ನಬಹುದಾದ ಒಂದು ಅಂಶವೆಂದರೆ, ಅಪೌಷ್ಟಿಕತೆ ಮಾತ್ರ. ಇದು ಸರಿಸುಮಾರು ಒಂದೇ ಮಟ್ಟದಲ್ಲಿ ಉಳಿದಿದೆ. ಆದರೆ, ಇದೂ ಸಹ, ವರ್ಷ 2000ರಲ್ಲಿ ಇದ್ದುದಕ್ಕಿಂತ ಕೆಟ್ಟದಾಗಿದೆ ಎಂಬುದು ನಿಸ್ಸಂಶಯವಾಗಿದೆ. ನಿಜ, ದತ್ತಾಂಶಗಳು ಒದಗುವ ಮೂಲಗಳು ಬದಲಾಗುವುದರಿಂದ, ಒಂದು ಸಮಯದ ಶ್ರೇಯಾಂಕಗಳನ್ನು ಮತ್ತೊಂದು ಸಮಯದ ಶ್ರೇಯಾಂಕದೊಂದಿಗೆ ಹೋಲಿಸಬಾರದು ಎಂದು ಹಸಿವಿನ ಸೂಚ್ಯಂಕವನ್ನು ಸಿದ್ಧಪಡಿಸುವವರು ಕಟ್ಟುನಿಟ್ಟಾಗಿ ಎಚ್ಚರಿಸುತ್ತಾರೆ. ಆದಾಗ್ಯೂ, ವರ್ಷ 2008ರ ಅಥವಾ 2000ದ ಪರಿಸ್ಥಿತಿಯೊಂದಿಗೆ ಹೋಲಿಸಿದರೆ, ಹಸಿವಿನ ಸೂಚ್ಯಂಕವು ಒಳಗೊಂಡಿರುವ ಎಲ್ಲ ಸೂಚಕಗಳ ವಿಷಯದಲ್ಲೂ ಈಗಿನ ಪರಿಸ್ಥಿತಿ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಪರಿಸ್ಥಿತಿಯು, ತಳ ಮಟ್ಟದ ಜನರ ನಿಜ ತಲಾ ವರಮಾನದಲ್ಲಿ ಹೆಚ್ಚಳವಾಗಿದೆ ಎಂಬ ದಾವೆಗೆ (ಈ ದಾವೆಯೊಂದು ಮಾತ್ರವೇ ಬಡತನದ ತೀವ್ರ ಕುಸಿತದ ವಿವರಣೆ) ಯಾವುದೇ ಆಧಾರವಿಲ್ಲ ಎಂಬುದನ್ನು ಸೂಚಿಸುತ್ತದೆ.

ಪರೋಕ್ಷ ಪುರಾವೆಯ ಮೂರನೆಯ ತುಣುಕು “ಶೂನ್ಯ ಆಹಾರ ಶಿಶುಗಳು” ಎಂದು ಕರೆಯಲ್ಪಡುವ ಅಂಶದಲ್ಲಿದೆ. ಹಿಂದಿನ 24 ಗಂಟೆಗಳಲ್ಲಿ ತಾಯಿಯ ಹಾಲನ್ನು ಹೊರತುಪಡಿಸಿ ಬೇರೆ ಯಾವುದೇ ಆಹಾರವನ್ನು ಸೇವಿಸದ ಆರು ತಿಂಗಳಿನಿಂದ ಇಪ್ಪತ್ತಮೂರು ತಿಂಗಳ ನಡುವಿನ ಶಿಶುಗಳನ್ನು “ಶೂನ್ಯ ಆಹಾರ ಶಿಶುಗಳು” ಎನ್ನುತ್ತಾರೆ. “ಶೂನ್ಯ ಆಹಾರ”ವೆಂದರೆ ಅದು ಖಂಡಿತವಾಗಿಯೂ ಈ ಶಿಶುಗಳಿಗೆ ಯಾವ ಆಹಾರವೂ ಇರುವುದಿಲ್ಲ ಎಂಬ ಅನಿಸಿಕೆ ಉಂಟಾಗುತ್ತದೆ. ಅದು ತಪ್ಪು. ಅದರ ಅರ್ಥವೇನೆಂದರೆ, ಹಿಂದಿನ 24 ಗಂಟೆಗಳಲ್ಲಿ ಅವರು ಎದೆಹಾಲನ್ನು ಹೊರತುಪಡಿಸಿ ಯಾವುದೇ ಪೂರಕ ಆಹಾರವನ್ನು ಸೇವಿಸಿಲ್ಲ ಎಂಬುದು. ಭಾರತದಲ್ಲಿ, 2023ರಲ್ಲಿ, ಅಂತಹ 6.7 ಮಿಲಿಯನ್ ಶಿಶುಗಳಿದ್ದವು. ಇದು ಒಂದು ಅಭಾವವೇ ಎಂಬುದನ್ನು ನಿರಾಕರಿಸಲಾಗದು. ಈ ಅಭಾವವು ಕುಟುಂಬದ ಕೊಳ್ಳುವ ಶಕ್ತಿಯ ಕೊರತೆಯೊಂದಿಗೆ ಸಂಬಂಧವನ್ನು ಯಾವಾಗಲೂ ಹೊಂದಿರುತ್ತದೆ ಎಂದು ಹೇಳಲಾಗದು.  ಆದರೂ, ಇದು ಖಂಡಿತವಾಗಿಯೂ ಬಡತನದ ಮತ್ತೊಂದು ರೂಪದ ಅಭಿವ್ಯಕ್ತಿಯೇ ಸರಿ. ಏಕೆಂದರೆ, ಈ ಶಿಶುಗಳ ಪೋಷಕರು ತಮ್ಮ ಜೀವನೋಪಾಯಕ್ಕಾಗಿ ಗಂಟೆ ಗಂಟೆಗಟ್ಟಲೇ ಕೆಲಸ ಮಾಡಬೇಕಾಗುವ ಸಂಬಂಧವನ್ನು ಖಂಡಿತವಾಗಿಯೂ ಹೊಂದಿದೆ. ಅದೇ ವಯೋಮಾನದ (ಸಂಬಂಧಿತ) ಶಿಶುಗಳ ಒಟ್ಟು ಸಂಖ್ಯೆಯಲ್ಲಿ ಶೂನ್ಯ ಆಹಾರ ಶಿಶುಗಳ ಪ್ರಮಾಣವು ಭಾರತದಲ್ಲಿ ಶೇ. 19.3ರಷ್ಟಿದೆ. ಗಿನಿಯಾ (ಶೇ. 21.8) ಮತ್ತು ಮಾಲಿ (ಶೇ. 20.5) ದೇಶಗಳ ನಂತರ, ವಿಶ್ವದಲ್ಲಿ ಮೂರನೇ ಅತಿ ಹೆಚ್ಚು ಶೇಕಡಾವಾರು ಪ್ರಮಾಣವು ಭಾರತದಲ್ಲಿದೆ. ಬಡತನವನ್ನು ಒದ್ದೋಡಿಸಲಾಗಿದೆ ಎಂದು ಭಾವಿಸಲಾದ ನಾಡಿನ ತಳ ಭಾಗದ ಜನರ ನಿಜ ವರಮಾನವು ಏರಿಕೆಯಾಗಿದೆ ಎಂಬ ದಾವೆಯು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂಬುದನ್ನು “ಶೂನ್ಯ ಆಹಾರ ಶಿಶು”ಗಳ ಪ್ರಕರಣವು ಮತ್ತೊಮ್ಮೆ ಸೂಚಿಸುತ್ತದೆ.

ಬಡತನದ ಬಗ್ಗೆ ಸರ್ಕಾರವು ಏನೆಲ್ಲಾ ಕತೆ ಕಟ್ಟಿದರೂ ಭಾರತವು ಒಂದು ಹತಾಶ ಬಡ ದೇಶ ಎಂಬುದು ಜಗತ್ತಿಗೆ ಗೊತ್ತಿದೆ. ವಿಶ್ವ ಸಂಸ್ಥೆಯ  ಇತ್ತೀಚಿನ ವರದಿಯು ಭಾರತದ ಜನಸಂಖ್ಯೆಯ ಶೇ. 74ರಷ್ಟು ಮಂದಿಗೆ ದಕ್ಷಿಣ ಏಷ್ಯಾದ ಜನರಿಗೆ ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ವಿಭಾಗವು (FAO) ಸೂಚಿಸಿದ ಕನಿಷ್ಠ ಪೌಷ್ಟಿಕ ಆಹಾರವನ್ನೂ ಪಡೆಯುವುದು ಸಾಧ್ಯವಿಲ್ಲ ಎಂದು ಹೇಳಿದೆ. ಈ ಅಂಶವು ಆಘಾತಕಾರಿಯೂ ಹೌದು.

Donate Janashakthi Media

Leave a Reply

Your email address will not be published. Required fields are marked *