ಲೋಕಸಭೆ ಚುನಾವಣೆಗೂ ಮುನ್ನವೇ ಶುರುವಾಗಿದೆ ಬಿಜೆಪಿಯ ಅಂತ್ಯ..!

 – ಸಿ.ಸಿದ್ದಯ್ಯ

2024ರ ಲೋಕಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ಅಂತ್ಯ ಆರಂಭವಾಗಿದೆ ಎಂದು ದೇಶದ ಹಲವು ಹಿರಿಯ ರಾಜಕೀಯ ನಾಯಕರು ಭವಿಷ್ಯ ನುಡಿದಿದ್ದಾರೆ. ಕರ್ನಾಟಕ ಚುನಾವಣಾ ಫಲಿತಾಂಶಗಳ ಸಂದರ್ಭದಲ್ಲಿ ಈ ಅಂದಾಜು ಪ್ರಸ್ತುತಪಡಿಸಿದ ಅವರು, ” ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ವಿರುದ್ಧ ಜನರು ಧನಾತ್ಮಕ ಭಾರತವನ್ನು ಬಯಸುತ್ತಾರೆ ಎಂಬುದನ್ನು ಕರ್ನಾಟಕ ಚುನಾವಣಾ ಫಲಿತಾಂಶಗಳು ಪ್ರತಿಬಿಂಬಿಸುತ್ತವೆ” ಎಂದು ಹೇಳಿದ್ದಾರೆ.

ಮೋದಿಯಿಂದ ಎಲ್ಲವೂ ಸಾಧ್ಯ ಎಂಬ ಘೋಷಣೆ ಸುಳ್ಳಾಗಿದೆ 

“ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶಗಳ ಟ್ರೆಂಡ್ 2024 ರ ಸಂಸತ್ ಚುನಾವಣೆಯ ವಾತಾವರಣವನ್ನು ಪ್ರತಿಬಿಂಬಿಸುತ್ತದೆ. ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ರಾಜಸ್ಥಾನ, ದೆಹಲಿ, ಜಾರ್ಖಂಡ್, ಪಂಜಾಬ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿಲ್ಲ. ರಾಹುಲ್ ಗಾಂಧಿಯವರ ಭಾರತ ಏಕತಾ ನಡಿಗೆ ಕರ್ನಾಟಕವನ್ನು ಗೆಲ್ಲಲು ಕಾಂಗ್ರೆಸ್ ಗೆ ಸಹಾಯ ಮಾಡಿದೆ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಕರ್ನಾಟಕದಲ್ಲಿ ಬಿಜೆಪಿಯ ‘ಮೋದಿ ಹೈ ತೋ ಮಮ್ಕಿನ್ ಹೈ’ (ಮೋದಿಯಿಂದ ಎಲ್ಲವೂ ಸಾಧ್ಯ) ಘೋಷಣೆಯನ್ನು ಜನರು ತಿರಸ್ಕರಿಸಿದ್ದಾರೆ. ಒಬ್ಬನೇ ವ್ಯಕ್ತಿ ಎಲ್ಲಾ ಅಧಿಕಾರಗಳನ್ನು ಹೊಂದಿರುವುದನ್ನು ಜನರು ತಿರಸ್ಕರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ.

ದ್ವೇಷದ ರಾಜಕಾರಣವನ್ನು ಜನ ತಿರಸ್ಕರಿಸಿದ್ದಾರೆ

“ಕರ್ನಾಟಕದ ಜನರು ದ್ವೇಷದ ರಾಜಕಾರಣವನ್ನು ತಿರಸ್ಕರಿಸಿದ್ದಾರೆ ಮತ್ತು ಪ್ರೀತಿಯ ರಾಜಕೀಯವನ್ನು ಸ್ವೀಕರಿಸಿದ್ದಾರೆ. ನಾನು ಅವರಿಗೆ ನನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತೇನೆ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.

ಬಿಜೆಪಿಯ ಮೇಲೆಯೇ ಹನುಮಂತನ ಗದೆ ಬಿದ್ದಿದೆ

“ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತು. ಇದನ್ನು, ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ತೀವ್ರವಾಗಿ ಟೀಕಿಸಿದ್ದರು. ಇದೂ ಅಲ್ಲದೆ, ಭಗವಾನ್ ಹನುಮಂತನ ಹೆಸರು ಘೋಷಣೆ ಮಾಡುತ್ತ ಬಿಜೆಪಿಯನ್ನು ವಿರೋಧಿಸುವವರನ್ನೂ ಟೀಕಿಸಿದರು. ಇವೇ ಕರ್ನಾಟಕದಲ್ಲಿ ಬಿಜೆಪಿ ಪತನಕ್ಕೆ ಕಾರಣ. ಬಿಜೆಪಿ ಮೇಲೆ ಹನುಮಂತನ ಗದೆ ಬಿದ್ದಿದೆ. ಇದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವೈಫಲ್ಯ. ಕರ್ನಾಟಕದಲ್ಲಿ ಈಗ ಏನಾಗಿದೆಯೋ ಅದು 2024ರ ಸಂಸತ್ ಚುನಾವಣೆಯಲ್ಲೂ ಆಗುತ್ತದೆ” ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ಹಿರಿಯ ನಾಯಕ, ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ಸಂಜಯ್ ರಾವತ್ ಕೂಡ “ಮೋದಿ ಅಲೆ ಕಡಿಮೆಯಾಗಿದೆ ಮತ್ತು ಈಗ ನಮ್ಮ (ವಿರೋಧ) ಅಲೆ ದೇಶಾದ್ಯಂತ ಬರುತ್ತಿದೆ” ಎಂದು ಹೇಳಿದರು.

ಬಿಜೆಪಿಯ ಹಣ ಮತ್ತು ಜನಬಲದ ವಿರುದ್ಧ ಜನ ನಿಂತಿದ್ದಾರೆ

“ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ವಿಜಯವನ್ನು ನೀಡಿದ ಜನರಿಗೆ ಅಭಿನಂದಿಸುತ್ತೇನೆ ಮತ್ತು ಅವರಿಗೆ ನನ್ನ ಧನ್ಯವಾದಗಳು. ಒಂದು ರಾಜ್ಯದ ವಿಧಾನಸಭೆ ಚುನಾವಣೆಗಿಂತ ಮುಖ್ಯವಾಗಿ ಪರಿಗಣಿಸಲ್ಪಟ್ಟ ಈ ಚುನಾವಣೆಯು ಭಾರತದ ಸಂವಿಧಾನದ ಮೂಲಭೂತ ಮೌಲ್ಯಗಳು ಮತ್ತು ಪ್ರಬಲ ತತ್ವಗಳನ್ನು ಎತ್ತಿ ಹಿಡಿದಿದೆ, ತಾರತಮ್ಯದಿಂದ ದೇಶಕ್ಕೆ ಆಗುವ ಹಾನಿಯನ್ನು ತಡೆದಿದೆ. ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಂಡಿದ್ದ ಬಿಜೆಪಿಯ ಹಣಬಲ ಮತ್ತು ಜನಬಲದ ವಿರುದ್ಧ ಕರ್ನಾಟಕದ ಜನತೆ ನಿಂತಿದ್ದಾರೆ,’’ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

ಚುನಾವಣಾ ಫಲಿತಾಂಶಗಳು ಧನಾತ್ಮಕ ಭಾರತಕ್ಕೆ ಹೊಸ ಆರಂಭ

“ಕರ್ನಾಟಕ ಚುನಾವಣಾ ಫಲಿತಾಂಶಗಳು ಬಿಜೆಪಿಯ ನಕಾರಾತ್ಮಕ, ಕೋಮುವಾದ, ಭ್ರಷ್ಟಾಚಾರ-ಕಲುಷಿತ, ಬಂಡವಾಳಶಾಹಿ ಪರ, ಮಹಿಳಾ ವಿರೋಧಿ, ಯುವಜನ ವಿರೋಧಿ, ವಿಭಜಕ ಮತ್ತು ವ್ಯಕ್ತಿಗತ ರಾಜಕಾರಣದ ಅಂತ್ಯದ ಆರಂಭವಾಗಿದೆ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.  ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರ ಮತ್ತು ಹಗೆತನದ ವಿರುದ್ಧ ಧನಾತ್ಮಕ ಭಾರತಕ್ಕೆ ಇದು ಹೊಸ ಆರಂಭವಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.

ಸಮಸ್ಯೆಯಿಂದ ಜನರನ್ನು ಬೇರೆಡೆಗೆ ಸೆಳೆಯುವ ಪ್ರಯತ್ನಗಳು ಇನ್ನು ಮುಂದೆ ನಡೆಯುವುದಿಲ್ಲ

“ಜನರ ಸಮಸ್ಯೆಗಳ ಬಗ್ಗೆ ಮಾತನಾಡದೆ ಜನರ ಗಮನವನ್ನು ಬೇರೆಡೆ ಸೆಳೆಯುವ ರಾಜಕೀಯ ಪ್ರಯತ್ನಗಳು ಇನ್ನು ಮುಂದೆ ನಡೆಯುವುದಿಲ್ಲ ಎಂಬುದನ್ನು ಕರ್ನಾಟಕದ ಚುನಾವಣಾ ಗೆಲುವು ತೋರಿಸುತ್ತದೆ. ಇದನ್ನು ನಾವು ಕರ್ನಾಟಕದ ಹಿಮಾಚಲ ಪ್ರದೇಶದಲ್ಲಿ ನೋಡಿದ್ದೇವೆ. ಜನರು ತಮ್ಮ ಸಮಸ್ಯೆಗಳನ್ನು ಚರ್ಚಿಸಿ ಪರಿಹರಿಸಬೇಕೆಂದು ಬಯಸುತ್ತಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.

ಕರ್ನಾಟಕ ವಿಧಾನವನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ

“ಬಡವರ ಕಲ್ಯಾಣ ಯೋಜನೆಗಳು ಮತ್ತು ಜಾತ್ಯತೀತ ನಿಲುವು ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದೆ. ಈ ಗೆಲುವಿನಿಂದ ಕಾಂಗ್ರೆಸ್ ಸರಿಯಾದ ಪಾಠ ಕಲಿತು ರಾಷ್ಟ್ರ ರಾಜಕಾರಣದತ್ತಲೂ ಸರಿಯಾಗಿ ಗಮನ ಹರಿಸಬೇಕು. ಮೋದಿ ಅಜೇಯ ಅಲ್ಲ. ಎಲ್ಲ ಜಾತ್ಯಾತೀತ ಶಕ್ತಿಗಳು ಒಂದಾದರೆ ಮುಂದಿನ ವರ್ಷದಲ್ಲಿ ಬಿಜೆಪಿಯ ಆಡಳಿತ ಕೊನೆಗೊಳ್ಳಲಿದೆ” ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಸಂಸದ ಬಿನೋಯ್ ವಿಶ್ವಂ ಹೇಳಿದ್ದಾರೆ.

ಜನತೆಗೆ ಹೊಸ ಭರವಸೆಯ ಬೆಳಕು ಹುಟ್ಟಿದೆ

”ಕರ್ನಾಟಕ ಚುನಾವಣೆಯಲ್ಲಿ ಕೋಮುಭಾವನೆ ಕೆರಳಿಸಿ ಗೆಲ್ಲಲು ಬಿಜೆಪಿ ಎಂದಿನಂತೆ ತಂತ್ರ ಮಾಡಿದೆ. ಆದರೆ ಬಿಜೆಪಿಯ ಯೋಜಿತ ಪ್ರಚಾರವನ್ನು ಬದಿಗೊತ್ತಿದ ಜನ, ಪ್ರಗತಿಪರ ವಿಚಾರಗಳ ಮೇಲೆ ಪ್ರಚಾರ ಮಾಡಿದ ಕಾಂಗ್ರೆಸ್‌ಗೆ ಜಯ ತಂದುಕೊಟ್ಟರು. ಲೋಕಸಭೆ ಚುನಾವಣೆಗೂ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್‌ನ ಈ ಗೆಲುವು ಸಂತಸ ತಂದಿದೆ. ಭರವಸೆಯ ಹೊಸ ಬೆಳಕು ಮೂಡಿದೆ’’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮೇಹಬೂಬಾ ಮುಫ್ತಿ ಹೇಳಿದ್ದಾರೆ.

ಒಡೆದು ಆಳುವ ರಾಜಕೀಯವನ್ನು ತಿರಸ್ಕರಿಸಿದ್ದಕ್ಕಾಗಿ ಜನರಿಗೆ ಧನ್ಯವಾದಗಳು

“ಕೆಟ್ಟ ಮತ್ತು ವಿಭಜಕ ರಾಜಕಾರಣವನ್ನು ತಿರಸ್ಕರಿಸಿದ್ದಕ್ಕಾಗಿ ಕರ್ನಾಟಕದ ಜನತೆಗೆ ಧನ್ಯವಾದಗಳು. ಹೈದರಾಬಾದ್ ಮತ್ತು ಬೆಂಗಳೂರು ರಾಷ್ಟ್ರದ ಹಿತಾಶಕ್ತಿಗಾಗಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವ ವಿಷಯದಲ್ಲಿ ಆರೋಗ್ಯಕರವಾಗಿ ಸ್ಪರ್ಧಿಸಲಿವೆ. ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಭಿನಂದನೆಗಳು” ಎಂದು ಭಾರತ್ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಾಧ್ಯಕ್ಷ ಹಾಗೂ ತೆಲಂಗಾಣ ಸಚಿವ ಕೆ.ಟಿ. ರಾಮರಾವ್ ಹೇಳಿದ್ದಾರೆ.

ಇನ್ನು ಬಿಜೆಪಿಯ ಕಸರತ್ತು ನಡೆಯುವುದಿಲ್ಲ

“ಬಿಜೆಪಿ ಅಧಿಕಾರದಲ್ಲಿದ್ದಾಗ ಕೆಲಸ ಮಾಡುವುದಿಲ್ಲ. ಆದರೆ ಪ್ರಚಾರದ ವೇಳೆ ಕೊಳಕು ವಿಷಯಗಳನ್ನು ಎತ್ತಿ ಗೆಲ್ಲಲು ಯತ್ನಿಸುತ್ತಾರೆ. ಇಂತಹ ತಂತ್ರಗಳು ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂಬುದನ್ನು ಬಿಜೆಪಿ ಅರಿತುಕೊಳ್ಳಬೇಕು,’’ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ತೆಲಂಗಾಣದಲ್ಲಿ ಬಿಜೆಪಿಗೆ ಠೇವಣಿ ಕೂಡ ಸಿಗುವುದಿಲ್ಲ

ಕರ್ನಾಟಕದಲ್ಲಿ ಬಿಜೆಪಿ ಸೋಲಿನ ಬಗ್ಗೆ ತೆಲಂಗಾಣ ಹಣಕಾಸು ಸಚಿವ ಹರೀಶ್ ರಾವ್ ನೀಡಿರುವ ಸಂದರ್ಶನದಲ್ಲಿ, “ಇದು ದಕ್ಷಿಣ ಭಾರತದ ಕಥೆ. ಅರ್ಥಾತ್ ದಕ್ಷಿಣ ಭಾರತ ಬಿಜೆಪಿಯ ಹಿಡಿತದಿಂದ ಮುಕ್ತವಾಗಿದೆ. ದಕ್ಷಿಣ ಭಾರತದಿಂದಲೇ ಬಿಜೆಪಿ ಪತನ ಆರಂಭವಾಗಿದೆ. ತೆಲಂಗಾಣದಲ್ಲಿ ಬಿಜೆಪಿಗೆ ಠೇವಣಿ ಕೂಡ ಸಿಗುವುದಿಲ್ಲ ಎಂಬುದನ್ನು ನೆನಪಿನಲ್ಲಿಡಬೇಕು’ ಎಂದು ಎಚ್ಚರಿಸಿದರು.

ಕರ್ನಾಟಕದ ಸೋಲಿನ ನಂತರ ಬಿಜೆಪಿ ಕಾಶ್ಮೀರದಲ್ಲಿ ಚುನಾವಣೆ ನಡೆಸುವುದಿಲ್ಲ

”ಕರ್ನಾಟಕದಲ್ಲಿ ಸೋತಿರುವ ಬಿಜೆಪಿಗೆ ಈಗ ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಧೈರ್ಯವಿಲ್ಲ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಹೇಳಿದ್ದಾರೆ. 2014ರಿಂದ ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯದೇ ಇರುವುದರಿಂದ ಬಿಜೆಪಿಯ ಹೊರತಾಗಿ ಕಾಶ್ಮೀರದ ಹಲವು ರಾಜಕೀಯ ಪಕ್ಷಗಳು ಕೂಡ ಅಲ್ಲಿಗೆ ಚುನಾವಣೆ ನಡೆಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿರುವುದು ಗಮನಿಸಬೇಕಾದ ಅಂಶವಾಗಿದೆ.

Donate Janashakthi Media

Leave a Reply

Your email address will not be published. Required fields are marked *