ಮೋದಿ ನಿಮ್ಮ ರಾಜ್ಯಭಾರದಲ್ಲಿ….. ಯಾರಿಗೆ ಥ್ಯಾಂಕ್ಸ್ ಹೇಳಬೇಕು ಮತ್ತು ಯಾಕೆ? ಇದು ಶ್ರೀ ಸಾಮಾನ್ಯರ ಪ್ರಶ್ನೆ.
“ಅಕ್ಕಾ…ಮಕ್ಕಳು ಪೂರಿ ಮಾಡು, ಪಲಾವ್ ಮಾಡು ಅಂತಾರಕ್ಕ, ಅಡ್ಗಿ ಎಣ್ಣಿ ಬೆಲೆ ಆಕಾಶ್ದಗಾ..ಹ್ಯಾಂಗ್ ಮಾಡ್ಲಿ..ದಿನಾ ಕೇಳೊ ಮಕ್ಳಿಗೆ ನಾ ಹ್ಯಾಂಗ್ ಹೇಳ್ಲಿ.”
ಇದು ಶಿವಮ್ಮಳ ಅಳಲು, ಅವಳೊಬ್ಬಳದೇ ಅಲ್ಲ. ಸರಿ ಸುಮಾರು ಮಧ್ಯಮ ವರ್ಗದವರೂ ಕೂಡಾ ಇಂಥಹ ವೇದನೆಯನ್ನು ಅನುಭವಿಸುತ್ತಿದ್ದಾರೆ….ಇದಕ್ಕೆ ಕಾರಣ ಎಲ್ಲ ಜೀವನಾವಶ್ಯಕ ವಸ್ತುಗಳ ಬೆಲೆಯಲ್ಲಿ ತೀವ್ರ ಏರಿಕೆ. ಅದರಲ್ಲಿಯೂ ಖಾದ್ಯ ತೈಲಗಳ ಬೆಲೆಯಲ್ಲಿ ಅತೀವ ಏರಿಕೆಯಾಗಿದೆ.
ದಕ್ಷಿಣ ಭಾರತದ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವುದು ಕಡಲೆ ಅಥವಾ ಶೇಂಗಾ ಎಣ್ಣೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಸೂರ್ಯಕಾಂತಿ ಎಣ್ಣೆಯ ಬಳಕೆಯೂ ಇದೆ. ಹಾಗೆಯೇ ಇತರ ಖಾದ್ಯ ತೈಲಗಳ ಬೆಲೆಯಲ್ಲಿ ವಿಪರೀತ ಏರಿಕೆಯಾಗಿದೆ. ಸಾಧಾರಣ ಕುಟುಂಬದಲ್ಲಿ ಖಾದ್ಯತೈಲ ಬಳಕೆಯಲ್ಲಿ ಗಣನೀಯ ಪ್ರಮಾಣದ ಕಡಿತ ಆಗಿದೆ. ಇದಕ್ಕೆ ಕಾರಣ ಅವರ ಆದಾಯ ಕುಸಿದಿದೆ.
ಆದರೆ..ದೇಶದ ಪ್ರಧಾನಿಗೆ ಈ ಯಾವ ಮಾಹಿತಿಗಳೂ ಇಲ್ಲವೆಂಬAತೆ ಅವರ 71ನೇ ಹುಟ್ಟಿದ ದಿನಕ್ಕೆ 71 ಸಾವಿರ ದೀಪ ಬೆಳಗಿಸುವರಂತೆ. ದಲಿತ ಕವಿ ಸಿದ್ದಲಿಂಗಯ್ಯನವರ ಕವಿತೆಯ ಸಾಲುಗಳು ಹೀಗಿವೆ. . .
ಮನೆಮನೆಯೂ ಕತ್ತಲು, ಪ್ರತಿ ಕಣ್ಣು ಕಣ್ಣೀರು
ರಾಜ್ಯ ಬಂದಿದ್ಯಾರಿಗೋ ರಾಮಣ್ಣ
ಸುಖವು ದಕ್ಕಿದ್ಯಾರಿಗೋ. . . . .
ಇದು ಇಂದಿನ ನಮ್ಮ ಸುತ್ತಲಿನ ವಿದ್ಯಮಾನಗಳಿಗಾಗಿಯೇ ಬರೆದ ಹಾಗಿದೆ. ಎಂದರೆ ಈ ಅಮೃತ ಮಹೋತ್ಸವದ ವರ್ಷದಲ್ಲಿಯೂ ದುಡಿಯುವ ಜನರ ಪಾಲಿಗೆ ಪ್ರತಿ ದಿನವೂ ವಿಷ ದಕ್ಕುತ್ತಿದೆಯೇ ಹೊರತೂ ಅಮೃತವಲ್ಲ. ಇದು ದಶಕಗಳ ಕಾಲದಿಂದ ನಾವಾಡಿಕೊಂಡು ಬಂದ ಮಾತುಗಳು. ಈಗ ಕೊರೊನಾ ಮಹಾರೋಗ ತಂದಿತ್ತ ಸಂಕಟಗಳು ಈಗಾಗಲೆ ಇದ್ದ ಸಂಕಷ್ಟಗಳನ್ನು ನೂರ್ಮಡಿ ಹೆಚ್ಚಿಸಿದೆ. ದೇಶವೀಗ ಕಡು ಕಷ್ಟವನ್ನು ಅನುಭವಿಸುತ್ತಿರುವ ಹೊತ್ತು. ದುಡಿಯುವ ಜನರ ಬದುಕು ಮೂರಾಬಟ್ಟೆಯಾದ ಹೊತ್ತು.
ಸೂತಕದ ಮನೆಯಲ್ಲಿ ಸಂಭ್ರಮಾಚರಣೆಯೇ?
ದೇಶದಾದ್ಯಂತ ಬಹುತೇಕ ಕುಟುಂಬಗಳಲ್ಲಿ ಗಂಡ, ಮಗ, ಹೆಂಡತಿ ಮಗಳು, ಅಪ್ಪ ಅಮ್ಮ ಹತ್ತಿರದ ಸಂಬಂಧಿಗಳು ಹೀಗೆ ಒಬ್ಬರಲ್ಲ ಒಬ್ಬರನ್ನು ಒಂದು ಕಡೆ ಕೋವಿಡ್ ಆಹುತಿ ತೆಗೆದುಕೊಂಡಿದ್ದರೆ ಇನ್ನು ಕೆಲವೆಡೆ ಕೊವಿಡ್ ಎಂಬ ರಾಜಾತಿಥ್ಯದ ಖಾಯಿಲೆಯ ಎದುರು ಕ್ಯಾನ್ಸರ್, ಹೃದಯ ಸಂಬಂಧೀ ಪ್ರಾಣಾಂತಕ ಖಾಯಿಲೆಗಳನ್ನೂ ಸರಕಾರಗಳೇ ಗೌಣವಾಗಿಸಿಬಿಟ್ಟ ಹಿನ್ನೆಲೆಯಲ್ಲಿ ಅದರಿಂದ ಪ್ರಾಣ ಕಳೆದುಕೊಂಡವರೆಷ್ಟೋ. ದೇಹಕ್ಕೆ ಪೌಷ್ಟಿಕ ಆಹಾರ ಸಿಕ್ಕದಿರುವ ಕಾರಣದಿಂದ ಕೆಲವು ರೋಗಗಳು ಉಲ್ಬಣಗೊಂಡು ದಯನೀಯ ಸ್ಥಿತಿಗೆ ತಳ್ಳಲ್ಪಟ್ಟವರೂ ಇದ್ದಾರೆ.
71 ಸಾವಿರ ದೀಪ ಬೆಳಗಿಸುವ ವಾರಣಾಸಿಯಲ್ಲಿ ವಾರವೊಂದಕ್ಕೆ 1500 ಹೆಚ್ಚು ಶವಗಳು ದಹನಕ್ಕಾಗಿ ದಹನಸ್ಥಳಗಳಾದ ಮಣಿಕರ್ಣಿಕಾ ಘಾಟ್ ಗೆ ಬಂದಿವೆ ಎಂದು ಏಪ್ರಿಲ್ 2021 ರ ವರದಿಗಳು ಹೇಳಿವೆ. ಇದು ತನ್ನ 71 ನೇ ಹುಟ್ಟಿದ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುತ್ತಿರುವ, ಮತ್ತು ದೇಶದ ಜನ ಲಾಕ್ ಡೌನ್ ಕಾರಣದಿಂದ ಆದಾಯ, ಬದುಕು ಕಳೆದುಕೊಂಡು ಪರಿತಪಿಸುತ್ತಿರುವಾಗ ನವಿಲಿಗೆ ಕಾಳು ತಿನ್ನಿಸುತ್ತ ಛಾಯಾಚಿತ್ರಕ್ಕೆ ಪೋಸುಕೊಟ್ಟು ಅದನ್ನು ಸಾರ್ವಜನಿಕವಾಗಿ ಪ್ರಚಾರಕ್ಕೆ ಬಿಟ್ಟ ಪ್ರಧಾನ ಮಂತ್ರಿಗಳ ಲೋಕಸಭಾ ಕ್ಷೇತ್ರ. ಬಹುಶಃ ಕರ್ನಾಟಕದ ಮಹಿಳೆಯರು ನಿಟ್ಟುಸಿರು ಬಿಡುವಂತೆಯೆ ವಾರಣಾಸಿಯ ಮಹಿಳೆಯರೂ ಬೆಲೆ ಏರಿಕೆಯ ಬಿಸಿಯಲ್ಲಿ ತತ್ತರಿಸುತ್ತಿರಬಹುದು. ಮೋದಿ ಭಾವಚಿತ್ರದೊಂದಿಗೆ 14 ಕೋಟಿ ಧಾನ್ಯಗಳ ಮೂಟೆಯನ್ನು ವಿತರಿಸಲಾಗುವುದಂತೆ. 5 ಕೋಟಿ ಥ್ಯಾಂಕ್ಯು ಮೋದೀಜೀ ಪೋಸ್ಟ್ ಕಾರ್ಡ್ ಅವರಿಗೆ ರವಾನೆಯಾಗಲಿದೆಯಂತೆ.
ನಮಗೆ ಪ್ರಶ್ನೆಗಳಿವೆ:
ಅಲ್ಲಿ ದೆಹಲಿಯ ಗಡಿಗಳಲ್ಲಿ ಅನ್ನದಾತರು ಕರಾಳ ಕೃಷಿ ಮಸೂದೆಯನ್ನು ಹಿಂತೆಗೆದುಕೊಳ್ಳಲು ದಣಿವರಿಯದ ಹೋರಾಟ ನಡೆಸುತ್ತಿದ್ದಾರೆ ಮಿ.ಪ್ರೆöÊಮಿನಿಸ್ಟರ್, ಅವರ ಕೂಗಿಗೆ ಕಿವಿಗೊಡದ ತಮಗೆ ಅವರ ಬೆವರಿನ ಘಮಲು ಹೊತ್ತ ಧಾನ್ಯಗಳ ಮೇಲೆ ನಿಮ್ಮ ಹೆಸರು ಕೆತ್ತಲು ಯಾವ ಅಧಿಕಾರವಿದೆ??
ದೇಶದಾದ್ಯಂತ ಮಹಿಳೆಯರ ಮೇಲೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ಅನಿಯಂತ್ರಿತವಾಗಿ ನಡೆಯುತ್ತಿವೆ. ತಮ್ಮ ಕ್ಷೇತ್ರವಿರುವ ಮತ್ತು ಆಗಾಗ ತಾವು ಹೊಗಳುವ ಉತ್ತರಪ್ರದೇಶ 2021ರ ಮೊದಲ ಎಂಟು ತಿಂಗಳಿನಲ್ಲಿಯೇ ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳು ನಡೆದ ರಾಜ್ಯವೆಂಬ ಕುಖ್ಯಾತಿ ಗಳಿಸಿದೆ. ಹಾಗೆಯೇ ತಮ್ಮದೇ ನೇರ ಮೂಗಿನ ಕೆಳಗೆ, ನಿಮ್ಮ ಸರಕಾರದ ಅಡಿಯಲ್ಲಿಯೇ ಪೋಲೀಸ್ ಮತ್ತು ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಇರುವ ದೇಶದ ರಾಜಧಾನಿ ದೆಹಲಿ ಎರಡನೇ ಕುಖ್ಯಾತ ಸ್ಥಾನದಲ್ಲಿದೆ. ಇದಕ್ಕಾಗಿ ದೇಶದಾದ್ಯಂತದಿಂದ ಬಿ.ಜೆ.ಪಿ.ಯ ಯುವಪಡೆ ತಮಗೆ ಥ್ಯಾಂಕ್ಸ್ ಪತ್ರ ಕಳಿಸುತ್ತಿದೆಯೇ?
ಉಜ್ವಲಾ ಹೆಸರಿನಲ್ಲಿ ಮಹಿಳೆಯರ ಮೂಗಿಗೆ ತುಪ್ಪ ಸವರಿದ ನಿಮಗೆ ಹೆಣ್ಣು ಮಕ್ಕಳು ಗ್ಯಾಸ್ ಸಿಲಿಂಡರ್ಗಳನ್ನು ಮೂಲೆಗೆ ತಳ್ಳಿ ಮತ್ತೆ ಸೌದೆಯ ಮೊರೆ ಹೋಗುತ್ತಿದ್ದಾರೆಂದು ಗೊತ್ತಾಗಿದೆಯೇ? ಪ್ರತಿ ತಿಂಗಳೂ ಏರಿಸುತ್ತಿರುವ ಬೆಲೆಯಿಂದಾಗಿ ಒಲೆಗಳು ಉರಿಯಲಾರದ ಸ್ಥಿತಿ ಬಂದೊದಗಿದೆ. 100% ಗೂ ಹೆಚ್ಚು ಏರಿಕೆಯಾಗಿದೆ ಸ್ವಾಮೀ. ನಮ್ಮ ತೆರಿಗೆಯ ಹಣದಲ್ಲಿ ಪ್ರಧಾನ ಮಂತ್ರಿಗಳ ಮನೆಯಲ್ಲಿ ರೋಟಿ ಸುಡುತ್ತದೆ, ಅನ್ನ ಬೇಯುತ್ತದೆ. ನಿಮಗೆ ಹೇಗೆ ಗೊತ್ತಾದೀತು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆದ ಹೆಚ್ಚಳ ಅಲ್ವೇ?
ಉದ್ಯೋಗ ಅಂದ್ರೆ ಪಕೋಡಾ ಮಾರೋದಲ್ಲ:
ಅಂದಹಾಗೆ ನಿಮ್ಮ ಯುವಪಡೆ ದೇಶದ ಅತ್ಯುತ್ತಮ ಉದ್ಯೋಗ ಕೇಂದ್ರವಾದ ಪಕೋಡಾ ಮಾರಾಟ ಕೇಂದ್ರದಲ್ಲಿ ಉದ್ಯೋಗಿಗಳಾಗಿರಬಹುದಲ್ಲವೇ? ಅಂಥಹ ಒಂದು ಘನತೆಯನ್ನು ಕಲ್ಪಿಸಿ ಕೊಟ್ಟ ಕಾರಣಕ್ಕೆ ಥ್ಯಾಂಕ್ಸ್ ಅವರು ಹೇಳಬಹುದೇನೋ? ಆದರೆ ಈ ದೇಶದ ನಿಜವಾದ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಆದರೆ ಉದ್ಯೋಗ ಅವಕಾಶಗಳು ತೀವ್ರವಾಗಿ ಕಡಿಮೆಯಾಗುತ್ತಿವೆ. ಸಿ.ಎಂ.ಐ.ಈ ವರದಿಯ ಪ್ರಕಾರ ಜುಲೈ 2021 ರಿಂದ ಆಗಸ್ಟ್ 2021 ರ ವೇಳೆಗೆ ದೇಶದಲ್ಲಿ 15 ಲಕ್ಷ ಉದ್ಯೋಗಗಳ ಕಡಿತವಾಗಿದೆಯಂತೆ. ರಾಷ್ಟ್ರೀಯ ನಿರುದ್ಯೋಗದ ಪ್ರಮಾಣ ಜುಲೈನಲ್ಲಿ 6.96% ಇದ್ದಿದ್ದು ಆಗಸ್ಟ್ನಲ್ಲಿ 8.32% ಗೆ ಏರಿಕೆಯಾಗಿದೆ. ಔದ್ಯೋಗಿಕ ಕ್ಷೇತ್ರದಲ್ಲಿ ಬೆಳವಣಿಗೆಯಾಗಿದೆ, ಜಿ.ಡಿ.ಪಿ ಯ ದರ 20.1% ಆಗಿದೆ ಎಂದು ಹೆಗ್ಗಳಿಸಿಕೊಳ್ಳುವ ಹೊತ್ತಿನಲ್ಲಿ ಉದ್ಯೋಗ ಕಡಿತವಾಗುತ್ತಿದೆ ಎಂದರೆ ಇದು ಆಶಾದಾಯಕ ಬೆಳವಣಿಗೆ ಅಲ್ಲ ಮೋದೀಜಿ..
ನಗರ ನಿರುದ್ಯೋಗ ಜುಲೈನಲ್ಲಿ 8.3% ಇದ್ದುದು ಆಗಸ್ಟ್ ವೇಳೆಗೆ 9.78% ಗೆ ಏರಿದೆ. ಹಾಗೆಯೇ ಗ್ರಾಮೀಣ ಭಾರತದ ನಿರುದ್ಯೋಗ ಪ್ರಮಾಣ ಜುಲೈನಲ್ಲಿ 6.34% ಇದ್ದುದು ಆಗಸ್ಟ್ ವೇಳೆಗೆ 7.64%ಗೆ ಏರಿದೆ. ಎಲ್ಲ ಏರಿಕೆಗಳೂ ಸಕಾರಾತ್ಮಕ ಅಲ್ಲ ಮೋದೀಜೀ. ನಮ್ಮ ದೇಶದ ರಾಜಧಾನಿ ದೆಹಲಿಯಲ್ಲಿ ಅಂದ್ರೆ ನೀವು ನವಿಲಿಗೆ ಕಾಳು ತಿನ್ನಿಸುತ್ತ ಸಂತೋಷದಿಂದಿರುವ ನಗರದಲ್ಲಿ 11.6% ನಿರುದ್ಯೋಗಿ ಯುವಪಡೆ ಬದುಕು ಸಾಗಿಸಲು ಭವಿಷ್ಯದ ದಾರಿ ಕಾಣದ ಸ್ಥಿತಿಯಲ್ಲಿದ್ದಾರೆ ಸ್ವಾಮೀ. . ..ಕಳೆದ ವರ್ಷ ನಿಮ್ಮ ಹುಟ್ಟಿದ ದಿನದಿಂದ ಈ ವರ್ಷದ ಹುಟ್ಟಿದ ದಿನದ ಹೊತ್ತಿಗೆ ಕೇವಲ 12 ಕೋಟಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ನಿಮ್ಮ ಮಧ್ಯರಾತ್ರಿಯ ಲಾಕ್ ಡೌನ್ ಘೋಷಣೆಯ ಅವಾಂತರಕ್ಕೆ ಲಕ್ಷಾಂತರ ಜನ ತಮ್ಮ ಜೀವ ಉಳಿದರೆ ಸಾಕೆಂದು ವಲಸೆ ಕಾರ್ಮಿಕರು ದಿಕ್ಕೆಟ್ಟವರಂತೆ ಓಡಿದರಲ್ಲ, ಸಾವು ನೋವು, ದಾರಿಯಲ್ಲೇ ಹೆರಿಗೆಯೂ ಆದ ಲಕ್ಷಾಂತರ ಜನರ ನೋವಿನ ಉಸಿರಿನ ಶಬ್ದಕ್ಕೆ ಯಾವತ್ತಾದರೂ ಕಿವಿ ಕೊಟ್ಟಿರಾ. ತಮ್ಮ ಕ್ಷೇತ್ರವಿರುವ ರಾಜ್ಯದಲ್ಲಿ ಸಿಂಪಡಿಸಿದ ಕ್ರಿಮಿನಾಶಕಕ್ಕೆ ಪಶುಗಳಂತೆ ಮೈಯೊಡ್ಡಿ ನಿಂತರಲ್ಲ ಅದಕ್ಕಾಗಿ ಥ್ಯಾಂಕ್ಸ್ ಹೇಳುವುದೇ ತಮಗೆ….
ಖಾಸಗಿಯವರಿಗೆ ಲೂಟಿ ಮಾಡಲು ಬಿಟ್ಟ ಟೀಕಾ ಉತ್ಸವ:
ಹಾಗೆಯೇ… .. …ಲಸಿಕೆ.. ..ಯಾವುದು ತಮ್ಮ ಆದ್ಯತೆಯಾಗಿ ದೇಶದ ಎಲ್ಲರಿಗೂ ಉಚಿತವಾಗಿ ಸಿಗಬೇಕಿತ್ತೋ, ಅದನ್ನು ಖಾಸಗಿಯವರಿಗೆ ಲಾಭಕ್ಕೆ ಮಾರಿಕೊಳ್ಳಲು ಬಿಟ್ಟು ದಿನವೊಂದಕ್ಕೆ 40-50 ರೂಪಾಯಿ ಸಂಪಾದಿಸಲು ಕಷ್ಟ ಪಡುವ ದುಡಿಯುವ ಜನರಿಂದ ಸಾವಿರಾರು ರೂಪಾಯಿ ಲಸಿಕೆಗಾಗಿ ದೋಚಲು ಬಿಟ್ಟು, ತಮ್ಮ ಜನ್ಮದಿನದಂದು ಒಂದೇ ದಿನ 1.5ಕೋಟಿ ಉಚಿತ ಲಸಿಕೆ ಹಾಕಿಸುವ ಘೋಷಣೆ ಬರುತ್ತದಲ್ಲ. . . ಇದೊಂದು ನಾಚಿ ತಲೆ ತಗ್ಗಿಸಬೇಕಾದ ಸಂಗತಿಯಲ್ಲವೇ??? ಟೀಕಾ ಉತ್ಸವವೆಂದು ಮಾಡಿ ಜನರ ತೆರಿಗೆ ಹಣ ಲಕ್ಷಾಂತರ ರೂಪಾಯಿ ಜಾಹಿರಾತಿಗೆ ವ್ಯಯಿಸಿದಿರಲ್ಲ ಅದಕ್ಕೆ ತಮಗೆ ಥ್ಯಾಂಕ್ಸ್ ಹೇಳಬೇಕೇ??
ಹುಟ್ಟಿದ ದಿನದ ಕೊಡುಗೆಯಾಗಿ ಒಂದು ಸುಗ್ರೀವಾಜ್ಞೆ ಬಂದು ಬಿಡಲಿ ನೋಡೋಣ:
ಮಹಾನ್ ನಾಯಕರೆ, ದೇಶದ ಮಹಿಳೆಯರು ಕಳೆದ 25 ವರ್ಷಗಳಿಂದ ಶಾಸನ ಸಭೆಗಳಲ್ಲಿ ಸರಿಯಾದ ಪ್ರಾತಿನಿಧ್ಯಕ್ಕಾಗಿ 33% ಮೀಸಲಾತಿಗಾಗಿ ಕಾಯತ್ತಲೇ ಇದ್ದಾರೆ, ನೆನಪಿಸಿಕೊಳ್ಳಿ… ಅಂದು ಸೆಪ್ಟೆಂಬರ್ 12 1996ರಂದು ಮಸೂದೆ ಸಂಸತ್ತಿನಲ್ಲಿ ಮಂಡನೆಯಾದಾಗ ತಮ್ಮನ್ನು ಮೋಟಾ ಭಾಯ್ ಎಂದೇ ಕರೆಯುವ ಅಪ್ನಾ ಚೋಟಿ ಬೆಹನಜಿ ಉಮಾ ಭಾರತಿಯವರು ಅಡ್ಡಗಾಲು ಹಾಕಿದ್ದರು. ಈಗ ತಮಗೆ ಸಂಪೂರ್ಣ ಬಹುಮತವಿದೆಯಲ್ಲವೇ?? ತಮ್ಮ ಹುಟ್ಟಿದ ದಿನದ ಕಾಣಿಕೆಯಾಗಿ ಒಂದು ಸುಗ್ರೀವಾಜ್ಞೆ ಘೋಷಿಸಿ ಬಿಡಿ. ಮಧ್ಯರಾತ್ರಿಯಲ್ಲಿಯೂ ಸಹಿ ಹಾಕಲು ಸಿದ್ಧರಿರುವ ಪ್ರಥಮ ಪ್ರಜೆಯಿದ್ದಾರಲ್ಲ ಹೇಗೂ. ಅವರಿಂದಲAತೂ ತೊಂದರೆ ಬರಲಾರದು. ತಾವು ಕೃಷಿ ಮಸೂದೆಗಳನ್ನು ತಂದಿದ್ದು ಹಾಗೆಯೇ ಅಲ್ಲವೇ? ತಮಗೆ ಥ್ಯಾಂಕ್ಸ್ ಹೇಳುವವರ ಸಾಲಿನಲ್ಲಿ ತಮ್ಮ ಪಕ್ಷದ ಯುವಪಡೆಯಲ್ಲಿ ಯುವತಿಯರೂ ಇದ್ದಾರಲ್ಲವೇ?
ಬೆನ್ನಿಗಂಟಿದೆ ನೆತ್ತರಿನ ವಾಸನೆ:
ಇದೆಲ್ಲದರ ನಂತರ ಮುಗಿಸುವ ಮೊದಲು….ಇದು ಕೇವಲ ಹುಟ್ಟಿದ ದಿನದ ಆಚರಣೆ ಮಾತ್ರ ಆಗಿರಲಿಲ್ಲ. ತಾವು ಅಧಿಕಾರದ ಪದಗ್ರಹಣದ ಎರಡು ದಶಕಗಳನ್ನು ಆಚರಿಸಿಕೊಳ್ಳುತ್ತಿದ್ದೀರಲ್ಲವೇ? ನೆನಪಾಗುತ್ತಿಲ್ಲವೇ ಗುಜರಾತ್ ನರಮೇಧ, ಜ್ಞಾಪಕಕ್ಕೆ ಬರಲೇ ಬೇಕಲ್ಲವೇ ನರೊದಾ ಪಾಟಿಯಾ. ನಿಮ್ಮ ಬೆನ್ನಿನಲ್ಲಿ ರಕ್ತದ ಕಲೆ ಇದೆ. ರಂಗು ರಂಗಿನ ಹೊಸ ಪೋಷಾಕು, ರವೀಂದ್ರರ ಹೇರ್ ಸ್ಟೆöÊಲ್, ಯಾವುದೂ. . .ಯಾವ್ಯಾವುದೂ ಆ ನೆತ್ತರಿವ ಕಲೆಗಳನ್ನು ಅಳಿಸಲಾರವು.. ಷೇಕ್ಸಪಿಯರ್ ರ ನಾಟಕ ಮ್ಯಾಕಬೆತ್ ನ ಲೇಡಿ ಮ್ಯಾಕ್ಬತ್ ನೆನಪಿಗೆ ಬರುತ್ತಾಳೆ. “ಅರೇಬಿಯಾದ ಎಲ್ಲ ಸುಗಂಧ ದ್ರವ್ಯಗಳೂ ನನ್ನ ಕೈಗಂಟಿದ ನೆತ್ತರ ವಾಸನೆಯನ್ನು ಅಳಿಸಲಾರವೇ.. “..…..ಎಂದೊದರುವ ಆಕೆಯ ಹಾಗೆ ನಿಮಗೂ ಎಂದಾದರೂ ಅನಿಸಿದರೆ ಆದಿನ ಥ್ಯಾಂಕ್ಸ್ ಹೇಳಬಹುದೇನೋ.
ಕೊನೆಯ ಮಾತು
16.8 ಲಕ್ಷ ಜನಕ್ಕೆ ಮೋದಿ-71 “ರಾಷ್ಟ್ರೀಯ ನಿರುದ್ಯೋಗ ದಿನ”
ಮೋದಿ ಭಕ್ತರು ಮೋದಿ 71ನೇ ಹುಟ್ಟುಹಬ್ಬದಂದು ವಿಧವಿಧವಾಗಿ “ಥ್ಯಾಂಕ್ಯೂ’ ಹೇಳುವ ಮೂಲಕ ಆಚರಿಸುತ್ತಿದ್ದರೆ, ದೇಶಭಕ್ತರು ಅದನ್ನು “ರಾಷ್ಟ್ರೀಯ ನಿರುದ್ಯೋಗ ದಿನ”ವಾಗಿ ಆಚರಿಸಿದರು. ಟ್ವಿಟರ್ ನಲ್ಲಿ #NationalUnemploymentDay” ಎಂಬ ಹ್ಯಾಶ್ ಟ್ಯಾಗ್ ಮಧ್ಯಾಹ್ನದ ಹೊತ್ತಿಗೆ ಮೊದಲ ಸ್ಥಾನದಲ್ಲಿ ಟ್ರೆಂಡ್ ಆಗುತ್ತಿದ್ದು ಈ ಹ್ಯಾಶ್ ಟ್ಯಾಗ್ ನೊಂದಿಗೆ 16.8 ಲಕ್ಷ ಜನ ಟ್ವೀಟ್ ಮಾಡಿದ್ದಾರೆ. ನಿರುದ್ಯೋಗದ ಹದಗೆಡುತ್ತಿರುವ ಪರಿಸ್ಥಿತಿಯ ಮೇಲೆ ಬೆಳಕು ಚೆಲ್ಲುವ ಅಂಕೆಸಂಖ್ಯೆಗಳು ಚಿತ್ರಗಳನ್ನು ಮಾಹಿತಿಗಳನ್ನು ಹಾಕಿ ಇಂತಹ ‘ಸೂತಕದ ಮನೆಯಲ್ಲಿ’ ಹುಟ್ಟು ಹಬ್ಬದ “ಸಂಭ್ರಮ ಆಚರಣೆ” ಮಾಡುತ್ತಿರುವವರಿಗೆ ಸರಿಯಾಗಿ ಉಗಿದಿದ್ದಾರೆ.