ಜಗದಗಲಕ್ಕೂ ಮೇ ದಿನಾಚರಣೆ ಸುದ್ದಿಯಲ್ಲ, ಯು.ಎಸ್ ಗೆ ಮೇ ದಿನ ಮರಳಿ ಬಂದಿರುವುದು ಸುದ್ದಿ

ವಸಂತರಾಜ ಎನ್.ಕೆ

ಜಗದಗಲಕ್ಕೂ ಮೇ ದಿನಾಚರಣೆ ಸುದ್ದಿಯಲ್ಲ. ಪ್ರತಿ ವರ್ಷ ಅದು ನಡೆಯುತ್ತದೆ. ಆದರೆ ನಿಜವಾದ ಸುದ್ದಿ ಈ ಬಾರಿ ಯು.ಎಸ್ ನಿಂದ ಬಂದಿದೆ. ಯು.ಎಸ್ ನಲ್ಲೇ ಹುಟ್ಟಿದ ಮೇದಿನ, ಅಲ್ಲಿಗೆ ಮತ್ತೆ ಮರಳಿದೆ.

20 ನೇ ಶತಮಾನದ ಬಹುಪಾಲು, ಮೇ ದಿನ – ಅಂತರರಾಷ್ಟ್ರೀಯ ಕಾರ್ಮಿಕರ ದಿನ, ಯು.ಎಸ್ ನ ಕಾರ್ಮಿಕ ಚಳವಳಿಯ ಅಧಿಕೃತ ಕ್ಯಾಲೆಂಡರ್ ನಲ್ಲಿ ಹೆಚ್ಚಾಗಿ ಇರಲಿಲ್ಲ. ಚಿಕಾಗೋದ 1886 ರ ಹೇಮಾರ್ಕೆಟ್ ದಂಗೆಯ ಹುತಾತ್ಮರನ್ನು ಗೌರವಿಸಲು ಜಗತ್ತಿನಾದ್ಯಂತದ ಕಾರ್ಮಿಕರು ಮೇ 1 ರಂದು ಮೆರವಣಿಗೆ ನಡೆಸುತ್ತಿದಾಗ, ಯು.ಎಸ್ ಮಾಲಿಕರು  ತಮ್ಮ ಕಾರ್ಮಿಕರನ್ನು ಸೆಪ್ಟೆಂಬರ್ ನಲ್ಲಿ ಕಾರ್ಮಿಕ ದಿನವನ್ನು ಮಾತ್ರ ಆಚರಿಸಲು ಒತ್ತಾಯಿಸಿದರು.  ಮೇ ದಿನವನ್ನು  ಆಚರಿಸುತ್ತಿದ್ದುದು ವಲಸಿಗ ಹಕ್ಕುಗಳ ಕಾರ್ಯಕರ್ತರು, ಮತ್ತು ಸಮಾಜವಾದಿ ಚಳುವಳಿಗಳು ಮಾತ್ರ. ಆ ಜಮಾನಾ ಈಗ ಮುಗಿದಿದೆ.

ವಾಶಿಂಗ್ ಟನ್ ನಲ್ಲಿ ಮೇ ದಿನದ ಮೆರವಣಿಗೆ (ತಲೆಬರಹದೊಂದಿಗೆ ಇರುವುದು ನ್ಯೂ ಯಾರ್ಕ್ ನಲ್ಲಿ ಮೇ ದಿನ)

ಈ ಮೇ 1 ರಂದು, ಮಿಲ್ವಾಕೀಯಿಂದ ಉತ್ತರ ಕೆರೊಲಿನಾದವರೆಗಿನ ಕಾರ್ಮಿಕ ಮಂಡಳಿಗಳು, 13 ಲಕ್ಷ ಆಹಾರ ಮತ್ತು ಕಮರ್ಶಿಯಲ್ ಕಾರ್ಮಿಕರ ಯೂನಿಯನ್ UFCW ಸ್ಥಳೀಯ ಘಟಕಗಳಿಂದ ಹಿಡಿದು ಶಿಕ್ಷಕರ ಸಂಘಗಳವರೆಗೆ, ಇಂದಿನ ಬಿಕ್ಕಟ್ಟನ್ನು ಬೇಧಿಸುವ ‘ ಈ ದೇಶ ಶತಕೋಟ್ಯಾಧಿಪತಿಗಳಿಗಲ್ಲ, ಕಾರ್ಮಿಕರಿಗಾಗಿ’ ಎಂಬ ಘೋಷಣೆಯೊಂದಿಗೆ  ಬೀದಿಗಿಳಿದಿದ್ದಾರೆ. ಈ ವರ್ಷದ  ಮೇ ದಿನಾಚರಣೆಯಲ್ಲಿ ಹಲವು ತಲೆಮಾರುಗಳಲ್ಲಿ ಮೊದಲ ಬಾರಿಗೆ, ಯು.ಎಸ್ ಸಂಘಟಿತ ಕಾರ್ಮಿಕರ ಮರು-ಪ್ರವೇಶ ಹಾಗು ಅಣಿ ನೆರೆಸುವಿಕೆಯ ಪ್ರಮಾಣ ಮತ್ತು ಸ್ವರೂಪ ಹೊಸ ವಿದ್ಯಮಾನವಾಗಿದೆ.

ಪ್ಯಾರೀಸ್, ಫ್ರಾನ್ಸ್ ನಲ್ಲಿ ಮೇ ದಿನ

ಜನವರಿಯಲ್ಲಿ ಐಸಿಇ (ವಲಸಿಗರ ನಿಯಂತ್ರಣ ಕಾರ್ಯಾಚರಣೆ ಘಟಕ) ಆಕ್ರಮಣವನ್ನು ಪ್ರತಿಭಟಿಸಲು ಮಿನ್ನೇಸೋಟದ ಜನರು ತಮ್ಮ ರಾಜ್ಯವನ್ನು ಬಂದ್ ಮಾಡಿದಾಗ, ಎ.ಎಫ್.ಎಲ್-ಸಿಐಒ, ಎಸ್.ಇ.ಐ.ಯು, ಟೀಚರ್ಸ್, ಯುನೈಟ್ ಹಿಯರ್, ಮತ್ತು ಎಟಿಯು ಮುಂತಾದ ಕಾರ್ಮಿಕ ಸಂಘಟನೆಗಳು ಮುಂಚೂಣಿಯಲ್ಲಿದ್ದು, ರಾಷ್ಟ್ರೀಯ ಸಮಸ್ಯೆಗಳಲ್ಲಿ ಏನು ಮಾಡಲು ಸಾಧ್ಯ ಎಂಬುದನ್ನು ತೋರಿಸಿದವು. ಕೊರೆಯುವ ಚಳಿಯಲ್ಲಿ (- 30 ಡಿಗ್ರಿ ತಾಪಮಾನದಲ್ಲಿ) ಒಂದು ಲಕ್ಷಕ್ಕೂ  ಹೆಚ್ಚು ಕಾರ್ಮಿಕರು ಮತ್ತು ಜನರು ಮೆರವಣಿಗೆ ನಡೆಸಿದರು ಮತ್ತು ಅಲ್ಲಿನ ಆರ್ಥಿಕತೆಯನ್ನು ಬಹುಪಾಲು ಸ್ಥಗಿತಗೊಳಿಸಿದರು. ಇದು ಫೆಡರಲ್ ಸರಕಾರವನ್ನು ಹಿಮ್ಮೆಟ್ಟಿಸಿತು. ಆ ಕ್ರಮವು ಇಂದಿನ ಮಾದರಿ.

ಇಸ್ತಾನ್ ಬುಲ್, ಟರ್ಕಿ ಯಲ್ಲಿ ಪೋಲಿಸ್ ದಮನದ ನಡುವೆ ಮೇದಿನ

ಇದನ್ನೂ ಓದಿ :ಮೇ ದಿನ: ಇತಿಹಾಸದ ಸ್ಮರಣೆ ಮಾತ್ರವಲ್ಲ, ಇಂದಿನ ಹೋರಾಟದ ಕರೆಯೂ ಹೌದು

ಬೀದಿಗಿಳಿಯುತ್ತಿರುವ ಕಾರ್ಮಿಕರ ಬೇಡಿಕೆಗಳು ಪ್ರಸ್ತುತ ಕ್ಷಣದ ಗಂಭೀರತೆಯನ್ನು ಪ್ರತಿಬಿಂಬಿಸುತ್ತವೆ. ಲಾಭಗಳು ಹೆಚ್ಚಾಗುತ್ತಿದ್ದರೂ ಸಹ ಕಾರ್ಪೊರೇಟ್ ಗಳು ವೇತನಗಳು ಮತ್ತು ಸವಲತ್ತುಗಳ ಮೇಲೆ ಸಂಘಟಿತ ಆಕ್ರಮಣವನ್ನು ನಡೆಸುತ್ತಿವೆ. ಉದ್ಯೋಗಿಗಳನ್ನು ನೇಮಿಸಿಕೊಳ್ಳಲು, ಮೇಲ್ವಿಚಾರಣೆ ಮಾಡಲು, ಮೌಲ್ಯಮಾಪನ ಮಾಡಲು ಮತ್ತು ವಜಾ ಮಾಡಲು-ಹೆಚ್ಚಾಗಿ ಕಾರ್ಮಿಕರ ಒಪ್ಪಿಗೆಯಿಲ್ಲದೆ- ಎ.ಐ (ಕೃತಕ ಬುದ್ಧಿಮತ್ತೆ)ಯನ್ನು ನಿಯೋಜಿಸಲು ಉದ್ಯೋಗದಾತರು ಧಾವಿಸುತ್ತಿದ್ದಾರೆ. ಅದರಿಂದ ದುಡಿಯುವ ಮಹಿಳೆಯರು ಮತ್ತು ಬಿಳಿಯರಲ್ಲದವರು ಹೆಚ್ಚಾಗಿ ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ರಾಷ್ಟ್ರೀಯ ಕಾರ್ಮಿಕ ಸಂಘಟನೆ ಎ.ಎಫ್.ಎಲ್-ಸಿಐಒ ದಾಖಲಿಸಿದೆ.

ಸೋಲ್, ದಕ್ಷಿಣ ಕೊರಿಯಾ ದಲ್ಲಿ ಮೇ ದಿನ

ಮುಂದಿನ ದಶಕದಲ್ಲಿ ಎ.ಐ ಯಿಂದ ತಮ್ಮ ಉದ್ಯೋಗಗಳನ್ನು ಕಳೆದುಕೊಳ್ಳುವ 80% ನಷ್ಟು ಜನರು ವರ್ಷಕ್ಕೆ 38,000 ಡಾಲರ್ ಗಿಂತ ಕಡಿಮೆ ಗಳಿಸುವವರು.  ಲಾಂಗ್ ಶೋರ್ ಮೆನ್ (ಬಂದರು ಕಾರ್ಮಿಕರು) ನಿಂದ ಲಾಸ್ ವೇಗಾಸ್ ಪಾಕಶಾಲೆಯ ಕಾರ್ಮಿಕರ ಒಕ್ಕೂಟಗಳು ಯಾವುದೇ ಎ.ಐ ಅನುಷ್ಠಾನಕ್ಕೆ ಮುಂಚಿತವಾಗಿ ಚರ್ಚೆಯ ಅಗತ್ಯದ ಮೂಲಕ ಎ.ಐ ನಿಂದ ರಕ್ಷಣೆಯನ್ನು ನೇರವಾಗಿ ಒಪ್ಪಂದದಲ್ಲಿ ಹಾಕಲು ಪ್ರಾರಂಭಿಸಿವೆ,

ಮ್ಯಾಡ್ರಿಡ್, ಸ್ಪೈನ್ ನಲ್ಲಿ ಮೇ ದಿನ

ಈ ನಡುವೆ, ಕಾರ್ಪೊರೆಟ್ ಗಳು ಡಿಇಐ (ವೈವಿಧ್ಯತೆ, ಸಮಾನತೆ, ಒಳಗೊಳ್ಳುವಿಕೆ)  ಕಾನೂನುಬದ್ಧ ಹಕ್ಕು-ಬಾಧ್ಯತೆಗಳನ್ನು  ಮತ್ತು ಸಮಾನ-ಅವಕಾಶ ಕಾರ್ಯಕ್ರಮಗಳನ್ನು ಯಾವುದೇ ಸಾರ್ವಜನಿಕ ಹೊಣೆಗಾರಿಕೆಯಿಲ್ಲದೆ ಹಿಂತೆಗೆದುಕೊಳ್ಳಲು ಮುಂದಾಗಿವೆ. ಕಾರ್ಮಿಕರು ಮತ್ತು ಸಮುದಾಯ ಗುಂಪುಗಳು, ಇಂತಹ ಪ್ರತಿಗಾಮಿ ಕ್ರಮಗಳಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳನ್ನು, ವಿಶೇಷವಾಗಿ ‘ಟಾರ್ಗೆಟ್’ ಎಂಬ ಕಂಪನಿಯನ್ನು ಬಹಿಷ್ಕರಿಸುತ್ತಿವೆ. ಕಾರ್ಪೊರೆಟ್ ಗಳು ಕಾರ್ಮಿಕರನ್ನು ವಿಭಜಿಸಲು ಮತ್ತು ಪರಸ್ಪರರ  ವೈರಿಗಳಾಗುವಂತೆ ಪ್ರಚೋದಿಸಲು ಎಲ್ಲೆಡೆ ವಲಸಿಗರನ್ನು ಗಡೀಪಾರು ಮತ್ತು ಕಿರುಕುಳಕ್ಕೆ ಗುರಿ ಮಾಡುತ್ತಿವೆ.

ತೈವಾನ್ ನಲ್ಲಿ ಮೇ ದಿನ

ಈ ಮೇ ದಿನದ ಅಂತಾರಾಷ್ಟ್ರೀಯ ಆಯಾಮವನ್ನು ರಾಷ್ಟ್ರೀಯ ಆಯಾಮದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ವೆನೆಜುವೆಲಾದಲ್ಲಿ ಟ್ರಂಪ್ ಆಡಳಿತದ ಮಿಲಿಟರಿ ಹಸ್ತಕ್ಷೇಪವು ಈ ಸರ್ಕಾರಕ್ಕೆ ಕಾನೂನಿನ ಬಗ್ಗೆ ಯಾವುದೇ ಗೌರವವಿಲ್ಲ ಎಂಬುದನ್ನು ತೋರಿಸಿದೆ. ಸಾರ್ವಭೌಮ ದೇಶವನ್ನು ಕಟ್ಟಲು ಬಯಸಿದ್ದಕ್ಕಾಗಿ 65 ವರ್ಷಗಳಿಗೂ ಹೆಚ್ಚು ಕಾಲ ಆರ್ಥಿಕ ದಿಗ್ಬಂಧನವನ್ನು ಎದುರಿಸಿದ ಕ್ಯೂಬಾವನ್ನು ತೈಲ ದಿಗ್ಬಂಧನವು ಈಗ ಇನ್ನಷ್ಟು ಹಿಂಡುತ್ತಿದೆ. ಮತ್ತು ಇರಾನ್ ಮೇಲಿನ ಯು.ಎಸ್-ಇಸ್ರೇಲಿ ಯುದ್ಧ (ಅಲ್ಲಿನ ಕಾರ್ಮಿಕರು ದೀರ್ಘಕಾಲ ದಿಗ್ಬಂಧನಗಳ ಅಡಿಯಲ್ಲಿ ಬಳಲುತ್ತಿದ್ದಾರೆ) ಯುದ್ಧ-ವಿರೋಧಿ ಕಾರ್ಮಿಕ ಚಳವಳಿಯನ್ನು ಅವಶ್ಯಕತೆಯನ್ನಾಗಿ ಮಾಡುತ್ತದೆ. ಯು.ಎಸ್ ಜನತೆಯ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಇತರ ಸೇವೆಗಳಿಗೆ ಕಡಿತವನ್ನು ಮಾಡಿ, ಹೊಸ 1.5 ಟ್ರಿಲಿಯನ್ (ಲಕ್ಷ ಕೋಟಿ) ಡಾಲರ್ ಮಿಲಿಟರಿ ಬಜೆಟಿಗೆ ಟ್ರಂಪ್ ಆಡಳಿತದ ಒತ್ತಾಯ, ಅವರ ಯುದ್ಧಗಳು ವಿದೇಶದಲ್ಲಿ ಮಾತ್ರವಲ್ಲ ಮತ್ತು ಇಲ್ಲಿ ಸ್ವದೇಶದ ಕಾರ್ಮಿಕ ವರ್ಗದ ಮೇಲೆ ಸಹ ದಾಳಿ ಮಾಡುತ್ತವೆ ಎಂಬುದು ಸ್ಪಷ್ಟವಾಗಿದೆ.

ರೋಮ್, ಇಟಲಿಯಲ್ಲಿ ಮೇ ದಿನ

ಈ ಮೇ ದಿನದಂದು ಕಾರ್ಮಿಕರು, ದುಡಿಯುವ ಜನರ ಮೇಲಿನ ದಾಳಿಯ ವಿರುದ್ಧ ನಿಲ್ಲಬೇಕೆಂದು ಒತ್ತಾಯಿಸಲು – ನಗರ ಮಂಡಳಿಗಳಿಂದ ಹಿಡಿದು ಸಂಸತ್ – ವರೆಗಿನ ಚುನಾಯಿತ ಪ್ರತಿನಿಧಿಗಳಿಗೆ ಕರೆ ನೀಡುತ್ತಿದ್ದಾರೆ. ಚಳವಳಿಯ ಘೋಷಣೆ – “ಕೆಲಸ, ಶಾಲೆ, ಶಾಪಿಂಗ್ ಎಲ್ಲ ಬಂದ್”.  ಇದು  ಶ್ರಮವನ್ನು ಸಾಮೂಹಿಕವಾಗಿ ಹಿಂತೆಗೆದುಕೊಳ್ಳುವ ಕಾರ್ಮಿಕರ ಪ್ರಧಾನ ಶಕ್ತಿಯ ಬಳಕೆಯ ನಿರ್ಧಾರ.

ಟೊಕ್ಯೊ, ಜಪಾನಿನಲ್ಲಿ ಮೇ ದಿನ’

 

ಇದನ್ನೂ ನೋಡಿ :“(ಲೇಬರ್‌ ಕೋಡ್ಸ್‌) ಶ್ರಮ ಸಂಹಿತೆಗಳ ಜಾರಿ: ರಾಜ್ಯಗಳ ಮುಂದಿನ ದಾರಿ ಯಾವುದು?” Janashakthi Media

 

ಪಿ.ಆರ್.ಒ (ಸಂಘಟಿತವಾಗುವ ಹಕ್ಕು ರಕ್ಷಣಾ) ಕಾಯ್ದೆ ಯನ್ನು ಅಂಗೀಕರಿಸಿ, ಶ್ರೀಮಂತರಿಗೆ ತೆರಿಗೆ ವಿಧಿಸಿ, ಸಾರ್ವಜನಿಕ ಶಾಲೆಗಳು ಮತ್ತು ಆರೋಗ್ಯ ರಕ್ಷಣೆಗೆ ಸಂಪೂರ್ಣವಾಗಿ ಅನುದಾನ ನೀಡಿ, ವಲಸಿಗ ಕಾರ್ಮಿಕರನ್ನು ರಕ್ಷಿಸಿ, ಯುದ್ಧಗಳನ್ನು ಕೊನೆಗೊಳಿಸಿ, ಕಡಿವಾಣವಿಲ್ಲದ ಎಐ ಅನ್ನು ನಿಲ್ಲಿಸಿ, ಉದ್ಯೋಗದಲ್ಲಿ ಸಮಾನ ಅವಕಾಶವನ್ನು ಪುನಃಸ್ಥಾಪಿಸಿ ಮತ್ತು ಸಾಂವಿಧಾನಿಕ ಪ್ರಜಾಪ್ರಭುತ್ವವನ್ನು ಉಳಿಸಿ – ಇವು ಯು.ಎಸ್ ಕಾರ್ಮಿಕರ ಈ ಮೇದಿನದ ನಿರ್ದಿಷ್ಟ ಕಾರ್ಯಸಾಧ್ಯ ಹಕ್ಕೊತ್ತಾಯಗಳು.

ಲಾಹೋರ್, ಪಾಕಿಸ್ತಾನದಲ್ಲಿ ಮೇ ದಿನ

ಶ್ರೀಮಂತ ಕಾರ್ಪೊರೆಟ್ ಗಳು ಮತ್ತು ಉದ್ಯ,ಮಗಳು ಕಾರ್ಮಿಕರ ಶಕ್ತಿಯನ್ನು ನಿಗ್ರಹಿಸಲು ಮತ್ತು ಆರ್ಥಿಕತೆಯ ನಿಯಮಗಳನ್ನು ತಮ್ಮ ಪರವಾಗಿ ತಿರುಚಲು ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳುತ್ತಿವೆ. ವಾಸಯೋಗ್ಯ ವೇತನ, ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆ, ನಿವೃತ್ತಿ ಭದ್ರತೆ ಮತ್ತು ಉದ್ಯೋಗದ ಮೇಲೆ ಬಲವಾದ ರಕ್ಷಣೆಗಳನ್ನು ಪಡೆಯಲು ಕಾರ್ಮಿಕ ಚಳುವಳಿಯು ದಶಕಗಳಿಂದ ಮಾಡಿದ ಪ್ರಗತಿಯನ್ನು ರದ್ದುಗೊಳಿಸಲು ಅವರು ಬಯಸುತ್ತಾರೆ. ಆದರೆ ಇತಿಹಾಸವು ನಮ್ಮ ಕಡೆಗಿದೆ ಮತ್ತು ನಾವು ಅದರ ಹಿಮ್ಮುಖ ಚಲನೆಯನ್ನು ನಿರಾಕರಿಸುತ್ತೇವೆ.

ಅಥೆನ್ಸ್, ಗ್ರೀಸ್ ನಲ್ಲಿ ಮೇ ದಿನ

ಯು.ಎಸ್ ನಲ್ಲಿ ಮೇ ದಿನವು ಪ್ರಾರಂಭವಾಯಿತು. ಈ ವರ್ಷ, ಅದು ಮತ್ತೆ ಯು.ಎಸ್ ಗೆ ಮರಳಿ ಬಂದಿದೆ.

 

Donate Janashakthi Media

Leave a Reply

Your email address will not be published. Required fields are marked *