ಸತ್ಯಪಾಲ್ ಮಾಲಿಕ್ ಸಂದರ್ಶನ – ಥಾಪರ್ ಜತೆ (ದಿ ವೈರ್ ನಲ್ಲಿ ಪ್ರಕಟವಾದ್ದು) ಭಾಗ 2-ಕಾಶ್ಮೀರದ ವಿಧಾನ ಸಭೆಯ ವಿಸರ್ಜನೆ

ಅನುವಾದ : ಅಬ್ದುಲ್ ರಹಮಾನ್ ಪಾಷಾ

ದಿ ವೈರ್ (THE WIRE ) ಪೋರ್ಟಲ್‌ಗಾಗಿ, ಕರಣ್ ಥಾಪರ್,  ಆಗಸ್ಟ್ ೨೦೧೮ರಿಂದ  ಅಕ್ಟೋಬರ್ ೨೦೧೯ರ ವರೆಗೆ  ಕಾಶ್ಮೀರದ ಕೊನೆಯ ರಾಜ್ಯಪಾಲರಾಗಿದ್ದ ಸತ್ಯ ಪಾಲ್ ಮಲಿಕ್ ರೊಂದಿಗೆ ಮಾಡಿದ ಸಂದರ್ಶನದ ಸಂಕ್ಷಿಪ್ತ ಪಠ್ಯ ಭಾಗ 2-ಕಾಶ್ಮೀರದ ವಿಧಾನ ಸಭೆಯ ವಿಸರ್ಜನೆ (ಇತರ ಭಾಗಗಳು ಮುಂದಿನ ಕಂತುಗಳಲ್ಲಿ)

ಕರಣ್: ಮಲಿಕ್‌ ಅವರೇ, ನೀವು ಕಾಶ್ಮೀರದ ರಾಜ್ಯಪಾಲರಾಗಿದ್ದ ಅವಧಿಯ ಕುರಿತು ನಾನು ನಿಮಗೆ ಪ್ರಶ್ನೆಗಳನ್ನು ಕೇಳಿದರೆ ನೀವು ಸತ್ಯವನ್ನು, ಕೇವಲ ಸತ್ಯವನ್ನು ಮತ್ತು ನಿಮಗೆ ಸಾಧ್ಯವಿರುವಷ್ಟು ಸತ್ಯವನ್ನು ಹೇಳುವಿರಾ?

ಮಲಿಕ್: ಹೌದು. ಪಕ್ಕಾ.

ಕರಣ್: ಸರಿ ಹಾಗಾದರೆ, ನೀವು ೨೦೧೮ರ ಆಗಸ್ಟ್ ತಿಂಗಳಲ್ಲಿ ಕಾಶ್ಮೀರದ ರಾಜ್ಯಪಾಲರಾಗಿ ಅಧಿಕಾರವನ್ನು ವಹಿಸಿಕೊಂಡಿರಿ, ಮತ್ತು ರಾಜ್ಯವು ರಾಷ್ಟçಪತಿಯವರ ಆಳ್ವಿಕೆಯಲ್ಲಿರುವಾಗಲೂ ಇದ್ದಿರಿ. ಮೂರು ತಿಂಗಳ ನಂತರ ಮೆಹಬೂಬಾ ಮುಫ್ತಿ ಅವರು ಹತಾಶರಾಗಿ ನಿಮಗೆ ಕರೆ ಮಾಡಲು ನೋಡುತ್ತಿದ್ದರು. ತಮಗೆ ಕಾಂಗ್ರೆಸ್ ಮತ್ತು ನ್ಯಾಷನಲ್  ಕಾನ್ಫೆರನ್ಸ್ ಬೆಂಬಲ ಇದೆ. ಇದರಿಂದಾಗಿ ೮೭ ಸದಸ್ಯರ ವಿಧಾನಸಭೆಯಲ್ಲಿ ೫೬ ಜನ ಅವರ ಬೆಂಬಲಕ್ಕಿದ್ದಾರೆ ಎಂದು ಹೇಳಲು ನೋಡುತ್ತಿದ್ದರು ಆದರೆ, ನೀವು ಅವರ ಕರೆಯನ್ನು ಸ್ವೀಕರಿಸಲು ನಿರಾಕರಿಸಿದ್ದಷ್ಟೇ ಅಲ್ಲ, ನಿಮ್ಮ ನಿವಾಸದಲ್ಲಿದ್ದ ಫ್ಯಾಕ್ಸ್ ಮಷೀನ್ ಅವರ ಪತ್ರವನ್ನು ಸ್ವೀಕರಿಸಲಿಲ್ಲ. ಮತ್ತು ಶಬ್ದಶಃ ಕೆಲವೇ ನಿಮಿಷಗಳ ನಂತರ ನೀವು ವಿಧಾನ ಸಭೆಯನ್ನು ವಿಸರ್ಜಿಸಿದಿರಿ. ನೀವು ಏಕೆ ಹಾಗೆ ಮಾಡಿದಿರಿ? ನರೇಂದ್ರ ಮೋದಿಯವರಿಂದ ನಿಮ್ಮ ಮೇಲೆ ಒತ್ತಡವಿತ್ತೇ? 

ಮಲಿಕ್: ಅವತ್ತು ಈದ್ (ಹಬ್ಬ)ದ ದಿನವಾಗಿತ್ತು. ರಜೆ ಇತ್ತು. ನನ್ನ ಆಡುಗೆಯವನೂ ರಜೆಯಲ್ಲಿದ್ದ. ನನ್ನ ಗೃಹ ಕಛೇರಿಯಲ್ಲಿ ಏನನ್ನು ನಿರ್ವಹಿಸಲೂ ಯಾರೂ ಇರಲಿಲ್ಲ. ನಾನು ದೆಹಲಿಯಲ್ಲಿದ್ದೆ. ನಾನು ಅಲ್ಲಿಗೆ ನಾಲ್ಕು ಗಂಟೆಗೆ ತಲುಪಿದೆ. ಅಲ್ಲಿ ನನ್ನ ಮುಖ್ಯ ಕಾರ್ಯದರ್ಶಿ ಮತ್ತು ಇಂಟೆಲಿಜೆನ್ಸ್ ನ ಮುಖ್ಯಸ್ಥರು ಬಂದಿದ್ದರು. ಇವರ ಬಹುಮತ ಇದೆ, ಅವರು ಪತ್ರ ಕಳಿಸಿದರೆ ಅವರಿಗೆ ಸರಕಾರವನ್ನು ರಚಿಸಲು ಅವಕಾಶ ಕೊಡಿ, ಏನೂ ತೊಂದರೆಯಿಲ್ಲ. ಎಂದರೆ, ನಾನೆಂದೆ, ಆಗಬಹುದು. ಆದರೆ, ನಿಯಮ ಏನಿದೆ? ಟ್ವಿಟರಿನಿಂದ ಸರಕಾರದ ರಚನೆ ಆಗುವುದಿಲ್ಲ. ಸರಕಾರ ರಚಿಸಬೆಕಾದರೆ, ರಚಿಸಲು ಬಯಸುವ ಪಕ್ಷದ ಸಭೆ ನಡೆಯಬೇಕು.. ಅದರಲ್ಲಿ ಮೆಹಬೂಬಾ ಅವರು ನಮ್ಮ ನಾಯಕರು ಎಂದು ಆ ಸಭೆಯಲ್ಲಿ ತೀರ್ಮಾನವಾಗಬೇಕು. ಆಮೇಲೆ ಇವರಿಗೆ ಬೆಂಬಲ ನೀಡುವ ಪಕ್ಷಗಳೂ ಸಭೆ ನಡೆಸಿ, ಇವರಿಗೆ ನಾವು ಬೆಂಬಲವನ್ನು ನೀಡುತ್ತೇವ ಎಂದು ಇವರಿಗೆ ಪತ್ರ ಬರೆದು ಕೊಡಬೇಕು. ಆ ಎಲ್ಲಾ ಪತ್ರಗಳನ್ನು ರಾಜ್ಯಪಾಲರಿಗೆ ವೈಯಕ್ತಿಕವಾಗಿ ತಲುಪಿಸಬೇಕು.

ಕರಣ್: ನೀವು ಮಹಬೂಬಾ ಅವರಿಗೆ ಸಮಯ ಕೊಟ್ಟಿದ್ದರೆ ಅವರು ಈ ಎಲ್ಲಾ ಪತ್ರಗಳನ್ನು ನಿಮಗೆ ತಲುಪಿಸುತ್ತಿದ್ದರು. ಆದರೆ ನೀವು ಕೆಲವೇ ನಿಮಿಷಗಳಲ್ಲಿ ವಿಧಾನ ಸಭೆಯನ್ನು ವಿಸರ್ಜಿಸಿ ಬಿಟ್ಟಿರಿ?

ಮಲಿಕ್: ಇಲ್ಲ, ಇಲ್ಲ, ಇಡೀ ದಿನ ಸಮಯ ಇತ್ತು. ನಾನು ವಿಧಾನ ಸಭೆಯನ್ನು ವಿಸರ್ಜನೆ ಮಾಡಿದ್ದು ಎಂಟು ಗಂಟೆಯ ನಂತರ. ಇಡೀ ದಿನ ಸಮಯ ಅವರಿಗಿತ್ತು. ’ಶ್ರೀನಗರದಿಂದ ಜಮ್ಮುವಿಗೆ ಪ್ರತಿದಿನ ಮೂರು ವಿಮಾನಗಳು ಬರುತ್ತವೆ. ತಾವೇ ಖುದ್ದಾಗಿ ಬರಲು ಆಗದೇ ಇದ್ದಿದ್ದರೆ, ಅವರು ಪತ್ರಗಳನ್ನು ಯಾರದಾದರೂ ಕೈಯಲ್ಲಿ ಕಳಿಸಿಕೊಡಬಹುದಾಗಿತ್ತು. ಸರಿ, ನನ್ನ ಫ್ಯಾಂಕ್ಸ್ ಯಂತ್ರ ಕೆಲಸ ಮಾಡದೇ ಇದ್ದಿದ್ದರೆ, ಅವರನ್ನು ಬಲ್ಲ ಹಲವರ ಫ್ಯಾಕ್ಸ್ ಯಂತ್ರಗಳು ಇದ್ದುವಲ್ಲ. ಅವರಿಗೆ ಕಳಿಸಿದ್ದರೆ, ಅವರು ಅವುಗಳನ್ನು ರಾಜಭವನಕ್ಕೆ ತಲುಪಿಸುತ್ತಿದ್ದರು.

ಕರಣ್: ಆದರೆ, ಮಲ್ಲಿಕ್ ಸಾಹೇಬರೇ, ನಿಮ್ಮ ಮುಖ್ಯ ಕಾರ್ಯದರ್ಶಿಯವರಿಗೆ ಮಹಬೂಬಾ ಅವರ ಬಳಿ ಬಹುಮತ ಇದೆ ಎಂದು ನಂಬಿದ್ದರೆ, ನಿಮಗೂ ಇದು ಗೊತ್ತಿದ್ದಿದ್ದರೆ, ಅವರಿಗೆ ಸರಕಾರವನ್ನು ರಚಿಸಲು ಒಂದು ಎರಡು ದಿನ ಸಮಯ ಏಕೆ ಕೊಡಲಿಲ್ಲ? ವಿಧಾನ ಸಭೆಯನ್ನು ವಿಸರ್ಜನೆ ಮಾಡುವುದಕ್ಕೆ ಅವಸರವೇನಿತ್ತು?

ಮಲಿಕ್: ಮೊದಲನೆಯದಾಗಿ ಅದಕ್ಕೊಂದು ವ್ಯವಸ್ಥೆ ಅಂತಿದೆ. ಅಲ್ಲದೇ ಫಾರೂಕ್ ಅಬ್ದುಲ್ಲಾ ಅವರ ಪಕ್ಷದವರಿ ಹೇಳಿದರು ನಾವು ದೆಹಲಿಗೆ ಹೋಗುತ್ತಿದ್ದೇವೆ, ನಾಳೆ ನಿರ್ಣಯ ಮಾಡುತ್ತೇವೆ. ಗುಲಾಮ್ ನಬಿ ಆಜಾದ್ ಪಕ್ಷದವರು ನಾವು ಬೆಂಬಲಿಸುತ್ತೇವೆ ಎಂದು ಸ್ಪಷ್ಟವಾಗಿ ಹೇಳಲಿಲ್ಲ. ಕೇವಲ ಮೆಹಬೂಬಾಅವರು ಹೇಳುತಿದ್ದರು ನನ್ನ ಬಳಿ ಬಹುಮತ ಇದೆ ಎಂದು.

ಕರಣ್: ನಿಮ್ಮ ಮುಖ್ಯ ಕಾರ್ಯದರ್ಶಿಯವರಿಗೂ ಅವರ ಬಳಿ ಬಹುಮತ ಇದೆ ಅನ್ನೋ ವಿಶ್ವಾಸವಿತ್ತು. ನೀವು ಒಬ್ಬ ರಾಜ್ಯಪಾಲರಾಗಿ ಸರಕಾರವನ್ನು ರಚಿಸಲು ಸಾಕಷ್ಟು ಸಮಯ ನೀಡುವುದು ನಿಮ್ಮ ಕರ್ತವ್ಯವಾಗಿತ್ತು. ಆದರೆ, ನೀವು ಕೆಲವೇ ಗಂಟೆಗಳಲ್ಲಿ ವಿಧಾನ ಸಭೆಯನ್ನು ವಿಸರ್ಜನೆ ಮಾಡಿದಿರಿ.

ಮಲಿಕ್: ಅವರಿಗೆ ಬಹುಮತ ಇದೆ ಎಂದು ನನಗೂ ಅನ್ನಿಸಿತ್ತು. ಆದರೆ, ಅವರಿಂದ ಅಧಿಕೃತವಾಗಿ ಯಾವುದೇ ಕ್ಲೇಮು ಬಂದಿರಲಿಲ್ಲವಲ್ಲ. ಸಮಯ ಕೊಡೋಣ ಎಂದರೆ, ಅಲ್ಲಿ ದೊಡ್ಡ ಪ್ರಮಾಣದಲ್ಲಿ ಶಾಸಕರನ್ನು ಕೊಳ್ಳುವ ವಿದ್ಯಮಾನ ನಡೆದಿತ್ತು. ಅವರೇ, ವಿಧಾನ ಸಭೆಯನ್ನು ಆದಷ್ಟು ಬೇಗ ವಿಸರ್ಜನೆ ಮಾಡಿ, ನಮ್ಮ ಶಾಸಕರು ಬೇರೆ ಕಡೆ ಹೋಗುತ್ತಿದ್ದಾರೆ ಎಂದು ಹೇಳುತ್ತಿದ್ದರು. ಫಾರೂಕ್ ಅವರೂ ಸ್ವತಃ ಹೇಳುತ್ತಿದ್ದರು.

ಕರಣ್ ಥಾಪರ್-ಸತ್ಪಾಲ್ ಮಲಿಕ್ ಇಡೀ (ಇಂಗ್ಲಿಷ್) ಸಂದರ್ಶನದ ಇಡೀ ವೀಡಿಯೋ ಲಿಂಕ್:

ಕರಣ್: ನಿಮ್ಮ ಆಫೀಸಿನಲ್ಲಿ ಫ್ಯಾಕ್ಸ್ ಯಂತ್ರ ಕೆಲಸ ಮಾಡುತ್ತಿರಲಿಲ್ಲ ಎಂಬುದು ಸುಳ್ಳು ಎಂದು ಮೆಹಬೂಬಾ ಹೇಳುತ್ತಿದ್ದಾರೆ, ಟ್ವೀಟ್ ಮಾಡಿ.

ಮಲಿಕ್: ನೋಡಿ, ಅದು ಹಬ್ಬದ ದಿನವಾದದಿಂದ ಅದನ್ನು ನೋಡಿಕೊಳ್ಳುವವರು ಯಾರೂ ಇರಲಿಲ್ಲ. ನನ್ನ ಅಡುಗೆಯವನೂ ಅವತ್ತು ರಜೆಯಲ್ಲಿದ್ದ ಎಂದು ಹೇಳಿದೆನಲ್ಲಾ..

ಕರಣ್: ಅಡುಗೆಯವನು ರಜೆಯಲ್ಲಿದ್ದ ಎಂದರೆ ನೀವು ಅವತ್ತು ಉಪವಾಸ ಇದ್ದಿರಾ?

ಮಲಿಕ್:ಇಲ್ಲ, ಅವನು ಇಲ್ಲದಿದ್ದರೆ, ಇನ್ಯಾರಾದರೂ ಅಡುಗೆ ಮಾಡಿ ಹಾಕುತ್ತಾರೆ.

ಕರಣ್: ಇದೇ ಪರ್ಯಾಯ ವ್ಯವಸ್ಥೆಯನ್ನು ಫ್ಯಾಕ್ಸ್ ಯಂತ್ರವನ್ನು ನೋಡಿಕೊಳ್ಳುವುದರ ಕುರಿತು ಯಾಕೆ ಮಾಡಲಿಲ್ಲ?

ಮಲಿಕ್: ಮಹಬೂಬಾಅವರ ಫ್ಯಾಕ್ಸ್ ಬರುತ್ತೆ ಎಂದು ಕಾಯುತ್ತಾ ಕುಳಿತಿರುವುದೇ ನನ್ನ ಕೆಲಸವಲ್ಲ. ಅವರ ಬಳಿ ನನಗೆ  ಪತ್ರಗಳನ್ನು ತಲುಪಿಸಲು ಫ್ಯಾಕ್ಸಿನ ಹೊರತಾಗಿಯು ಅನೇಕ ಸಾಧನಗಳಿದ್ದವು. ಯಾರನ್ನಾದರೂ ಕಳಿಸಬಹುದಾಗಿತ್ತು, ತಮ್ಮ ಯಾರಾದರೂ ಒಬ ವ್ಯಕ್ತಿಗೆ ಫ್ಯಾಕ್ಸ್ ಮಾಡಬಹುದಾಗಿತ್ತು, ಅವರು ತಂದು ನನಗೆ ಕೊಡಬಹುದಾಗಿತ್ತು.

ಕರಣ್: ನೀವು ರಾಜ್ಯಪಾಲರು. ನಿಮಗೆ ಸಂವಿಧಾನದ ಬಗ್ಗೆ ನನಗಿಂತ ಹೆಚ್ಚು ಚೆನ್ನಾಗಿ ಗೊತ್ತು ಆದರೂ ಬಹುಮತದ ಸಾಧ್ಯತೆ ಇರುವ ಪಕ್ಷಕ್ಕೆ ಸರಕಾರವನ್ನು ರಚನೆ ಮಾಡಲು ಅವಕಾಶ ಕೊಡದೇ, ವಿಧಾನ ಸಭೆಯನ್ನು ವಿಸರ್ಜನೆ ಮಾಡುತ್ತೀರಿ. ಅದು ಅಸಾಂವಿಧಾನಿಕವಾದ ಕ್ರಮ. ಒಬ್ಬ ರಾಜ್ಯಪಾಲರು ಹೀಗೆ ಮಾಡಲೇ ಬಾರದಾಗಿತ್ತು. ಬಹುಮತವನ್ನು ಸಾಬೀತು ಪಡಿಸಲು ನೀವು ಸಮಯವನ್ನೇ ಕೊಡಲಿಲ್ಲ.

ಮಲಿಕ್: ಒಂದು ಮಾತನ್ನು ನಿಮಗೆ ಸ್ಪಷ್ಟವಾಗಿ ಹೇಳುತ್ತೇನೆ. ಫಾರೂಕ್ ಮತ್ತು ಮೆಹಬೂಬಾ ಒಂದು ವಾರದಿಂದ, ದಿನವೂ ನನಗೆ ಫೋನ್ ಮಾಡಿ ವಿಧಾನ ಸಭೆಯನ್ನು ವಿಸರ್ಜಿಸಿ ಬಿಡಿ, ನಮ್ಮಲ್ಲಿನ ಶಾಸಕರನು ಮುರಿಯುತ್ತಿದ್ದಾರೆ, ನಮ್ಮ ಮೇಲೆ ಒತ್ತಡ ಇದೆ ಎಂದು ಹೇಳುತ್ತಲೇ ಇದ್ದರು. ವಿಸರ್ಜನೆಯ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ನಾನು ಇದನ್ನೂ ಹೇಳಿದ್ದೇನೆ.

ಕರಣ್: ಒಂದು ಮಾತು ಹೇಳಿ, ಮೆಹಬೂಬಾರವರಿಗೆ ಹೆಚ್ಚು ಸಮಯ ಕೊಡದೇ ಇರುವುದಕ್ಕೆ ನಿಮಗೆ ಪಶ್ಚಾತ್ತಾಪ ಇದೆಯೇ?

ಮಲಿಕ್: ಖಂಡಿತ ಇಲ್ಲ. ಅವರು ಅಸಮರ್ಥರಾಗಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ. ನನಗೆ ನನ್ನ ಸರಕಾರವನ್ನು ರಚನೆ ಮಾಡುವುದೇ ಆಗಿದ್ದರೆ ನನ್ನ ಆರು ಜನ ರಾಜ್ಯಪಾಲರ ಮನೆಗೆ ಪತ್ರವನ್ನು ತೆಗೆದುಕೊಂಡು ದೌಡಾಯಿಸುತ್ತಿದ್ದರು.

ಕರಣ್: ಎಂದರೆ ನೀವು ಹೇಳುವುದು, ಮೆಹಬೂಬಾ ಅಸಮರ್ಥರಾಗಿದ್ದರು, ನಿಮ್ಮ ಮೇಲೆ ದೋಷವನ್ನು ಹೊರಿಸುತ್ತಿದ್ದಾರೆ ಎಂದು ನೀವನ್ನುತ್ತೀರಾ?

ಮಲಿಕ್: ಸರಕಾರಗಳು ಹೇಗೆ ರಚನೆಯಾಗುತ್ತವೆ ಎಂಬುದು ನಿಮಗೆ ಗೊತ್ತಿಲ್ಲದೇ ಇದ್ದರೆ ಅದು ನನ್ನ ಜವಾಬ್ದಾರಿಯಲ್ಲ.

ಕರಣ್: ಮೆಹಬೂಬಾ ಹೇಳುತ್ತಾರೆ ಅವರು ನಿಮಗೆ ಕರೆ ಮಾಡಲು ನೋಡಿದರು, ನೀವು ಅವರ ಕರೆಯನ್ನು ಉತ್ತರಿಸಲಿಲ್ಲ ಎಂದು.

ಮಲಿಕ್: ನೀವು ನನ್ನ ಫೋನಿಗೆ ಕರೆ ಮಾಡಿ ನೋಡಿ, ರಾತ್ರಿ ೨ ಗಂಟೆ ಹೊತ್ತಿಗೆ ಫೋನ್ ಮಾಡಿದರೂ ನಾನು ಎತ್ತಿಕೊಳ್ಳುತ್ತೇನೆ. ಒಬ್ಬ ಸಾಮಾನ್ಯ ವ್ಯಕ್ತಿಯೂ ನಾನು ಫೋನನ್ನು ಎತ್ತಿಕೊಳ್ಳುವುದಿಲ್ಲ ಎಂದು ಹೇಳಿರಲು ಸಾಧ್ಯವಿಲ್ಲ.

ಕರಣ್: ಎಂದರೆ, ಮೆಹಬೂಬಾ ಸುಳ್ಳು ಹೇಳುತ್ತಿದ್ದಾರಾ?

ಮಲಿಕ್:ಖಂಡಿತ, ಆಕೆ ಸುಳ್ಳು ಹೇಳುತ್ತಿದ್ದಾರೆ, ಆ ಅವಧಿಯಲ್ಲಿ ಅವರು ನನಗೆ ಫೋನ್ ಮಾಡಲೇ ಇಲ್ಲ.

Donate Janashakthi Media

Leave a Reply

Your email address will not be published. Required fields are marked *