ಮಳೆಗಾಗಿ ಮೌಢ್ಯತೆಗೆ ಮಾರು ಹೋದ ಜನ: ಹೂತಿದ್ದ ಶವದ ಮೇಲೆ ನೀರು ಹಾಕಿ‌ ಪ್ರಾರ್ಥನೆ

ವಿಜಯಪುರ: ರಾಜ್ಯದಲ್ಲಿ ಮುಂಗಾರು ಮಳೆ ಭಾರೀ ಅವಾಂತರವನ್ನು ಸೃಷ್ಟಿ ಮಾಡಿದ್ದು, ದಕ್ಷಿಣ ಭಾಗದಲ್ಲಿ ಮಳೆಯ ಅಬ್ಬರಕ್ಕೆ ಗ್ರಾಮಗಳೇ ಮುಳಿಗಿವೆ, ಕೃಷಿ ಭೂಮಿ ಜಲಾವೃತಗೊಂಡಿದೆ. ಇದರ ನಡುವೆ ಗೊಮ್ಮಟ ನಗರಿ ಎಂದು ಖ್ಯಾತಿ ಹೊಂದಿರುವ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ‌ತಾಲೂಕಿನ ಕಲಕೇರಿ ಗ್ರಾಮದಲ್ಲಿ ಸ್ಮಶಾನದಲ್ಲಿ ಹೂತಿದ್ದ ಶವ ಮೇಲೆ ನೀರು ಹಾಕಿ‌ ಮಳೆಗಾಗಿ ಪ್ರಾರ್ಥನೆ ಮಾಡಿರುವ ಘಟನೆ ನಡೆದಿದೆ.

ಈ ಅವಧಿಯ ಮಳೆಗಾಲದಲ್ಲಿಯೂ ಸಹ ಜಿಲ್ಲೆಯ ಕೆಲ ಭಾಗಗಳಲ್ಲಿ ಬೇಸಿಗೆಯ ಪರಿಸ್ಥಿತಿ ಇದ್ದ ಹಾಗಿದೆ.  ಹೀಗಾಗಿ ಇಲ್ಲಿನ ಜನ ಮಳೆಗಾಗಿ ಬೇರೆ ಬೇರೆ ರೀತಿಯ ಮೌಢ್ಯತೆಗಳ ಆಚರಣೆಗೆ ಮುಂದಾಗುತ್ತಿದ್ದಾರೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮಳೆ ಬಾರದಿದ್ದರೆ ಒಂದಿಷ್ಟು ಮೌಢ್ಯಾಚರಣೆಗೆ ಮುಂದಾಗುವವರಿದ್ದಾರೆ.

 

ಸ್ಮಶಾನದಲ್ಲಿ ‌ಶವ ಹೂತಿರುವ ಸ್ಥಳದಲ್ಲಿ ಎರಡು‌ ಅಡಿ ಮಣ್ಣು ತೆಗೆದು ಗ್ರಾಮಸ್ಥರು ನೀರು ಹಾಕಿರುವ ಘಟನೆ ಕಳೆದ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಟ್ಯಾಂಕರ್ ಮೂಲಕ ಶವದ ಮೇಲೆ ಜನರು ನೀರು ಹಾಕಿದ್ದು, ಕೆಲ ಶವಗಳು ಬಾಯಿ ಬಿಟ್ಟಿರುತ್ತವೆ. ಅಂಥ‌ ಶವಗಳ ಬಾಯಿಗೆ ‌ನೀರು ಹಾಕೋ ಪದ್ದತಿ ಇದಾಗಿದೆ.

ಆಧುನಿಕ‌ ಕಾಲದಲ್ಲೂ ಇಂಥ ಆಚರಣೆಗಳನ್ನು ಜನರು ನಂಬುತ್ತರೆ ಎಂದರೆ ಆಶ್ಚರ್ಯವಾಗುತ್ತದೆ.

ಶವದ ಬಾಯಿಗೆ ನೀರು ಹಾಕಿದ ಗ್ರಾಮಸ್ಥರು, ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಕಾಕತಾಳೀಯ ಎಂಬಂತೆ ಗ್ರಾಮದಲ್ಲಿ ಜಿಟಿ ಜಿಟಿ ಮಳೆ ಸುರಿದಿದ್ಯಂತೆ. ಇದರಿಂದ ಗ್ರಾಮದ ಜನರು, ರೈತರೆಲ್ಲ ಸಂತಸಗೊಂಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *