ತಿರುವನಂತಪುರಂ: ಅಪ್ಪ, ಮಗಳು ಇಬ್ಬರು ಒಟ್ಟಾಗಿಯೇ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಪಡೆಯುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಎರ್ನಾಕುಳಂ ಜಿಲ್ಲೆಯ ತ್ರಿಪ್ಪೂಣಿತುರಲ್ಲಿ ನಿವಾಸಿಯಾದ, 54ರ ಹರೆಯದ ಆರ್. ಮುರುಗಯ್ಯನ್, 18 ವರ್ಷದ ಮಗಳೊಂದಿಗೆ ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್ ಸೀಟು ಗಿಟ್ಟಿಸಿಕೊಂಡಿದ್ದಾರೆ. ಬಿಪಿಸಿಎಲ್ ಕೊಚ್ಚಿ ರಿಫೈನರಿ ಮುಖ್ಯ ವ್ಯವಸ್ಥಾಪಕರಾಗಿರುವ ಲೆಫ್ಟಿನೆಂಟ್ ಕರ್ನಲ್ ಮುರುಗಯ್ಯನ್, ಮಗಳು ಶೀತಲ್ ಜೊತೆ ಓದಿ ನೀಟ್ ಪರೀಕ್ಷೆಗೆ ಹಾಜರಾಗಿದ್ದರು.
ಮುರುಗಯ್ಯನ್ ಅವರಿಗೆ ಚೆನ್ನೈನ ಶ್ರೀಲಲಿತಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ, ಪುತ್ರಿ ಶೀತಲ್ ಅವರಿಗೆ ಪಾಂಡಿಚೇರಿಯ ವಿನಾಯಕ ಮಿಷನ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಮುರುಗಯ್ಯನ್ ಅವರು ಎಂಜಿನಿಯರಿಂಗ್, ಕಾನೂನು ಮತ್ತು ವ್ಯವಹಾರ ಆಡಳಿತದಲ್ಲಿ ಪದವಿಗಳನ್ನು ಹೊಂದಿದ್ದಾರೆ.
ಚಿಕ್ಕವಯಸ್ಸಿನಲ್ಲೇ ವೈದ್ಯನಾಗಬೇಕು ಎಂದು ನಾನು ಬಯಸಿದ್ದೆ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಇಂಜಿನಿಯರ್ ಆದೆ. ಯಾವ ಕಾಲೇಜಿಗೆ ಸೇರಬೇಕೆಂದು ನಿರ್ಧರಿಸುತ್ತೇವೆ. ಎಂಬಿಬಿಎಸ್ ಸೀಟು ನನಗೆ, ಮತ್ತು ಮಗಳಿಗೆ ಸಿಕ್ಕಿರುವುದು ಖುಷಿಯಾಗಿದೆ ಎಂದು ಮುರುಗಯ್ಯನ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಮುರುಗಯ್ಯನವರ ಪತ್ನಿ ಮಾಲತಿ, ಇಬ್ಬರು ಜೊತೆಯಾಗಿಯೇ ಓದುತ್ತಿದ್ದರು. ಅಪ್ಪನಿಗೆ ಓದಿದ್ದು ಬೇಗ ಅರ್ಥವಾಗುತ್ತಿತ್ತು. ಅಪ್ಪ ಪರೀಕ್ಷೆ ಬರೆದು ಪಾಸಾಗಿ ಸೀಟು ಸಿಕ್ಕಿ ನನಗೆ ಸೀಟು ಸಿಗದಿದ್ದರೇ ಎಂಬ ಚಿಂತೆ ಮಗಳಿಗೆ ಇತ್ತು. ಈಗ ಇಬ್ಬರಿಗೂ ಸೀಟು ಸಿಕ್ಕಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ.
ಗರಿಷ್ಠ ವಯೋಮಿತಿ ಇಲ್ಲದೆ ಯಾರು ಬೇಕಾದರೂ ನೀಟ್ ಪರೀಕ್ಷೆಗೆ ಹಾಜರಾಗಬಹುದು ಎಂಬ ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ಮುರುಗಯ್ಯನವರ ಡಾಕ್ಟರ್ ಆಗುವ ಆಸೆ ಮತ್ತೆ ಚಿಗುರಿತ್ತು. ರಿಫೈನರಿಯಲ್ಲಿ ಕೆಲಸ ಮುಗಿಸಿ ಬಂದು ಮುರುಗಯ್ಯನವರು ಮಗಳ ಜೊತೆ ನೀಟ್ ಪರೀಕ್ಷೆಗೆ ತಯಾರಿಮಾಡುತ್ತಿದ್ದರು.