ತಿರುಪತಿ,ಜ.5 : ಮಗಳು ತಂದೆಗೆ ಕೈ ಮುಗಿಯುವುದು ವಾಡಿಕೆ, ಆದರೆ ತಂದೆ ಮಗಳಿಗೆ ಸೆಲ್ಯೂಟ್ ಹೊಡೆಯುವುದು ಅಪರೂಪ ಇಂತಹ ಘಟನೆ ಆಂದ್ರಪ್ರದೇಶದ ತಿರುಪತಿಯಲ್ಲಿ ನಡೆದಿದೆ.
ತಂದೆಗಿಂತಲೂ ಉನ್ನತ ಪೊಲೀಸ್ ಅಧಿಕಾರಿಯಾಗಿ ನೇಮಕಗೊಂಡು ಕರ್ತವ್ಯದಲ್ಲಿರುವಾಗಲೇ ಮುಖಾಮುಖಿಯಾಗಿ ಮಗಳಿಗೆ ತಂದೆ ಪ್ರೀತಿ ಮತ್ತು ಗೌರವದಿಂದ ಸೆಲ್ಯೂಟ್ ಮಾಡಿದ ಫೋಟೊ ಒಂದು ಸಾಮಾಜಿಕ ಜಾಲತಾಣದಾದ್ಯಂತ ವೈರಲ್ ಆಗಿದೆ.
ಈ ವೇಳೆ ಅಲ್ಲೇ ಸಮೀಪದಲ್ಲಿದ್ದ ಪೊಲೀಸರಿಗೆ ಮತ್ತು ಸಾಮಾನ್ಯ ಜನರಿಗೆ ಅದೊಂದು ಅತ್ಯುತ್ತಮ ಕ್ಷಣವಾಗಿ ಮಾರ್ಪಟ್ಟಿತು ಎಂದು ಆಂದ್ರ ರಾಜ್ಯದ ಮಾಧ್ಯಮಗಳು ವರದಿ ಮಾಡಿವೆ.
ತಂದೆ ವೈ. ಶ್ಯಾಮಸುಂದರ್ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದರೆ, ಪುತ್ರಿ ಯೆಂಡ್ಲೂರು ಜೆಸ್ಸಿ ಪ್ರಸಾಂತಿ ಗುಂಟೂರಿನ ಡಿಎಸ್ಪಿಯಾಗಿ ಇತ್ತೀಚೆಗಷ್ಟೇ ನೇಮಕವಾಗಿದ್ದರು. ಇದುವರೆಗೆ ಕರ್ತವ್ಯದ ಸಮಯದಲ್ಲಿ ಮುಖಾಮುಖಿಯಾಗಿರಲಿಲ್ಲ.
ಆದರೆ ಮೊನ್ನೆ ತಿರುಪತಿಯಲ್ಲಿ ನಡೆಯುತ್ತಿರುವ ಆಂದ್ರಪ್ರದೇಶ ರಾಜ್ಯ ಪೊಲೀಸ್ ಕರ್ತವ್ಯ ಸಭೆಯಲ್ಲಿ ಭಾಗವಹಿಸುವ ವೇಳೆ ಪರಸ್ಪರ ಮುಖಾಮುಖಿಯಾಗಿದ್ದರು. ಈ ವೇಳೆ ತನಗಿಂತ ಉನ್ನತ ಅಧಿಕಾರಿ ಎಂಬ ನಿಟ್ಟಿನಲ್ಲಿ ತಂದೆ ಶ್ಯಾಮ್ ಸುಂದರ್ ಮಗಳಿಗೆ ಸೆಲ್ಯೂಟ್ ಮಾಡಿದ್ದಾರೆ.
“ತಂದೆಯಿಂದ ಸೆಲ್ಯೂಟ್ ಮಾಡಿಸಿಕೊಳ್ಳಬೇಕು ಎಂಬ ಬಯಕೆ ನನಗೆ ಇರಲೇ ಇಲ್ಲ. ಇದೇ ಪ್ರಥಮ ಬಾರಿಗೆ ನಾವು ಕರ್ತವ್ಯದಲ್ಲಿರುವಾಗ ಮುಖಾಮುಖಿಯಾದೆವು. ಅವರು ನನ್ನ ತಂದೆ, ಅವರು ಸೆಲ್ಯೂಟ್ ಮಾಡುವುದು ನನಗೆ ಇಷ್ಟವಿರಲಿಲ್ಲ. ಆದರೆ ಇದು ನಡೆದು ಹೋಯಿತು. ನಾನೂ ತಂದೆಗೆ ಮರಳಿ ಸೆಲ್ಯೂಟ್ ನೀಡಿದೆ ಎಂದು ಡಿಎಸ್ಪಿ ಪ್ರಸಾಂತಿ ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.
“ನನ್ನ ತಂದೆಯೇ ನನಗೆ ಸ್ಫೂರ್ತಿ. ಅವರನ್ನು ನೋಡುತ್ತಲೇ ನಾನು ಪೊಲೀಸ್ ಆಗಬೇಕೆಂಬ ಮಹದಾಸೆಯೊಂದಿಗೆ ಬೆಳೆದು ಬಂದೆ. ಈ ದಿನವು ನಿಜಕ್ಕೂ ನನಗೆ ಅವಿಸ್ಮರಣೀಯ ದಿನ” ಎಂದು ಪ್ರಸಾಂತಿ ಹೇಳಿದ್ದಾರೆ
ಈ ಘಟನೆ ಕುರಿತು ಶ್ಯಾಮ ಸುಂದರ್ ಸಂತಸ ವ್ಯಕ್ತಪಡಿಸಿದ್ದು, ಮಗಳಿಗೆ ಸೆಲ್ಯೂಟ್ ಹೊಡೆದೆರುವುದು ಅವಿಸ್ಮರಣೀಯ ಕ್ಷಣ, ಇಂತಹ ಭಾಗ್ಯ ಸಿಗುವುದು ಅಪರೂಪ ಎಂದಿದ್ದಾರೆ.
ಈ ಅಪರೂಪದ ಭಾವಚಿತ್ರವನ್ನು ಪೊಲೀಸ್ ಅಧಿಕಾರಿಗಳು ಅಂದ್ರ ಪ್ರದೇಶ್ ಪೊಲೀಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು ಇಲ್ಲಿಯವರೆಗೆ 10 ಸಾವಿರ ಲೈಕ್ ಹಾಗೂ 2 ಸಾವಿರ ಶೇರ್ ಆಗಿದೆ.