ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಸ್ಥಾನ ಅಭದ್ರತೆಯಿಂದ ಅಲುಗಾಡುತ್ತಿದೆ ಎಂಬ ವಾತಾವರಣೆ ಸದ್ಯ ತೆರೆ ಬಿದ್ದಿದೆ ಎಂದು ಭಾಸವಾಗುತ್ತಿದೆ. ಬಿ. ಎಸ್ ಯಡಿಯೂರಪ್ಪ ಅವರು ಸ್ವಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ)ದಿಂದ ಶಾಸಕರ ಎದುರಾದ ನಡೆಯಿಂದಾಗಿ ರಾಜ್ಯದ ಮುಖ್ಯಮಂತ್ರಿ ಬದಲಾವಣೆಯ ವಿಚಾರ ದೆಹಲಿ ಮಟ್ಟಕ್ಕೆ ತಲುಪಿ ಬಿಜೆಪಿ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿತು.
ಒಂದು ಕಡೆ ಕೋವಿಡ್ ಸಂಕಷ್ಟ ಮತ್ತೊಂದು ಕಡೆ ತಮ್ಮ ಪಕ್ಷದ ಶಾಸಕರು, ವಿಶೇಷವಾಗಿ ಇತ್ತೀಚಿಗೆ ಅನ್ಯ ಪಕ್ಷದಿಂದ ವಲಸೆ ಬಂದು ಶಾಸಕರ ವರ್ತನೆಗಳು ಅತಿರೇಕಕ್ಕೆ ಹೋದ ಪರಿಣಾಮವಾಗಿ ಬಿಜೆಪಿ ಪಕ್ಷದ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ ಎಂದು ಘೋಷಣೆ ಮಾಡಿದ್ದಾರೆ.
ಇದನ್ನು ಓದಿ: ಸರಕಾರ ವಿಫಲವಾಗಿದೆ-ನಾಯಕತ್ವ ಬದಲಾವಣೆಯಿಂದ ಏನು ಸಾಧ್ಯ: ಸಿದ್ದರಾಮಯ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ. ಇದೆಲ್ಲ ಕಾಲ್ಪನಿಕ ಸಂಗತಿ, ಯಡಿಯೂರಪ್ಪ ವಿರುದ್ಧ ಸಹಿ ಸಂಗ್ರಹ, ದೂರು ನೀಡಿದ್ದಾರೆ ಎಂಬುದೆಲ್ಲ ಸತ್ಯಕ್ಕೆ ದೂರವಾದದ್ದು, ಸದ್ಯಕ್ಕಂತೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ನಡೆದಿಲ್ಲ ಎಂದು ಅರುಣ್ ಸಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕೆಂದು ಹಲವು ಷಡ್ಯಂತ್ರ್ಯಗಳನ್ನು ರೂಪಿಸುತ್ತಿದ್ದರು. ಹೈಕಮಾಂಡ್ ತನಕ ದೂರು ತಲುಪಿಸಲಾಗಿತ್ತು. ಕಳೆದ ಮೂರು ದಿನಗಳ ಹಿಂದ ಅತ್ಯಂತ ದಟ್ಟವಾಗಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಇದರ ಜೊತೆಗೆ ಕ್ಯಾಬಿನೆಟ್ ಸಚಿವರ ಸ್ಥಾನಮಾನ ಬದಲಾವಣೆ ಬಗ್ಗೆಯೂ ಚರ್ಚೆಯಲ್ಲಿದ್ದವು.
ಇದನ್ನು ಓದಿ: ಸಿಎಂ ಬದಲಾವಣೆ ಚರ್ಚೆ : ಪಕ್ಷಕ್ಕೂ ಕೆಲಸಕ್ಕೂ ಹಿನ್ನಡೆ – ಜಗದೀಶ್ ಶೆಟ್ಟರ್
ಇದೇ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ, ಕೋವಿಡ್ ಸಾಂಕ್ರಾಮಿಕದಿಂದ ಜನ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ, ಪ್ರತಿಯೊಬ್ಬ ಬಿಜೆಪಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಯಾರೂ ಕೂಡ ಸಹಿ ಸಂಗ್ರಹಿಸುವುದಾಗಲಿ, ರಾಜಕೀಯ ಹೇಳಿಕೆಗಳನ್ನು ನೀಡುವುದಾಗಲಿ ಮಾಡದೆ, ಸಂಕಷ್ಟದಲ್ಲಿರುವ ಜನರಿಗೆ ನೆರವಾಗಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿನಂತಿಸಿಕೊಂಡಿದ್ದರು.
ಇದರ ಬೆನ್ನಲ್ಲೆ ಯಡಿಯೂರಪ್ಪ ಅವರು ಕೂಡಾ ಬಿಜೆಪಿ ಹೈಕಮಾಂಡ್ ಬಯಸಿದರೆ ತಕ್ಷಣವೇ ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿ ಪಕ್ಷದೊಳಗಿನ ಆಂತರಿಕ ಜಗಳಕ್ಕೆ ಪುಷ್ಠಿ ನೀಡಿದ್ದರು. ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಅರುಣ್ ಸಿಂಗ್ ಅವರಿಂದ ನಾಯಕತ್ವ ಬದಲಾವಣೆಯ ಬಗ್ಗೆ ಸಂದೇಶ ರವಾನೆಯಾದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಈ ರೀತಿ ಹೇಳಿಕೆ ನೀಡಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿತ್ತು. ಇದರ ಬೆನ್ನಲ್ಲೇ ದೆಹಲಿ ಮಟ್ಟದ ಹೈಕಮಾಂಡ್ ಮಧ್ಯಪ್ರವೇಶಿಸಬೇಕಾಗಿ ಬಂದಿದೆ.
ಇದನ್ನೂ ಓದಿ: ಹೈಕಮಾಂಡ್ ಸೂಚಿಸಿದ ತಕ್ಷಣ ರಾಜೀನಾಮೆ ನೀಡುತ್ತೇನೆ – ಯಡಿಯೂರಪ್ಪ.
ಯಡಿಯೂರಪ್ಪ ಅವರ ರಾಜೀನಾಮೆ ಹೇಳಿಕೆ ಬಗ್ಗೆ ಅರುಣ್ ಸಿಂಗ್ ಅವರು ʻʻಯಡಿಯೂರಪ್ಪ ಅವರ ಮಾತಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಪಕ್ಷದ ವರಿಷ್ಠದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿ ಕಾರ್ಯ ನಿರ್ವಹಿಸುತ್ತೇವೆ ಎಂಬ ಅರ್ಥದನ್ನು ಅವರು ಹೇಳಿದ್ದರು. ಇದು ಪಕ್ಷದ ಬಗ್ಗೆ ಅವರಿಗಿರುವ ಬದ್ಧತೆಯನ್ನು ತೋರಿಸುತ್ತದೆʼʼ ಎಂದು ಪ್ರತಿಕ್ರಿಯಿಸಿದರು.
ಎರಡು ದಿನಗಳ ಹಿಂದಷ್ಟೇ ರಾಜ್ಯ ಬಿಜೆಪಿ ಬಿಕ್ಕಟ್ಟು ಪರಿಹರಿಸಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರಿಂದ ಪಕ್ಷದ ಹೈಕಮಾಂಡ್ ಪ್ರತ್ಯೇಕವಾದ ವರದಿ ಕೇಳಿತ್ತು. ಭೂಪೇಂದ್ರ ಯಾದವ್ ಹಿರಿಯ ನಾಯಕರಿಂದ, ಶಾಸಕರಿಂದ ಮಾಹಿತಿ ಸಂಗ್ರಹಿಸಿದ್ದರು. ಭೂಪೇಂದ್ರ ಯಾದವ್ ಮತ್ತು ಅರುಣ್ ಸಿಂಗ್ ಅವರು ನೀಡುವ ವರದಿ ಆಧರಿಸಿ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ಮುಂದಿನ ವಾರದಲ್ಲಿ ಬಿಜೆಪಿ ಹೈಕಮಾಂಡ್‌ನ ಕರ್ನಾಟಕ ರಾಜ್ಯ ಉಸ್ತುವಾರಿಗಳು ರಾಜ್ಯಕ್ಕೆ ಭೇಟಿ ನೀಡಲಿದ್ದು, ಮುಂದಿನ ಬೆಳವಣಿಗೆ ಏನು ಎಂಬುದನ್ನು ಕಾದುನೋಡಬೇಕಾಗಿದೆ. ಕಳೆದ ಕೆಲವು ದಿನಗಳಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಿಜೆಪಿಯ ನಾಟಕಕ್ಕೆ ತೆರೆಬಿದ್ದಂತಾಗಿದೆ.