ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡ ಕೊಟ್ಟಿದ್ದು ಮೋದಿ – ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ

ಮಂಡ್ಯ : ಮುಸ್ಲಿಂ ಮಹಿಳೆಯರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಂದು ಉಗ್ರ ಭಾಷಣಕಾರ ಕಲ್ಲಡ್ಕ ಪ್ರಭಾಕರ್ ಭಟ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ರವಿವಾರ ಶ್ರೀರಂಗಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ಹನುಮ ಜಯಂತಿ ಆಂಗವಾಗಿ ಆಯೋಜಿಸಿದ್ದ ಹನುಮಮಾಲೆ ಸಂಕೀರ್ತನಾ ಯಾತ್ರೆ ಸಮಾರಂಭದಲ್ಲಿ ಮಾತನಾಡಿದ ಅವರು,ಮೋದಿ ಸರ್ಕಾರ ಬಂದ ಮೇಲೆ ತಲಾಖ್ ಬಂತು. ಅವರಿಗೆ ದಿನಕ್ಕೆ ಒಬ್ಬ ಗಂಡ. ಅವರಿಗೆ ಪರ್ಮೆನೆಂಟ್ ಗಂಡ ಇರಲಿಲ್ಲ. ಪರ್ಮೆನೆಂಟ್ ಗಂಡನನ್ನ ಕೊಟ್ಟಿದ್ದು ಮೋದಿ ಸರ್ಕಾರ ಎಂದು ವಿವಾದಾತ್ಮಕ ಹೇಳಿಕೆ ಮೂಲಕ ಕೋಮುಗಲಭೆಗೆ ಪ್ರಚೋದಿಸಿದ್ದಾರೆ.

ಮುಸ್ಕಾನ್ ಅಂತ ಒಬ್ಬ ಹೆಣ್ಣು ಮಗಳು ಈ ಮಂಡ್ಯ ಜಿಲ್ಲೆಯಲ್ಲಿ ಇದ್ದಾಳೆ. ಅವಳು ಅಲ್ಲಾ ಹು ಅಕ್ಬರ್ ಅಂತ ಕೂಗಿದ್ದಳು. ಅಲ್ಲಾ ಅಂತ ನಿನ್ನ ಮನೆಯಲ್ಲಿ ಕೂಗು, ಮಸೀದಿಯಲ್ಲಿ ಕೂಗು. ಭಾರತದಲ್ಲಿ ರಾಮ್ ರಾಮ್ ಅಂತ ಮಾತ್ರ ಹೇಳಬೇಕು.‌ ಅಲ್ ಖೈದಾ ಸಂಘಟನೆಯ ಜತೆ ನಂಟು ಇರುವ ಹೆಣ್ಣು ಮಗಳು ಈ ದೇಶದಲ್ಲಿ ಇದ್ದಾಳೆ. ತಾಕತ್ತಿದ್ದರೆ ಬುರ್ಖಾ ಧರಿಸಿ ಶಾಲೆಯ ಒಳಗೆ ಹೋಗಲಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ರವರ ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಹಿತಿಗಳು, ಬರಹಗಾರರು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಲು ರಾಜ್ಯ ಸರಕಾರ ಯಾಕೆ ಹಿಂಜರಿಯುತ್ತಿದೆ ಎಂದು ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ‌.

ಮುಸ್ಲಿಂ ಮಹಿಳೆಯರ ಕುರಿತು ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆಯು ಕಾನೂನು ಕ್ರಮಕ್ಕೆ ಅರ್ಹ ಆಗಿಲ್ಲವೆ?ಮುಸಲ್ಮಾನ ಮುಖಂಡನೊಬ್ಬ ಈ ರೀತಿ ಭಿನ್ನ ಧರ್ಮದ ಕುರಿತು ಅಸಭ್ಯವಾಗಿ ಮಾತಾಡಿದ್ದರೆ ಏನೆಲ್ಲ ಸಂಭವಿಸುತ್ತಿತ್ತು ? ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರನ್ನು “ಖುಷಿಪಡಿಸುವ” ಹೇಳಿಕೆಗಳನ್ನು ನೀಡಿ ಬಿಜೆಪಿಗರ ಬಾಯಲ್ಲಿ ಮುಸ್ಲಿಮರನ್ನು ಹೊಲಸು ಮಾತುಗಳ ನಿಂದನೆಗೆ ಗುರಿಪಡಿಸುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯರಿಗೆ ಪ್ರಾಮಾಣಿಕತೆ ಇದ್ದರೆ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಕಠಿಣ ಸೆಕ್ಷನ್ ಅಡಿ ಮೊಕದ್ದಮೆ ಹೂಡಿ ಜೈಲಿಗೆ ಕಳುಹಿಸಲಿ ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಹಿರಿಯ ಚಿಂತಕರಾದ ಬಿ. ಶ್ರೀಪಾದ್ ಭಟ್ ಪ್ರತಿಕ್ರಿಯಿಸಿದ್ದು, ಈ ಮತಾಂಧನ ವಿರುದ್ಧ ಸರ್ಕಾರ ಈ ಕೂಡಲೇ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಒಂದು ಕ್ಷಣವೂ ತಡ ಮಾಡಬಾರದು. ಪ್ರತಿ ಜಿಲ್ಲೆಯಲ್ಲಿ ಈತನ ವಿರುದ್ಧ ಕೇಸು ದಾಖಲಿಸಬೇಕು. ಈ ಕೀಳು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವವರೆಗೂ ನಿರಂತರ ಪ್ರತಿಭಟನೆ ನಡೆಸಬೇಕು ಎಂದಿದ್ದಾರೆ.

ಯುವ ಹೋರಾಟಗಾರ್ತಿ ನಜ್ಮಾ ನಝೀರ್ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದು,ಮುಸ್ಲಿಂ ಹೆಣ್ಣು ಮಕ್ಕಳ ವಿರುದ್ಧ ಇಷ್ಟು ತುಚ್ಛವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ಟನ ವಿರುದ್ಧ ಸೋಮೋಟೊ ಇನ್ನು ಯಾಕೆ ದಾಖಲಾಗಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಪ್ರಶ್ನಿಸಿದ್ದಾರೆ.

ಹೆಣ್ಣನ್ನು ದೇವತೆ ಅಂತ ಪೂಜಿಸೋ ನೆಲದಲ್ಲಿ ನಿಂತು ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿರುವ ಕಲ್ಲಡ್ಕ ಪ್ರಭಾಕರ ಭಟ್ಟನನ್ನು ಈ ಕೂಡಲೇ ರಾಜ್ಯ ಸರ್ಕಾರ ಬಂಧಿಸಬೇಕು.
ಧರ್ಮ ದಂಗಲ್ ಮಾಡ್ಸಿದ್ದು ಮುಗೀತು ಈಗ ಹೆಣ್ಮಕ್ಕಳ ತೇಜೋವಧೆ ಮಾಡಿ ರಾಜಕೀಯ ಮಾಡಲು ಹೊರಟಿರುವ ಕಲ್ಲಡ್ಕ ಪ್ರಭಾಕರ ಭಟ್ಟನದ್ದು ‘ಭಯೋತ್ಪಾದಕ’ ಮನಸ್ಥಿತಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ, ಸಾರ್ವಜನಿಕ ಶಾಂತಿಭಂಗ ವನ್ನುಂಟುಮಾಡುವ ಹೇಳಿಕೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್ಟನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಜೀರ್ ಉಳ್ಳಾಲ್ ಆಗ್ರಹಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕೋಮು ಪ್ರಚೋದನೆ ನೀಡಿದ ಕಲ್ಲಡ್ಕ್ ಪ್ರಭಾಕರ್ ಭಟ್ ನ ಮೇಲೆ ಸರ್ಕಾರೆ ಕೂಡಲೆ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕಿದೆ.

Donate Janashakthi Media

Leave a Reply

Your email address will not be published. Required fields are marked *