ಕ್ಷಯ-ಮುಕ್ತ ಭಾರತ 2025 ರೊಳಗೆ ಸಾಧ್ಯವೆ?

– ಡಾ| ಕೆ. ಸುಶೀಲ

ಕ್ಷಯರೋಗ ವೈದ್ಯಕೀಯ ಅಂಶಗಳನ್ನು ಹೊಂದಿದ ಒಂದು ಸಾಮಾಜಿಕ ಪಿಡುಗು. ಒಂದು ದೇಶದಲ್ಲಿರುವ ಈ ರೋಗದ ಪ್ರಮಾಣ ಆ ದೇಶದಲ್ಲಿನ ಪ್ರಜೆಗಳಿಗೆ ಸಿಗುವ ಮೂಲಭೂತ ಸೌಲಭ್ಯಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ಯಾವ ಸಮಾಜದಲ್ಲಿ ವಿದ್ಯಾಭ್ಯಾಸದ, ವೈದ್ಯಕೀಯ ಸೌಲಭ್ಯಗಳ, ಪೌಷ್ಠಿಕ ಆಹಾರದ, ಶುದ್ಧನೀರಿನ, ಗಾಳಿ ಬೆಳಕಿನಿಂದ ಕೂಡಿದ ವಸತಿಗಳ, ಶುಚಿತ್ವದ ಹಾಗೂ ಈ ಕಾಯಿಲೆಯ ಬಗೆಗಿನ ಸರಿಯಾದ ಮಾಹಿತಿಯ ಕೊರತೆ ಇರುವುದೂ, ಎಲ್ಲಿ ಬಡತನ, ನಿರುದ್ಯೋಗ ತಾಂಡವವಾಡುವುದೋ ಅಲ್ಲಿ ಈ ರೋಗ ಅಭಿವೃದ್ಧಿಗೊಂಡು ತನ್ನ ಹಿರಿತನ ಮೆರೆಯುವುದು.2018ರಲ್ಲಿ ಪ್ರಧಾನಿ ಮೋದಿ ದೇಶಕ್ಕೆ ಸಮರ್ಪಿಸಿದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಯೋಜನೆ’ಯ ಗುರಿ 2025 ರೊಳಗೆ ದೇಶದಲ್ಲಿ ಕ್ಷಯರೋಗದ ನಿರ್ಮೂಲನೆ ಆಗಿತ್ತು.ಆದರೆ ದೇಶದಲ್ಲಿ 2020 ರಲ್ಲಿ ಇದ್ದ ಹೊಸ ಕ್ಷಯರೋಗಿಗಳ ಸಂಖ್ಯೆ 24.22 ಲಕ್ಷ. ಅದೇ 2013 ರಲ್ಲಿ ಈ ದೇಶದಲ್ಲಿದ್ದ ಒಟ್ಟು ಹೊಸ ಕ್ಷಯರೋಗಿಗಳ ಸಂಖ್ಯೆ 14 ಲಕ್ಷ. ಈ ವರ್ಷದ ಕ್ಷಯ ದಿನಾಚರಣೆಯು ಘೋಷಣಾ ವಾಕ್ಯ Yes, we can!“ಹೌದು, ನಾವು ಸಾಧಿಸಬಹುದು” ಎನ್ನುವ ಘೋಷಣೆಯನ್ನು ಕಾರ್ಯಗತ ಗೊಳಿಸಬಹುದು. ಆದರೆ 2025ಕ್ಕೆ ಅಲ್ಲ, ಬಹುಶಃ 2055ಕ್ಕೆ. ಅದನ್ನು ಸಾಧಿಸಲು ಕ್ಷಯನಿರ್ಮೂಲನಕ್ಕೆ ಬೇಕಾದ ಹಣವನ್ನು ಪ್ರತೀ ವರ್ಷ ಬಜೆಟ್‌ನಲ್ಲಿ ಕಾದಿರಿಸಿ, ಸೂಕ್ತ ಸಮಯದಲ್ಲಿ ಯೋಜನೆಯ ಅನುಷ್ಟಾನಕ್ಕೆ ಸಿಗುವಂತೆ ಬಿಡುಗಡೆ ಮಾಡಿ ಯೋಜನೆ ಫಲಪ್ರದವಾಗುವಂತೆ ನೋಡಿಕೊಳ್ಳಬೇಕು. ಅದರಲ್ಲೂ ಹೆಚ್ಚುತ್ತಿರುವ ಔಷಧಗಳಿಗೆ ಪ್ರತಿರೋಧ ಬೆಳೆಸಿರುವ ಕ್ಷಯದ ಶೀಘ್ರ ಪತ್ತೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಬೇಕು.

**********

ಬಹಳ ಪ್ರಾಚೀನ ಕಾಲದಿಂದಲೂ ಮಾನವರನ್ನು ಕಾಡಿಸುತ್ತಿರುವ ಕಾಯಿಲೆ ಕ್ಷಯ. ಇದಕ್ಕೆ ಕಾರಣವಾದ ರೋಗಾಣು “ಟ್ಯುಬರ್‌ಕಲ್ ಬ್ಯಾಸಿಲೈ”ಯನ್ನು 1882 ರಲ್ಲಿ `ರಾಬರ್ಟ್ ಕೋರ್ಚ್’ ಪತ್ತೆ ಹಚ್ಚಿದರು. 1944-1945 ರ ಅವಧಿಯಲ್ಲಿ ಈ ಕಾಯಿಲೆಯ ಚಿಕಿತ್ಸೆಗಾಗಿ `ಸ್ಪೈಪ್ಟೊಮೈಸಿನ್’ ಚುಚ್ಚುಮದ್ದು `ಐಎನ್‌ಎಚ್’ ಮಾತ್ರೆಗಳು ಕಂಡುಹಿಡಿಯಲ್ಪಟ್ಟವು. ಮುಂದಿನ ದಿನಗಳಲ್ಲಿ ಈ ಕಾಯಿಲೆಯ ಚಿಕಿತ್ಸೆಗೆ ಉಪಯುಕ್ತವಾದ ಹಲವು ಔಷಧಗಳ ಅವಿಷ್ಕಾರವಾಯಿತು. ಈ ಔಷಧಗಳಿಂದಾಗಿ ಪ್ರಪಂಚದಲ್ಲಿ ಕೋಟ್ಯಾಂತರ ಜನರು ಈ ಕಾಯಿಲೆಯಿಂದ ಪಾರಾಗಲು ಸಾಧ್ಯವಾಯಿತು. ಮುಂದೆ ಈ ರೋಗ ಬಾರದಂತೆ ತಡೆಗಟ್ಟಲು `ಬಿ.ಸಿ.ಜಿ.’ ಲಸಿಕೆಯ ಉಪಯೋಗ ಪ್ರಾರಂಭವಾಯಿತು.

ಆದರೆ ಇಂದಿಗೂ ಈ ಕಾಯಿಲೆಯಿಂದ ಭಾರತವೂ ಸೇರಿ ಪ್ರಪಂಚದ ಯಾವುದೇ ದೇಶ ಮುಕ್ತವಾಗಿಲ್ಲ. ಹಾಗೂ ಮುಂದುವರಿಯುತ್ತಿರುವ ದೇಶಗಳಲ್ಲಿ ಜನರನ್ನು ನರಳಿಸುವ, ಸಾವು ನೋವನ್ನು ತರುವ ಕಾಯಿಲೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಕುಳಿತಿದೆ ಕ್ಷಯ.

2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಪಂಚದಲ್ಲಿ ಕ್ಷಯ ರೋಗವನ್ನು ಕೊನೆಗಾಣಿಸುವ ಸಲುವಾಗಿ ವಿಶ್ವ ಆರೋಗ್ಯ ಎಸ್ಸೆಂಬ್ಲಿಯಲ್ಲಿ ನೀತಿಯೊಂದನ್ನು ರೂಪಿಸಿತು.ಇದರ ಗುರಿ ಹೀಗಿತ್ತು:

(1)2015 ರಿಂದ 2030ನೇ ಇಸವಿಯ ಒಳಗೆ ಪ್ರಪಂಚದ ಜನರಲ್ಲ, ಹೊಸದಾಗಿ ಬರುವ ಕ್ಷಯರೋಗದ ಪ್ರಮಾಣವನ್ನು ಪ್ರತಿಶತ 90 ರಷ್ಟು ಹಾಗೂ ಇದರಿಂದಾಗಿ ಬರುವ ಸಾವಿನ ಪ್ರಮಾಣವನ್ನು ಪ್ರತಿಶತ 95 ರಷ್ಟು ಕಡಿತಗೊಳಿಸುವುದು. ಅಂದರೆ 2030ರೊಳಗೆ ಈ ಕಾಯಿಲೆಯ ಹೊಸರೋಗಿಗಳ ಪ್ರಮಾಣವನ್ನು ಪ್ರತೀ ಲಕ್ಷ ಒಂದಕ್ಕೆ 10 ಕ್ಕಿಂತಲೂ ಕಡಿಮೆ ಮಟ್ಟಕ್ಕೆ ಇಳಿಸುವುದು ಇದರ ಉದ್ದೇಶವಾಗಿತ್ತು.

(2) ಹಾಗೂ ರೋಗಿಗಳ ಕುಟುಂಬ ಆರ್ಥಿಕ ಆಘಾತಕ್ಕೆ ಒಳಗಾಗದಂತೆ ರಕ್ಷಿಸುವುದು. ಆದರೆ ಪ್ರತೀ ವರ್ಷ ಹೊಸರೋಗಿಗಳ ಪ್ರಮಾಣ ಪ್ರತಿಶತ 10 ರಿಂದ 19 ರಷ್ಟು ಕಡಿಮೆಗೊಳಿಸಲು ಸಾಧ್ಯವಾದರೆ ಈ ಗುರಿಯನ್ನು 2050 ರಲ್ಲಿ ತಲುಪಲು ಸಾಧ್ಯ ಎನ್ನುವುದು ಕಂಡುಬಂದಿತು.

ಭಾರತದಲ್ಲಿ ಕ್ಷಯರೋಗದ ಸ್ಥಿತಿಗತಿ

ಭಾರತ ಸರ್ಕಾರ ದೇಶದಲ್ಲಿ ಕ್ಷಯರೋಗವನ್ನು ಹತೋಟಿಗೆ ತರಲು 1962 ರಲ್ಲಿ `ರಾಷ್ಟ್ರೀಯ ಕ್ಷಯರೋಗ ಹತೋಟಿ ಯೋಜನೆ’ಯನ್ನು ಪ್ರಾರಂಭಿಸಿತ್ತು. ಆದರೆ ಫಲಿತಾಂಶ ಹೆಚ್ಚು ಆಶಾದಾಯಕವಾಗಿರಲಿಲ್ಲ. ಹೀಗಾಗಿ 1993 ರಲ್ಲಿ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ಹತೋಟಿ ಯೋಜನೆ(ಆರ್.ಎಸ್.ಟಿ.ಸಿ.ಪಿ)ಯನ್ನು ದೇಶದ ಕೆಲವೇ ಪ್ರದೇಶಗಳಲ್ಲಿ ಪ್ರಾರಂಭಿಸಿತ್ತು. ಇದರ ಫಲಿತಾಂಶದಿಂದ ಉತ್ತೇಜನಗೊಂಡ ಸರ್ಕಾರ 1997 ರಲ್ಲಿ ಈ ಯೋಜನೆಯ ಮೊದಲ ಹಂತವನ್ನು ಪ್ರಾರಂಭಿಸಿ ಮುಂದೆ 2006 ನೇ ಇಸವಿಯೊಳಗೆ ಸಂಪೂರ್ಣ ದೇಶದಲ್ಲಿ ಈ ಯೋಜನೆಯನ್ನು ಅನುಷ್ಟಾನಗೊಳಿಸಿತು. ಪ್ರತೀ ಲಕ್ಷ ಜನರಲ್ಲಿ ವರ್ಷ ಒಂದರಲ್ಲಿ 289 ಹೊಸರೋಗಿಗಳ ಪ್ರಮಾಣವಿದ್ದರೆ 2015 ರಲ್ಲಿ ಈ ಪ್ರಮಾಣ ಪ್ರತಿ ಲಕ್ಷಕ್ಕೆ ವರ್ಷಒಂದರಲ್ಲಿ 217 ಕ್ಕೆ ಇಳಿದಿತ್ತು. ಸಾವಿನ ಪ್ರಮಾಣ 2000 ದಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷ ಜನಸಂಖ್ಯೆಗೆ 56 ರಷ್ಟಿದ್ದದ್ದು 2015 ರಲ್ಲಿ 36 ಕ್ಕೆ ಇಳಿದಿತ್ತು.

2018ರಲ್ಲಿ `ಪರಿಷ್ಕರಿಸಿದ ರಾಷ್ಟ್ರೀಯ ಕ್ಷಯರೋಗ ಹತೋಟಿ ಯೋಜನೆ’ ಗೆ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಯೋಜನೆ’ಯಾಗಿ ಮರು ನಾಮಕರಣ ಮಾಡಿ ಪ್ರಧಾನಿಗಳು ದೇಶಕ್ಕೆ ಸಮರ್ಪಿಸಿದರು. ಇದರ ಗುರಿ ಹೀಗಿತ್ತು :

(1) 2023ರ ಒಳಗೆ ಹೊಸರೋಗಿಗಳ ಸಂಖ್ಯಾ ಪ್ರಮಾಣವನ್ನು ಒಂದು ವರ್ಷಕ್ಕೆ ಒಂದು ಲಕ್ಷ ಜನರಿಗೆ 77 ಕ್ಕೂ ಹಾಗೂ  ಸಾವಿನ ಪ್ರಮಾಣವನ್ನು 6 ಕ್ಕೆ ಇಳಿಸುವುದು.
(2) ಹಾಗೂ 2025 ರೊಳಗೆ ದೇಶದಲ್ಲಿ ಕ್ಷಯರೋಗದ ನಿರ್ಮೂಲನೆ ಮಾಡುವುದು. ಅಂದರೆ ಪ್ರತೀ 10 ಲಕ್ಷ ಜನರಲ್ಲಿ ಒಂದು ವರ್ಷಕ್ಕೆ ಹೊಸ ರೋಗಿಗಳ ಸಂಖ್ಯೆ ಒಂದಕ್ಕಿಂತ (1) ಕಡಿಮೆಗೊಳಿಸುವುದು.

ಆದರೆ 2020 ರಲ್ಲಿ ದೇಶದಲ್ಲಿ ಇದ್ದ ಹೊಸರೋಗಿಗಳ ಸಂಖ್ಯೆ 24.22 ಲಕ್ಷ. ಅದೇ 2013 ರಲ್ಲಿ ಈ ದೇಶದಲ್ಲಿದ್ದ ಒಟ್ಟು ಹೊಸರೋಗಿಗಳ ಸಂಖ್ಯೆ 14 ಲಕ್ಷ. ಈ ಹೆಚ್ಚಳಕ್ಕೆ ಕೋವಿಡ್-19 ರ ಸಾಂಕ್ರಾಮಿಕದ ಪರಿಣಾಮ ಸ್ವಲ್ಪ ಮಟ್ಟಿಗೆ ಕಾರಣವಿರಬಹುದು ಆದರೆ ಸಂಪೂರ್ಣವಾಗಿ ಅಲ್ಲ. ಈ ಎಲ್ಲಾ ಯೋಜನೆಗಳಿದ್ದರೂ ಕ್ಷಯರೋಗ ನಮ್ಮ ಮೇಲಿನ ತನ್ನ ಹಿಡಿತವನ್ನು ಸಡಿಲಗೊಳಿಸುತ್ತಿಲ್ಲವೇಕೆ? ಇದನ್ನು ಅರಿಯಲು ಈ ಕಾಯಿಲೆ ಹರಡುವ ಬಗ್ಗೆ, ಇದನ್ನು ತಡೆಗಟ್ಟಲು ಬೇಕಾದ ಚಿಕಿತ್ಸೆ ಮತ್ತಿತರ ವಿಷಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಯುವುದು ಸೂಕ್ತ.

ಇದನ್ನೂ ಓದಿ:ಜಿ20 ಸಭೆ ನಂತರ ಮಾಧ್ಯಮ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಮಾಡಿದ್ದೇನು?

ಕ್ಷಯ ರೋಗ ಹೇಗೆ ಹರಡುತ್ತದೆ?

ಕ್ಷಯ ರೋಗಾಣು ದೇಹದಲ್ಲಿ ದೀರ್ಘಕಾಲ ಬದುಕುವ ಸಾಮರ್ಥ್ಯ ಹೊಂದಿರುವುದು ಹಾಗೂ ಇದು ದೀರ್ಘ ಕಾಲಿಕ ಕಾಯಿಲೆ ದೇಹದಲ್ಲಿ ರಕ್ತಚಲನೆ ಇರುವ ಎಲ್ಲಾ ಭಾಗಗಳಿಗೂ ಈ ಕಾಯಿಲೆ ಬರಬಹುದು. ಆದರೆ ಶ್ವಾಸಕೋಶಗಳು ಈ ಕಾಯಿಲೆಗೆ ಗುರಿಯಾಗುವ ಪ್ರಮಾಣ ಅತ್ಯಧಿಕ. 2021 ರಲ್ಲಿ ಪತ್ತೆಯಾದ ಹೊಸ ರೋಗಗಳ ಶ್ವಾಸಕೋಶದ ಕ್ಷಯದಿಂದ ನರಳುವವರ ಪ್ರಮಾಣ 72%. ಈ ರೀತಿಯ ಕ್ಷಯದಿಂದ ನರಳುವ ರೋಗಿಗಳಲ್ಲಿ ಕಫದಲ್ಲಿ ಈ ರೋಗಾಣುಗಳು ಕಾಣಿಸಿಕೊಳ್ಳುತ್ತವೆ. ರೋಗಿ ಕೆಮ್ಮುವಾಗ, ಮಾತನಾಡುವಾಗ, ಉಸಿರಾಡುವಾಗ ಹಾಗೂ ಉಗುಳಿದ ಕಫದೊಂದಿಗೆ ವಾತಾವರಣ ಪ್ರವೇಶಿಸುತ್ತದೆ. ಈ ರೋಗಿಗಳ ಸಂಪರ್ಕಕ್ಕೆ ಬರುವ ವ್ಯಕ್ತಿಗಳಲ್ಲಿ ಈ ರೋಗದ ಸೋಂಕು ತಗಲುತ್ತದೆ.

ಪ್ರಸ್ತುತ ಭಾರತ ದೇಶದ ಪ್ರಜೆಗಳಲ್ಲಿ ಪ್ರತಿಶತ 40 ಜನರಿಗೆ ರೋಗದ ಸೋಂಕು ತಗಲಿದೆ. ಆದರೆ ಇಲ್ಲಿ ಪ್ರಮುಖ ವಿಷಯವೆಂದರೆ ಸೋಂಕು ತಗಲಿದವರು ಕ್ಷಯರೋಗದ ಸಕ್ರಿಯ ರೋಗಿಗಳಲ್ಲ-ಇವರಲ್ಲಿ ಪ್ರತಿಶತ 10 ಜನ ತಮ್ಮ ಜೀವಿತ ಕಾಲಾವಧಿಯಲ್ಲಿ ಸಕ್ರಿಯ ಕ್ಷಯರೋಗಿಗಳಾಗಬಹುದು. ಹಾಗೂ ಈ ಸೋಂಕಿತರ ದೇಹದಲ್ಲಿ ಯಾವುದೇ ಕಾರಣದಿಂದ ರೋಗನಿರೋಧಕ ಸಾಮಥ್ಯ ಕುಂದಿದ್ದರೆ ಆಗ ಅವರು ಸಕ್ರಿಯ ರೋಗಕ್ಕೊಳಗಾಗಬಹುದು. ಈ ರೋಗ ಅನುವಂಶೀಯವಲ್ಲ. ಆದರೆ ಈ ರೋಗದ ರೋಗನಿರೋಧಕ ಸಾಮರ್ಥ್ಯದಲ್ಲಿನ ಹೆಚ್ಚು ಕಡಿಮೆ ಅನುವಂಶೀಯವಾಗಿ ಬಂದಿರಬಹುದು. ಇನ್ನು ಹಲವು ಸಹ ಕಾಯಿಲೆಗಳಾದ `ಪೌಷ್ಠಿಕ ಆಹಾರದ ಕೊರತೆ’, `ಎಚ್.ಐ.ವಿ. ಸೋಂಕು’, ಸಿಹಿಮೂತ್ರ ಕಾಯಿಲೆಗಳಿಂದ ಬಳಲುವವರಲ್ಲಿ ಹಾಗೂ ಶ್ವಾಸಕೋಶಗಳ ಧೀರ್ಘಕಾಯಿಲೆ, ಹೆಚ್ಚಿದ ಮಾನಸಿಕ ಒತ್ತಡ ಹೊಂದಿದವರಲ್ಲಿ ಧೂಮಪಾನಿಗಳಲ್ಲಿ, ಕುಡುಕರಲ್ಲಿ ದೇಹದ ರೋಗ ನಿರೋಧಕ ಶಕ್ತಿ ಕುಂದುವುದರಿಂದ ಸೋಂಕಿತರು ಸಕ್ರಿಯ ಕ್ಷಯರೋಗಕ್ಕೆ ತುತ್ತಾಗವ ಸಂಭವ ಹೆಚ್ಚುವುದು. ಸೋಂಕಿತರು, ಸಿಹಿಮೂತ್ರದ ರೋಗದಿಂದ ನರಳುತ್ತಿದ್ದರೆ ತಮ್ಮ ಜೀವಿತ ಕಾಲದಲ್ಲಿ ಸಕ್ರಿಯ ಕ್ಷಯಕ್ಕೆ ರೋಗಕ್ಕೆ ಬಲಿಯಾಗುವ ಸಂಭವ ಪ್ರತಿಶತ 30 ರಷ್ಟು ಹೆಚ್ಚು. ಸೋಂಕಿತರು ಎಚ್.ಐ.ವಿ.ಯಿಂದ ಬಳಲುತ್ತಿದ್ದರೆ ಇವರು ಸಕ್ರಿಯ ಕ್ಷಯ ರೋಗಿಗಳಾಗುವ ಸಂಭವ ಪ್ರತಿವರ್ಷಕ್ಕೆ ಪ್ರತಿಶತ 10 ರಷ್ಟು ಹೆಚ್ಚುವುದು. ಹಾಗೂ ಈ ಸೋಂಕಿತರು ಪೌಷ್ಠಿಕ ಆಹಾರದ ಕೊರತೆಯಿಂದ ಬಳಲುತ್ತಿದ್ದರೆ ಅವರು ಸಕ್ರಿಯ ರೋಗಗ್ರಸ್ಥರಾಗುವುದು ಎಚ್.ಐ.ವಿ. ಪೀಡಿತರಿಗಿಂತ ಎರಡು ಪಟ್ಟು ಹೆಚ್ಚು. ಒಂದು ವರದಿಯ ಪ್ರಕಾರ ವರ್ಷ ಒಂದರಲ್ಲಿ ಬರುವ ಹೊಸಕ್ಷಯ ರೋಗಿಗಳಲ್ಲಿ ಪ್ರತಿಶತ 40 ರೋಗಿಗಳ ರೋಗಕ್ಕೆ ಪೌಷ್ಠಿಕ ಆಹಾರದ ಕೊರತೆ ಕಾರಣ. ಕ್ಷಯ ರೋಗವನ್ನು ಸಮಾಜದಲ್ಲಿ ಹತೋಟಿಗೆ ತರಲು ತೆಗೆದುಕೊಳ್ಳಬೇಕಾದ ಕ್ರಮಗಳು.

ವೈದ್ಯಕ್ಷೀಯ ಕ್ರಮಗಳು

1) ಲಸಿಕೆಯ ಉಪಯೋಗ-ಶಿಶು ಜನನದ ನಂತರ ಅತಿಶೀಘ್ರದಲ್ಲಿ `ಬಿ.ಸಿ.ಜಿ.’ ಲಸಿಕೆ ನೀಡುವುದರಿಂದ ಪ್ರತಿಶತ 80 ರ ತನಕ ಕ್ಷಯರೋಗವನ್ನು ತಡೆಗಟ್ಟಬಹುದು. ಮಾತ್ರವಲ್ಲದೆ ಈ ಲಸಿಕೆ ಗಂಭೀರ ಸ್ವರೂಪದ ಕ್ಷಯಗಳಿಂದ ಮೆನಿಂಜೆಯಲ್ (ಮಸ್ತಿಷ್ಕದ ಪೊರೆ) ಹಾಗೂ `ಮಿಲಿಯರಿ’ (ಇಡೀ ಶರೀರದಲ್ಲಿ ವ್ಯಾಪಿಸುವ) ಕ್ಷಯಗಳನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುವುದು ಕಂಡು ಬಂದಿದೆ.

2) ಸಕ್ರಿಯ ರೋಗದ ಅದರಲ್ಲೂ ಶ್ವಾಸಕೋಶದ ಕ್ಷಯ ವಿರುದ್ಧ ರೋಗಿಗಳನ್ನು ಶೀಘ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆ ಹಚ್ಚುವುದು.

3) ಈ ರೋಗಗಳಿಗೆ ಸಮರ್ಪಕ ಔಷಧಗಳಿಂದ ಕೂಡಿದ ಚಿಕಿತ್ಸೆಯನ್ನು ನಿಯಮಿತ ಕಾಲಾವಧಿಯ ತನಕ ನೀಡಿ ರೋಗಿ ಚಿಕಿತ್ಸೆಯನ್ನು ಸಂಪೂರ್ಣಗೊಳಿಸುವಂತೆ ನೋಡಿಕೊಳ್ಳುವುದು. ಈ ಚಿಕಿತ್ಸೆಯಲ್ಲಿ ವ್ಯತ್ಯಯವಾದರೆ, ರೋಗಿ ಚಿಕಿತ್ಸೆಯನ್ನು ಪೂರ್ಣಗೊಳಿಸದಿದ್ದರೆ ಕ್ಷಯ ರೋಗಾಣುಗಳು ಔಷಧಗಳಿಗೆ ಪ್ರತಿರೋಧ ಬೆಳೆಸಬಹುದು.

Multidrug-Resistant Tuberculosis (MDR TB)

ಇದು ಹಲವು ಔಷಧಗಳಿಗೆ ಪ್ರತಿರೋಧಕ ಬೆಳೆಸಿಕೊಂಡಿರುವ ಕ್ಷಯರೋಗಾಣುವಿನಿಂದ ಬಂದ ಕ್ಷಯರೋಗ. ಇಂದು ಈ ವಿಧದ ಕ್ಷಯ ರೋಗಿ ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ಎಲ್ಲಾ ಭಾಗಗಳಲ್ಲೂ ಕ್ಷಯರೋಗದ ಹತೋಟಿಗೆ ಕಂಟಕ ಒಡ್ಡುವ ಒಂದು ಪ್ರಬಲ ಸಮಸ್ಯೆಯಾಗಿದೆ. ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿ ಚಿಕಿತ್ಸೆಯನ್ನು ಸಮರ್ಪಕವಾಗಿ ಪೂರೈಸದಿದ್ದಾಗ ಈ ಸಮಸ್ಯೆ ಉದ್ಬವಿಸಬಹುದು.ಚಿಕಿತ್ಸೆ ಪ್ರಾರಂಭಿಸಿದ ಕೆಲವು ತಿಂಗಳಲ್ಲಿ ಕ್ಷಯರೋಗದ ಗುಣಲಕ್ಷಣಗಳಿಂದ ಮುಕ್ತಿ ಸಿಗುವುದು ಹೆಚ್ಚಿನ ರೋಗಿಗಳಲ್ಲಿ ಕಂಡು ಬರುವುದು ಸಾಮಾನ್ಯ. ಆದರೆ ದೇಹದಿಂದ ರೋಗಾಣು ಸಂಪೂರ್ಣ ನಾಶವಾಗಿರದು. ಆಗ ರೋಗಿಯು ತನಗೆ ಕಾಯಿಲೆ ವಾಸಿಯಾಗಿದೆ ಎನ್ನುವ ಭ್ರಮೆಯಿಂದ ವೈದ್ಯಕೀಯ ಸಿಬ್ಬಂದಿಗಳ ಸಲಹೆಯನ್ನು ಮೀರಿ ಚಿಕಿತ್ಸೆಯನ್ನು ನಿಲ್ಲಿಸಬಹುದು. ಈ ಚಿಕಿತ್ಸೆಗೆ ನೀಡುವ ಔಷಧಗಳು ಕೆಲವು ರೋಗಿಗಳಲ್ಲಿ ಗಂಭೀರವಾದ ಅಡ್ಡಪರಿಣಾಮ ಬೀರಬಹುದು. ಆಗ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳಲು ರೋಗಿ ನಿರಾಕರಿಸಬಹುದು. ಹೀಗೆ ಕಾರಣಾತರದಿಂದ ಚಿಕಿತ್ಸೆಯಲ್ಲಿ ವ್ಯತ್ಯಯ ಬಂದಾಗ ದೇಹದಲ್ಲಿ ಇನ್ನು ಭದ್ರವಾಗಿ ನೆಲೆಸಿರುವ ಈ ರೋಗಾಣುಗಳು ಅದಾಗಲೇ ತಮ್ಮ ಮೇಲೆ ಪ್ರಯೋಗಿಸಿದ ಔಷಧಗಳಿಗೆ ಪ್ರತಿರೋಧ ಬೆಳೆಸುವ ಸಂಭವ ಹೆಚ್ಚುವುದು.

ರೋಗಿಯ ದೇಹದಲ್ಲಿ ಈ ಕಾಯಿಲೆಯ ನಿರೋಧಕಶಕ್ತಿ ಕುಗ್ಗಿದಾಗ, ಅದಾಗಲೇ ದೇಹದಲ್ಲಿರುವ ಈ ರೋಗಾಣುಗಳು ವೃದ್ಧಿಗೊಂಡು ಇನ್ನೊಮ್ಮೆ ಸಕ್ರಿಯ ಕ್ಷಯರೋಗವನ್ನು ಉಂಟುಮಾಡಬಹುದು. ಇಲ್ಲಿ ಈ ರೋಗಾಣು ಕ್ಷಯರೋಗದ ಚಿಕಿತ್ಸೆಯಲ್ಲಿ ಉಪಯೋಗಿಸುವ ಪ್ರಮುಖ ಔಷಧವಾದ `ರಿಫಾಮೈಸಿನ್’ಗೆ ಪ್ರತಿರೋಧ ಬೆಳೆಸಿರಬಹುದು ಆಗ ಇದು `ಆರ್.ಆರ್. ಕ್ಷಯಕ್ಕೆ ಕಾರಣವಾಗಬಹುದು. ಇಲ್ಲ ಚಿಕಿತ್ಸೆಗೆ ಉಪಯೋಗಿಸುವ ಹಲವು ಔಷಧಗಳಿಗೆ ಪ್ರತಿರೋಧ ಬೆಳೆಸಿಕೊಂಡಿರಬಹುದು. ಇದು ಎಮ್.ಡಿ.ಆರ್.ಟಿ.ಬಿ. ಇನ್ನೂ ಅತೀ ಚಿಂತಾಜನಕವಾದುದು. ಮೇಲೆ ಹೇಳಿದ ಪ್ರತಿರೋಧಕ ಬೆಳೆಸಿದ ಕ್ಷಯ ರೋಗದ ಚಿಕಿತ್ಸೆಗೆ ನೀಡುವ ಇತರ ಔಷಧಗಳಿಗೂ ಪ್ರತಿರೋಧ ಬೆಳೆಸಿರುವ ಎಕ್ಸ್.ಡಿ.ಆರ್.ಟಿ.ಬಿ. (ಎಕ್ಸ್ಟೆನ್ಸಿವ್ಲಿ ಡ್ರಗ್ ರೆೆಸಿಸ್ಟೆಂಟ್ ಟಿ.ಬಿ. ಅಥವಾ ವಿಸ್ತಾರವಾದ ಔಷಧಗಳಿಗೆ ಪ್ರತಿರೋಧಕ ಬೆಳೆಸಿಕೊಂಡ ಕ್ಷಯರೋಗಾಣುವಿನಿಂದ ಬರುವ ರೋಗ). ಇಲ್ಲಿ ಈ ಪ್ರತಿರೋಧಕದಿಂದ ಕೂಡಿದ ಕ್ಷಯದಿಂದ ನರಳುವ ರೋಗಿಗಳಲ್ಲಿ ಕಾಯಿಲೆ ವಾಸಿಯಾಗುವ ಸಾಧ್ಯತೆ ಕಡಿಮೆ. ಮಾತ್ರವಲ್ಲ ಇವರ ಸಂಪರ್ಕದಿಂದ ಸೋಂಕಿಗೊಳಗಾಗಿ ಈ ಸಕ್ರಿಯ ರೋಗ ಪಡೆದ ಇತರರಲ್ಲೂ ರೋಗ ಗುಣವಾಗುವ ಸಂಭವ ಕಡಿಮೆ. ಈ ಪ್ರತಿರೋಧಕ ಬೆಳೆಸಿದ ಕ್ಷಯರೋಗಗಳ ಪ್ರಮಾಣದಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ವ್ಯತ್ಯಾಸವಿದ್ದು ಸರಿಯಾದ ಪ್ರಮಾಣ ತಿಳಿದಿಲ್ಲ. ಆದರೆ ವಿಶ್ವ ಆರೋಗ್ಯ ಸಂಸ್ಥೆಯ 2020 ರ ವರದಿಯಂತೆ. ಭಾರತದಲ್ಲಿ `ಔಷಧಗಳಿಗೆ ಪ್ರತಿರೋಧ ಬೆಳೆಸಿದ 8976 ಕ್ಷಯರೋಗಿಗಳನ್ನು ಪರೀಕ್ಷಿಸಿದಾಗ ಅದರಲ್ಲಿ 3048 ರೋಗಿಗಳಿಗೆ ವಿಸ್ತಾರವಾದ ಔಷಧಗಳಿಗೆ ಪ್ರತಿರೋಧ ತೋರಿಸುವ ಎಕ್ಸ್.ಡಿ.ಆರ್. ಕ್ಷಯವಿರುವುದು ಕಂಡುಬಂದಿದೆ.

ಕ್ಷಯರೋಗ ಹೆಚ್ಚಳವಾಗಲು ವೈದ್ಯಕೀಯೇತರ ಕಾರಣಗಳು

ಕ್ಷಯರೋಗ ವೈದ್ಯಕೀಯ ಅಂಶಗಳನ್ನು ಹೊಂದಿದ ಒಂದು ಸಾಮಾಜಿಕ ಪಿಡುಗು. ಒಂದು ದೇಶದಲ್ಲಿರುವ ಈ ರೋಗದ ಪ್ರಮಾಣ ಆದೇಶದಲ್ಲಿನ ಪ್ರಜೆಗಳಿಗೆ ಸಿಗುವ ಮೂಲಭೂತ ಸೌಲಭ್ಯಗಳ ಪ್ರಮಾಣವನ್ನು ನಿರ್ಧರಿಸುತ್ತದೆ. ಯಾವ ಸಮಾಜದಲ್ಲಿ ವಿದ್ಯಾಭ್ಯಾಸದ, ವೈದ್ಯಕೀಯ ಸೌಲಭ್ಯಗಳ, ಪೌಷ್ಠಿಕ ಆಹಾರದ, ಶುದ್ಧನೀರಿನ, ಗಾಳಿಬೆಳಕಿನಿಂದ ಕೂಡಿದ ವಸತಿಗಳ, ಶುಚಿತ್ವದ ಹಾಗೂ ಈ ಕಾಯಿಲೆಯ ಬಗೆಗಿನ ಸರಿಯಾದ ಮಾಹಿತಿಯ ಕೊರತೆ ಇರುವುದೂ, ಎಲ್ಲಿ ಬಡತನ, ನಿರುದ್ಯೋಗ ತಾಂಡವವಾಡುವುದೋ ಅಲ್ಲಿ ಈ ರೋಗ ಅಭಿವೃದ್ಧಿಗೊಂಡು ತನ್ನ ಹಿರಿತನ ಮೆರೆಯುವುದು.

ಈ ವೈದ್ಯಕೀಯ, ವೈದಕೀಯೇತರ ಕಾರಣಗಳಿಗೆ ಪರಿಹಾರ ಹೇಗೆ?

ವ್ಯಕ್ತಿ ಮಟ್ಟದಲ್ಲಿ, ಪ್ರತೀ ಪ್ರಜೆಯೂ ತನ್ನ ಆರೋಗ್ಯ ಮಾತ್ರವಲ್ಲ, ತನ್ನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸಿ ಸರ್ಕಾರ, ಸಮಾಜ ನೀಡುವ ಸೌಲಭ್ಯಗಳ ಉಪಯೋಗ ಉತ್ತಮ ರೀತಿಯಲ್ಲಿ ಮಾಡುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಅದರಂತೆ ಸಕ್ರಿಯ ಕ್ಷಯರೋಗಿ ತನ್ನ ರೋಗ ತಪಾಸಣೆ ಸರಿಯಾಗಿ ಮಾಡಿಸಿ, ಚಿಕಿತ್ಸೆಯನ್ನು ವೈದ್ಯರ ಸಲಹೆಯಂತೆ ಕ್ರಮ ಬದ್ಧವಾಗಿ ಮಾಡಿ ರೋಗ ವಾಸಿಯಾಗುವಂತೆ ಪರರಿಗೆ ಈ ರೋಗ ಹರಡದಂತೆ ಹಾಗೂ ಔಷಧಗಳಿಗೆ ಪ್ರತಿರೋಧ ಬೆಳೆಸಿದ ಕ್ಷಯರೋಗ ಬಾರದಂತೆ ಜಾಗೃತೆ ವಹಿಸುವುದು ಅಗತ್ಯ.

ಸರ್ಕಾರದ ಮಟ್ಟದಲ್ಲಿ, ಈ ಕಾಯಿಲೆಯ ಹತೋಟಿಗೆ (ನಿರ್ಮೂಲನಕ್ಕೆ) ಬೇಕಾದ ಹಣವನ್ನು ಪ್ರತೀ ವರ್ಷ ಬಜೆಟ್‌ನಲ್ಲಿ ಕಾದಿರಿಸಿ, ಸೂಕ್ತ ಸಮಯದಲ್ಲಿ ಯೋಜನೆಯ ಅನುಷ್ಟಾನಕ್ಕೆ ಸಿಗುವಂತೆ ಬಿಡುಗಡೆ ಮಾಡಿ ಯೋಜನೆ ಫಲಪ್ರದವಾಗುವಂತೆ ನೋಡಿಕೊಳ್ಳಬೇಕು. ಅದರಲ್ಲೂ ಹೆಚ್ಚುತ್ತಿರುವ ಔಷಧಗಳಿಗೆ ಪ್ರತಿರೋಧ ಬೆಳೆಸಿರುವ ಕ್ಷಯದ ಶೀಘ್ರ ಪತ್ತೆ ಹಾಗೂ ಚಿಕಿತ್ಸೆಗೆ ಆದ್ಯತೆ ನೀಡಬೇಕು.

ಮಾತ್ರವಲ್ಲ, ಸರ್ವರಿಗೂ ಎಲ್ಲಾ ಮೂಲಭೂತ ಸೌಲಭ್ಯದೊರಕಿಸಿ ಜನರ ಜೀವನ ಮಟ್ಟ, ಆರೋಗ್ಯದ ಮಟ್ಟ ಏರುವಂತೆ ನೋಡಿಕೊಳ್ಳುವುದು ಅಗತ್ಯ. ಅಧ್ಯಯನದ ಪ್ರಕಾರ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರ ನೀಡುವುದರಿಂದ ಈ ರೋಗಕ್ಕೆ ವಾಸಿಯಾಗುವ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಹಾಗೂ ಈ ರೋಗಿಗಳ ಸಂಪರ್ಕಕ್ಕೆ ಬಂದವರಲ್ಲಿ ಪೌಷ್ಟಿಕ ಆಹಾರದ ಪೂರೈಕೆಯಿಂದ ಹೊಸರೋಗಿಗಳ ಪ್ರಮಾಣದಲ್ಲಿ ಗಣನೀಯವಾಗಿ ಇಳಿಕೆ ಕಂಡು ಬಂದಿದೆ. ಇದಕ್ಕಾಗಿ 2018 ರಲ್ಲಿ ಸರ್ಕಾರ ಕ್ಷಯ್ ಪೋಷನ್ ಯೋಜನೆಯನ್ನು ಪ್ರಾರಂಭಿಸಿತು. ಇದರಲ್ಲಿ ಪ್ರತೀ ರೋಗಿಗೂ ತಿಂಗಳೊಂದರ 500, ಪೌಷ್ಠಿಕ ಆಹಾರದ ಉಪಯೋಗಕ್ಕಾಗಿ ಸರ್ಕಾರದಿಂದ ಲಭ್ಯವಾಗುತ್ತಿದೆ. ಆದರೆ ಇಂದು ಕ್ಷಯರೋಗದ ಪ್ರಮಾಣ ಹೆಚ್ಚಿರುವ ನಮ್ಮ ದೇಶದಲ್ಲಿ ರೋಗಿಯ ಸಂಪರ್ಕಕ್ಕೆ ಬರುವ ಇತರರಿಗೆ ಮಾತ್ರವಲ್ಲ, ಈ ಸೌಲಭ್ಯದ ಅಗತ್ಯವಿರುವ ಸರ್ವರಿಗೂ ನೀಡುವುದು ಅವಶ್ಯ ಹಾಗೂ ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಈ ಮೊತ್ತದಲ್ಲಿ ಹೆಚ್ಚಳ ಮಾಡುವುದು ಅಗತ್ಯ.

ಇದನ್ನೂ ಓದಿ:ಜಿ-20 ರ ‘ಜನ-ಪ್ರೇರಿತ’ ಆಂದೋಲನದಲ್ಲಿ ಬಡಜನರು ಪ್ಲಾಸ್ಟಿಕ್ ಹಾಳೆಗಳ ಹಿಂದೆ…..

ಹೌದು. ಕ್ಷಯ ನಿರ್ಮೂಲನ ಸಾಧ್ಯ.! ಆದರೆ 2025ಕ್ಕಲ್ಲ!!

ಆದರೆ ಇಂದಿನ ಪರಿಸ್ಥಿತಿ ಈ ಕಾಯಿಲೆಯ ಹತೋಟಿಗೆ ಪೂರಕವಾಗಿ ಇರುವುದು ಕಾಣಿಸುತ್ತಿಲ್ಲ. ಇಂದು ಅತಿವೃಷ್ಟಿ, ಅನಾವೃಷ್ಟಿ ಹಾಗೂ ಇನ್ನಿತರ ಪ್ರಕೃತಿ ವಿಕೋಪ ದೇಶದಲ್ಲಿ ಜನರನ್ನು ಸಂಕಷ್ಟಕ್ಕೆ ದೂಡುತ್ತಿದೆ. ದೇಶ ಜನಾಂಗ, ಧರ್ಮಗಳ ದ್ವೇಷದ ದಳ್ಳುರಿಯಲ್ಲಿ ನರಳುತ್ತಿದೆ. ಆನರು ನಿರುದ್ಯೋಗ, ಬಡತನ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಸೇವೆಗಾಗಿ ಹಾಗೂ ಇತರ ಸೌಲಭ್ಯಗಳಿಗಾಗಿ ಬಜೆಟ್‌ನಲ್ಲಿ ಕಾದಿಡುವ ಹಣದ ಪ್ರಮಾಣ ಕುಗ್ಗುತ್ತಿದೆ. ಆದರೆ ನಮ್ಮ ಪ್ರಜಾ ಪ್ರತಿನಿಧಿಗಳೂ ಈ ವಿಷಯದ ಬಗ್ಗೆ ಕಾಳಜಿ ವಹಿಸುವಂತೆ ಕಾಣುತ್ತಿಲ್ಲ, ಈ ಎಲ್ಲಾ ಜನರ ಸಮಸ್ಯೆಗಳನ್ನು ದೂರಮಾಡುವ ಪರಿಹಾರಕ್ಕಾಗಿ ಸಂಸದ್‌ನಲ್ಲಿ ಚರ್ಚಿಸುವ ಬದಲು ಕ್ಷುಲಕ ಕಾರಣಕ್ಕಾಗಿ ಕೂಗಾಡಿ ಸಮಯ ವ್ಯರ್ಥಮಾಡುತ್ತಿರುವುದು ದುಃಖಕರ ಸಂಗತಿಯಾಗಿದೆ. ಈ ವರ್ಷದ ಕ್ಷಯ ದಿನಾಚರಣೆಯು ಘೋಷಣಾ ವಾಕ್ಯ-“-“Yes, we can””! “ಹೌದು, ನಾವು ಸಾಧಿಸಬಹುದು”. ಈ ರೋಗದ ಹತೋಟಿಗೆ ಉತ್ತಮ ರಾಷ್ಟ್ರೀಯ ಯೋಜನೆಯನ್ನು ರೂಪಿಸಿ, ಕ್ರಮಬದ್ಧವಾಗಿ ಅನುಷ್ಟಾನಗೊಳಿಸಿದರೆ, ಈ ಕಾಯಿಲೆಯನ್ನು ಅತ್ಯಲ್ಪ ಕಾಲದಲ್ಲಿ ಮಣಿಸುವ ಸಾಮರ್ಥ್ಯ ಹೊಂದಿದ ಉತ್ತಮ, ಅಗ್ಗಬೆಲೆಯ, ಹೆಚ್ಚಿನ ಅಡ್ಡಪರಿಣಾಮ ನೀಡದ ಔಷಧದ ಅವಿಷ್ಕಾರ ಶೀಘ್ರದಲ್ಲಿ ಆದರೆ “ಹೌದು ನಾವು ಸಾಧಿಸಬಹುದು ಎನ್ನುವ ಘೋಷಣೆಯನ್ನು ಕಾರ್ಯಗತಗೊಳಿಸಬಹುದು. ಆದರೆ 2025ಕ್ಕೆ ಅಲ್ಲ ಬಹುಶಃ 2055ಕ್ಕೆ.

************

Donate Janashakthi Media

Leave a Reply

Your email address will not be published. Required fields are marked *