ಜಿ-20 ರ ‘ಜನ-ಪ್ರೇರಿತ’ ಆಂದೋಲನದಲ್ಲಿ ಬಡಜನರು ಪ್ಲಾಸ್ಟಿಕ್ ಹಾಳೆಗಳ ಹಿಂದೆ…..

ಪ್ರಧಾನ ಮಂತ್ರಿಗಳು ಭಾರತದಲ್ಲಿ ಜಿ-20 ಜನ-ಪ್ರೇರಿತ, ಜನ-ಕೇಂದ್ರಿತ ಆಂದೋಲನವಾಗಿದೆ, ತಂತ್ರಜ್ಞಾನವನ್ನು ಅಸಮಾನತೆಗಳನ್ನು ಹೆಚ್ಚಿಸುವ ಬದಲು, ಕಡಿಮೆ ಮಾಡಲು ಹೇಗೆ ಬಳಸುವುದು ಎಂದು ಭಾರತ ತೋರಿಸಿಕೊಟ್ಟಿದೆ ಎಂದಿದ್ದಾರೆ. ಹಾಗಾದರೆ ಬಡನಾಗರಿಕರ ವಸತಿಗಳನ್ನು ಮರೆಮಾಡುವ ಪ್ಲಾಸ್ಟಿಕ್‍ ಹಾಳೆಗಳು, ಬೇಲಿಗಳು, ಗೋಡೆಗಳೇಕೆ, ಅಕ್ರಮ ಎನ್ನುವ ಸ್ಥಳಗಳಲ್ಲಿ ವಾಸಿಸುವವರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಅವರ ಅಗತ್ಯಗಳನ್ನು ಮತ್ತು ಶೃಂಗ ಸಭೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.

‘ವಸುಧೈವ ಕುಟುಂಬಕಂ’ ಘೋಷವಾಕ್ಯವನ್ನು ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ ಸಾರ್ಥಕಗೊಳಿಸಲಾಗಿದೆ ಎಂದು ಪ್ರಧಾನ ಮಂತ್ರಿಗಳು ದಿಲ್ಲಿಯಲ್ಲಿ ಜಿ-20 ಶೃಂಗ ಸಭೆಯ ಸಂದರ್ಭದಲ್ಲಿ ಬರೆದಿರುವ ವಿಶೇಷ ಲೇಖನದಲ್ಲಿ ಹೇಳಿದ್ದಾರೆ. ಇದೊಂದು ಜನ-ಪ್ರೇರಿತ ಆಂದೋಲನವಾಯಿತು, 60ಕ್ಕೂ ಹೆಚ್ಚು ನಗರಗಳಲ್ಲಿ 200ಕ್ಕೂ ಹೆಚ್ಚು ಸಭೆಗಳು ನಡೆದವು, 125 ದೇಶಗಳ 1ಲಕ್ಷಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.ಭಾರತದ ಜನಸಂಖ್ಯಾ ಸ್ವರೂಪ, ಪ್ರಜಾಪ್ರಭುತ್ವ, ವೈವಿಧ್ಯತೆ ಮತ್ತು ಅಭಿವೃದ್ಧಿ ಬಗ್ಗೆ ಯಾರಿಂದಲೋ ಕೇಳುವುದು ಒಂದು ವಿಷಯ, ಅದನ್ನು ಕಣ್ಣಾರೆ ನೋಡುವುದು ಇನ್ನೊಂದು ವಿಷಯ. ಜಿ-20 ಪ್ರತಿನಿಧಿಗಳು ಇದಕ್ಕೆ ಸಾಕ್ಷಿಯಾಗುತ್ತಾರೆ ಎಂದು ಪ್ರಧಾನಿಗಳು ಮಾಧ್ಯಮಗಳಲ್ಲಿ ಪ್ರಕಟಿಸಿರುವ ಈ ವಿಶೇಷ ಲೇಖನದಲ್ಲಿ ಬೆನ್ನು ತಟ್ಟಿಕೊಂಡಿದ್ದಾರೆ.

ಇದೇ ವೇಳೆಗೆ ಮಾಧ್ಯಮಗಳಲ್ಲಿ ದೇಶದ ನಿಜ ಚಿತ್ರವನ್ನು ಅದೇ ಜಿ-20 ಪ್ರತಿನಿಧಿಗಳ ಕಣ್ಣಿಗೆ ಕಾಣದಂತೆ ಪ್ಲಾಸ್ಟಿಕ್ ಹಾಳೆಗಳ ಹಿಂದೆ ಮರೆಮಾಚಲಾಗುತ್ತಿದೆ ಎಂಬ ವರದಿಗಳೂ ಪ್ರಕಟವಾಗಿವೆ. ಪ್ರಧಾನಿಗಳು ಈ ಹಿಂದೆ “ ಜಹಾಂ ಜುಗ್ಗೀ ವಹೀಂ ಮಕಾನ್” ಎಂದು ( ಗುಡಿಸಲುಗಳು ಇದ್ದಲ್ಲೇ ಮನೆ ಕಟ್ಟಿಸಿಕೊಡುವ) ಆಶ್ವಾಸನೆ ನೀಡಿದ್ದರು. ಆದರೆ ಈಗ ಜಿ-20ರ ಕಾಲಘಟ್ಟದಲ್ಲಿ “ಜಹಾಂ ಜುಗ್ಗೀ ವಹೀಂದ ಶಮ್‍ಶಾನ್‍ ಬನಾ ದಿಯಾ” ( ಗುಡಿಸಲುಗಳು ಇದ್ದಲ್ಲೇ ಸ್ಮಶಾನ ಮಾಡಿದರು) ಎಂದು ಗುಡಿಸಲುವಾಸಿ ಉದ್ಗರಿಸುವಂತಾಗಿದೆಯಂತೆ.

ನಗರ ಸುಂದರೀಕರಣದ ಹೆಸರಲ್ಲಿ..

ಈ ಶೃಂಗಸಭೆಗಾಗಿ ದಿಲ್ಲಿಯನ್ನು ಸಿಂಗಾರಗೊಳಿಸುವ ಕೆಲಸಕ್ಕೇ 1000 ಕೋಟಿ ರೂ. ಬಜೆಟ್ ಹಾಕಲಾಗಿದೆ ಎಂದು ವರದಿಯಾಗಿದೆ. ಸಿಂಗಾರಗೊಳಿಸುವುದು ಎಂದರೆ ಹೊಟ್ಟೆ ಹೊರೆಯಲು ರಾಜಧಾನಿಗೆ ಬಂದ ಬಡಜನರು ವಾಸಿಸುತ್ತಿರುವ ಸ್ಥಳಗಳನ್ನು ಅಕ್ರಮ ಎಂದು ನೆಲಸಮ ಮಾಡುವುದು, ಇಲ್ಲವೇ ಹಸಿರು ಪ್ಲಾಸ್ಟಿಕ್ ಹಾಳೆಗಳನ್ನು ಹೊದ್ದಿಸಿ ಮರೆಮಾಡುವುದು ಎಂದೇ ಅಧಿಕಾರದಲ್ಲಿರುವವರ ಭಾವನೆಯಿದ್ದಂತೆ ಕಾಣುತ್ತದೆ. ಏಕೆಂದರೆ, ಭಾರತ ಜಿ-20ರ ಅಧ್ಯಕ್ಷತೆ ವಹಿಸಿಕೊಂಡು ಈ ಬಾರಿಯ ಶೃಂಗ ಸಭೆಯನ್ನು ದಿಲ್ಲಿಯಲ್ಲಿ ನಡೆಸಲು ಸಿದ್ಧತೆಗಳು ಆರಂಭವಾದದ್ದೇ ಬಡಜನರು ವಾಸಿಸುತ್ತಿರುವ ಕೊಳೆಗೇರಿಗಳು ಮತ್ತಿತರ ಪ್ರದೇಶಗಳಿಂದ ಅವರನ್ನು ಎತ್ತಂಗಡಿ ಮಾಡುವುದು, ಅವರ ವಸತಿಗಳನ್ನು ಅಕ್ರಮ ಎಂದು ನೆಲಸಮ ಮಾಡುವುದು ಇತ್ಯಾದಿಗಳಿಂದಲೇ ಎಂದು ಕೆಲವು ವಾರಗಳ ಹಿಂದೆ ದಿಲ್ಲಿಯಲ್ಲಿ ನಡೆದ ಒಂದು ಸಾರ್ವಜನಿಕ ವಿಚಾರಣೆಯ ವೇಳೆಗೆ ದೇಶಾದ್ಯಂತದಿಂದ ಕೇಳ ಬಂತು. ಅಂದರೆ ದಿಲ್ಲಿಯಲ್ಲಿ ಮಾತ್ರವಲ್ಲ, ಪ್ರಧಾನಿಗಳು ಹೇಳಿದ 60ಕ್ಕೂ ಹೆಚ್ಚು ನಗರಗಳಲ್ಲಿ ಹೆಚ್ಚಿನೆಡೆಗಳಲ್ಲಿ ಇದು ನಡೆದಿದೆ ಎಂಬ ದೂರುಗಳು ಕೇಳಬಂದವು.

ವ್ಯಂಗ್ಯಚಿತ್ರ ಕೃಪೆ: ಪೆನ್‍ ಪೆನ್ಸಿಲ್ ಡ್ರಾ, ಫೇಸ್‍ಬುಕ್

ದಿಲ್ಲಿಯ ತುಘ್ಲಲಕಾಬಾದ್‍ ನಲ್ಲಿ ನಡೆದ ನೆಲಸಮ ಕಾರ್ಯಾಚರಣೆಯಲ್ಲಿ 2,50,000 ಮಂದಿ (ಹೆಂಗಸರು, ಮಕ್ಕಳೂ ಸೇರಿ) ತಮ್ಮ ವಸತಿಗಳನ್ನು ಕಳಕೊಂಡರು, ಜಿ-20ರ ಪ್ರತಿನಿಧಿಗಳಿಗಾಗಿ ಯೋಜಿಸಿರುವ ‘ಹರಿಟೇಜ್‍ ವಾಕ್’’ ಅಂದರೆ ಪರಂಪರೆಯನ್ನು ತಿಳಿಯುವ ನಡಿಗೆಗೆಗಳಿಗೆಂದು ಇದನ್ನು ನಡೆಸಲಾಯಿತು. ದಿಲ್ಲಿಯ ಮೆಹರೌಲಿಯಲ್ಲಿಯೂ ಇಂತಹುದೇ ‘ಸುಂದರೀಕರಣ’ ಕಾರ್ಯಾಚರಣೆ ನಡೆಯಿತು. ಇವೆಲ್ಲ ‘ಅಕ್ರಮ’ ವಸತಿಗಳು, ಒತ್ತುವರಿಗಳು ಎಂದೆಲ್ಲ ಎಂಬ ನೆವವಾದರೂ ಇತ್ತು. ಆದರೆ ದಿಲ್ಲಿಯ ಇನ್ನು ಕೆಲವೆಡೆ ನಡೆದ ನೆಲಸಮ ಕಾರ್ಯಾಚರಣೆಗಳಲ್ಲಿ ಈ ನೆವವೂ ಇರಲಿಲ್ಲ ಎಂದು ವರದಿಗಳು ಹೇಳುತ್ತವೆ. ಉದಾಹರಣೆಗೆ ಸುಪ್ರಿಂ ಕೋರ್ಟ್‍ ಆದೇಶದಂತೆ ಸರಕಾರದ ವತಿಯಿಂದಲೇ ನಿರ್ಮಿಸಿದ ‘ಆಶ್ರಯ’ಗಳನ್ನೂ ನೆಲಸಮ ಮಾಡಲಾಯಿತು. ನಗರದ ಅತ್ಯಂತ ಬಡ, ಅಸಹಾಯ ವಿಭಾಗಗಳಿಗೆ ಸೇರಿದ ಇಲ್ಲಿಯ ನಿವಾಸಿಗಳು ಹಲವು ಫ್ಲೈಓವರುಗಳ ಅಡಿಯಲ್ಲಿ ಬದುಕು ಸಾಗಿಸುವಂತಾಗಿದೆ, ಹಲವರು ಮತ್ತೆ ಭಿಕ್ಷಾಟನೆಗೆ ಇಳಿದಿದ್ದಾರೆ ಎಂದೂ ವರದಿಯಾಗಿದೆ.

ನಾಗಪುರದಲ್ಲಂತೂ ಭಿಕ್ಷಕರು, ನೆಲೆಯಿಲ್ಲದವರು ನಗರ ಬಿಟ್ಟು ಹೋಗುವಂತೆ ಹೇಳಲಾಯಿತಂತೆ. ಅವರೆಲ್ಲ ತಾವಾಗಿಯೇ ತಮ್ಮಊರುಗಳಿಗೆ ಮರಳಿದ್ದಾರೆ ಎಂದು ಪೋಲಿಸರು ಹೇಳಿದರಂತೆ.


“ಸರಕಾರದ ಬಳಿ ಉತ್ಕ್ರಷ್ಟ ಮೇಕ್‍-ಅಪ್‍ ತಂಡ ಮತ್ತು ನಮ್ಮನ್ನು ಎಡಿಟ್‍ ಮಾಡಿ
ಬಿಸಾಕಲು ಫೋಟೋಶಾಪ್‍ ಎಕ್ಸ್ ಪರ್ಟ್‍ಗಳು ಇದ್ದಾಗಲೂ ಹೀಗೇಕೋ!

ಮುಂಬೈಯಲ್ಲಿ ಕತೆ ತುಸು ಭಿನ್ನವಾಗಿದೆ. ಕೊಳೆಗೇರಿಗಳು ಬಹಳ ದೊಡ್ಡದಾಗಿದ್ದರಿಂದಾಗಿ ನೆಲಸಮ ಕಾರ್ಯಾಚರಣೆ ಸಾಧ್ಯವಾಗದೆಂದು ಪ್ರತಿನಿಧಿಗಳು ಓಡಾಡುವ ದಾರಿಯಲ್ಲಿ ಬಳಿ ಅಡ್ಡಗಟ್ಟೆಗಳನ್ನು ಹಾಕಲಾಯಿತು. ಇಂದೋರ್‍ ಮತ್ತು ವಿಶಾಖ ಪಟ್ಟಣದಲ್ಲಿ ದೊಡ್ಡ ಗೋಡೆಗಳನ್ನು ಹಾಕಲಾಯಿತು. ಇದರ ಭಾಗವಾಗಿ ವಿಶಾಖಪಟ್ಟಣಂ ನಲ್ಲಿ 400 ಬುಡಕಟ್ಟು ಬಡ ಕುಟುಂಬಗಳು ಕಾಣಿಸದಂತೆ ಮಾಡಲು ಹಾಕಿದ 400 ಮೀಟರುಗಳ ಹಸಿರು ಶೀಟುಗಳಿಂದ ಸ್ವಲ್ವೇ ದೂರದಲ್ಲಿದ್ದ ಐಷಾರಾಮೀ ಹೊಟೇಲಿನಲ್ಲಿ ‘ಎಲ್ಲರನೂ ಒಳಗೊಳ್ಳುವ ನಾಳಿನ ನಗರಗಳನ್ನು ಕಟ್ಟಲು ಹಣಕಾಸು ಒದಗಿಸುವುದು ಹೇಗೆ ಎಂದು ಜಿ-20 ಪ್ರತಿನಿಧಿಗಳು ಚರ್ಚಿಸಿದರಂತೆ!( ಟಿಕೇಂದರ್‍ ಪನ್ವಾರ್‍ ಸಿಂಗ್, ನ್ಯೂಸ್‍ ಕ್ಲಿಕ್, ಸಪ್ಟಂಬರ್‍ 8).

ಪರ್ಯಾಯ ದಾರಿಗಳಿರಲಿಲ್ಲವೇ?

ಪ್ರಧಾನ ಮಂತ್ರಿಗಳು ತಮ್ಮ ವಿಶೇಷ ಲೇಖನದಲ್ಲಿ ಭಾರತದಲ್ಲಿ ಜಿ-20 ಜನ-ಪ್ರೇರಿತ, ಜನ-ಕೇಂದ್ರಿತ ಆಂದೋಲನವಾಗಿದೆ, ತಂತ್ರಜ್ಞಾನವನ್ನು ಅಸಮಾನತೆಗಳನ್ನು ಹೆಚ್ಚಿಸುವ ಬದಲು, ಕಡಿಮೆಮಾಡಲು ಹೇಗೆ ಬಳಸುವುದು ಎಂದು ಭಾರತ ತೋರಿಸಿಕೊಟ್ಟಿದೆ ಎಂದಿದ್ದಾರೆ. ಹಾಗಾದರೆ ಬಡನಾಗರಿಕರ ವಸತಿಗಳನ್ನು ಮರೆಮಾಡುವ ಪ್ಲಾಸ್ಟಿಕ್‍ ಹಾಳೆಗಳು, ಬೇಲಿಗಳು, ಗೋಡೆಗಳೇಕೆ, ಅಕ್ರಮ ಎನ್ನುವ ಸ್ಥಳಗಳಲ್ಲಿ ವಾಸಿಸುವವರೊಂದಿಗೆ ಸಮಾಲೋಚನೆಗಳನ್ನು ನಡೆಸಿ ಅವರ ಅಗತ್ಯಗಳನ್ನು ಮತ್ತು ಶೃಂಗ ಸಭೆಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ವ್ಯವಸ್ಥೆಗಳನ್ನು ಮಾಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆಯನ್ನು ಕೇಳಲಾಗುತ್ತಿದೆ.
ಜಿ-20 ಪ್ರತಿನಿಧಿಗಳಿಗೆ ಅನಾನುಕೂಲವಗದಿರಲಿ ಎಂದು ಜಿ-20 ಇವೆಂಟ್‍ಗಳು ನಡೆಯುವ ಸುತ್ತ-ಮುತ್ತ 3 ದಿನಗಳ ಕಾಲ ದೈನಂದಿನ ವ್ಯಾಪಾರ-ವ್ಯವಹಾರ ಚಟುವಟಿಕೆಗಳನ್ನು ನಡೆಸಬಾರದು ಎಂದು ವಿಧಿಸಲಾಗಿದೆಯಂತೆ. ದಿಲ್ಲಿಯಲ್ಲಿ ವಾಸಿಸುತ್ತಿರುವವರಲ್ಲಿ 49 ಲಕ್ಷ ಮಂದಿ ಅನೌಪಚಾರಿಕ ವಲಯದಲ್ಲಿ ದಿನಗೂಲಿ ಮಾಡುತ್ತಿರುವವರು. ಅವರ ಜೀವನೋಪಾಯಗಳಿಗೆ ಇದರಿಂದ ಕುತ್ತು ಉಂಟಾಗುವುದನ್ನು ಮುಂಗಂಡು, ಅವರು ಕಳೆದುಕೊಳ್ಳುವ ದಿನಗೂಲಿಗಳನ್ನು ಭರ್ತಿ ಮಾಡಲು ಹಣಕಾಸು ನೆರವಿನ, ತಾತ್ಕಾಲಿಕ ಆಹಾರ ವಿತರಣೆಯ ವ್ಯವಸ್ಥೆ ಮಾಡಲು ಸಾಧ್ಯವಿರಲಿಲ್ಲವೇ ಎಂಬ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಆದರೆ ಬಹುಶಃ ‘ಅಮೃತ ಕಾಲ’ದಲ್ಲಿ ದೇಶದ ಸಾಧನೆಗಳನ್ನು ಜಗತ್ತಿನ ಮುಂದೆ ಪ್ರದರ್ಶಿಸುವಾಗ ಇಂತಹ ಪ್ರಶ್ನೆಗಳೇ ಅಪ್ರಸ್ತುತವಾಗಿವೆ!

ಜಿ-20ರ ಸಂದರ್ಭದಲ್ಲಿ ನಡೆದ ಇವೆಂಟ್‍ಗಳು ಎರಡು ಮಹತ್ವದ ಪ್ರಶ್ನೆಗಳನ್ನು ಪ್ರದರ್ಶಿಸಿದವು ಎನ್ನುತ್ತಾರೆ ಹಿಂದೆ ಶಿಮ್ಲಾದ ಉಪಮೇಯರ್‍ ಆಗಿದ್ದ ಟಿಕೇಂದರ್‍ ಪನ್ವಾರ್‍ ಸಿಂಗ್: ಮುಖ್ಯವಾಗಿ ಸಮಾಜದ ಅಂಚಿಗೆ ತಳ್ಳ್ಪಲ್ಪಟ್ಟ ಮತ್ತು ದುರ್ಬಲ ವಿಭಾಗಗಳ ಪರಿಸ್ಥಿತಿಯನ್ನು ಮತ್ತಷ್ಟು ಶೋಚನೀಯಗೊಳಿಸಲಾಯಿತು, ಪ್ರಭುತ್ವಕ್ಕೆ ತನ್ನ ಬಡ ನಾಗರಿಕರ ಬಗ್ಗೆ ಕಿಂಚಿತ್ತೂ ಅನುಭೂತಿ ಇಲ್ಲ ಎನ್ನುವುದು ಕಂಡು ಬಂತು. ಎರಡನೆಯದಾಗಿ, ಆಡಳಿತಯಂತ್ರ ಮತ್ತು ನ್ಯಾಯಾಂಗದ ವ್ಯವಸ್ಥೆ ಕಾನೂನಿನ ಪ್ರಕಾರ ವರ್ತಿಸುವಲ್ಲಿ ಮತ್ತು ಈ ಬಡನಾಗರಿಕರಿಗೆ ರಕ್ಷಣೆ ಕೊಡುವಲ್ಲಿ ವಿಫಲವಾಗಿದೆ.

“ಇದು ಇಡೀನಗರವನ್ನು ಪರದೆಗಳಿಂದ ಮುಚ್ಚುವ ಅಪಾರ ಖರ್ಚನ್ನು ಉಳಿಸುತ್ತದೆ”
ವ್ಯಂಗ್ಯಚಿತ್ರ: ಮಂಜುಲ್, ಫೇಸ್‍ಬುಕ್

 

Donate Janashakthi Media

Leave a Reply

Your email address will not be published. Required fields are marked *