ಹಾಸನದಲ್ಲಿ ಟಿಕೆಟ್ ಪೈಪೋಟಿ ಸುಳಿವು: ‘ಶಾಸಕರು ವಿಫಲರಾದರೆ ನಾನೇ ಅಭ್ಯರ್ಥಿ’ – ಪ್ರೀತಂ ಗೌಡ

ಹಾಸನ: ಹಾಸನ ಕ್ಷೇತ್ರದ ರಾಜಕೀಯದಲ್ಲಿ ಟಿಕೆಟ್ ಪೈಪೋಟಿ ಕುರಿತ ಸುಳಿವು ನೀಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ, ಹಾಲಿ ಶಾಸಕರು ಸಮರ್ಪಕವಾಗಿ ಕೆಲಸ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ತಾವು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಹೇಳಿದರು.

ಜೂನ್‌ 29ರಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎಷ್ಟು ದಿನ ಇದ್ದೀರಿ ಎನ್ನುವುದಕ್ಕಿಂತ ಜನರ ಪರವಾಗಿ ಎಷ್ಟು ಕೆಲಸ ಮಾಡಿದ್ದೀರಿ ಎಂಬುದೇ ಮುಖ್ಯ ಎಂದು ತಿಳಿಸಿದರು. ಶಾಸಕರು ಜನರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಿದರೆ ಎಲ್ಲರಿಗೂ ಒಳ್ಳೆಯದು ಎಂದು ಅವರು ಅಭಿಪ್ರಾಯಪಟ್ಟರು.

ಎನ್‌ಡಿಎ ಮೈತ್ರಿಯ ದೃಷ್ಟಿಯಿಂದ ಕಾರ್ಯಕರ್ತರು ಮತ್ತು ನಾಯಕರ ನಡೆ-ನುಡಿಗಳು ಮಹತ್ವದ್ದು ಎಂದು ಹೇಳಿದ ಅವರು, ಶಾಸಕರು ಜನರ ಆಕ್ರೋಶಕ್ಕೆ ಗುರಿಯಾದರೆ ಅದರ ಪರಿಣಾಮ ಮೈತ್ರಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದರು. ಅಗತ್ಯವಿದ್ದರೆ ತಾವು ಅಭ್ಯರ್ಥಿಯಾಗಿ ಹೊಣೆ ಹೊರುವ ಪರಿಸ್ಥಿತಿ ಬರಬಹುದು ಎಂಬ ಸೂಚನೆಯನ್ನು ನೀಡಿದರು.

ಇದನ್ನೂ ಓದಿ: 2026 ಫಿಫಾ ವಿಶ್ವಕಪ್: ಗುಂಪು ಹಂತದ ಬಳಿಕ 17 ತಂಡಗಳು ಹೊರಗೆ!

ಹಾಲಿ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಕುರಿತು ಮಾತನಾಡಿದ ಅವರು, ಹೊಸದಾಗಿ ರಾಜಕೀಯಕ್ಕೆ ಬಂದಿರುವ ಅವರು ಜನಪರ ಕೆಲಸ ಮಾಡಿದರೆ ಮೈತ್ರಿಗೆ ಲಾಭವಾಗಲಿದೆ ಎಂದರು. ಆದರೆ ಜನರ ಅಸಮಾಧಾನ ಹೆಚ್ಚಾದರೆ ಬದಲಾವಣೆಯ ಮಾತು ಸಹಜವಾಗುತ್ತದೆ ಎಂದು ಹೇಳಿದರು.

ಮೈತ್ರಿ ಬಲಪಡಿಸುವ ಉದ್ದೇಶದಿಂದ ಸ್ವರೂಪ್ ಪ್ರಕಾಶ್ ಅವರೊಂದಿಗೆ ಮಾತುಕತೆಗೆ ಸಿದ್ಧನಿದ್ದೇನೆ. ಸಮಯ ನೀಡಿದರೆ ನಾನೇ ಭೇಟಿ ಮಾಡುತ್ತೇನೆ, ಇಲ್ಲವಾದರೆ ಅವರ ಪಿಎ ಮೂಲಕ ಕರೆ ಮಾಡಿದರೂ ಸಾಕು ಎಂದು ಹೇಳಿದರು. ಕೊನೆಯಲ್ಲಿ, ಟಿಕೆಟ್ ಹಂಚಿಕೆ ಕುರಿತು ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲಿದ್ದು, ಜನರ ಆಶೀರ್ವಾದ ಯಾರಿಗೆ ಸಿಗುತ್ತದೆಯೋ ಕಾದು ನೋಡಬೇಕಿದೆ ಎಂದರು.

ಜೆಡಿಎಸ್ ಶಾಸಕರ ಸಂಖ್ಯೆಯನ್ನು ಉಲ್ಲೇಖಿಸಿದ ಅವರು, ಭವಿಷ್ಯದ ಟಿಕೆಟ್ ಹಂಚಿಕೆ ಮತ್ತು ಕ್ಷೇತ್ರ ರಾಜಕೀಯದ ಬೆಳವಣಿಗೆಗಳನ್ನು ಗಮನಿಸಬೇಕು ಎಂದು ಸೂಚಿಸಿದರು.

ಇದನ್ನೂ ನೋಡಿ: ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ‘ವಿಐಪಿ’! ಪಾಸ್‌ಪೋರ್ಟ್‌ ಕಥೆ ಏನು? ಎಸ್‌ಐಆರ್‌ ಸುತ್ತ ಪ್ರಶ್ನೆಗಳ ಹುತ್ತ |

Donate Janashakthi Media

Leave a Reply

Your email address will not be published. Required fields are marked *