ವಕೀಲರ ಹತ್ಯೆ, ಹಲ್ಲೆ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್

ರಾಜ್ಯದಲ್ಲಿ ನಡೆದಿರುವ ವಕೀಲರ ಹತ್ಯೆಗಳ ತನಿಖಾ ವಿವರ ಸಲ್ಲಿಸಲು ಸೂಚನೆ; ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವಿವಾದಗಳನ್ನು ಇತ್ಯರ್ಥಪಡಿಸದಂತೆ ನಿರ್ದೇಶನ
ಬೆಂಗಳೂರು: ರಾಜ್ಯದಲ್ಲಿ ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ, ಬೆದರಿಕೆ ಮತ್ತು ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ದಾಖಲಿಸಲು ಆದೇಶಿಸಿದೆ. ರಾಜ್ಯದಲ್ಲಿ ನಡೆದಿರುವ ವಕೀಲರ ಹತ್ಯೆ ಪ್ರಕರಣಗಳ ತನಿಖೆಯ ಸಂಪೂರ್ಣ ವಿವರಗಳನ್ನು ಸಲ್ಲಿಸುವಂತೆಯೂ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದೆ. ವಕೀಲರ

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಎಚ್. ಶಾಂತಿ ಭೂಷಣ್ ಅವರ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ನೀಡಿದೆ. ವಕೀಲರ ಸಂಘ ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಇತ್ತೀಚೆಗೆ ನಡೆದ ವಕೀಲರ ಹತ್ಯೆ ಹಾಗೂ ಹಿರಿಯ ವಕೀಲರೊಬ್ಬರ ಮೇಲಿನ ಹತ್ಯೆಯತ್ನದ ಘಟನೆಗಳನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದವು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ರಿಜಿಸ್ಟ್ರಿಗೆ ನಿರ್ದೇಶನ ನೀಡಿದೆ.

ವಕೀಲರಾದ ಶ್ರೀರಾಮ್ ವಿ. ಮತ್ತು ಮಂಜುನಾಥ್ ಅವರ ಹತ್ಯೆ ಹಾಗೂ ಹಿರಿಯ ವಕೀಲ ವೆಂಕಟರಾಮಣಪ್ಪ ಸಣ್ಣಕ್ಕಿ ಅವರ ಮೇಲಿನ ಹತ್ಯೆಯತ್ನದ ಘಟನೆಗಳನ್ನು ಸಂಘಟನೆಗಳು ಪ್ರಸ್ತಾಪಿಸಿದ್ದವು.

ವಕೀಲರ ಮೇಲಿನ ದಾಳಿಯನ್ನು ಪ್ರತ್ಯೇಕ ಅಪರಾಧ ಪ್ರಕರಣವಾಗಿ ಮಾತ್ರ ಪರಿಗಣಿಸಲಾಗದು. ಅದರಲ್ಲೂ ಜೀವಹಾನಿಗೆ ಕಾರಣವಾಗುವ ದಾಳಿಗಳು ವಕೀಲರ ಸ್ವಾತಂತ್ರ್ಯ ಮತ್ತು ನ್ಯಾಯದ ಆಡಳಿತದ ಮೇಲೆಯೂ ಪರಿಣಾಮ ಬೀರುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಕೀಲರು ದೈಹಿಕ ಹಾನಿ, ಬೆದರಿಕೆ ಅಥವಾ ಬೆದರಿಕೆಯ ಭೀತಿಯಿಲ್ಲದೆ ತಮ್ಮ ಕಕ್ಷಿದಾರರ ಪರವಾಗಿ ನಿರ್ಭೀತಿಯಿಂದ ವಾದ ಮಂಡಿಸುವಂತಿರಬೇಕು. ನ್ಯಾಯಾಲಯದ ಅಧಿಕಾರಿಗಳಾಗಿ ಮತ್ತು ನ್ಯಾಯದಾನ ಪ್ರಕ್ರಿಯೆಯ ಪಾಲುದಾರರಾಗಿ ವಕೀಲರ ಸುರಕ್ಷತೆ, ಘನತೆ ಹಾಗೂ ವೃತ್ತಿಪರ ಸ್ವಾತಂತ್ರ್ಯ ಮಹತ್ವದ್ದಾಗಿದೆ ಎಂದು ಪೀಠ ಹೇಳಿದೆ. ವಕೀಲರ

ಪೊಲೀಸ್ ಠಾಣೆಗಳು ಸಿವಿಲ್ ವಿವಾದಗಳ ಇತ್ಯರ್ಥದ ಕೇಂದ್ರವಾಗಬಾರದು

ಖಾಸಗಿ ವ್ಯಕ್ತಿಗಳ ನಡುವಿನ ಆಸ್ತಿ, ಸ್ವಾಧೀನ, ಒಪ್ಪಂದದ ಬಾಧ್ಯತೆ ಮತ್ತು ಇತರ ಸಿವಿಲ್ ಹಕ್ಕುಗಳಿಗೆ ಸಂಬಂಧಿಸಿದ ವಿವಾದಗಳನ್ನು ಕೆಲವು ಪೊಲೀಸ್ ಠಾಣೆಗಳು ವಿಚಾರಣೆ ನಡೆಸಿ ಇತ್ಯರ್ಥಪಡಿಸುತ್ತಿವೆ ಎಂಬ ಆರೋಪವನ್ನೂ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.

ಪೊಲೀಸ್ ಠಾಣೆಗಳನ್ನು ಸಿವಿಲ್ ವಿವಾದಗಳನ್ನು ಬಗೆಹರಿಸುವ ವೇದಿಕೆಗಳನ್ನಾಗಿ ಪರಿವರ್ತಿಸಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಕ್ರಿಮಿನಲ್ ಅಪರಾಧ ನಡೆದಿರುವುದು ಕಂಡುಬಂದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಆದರೆ ಸಿವಿಲ್ ವಿವಾದಗಳನ್ನು ಪೊಲೀಸ್ ಠಾಣೆಗಳಲ್ಲಿ ವಿಚಾರಣೆ ನಡೆಸಿ ಇತ್ಯರ್ಥಪಡಿಸಬಾರದು ಎಂದು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆಗೆ ಸೂಚಿಸಿದೆ.

ಈ ಕುರಿತು ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಈಗಾಗಲೇ ಜಾರಿಯಲ್ಲಿರುವ ಸೂಚನೆಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ವಿಧಾನಗಳನ್ನು (ಎಸ್‌ಒಪಿ) ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಸೂಕ್ತ ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ ನಿಗದಿಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ : ಕಬ್ಬಿಗೆ ಟನ್‌ಗೆ ₹5,500 ಬೆಲೆ ನಿಗದಿಗೆ ರೈತರ ಪಟ್ಟು: ಬೇಡಿಕೆ ಈಡೇರದಿದ್ದರೆ ಬೃಹತ್ ಜೈಲ್ ಭರೋ ಹೋರಾಟ

ವಕೀಲರೊಂದಿಗೆ ಪೊಲೀಸರ ವರ್ತನೆಗೆ ಏಕರೂಪದ ಎಸ್‌ಒಪಿ

ತಮ್ಮ ವೃತ್ತಿಪರ ಕರ್ತವ್ಯಗಳ ನಿರ್ವಹಣೆಗಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ವಕೀಲರಿಗೆ ಸೂಕ್ತ ಗೌರವ, ಘನತೆ ಮತ್ತು ಕನಿಷ್ಠ ವೃತ್ತಿಪರ ಸೌಜನ್ಯ ನೀಡುವಂತೆ ಏಕರೂಪದ ಎಸ್‌ಒಪಿ ರೂಪಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ವಕೀಲರು ಪೊಲೀಸರ ವಿರುದ್ಧ ದೂರು ಸಲ್ಲಿಸಿದಾಗ ಅದನ್ನು ಸ್ವೀಕರಿಸುವುದು, ಸ್ವೀಕೃತಿಯ ದೃಢೀಕರಣ ನೀಡುವುದು, ಸಮಂಜಸ ಅವಧಿಯಲ್ಲಿ ಪರಿಶೀಲಿಸುವುದು ಮತ್ತು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಕ್ಕೆ ಪ್ರತ್ಯೇಕ ಎಸ್‌ಒಪಿ ರೂಪಿಸುವಂತೆಯೂ ಸೂಚಿಸಿದೆ.

ಇದು ವಕೀಲರಿಗೆ ವಿಶೇಷ ಸವಲತ್ತು ನೀಡುವ ಉದ್ದೇಶವಲ್ಲ. ಸಾರ್ವಜನಿಕ ಸೇವಕರು ವೃತ್ತಿಪರ ಸೌಜನ್ಯ ಮತ್ತು ಸರಿಯಾದ ನಡವಳಿಕೆ ತೋರುವುದನ್ನು ಖಚಿತಪಡಿಸುವುದಾಗಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ವಕೀಲರ

ಎಲ್ಲ ವಕೀಲರ ಹತ್ಯೆ ಪ್ರಕರಣಗಳ ತನಿಖಾ ವಿವರ ಕೇಳಿದ ನ್ಯಾಯಾಲಯ

ಕರ್ನಾಟಕದಲ್ಲಿ ವರದಿಯಾಗಿರುವ ಪ್ರತಿಯೊಂದು ವಕೀಲರ ಹತ್ಯೆ ಪ್ರಕರಣದ ತನಿಖೆಯ ವಿವರಗಳನ್ನು ಪ್ರಕರಣವಾರು ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಹೈಕೋರ್ಟ್ ಸೂಚಿಸಿದೆ. ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರು ಪರಿಶೀಲಿಸಿ ದೃಢೀಕರಿಸಿದ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.

ವರದಿಯಲ್ಲಿ ಹತ್ಯೆಯಾದ ವಕೀಲರ ಹೆಸರು, ಘಟನೆ ನಡೆದ ದಿನಾಂಕ ಮತ್ತು ಸ್ಥಳ, ಸಂಬಂಧಪಟ್ಟ ಪೊಲೀಸ್ ಠಾಣೆ, ಅಪರಾಧ ಸಂಖ್ಯೆ, ಎಫ್‌ಐಆರ್ ದಾಖಲಾದ ದಿನಾಂಕ, ದಾಖಲಿಸಿರುವ ಕಾನೂನು ಸೆಕ್ಷನ್‌ಗಳು, ಆರೋಪಿಗಳ ಹೆಸರು ಮತ್ತು ಬಂಧನದ ವಿವರಗಳನ್ನು ನೀಡಬೇಕು.

ತನಿಖೆಯಲ್ಲಿ ಸಂಗ್ರಹಿಸಿರುವ ಸಾಕ್ಷ್ಯಗಳು, ತನಿಖೆಯ ಪ್ರಸ್ತುತ ಹಂತ, ಆರೋಪಪಟ್ಟಿ ಸಲ್ಲಿಸಿರುವ ವಿವರಗಳನ್ನೂ ಒಳಪಡಿಸಬೇಕು. ತನಿಖೆ ಬಾಕಿ ಇರುವ ಪ್ರಕರಣಗಳಲ್ಲಿ ವಿಳಂಬಕ್ಕೆ ಕಾರಣ, ಈವರೆಗೆ ಕೈಗೊಂಡ ಕ್ರಮಗಳು ಮತ್ತು ಮುಂದಿನ ತನಿಖೆಯ ರೂಪುರೇಷೆಗಳನ್ನು ತಿಳಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಇತ್ತೀಚಿನ ವಕೀಲರ ಹತ್ಯೆ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಎಫ್‌ಐಆರ್, ಬಂಧನ, ಸಂಗ್ರಹಿಸಿರುವ ಸಾಕ್ಷ್ಯಗಳು ಮತ್ತು ಮುಂದಿನ ಕ್ರಮಗಳ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಅಡ್ವೊಕೇಟ್ ಜನರಲ್ ಅವರಿಗೂ ನ್ಯಾಯಾಲಯ ಸೂಚಿಸಿದೆ.

ಇದನ್ನೂ ನೋಡಿ : ನ್ಯಾಯ ಕೊಡಿಸುವವರಿಗೇ ರಕ್ಷಣೆ ಇಲ್ಲವೇ? ರಾಜ್ಯಾದ್ಯಂತ ಬೀದಿಗಿಳಿದ ವಕೀಲರು Janashakthi Media

Donate Janashakthi Media

Leave a Reply

Your email address will not be published. Required fields are marked *