ಹಾಸನ ಪೆನ್‌ಡ್ರೈವ್ ಪ್ರಕರಣ: ಏ.29ರಂದು ಪ್ರತಿಭಟನೆ

ಹಾಸನ : ಪೆನ್‌ಡ್ರೈವ್ ಪ್ರಕರಣ ತನಿಖೆಗೆ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದವರ ಬಂಧನಕ್ಕೆ ಆಗ್ರಹಿಸಿ ಹಾಸನ ಜಿಲ್ಲಾ ಜನಪರ ಚಳುವಳಿಗಳ ಒಕ್ಕೂಟ ಏಪ್ರಿಲ್ 29 ರಂದು ಪ್ರತಿಭಟನೆ ನಡೆಸುತ್ತಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಒಕ್ಕೂಟದ ನಾಯಕರು, ಇಡೀ ನಾಗರಿಕ ಸಮಾಜವೇ ಬೆಚ್ಚಿಬೀಳುವಂತ ಘಟನೆ ಹಾಸನದಲ್ಲಿ ನಡೆದಿದೆ. ಪೆನ್‌ಡ್ರೈವ್ ಮುಖಾಂತರ ಮಹಿಳೆಯರ ಲೈಂಗಿಕ ಚಿತ್ರಗಳು ಮತ್ತು ದೃಶ್ಯಗಳನ್ನು ಬಿಡುಗಡೆ ಮಾಡಿ ವಾಟ್ಸ್‌ಆಪ್ ಮೂಲಕ ವ್ಯಾಪಕವಾಗಿ ಹರಡಿರುವುದು ಆತಂಕದ ವಿಚಾರ ಎಂದಿದೆ.

ಹಾಸನ ಜಿಲ್ಲೆಯ ಪ್ರಭಾವಿ ವ್ಯಕ್ತಿಯೊಬ್ಬರು ನೂರಾರು ಮಹಿಳೆಯರನ್ನು ಅಕ್ರಮವಾಗಿ ಲೈಂಗಿಕವಾಗಿ ಬಳಸಿಕೊಂಡು ಅವರ ಖಾಸಗಿ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ದೃಶ್ಯಗಳು ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ. ಆ ದೃಶ್ಯಗಳಲ್ಲಿರುವ ಮಹಿಳೆಯರ ಖಾಸಗಿ ಬದುಕು ಛಿದ್ರಗೊಂಡಿದೆ. ಆದರೆ ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅವರ ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುವ ಪ್ರಭಾವಿ ವ್ಯಕ್ಯಿ ಹಾಗು ಮಹಿಳೆಯರ ಖಾಸಗಿ ಲೈಂಗಿಕ ದೃಶ್ಯಗಳನ್ನು ಸಾರ್ವಜನಿಕವಾಗಿ ಹರಡುತ್ತಿರವ ವ್ಯಕ್ತಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ. ಇಂತಹ ವಿಕ್ಷಿಪ್ತ ಮತ್ತು ವಿಕೃತ ಲೈಂಗಿಕ ಅಕ್ರಮದಿಂದಾಗಿ ಹಾಸನ ಜಿಲ್ಲೆಯ ಜನರು ನಾಚಿಕೆಯಿಂದ ತಲೆ ತಗ್ಗಿಸುವ ವಿಚಾರವಾಗಿದೆ ಎಂದಿದ್ದಾರೆ.

ನೂರಾರು ಮಹಿಳೆಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ಅದನ್ನು ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ಜಿಲ್ಲೆಯ ಪ್ರಭಾವಿ ವ್ಯಕ್ತಿ ಮತ್ತು ಆ ದೃಶಗಳನ್ನು ಸಾರ್ವಜನಿಕವಾಗಿ ಬಿತ್ತರಿಸಿ ಮಹಿಳೆಯರ ಖಾಸಗಿ ಬದುಕಿಗೆ ದಕ್ಕೆ ತಂದಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *