- ದೇಹದ ಫ್ಯಾಟ್ ತೆಗಿಸಲು ಹೋದ ಚೇತನ ರಾಜ್ ನಿಧನ
- ಶ್ವಾಸಕೋಶದಲ್ಲಿ ನೀರು ತುಂಬಿ-ಉಸಿರಾಟದ ತೊಂದರೆ
- ಆಸ್ಪತ್ರೆ ವಿರುದ್ಧ ಕುಟುಂಬಸ್ಥರ ಆರೋಪ
ಬೆಂಗಳೂರು: ಕನ್ನಡ ಕಿರುತರೆ ನಟಿ ಚೇತನಾರಾಜ್ ದೇಹದ ಕೊಬ್ಬಿನಾಂಶ ತೆಗೆದು ಹಾಕುವ (ಫ್ಯಾಟ್)ಸರ್ಜರಿಯ ವೇಳೆ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸರ್ಜರಿ ಮಾಡಿಸಿಕೊಳ್ಳಲು ಇವರು ನವರಂಗ್ ಸರ್ಕಲ್‌ನಲ್ಲಿರುವ ಡಾ.ಶೆಟ್ಟಿ ಕಾಸ್ಮೆಟಿಕ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿ ಪರಸ್ಥಿತಿ ಗಂಭೀರವಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.
ಇನ್ನು ಜಗತ್ತಲ್ಲಿ ಕಾಣಬೇಕಾದದ್ದು ಎಷ್ಟೊ ಇರುವಂತಹ 21ನೇ ವಯಸ್ಸಿನಲ್ಲಿ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಒಂದೇ ದಿನದಲ್ಲಿ ಫ್ಯಾಟ್ ಚಿಕಿತ್ಸೆ ನೀಡಲಾಗುವುದು ಎಂದ ಕಾರಣಕ್ಕೆ ಪೋಷಕರಿಗೆ ತಿಳಿಸದೇ ಚಿಕಿತ್ಸೆಗೆ ಒಳಗಾಗಿದ್ದಾರೆ.
ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ಕುಟುಂಬ ವಾಸವಾಗಿದೆ. ಮಗಳ ಸಾವಿನ ಕುರಿತು ಪ್ರತಿಕ್ರಿಯಿಸಿರುವ ತಂದೆ ಗೋವಿಂದ ರಾಜ್, ‘ನಿನ್ನೆ ಬೆಳಗ್ಗೆ 8.30 ರ ಸುಮಾರಿಗೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ನಮಗೆ ವಿಚಾರ ಗೊತ್ತಾಗಿ, ನಾವು ಬರುವ ಹೊತ್ತಿಗೆ ವೈದ್ಯರು ಸರ್ಜರಿ ನಡೆಸುತ್ತಿದ್ದರು. ಸಂಜೆ ಹೊತ್ತಿಗೆ ಶ್ವಾಸಕೋಶಕ್ಕೆ ಕೊಬ್ಬಿನ ಅಂಶದಲ್ಲಿ ನೀರು ತುಂಬಿ ಉಸಿರಾಟದ ತೊಂದರೆಯಾಗಿದೆ. ಆಸ್ಪತ್ರೆಯಲ್ಲಿ ಐಸಿಯು ಸೇರಿದಂತೆ ಯಾವುದೇ ವ್ಯವಸ್ಥೆ ಸೂಕ್ತವಾಗಿಲ್ಲ. ಆಸ್ಪತ್ರೆಯವರು ಕೂಡ ನಮಗೆ ಮಾಹಿತಿ ನೀಡಿಲ್ಲ. ನನ್ನ ಮಗಳು ದಪ್ಪ ಇದ್ದಾಳೆ ಅಂತ ಯಾರೋ ಹೇಳಿದ್ದಾರೆ. ಹಾಗಾಗಿಯೇ ಅವಳು ಸರ್ಜರಿ ಮಾಡಿಸಿಕೊಳ್ಳಲು ಮುಂದಾಗಿದ್ದಾಳೆ.
ನನಗೆ ಗೊತ್ತಾಗಿರೋ ಪ್ರಕಾರ, ಆಸ್ಪತ್ರೆಯಲ್ಲಿ ಕೇವಲ ಕೊಬ್ಬು ತಗೆಯುತ್ತೇವೆ ಎಂದು ಹೇಳಿದ್ದರಂತೆ. ಆಮೇಲೆ ಏನಾಯಿತೋ ಗೊತ್ತಿಲ್ಲ. ಅವಳಿಗೆ ಉಸಿರಾಟದ ತೊಂದರೆ ಆಗಿ, ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ’. ತಮ್ಮ ಸ್ನೇಹಿತೆಯರ ಜೊತೆಯಾಗಿ ಆಸ್ಪತ್ರೆ ಸೇರಿದ್ದ ನಟಿ ,ಈ ವಿಷಯ ಪಾಲಕರಿಗೆ ಗೊತ್ತಾಗುವ ಮುಂಚೆಯೇ ಚೇತನಾ ರಾಜ್ ಸ್ನೇಹಿತೆಯರು ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪಾಲಕರು ಅಳಲು ತೋಡಿಕೊಂಡರು
ನಮ್ಮ ಗಮನಕ್ಕೆ ಬಾರದೇ ಸರ್ಜರಿಗೆ ಬಂದಿದ್ದಾಳೆ. ಆಸ್ಪತ್ರೆ ನಿರ್ಲಕ್ಷ್ಯಕ್ಕೆ ನನ್ನ ಮಗಳು ಸಾವನ್ನಪ್ಪಿದ್ದಾಳೆ. ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ವೈದ್ಯರು ಸರ್ಜರಿಗೆ ಮುಂದಾಗಿದ್ದಾರೆ’ ಎಂದು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಸುಬ್ರಮಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಫ್ಯಾಟ್ ರಿಯಾಕ್ಷನ್ ಸರ್ಜರಿ ಎಂದು ಕರೆಯಲಾಗುವ ಕಾಸ್ಮೆಟಿಕ್ ಶಸ್ತ್ರ ಚಿಕಿತ್ಸೆಗೆ ಅನೇಕ ನಟಿಯರು ಒಳಗಾಗುತ್ತಿದ್ದಾರೆ. ಅದರಲ್ಲೂ ನಟ ನಟಿಯರನ್ನು ಸೆಳೆಯಲು ಅಂಥದ್ದೊಂದು ತಂಡವೇ ಕಿರುತೆರೆಯಲ್ಲಿ ಇದೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಇಂತಹ ತಂಡದ ಮಾತಿಗೆ ಚೇತನಾ ರಾಜ್ ಬಲಿಯಾಗಿರಬಹುದಾ ಎನ್ನುವ ಅನುಮಾನ ಕೂಡ ವ್ಯಕ್ತವಾಗಿದೆ.
ಈ ಕುರಿತು ಮಾತನಾಡಿದ ದೊರೆಸಾನಿ ಧಾರವಾಹಿಯ ನಾಯಕಿ ಪಾತ್ರ ವಹಿಸುತ್ತಿರುವ ರೂಪಿಕ ಚಿತ್ರರಂಗಕ್ಕೆ ದೇಹದ ಸೌಂದರ್ಯ ಬೇಕು ಹೌದು, ಆದರೆ ಅದಕ್ಕಾಗಿ ಅಡ್ಡದಾರಿ ಹಿಡಿಯಬಾರದು. ತೆಳ್ಳಗಾಗಲು ಸರ್ಜರಿಯೊಂದೆ ಉತ್ತರವಲ್ಲ ವ್ಯಾಯಮ ಡಯೆಟ್ ಮಾಡುವುದರಿಂದಲೂ ಕೊಬ್ಬು ಕರಗಿಸಬಹುದು. ಚಿತ್ರಂಗದಲ್ಲಿ ದೊಡ್ಡ ಕನಸು ಇಟ್ಟುಕೊಂಡಿರುತ್ತಾರೆ. ಆದರೆ 20ರಿಂದ 25ನೇ ವಯಸ್ಸು ಚಂಚಲವಾದ್ದರಿಂದ ಈ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೀತಾ, ದೊರೆಸಾನಿ, ಒಲವಿನ ನಿಲ್ದಾಣ ಧಾರವಾಹಿಗಳಲ್ಲಿ ಚೇತನಾ ರಾಜ್ ನಟಿಸುತ್ತಿದ್ದರು. ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದರು.