ಎಸ್‌ಐಆರ್ ವಿರುದ್ಧ ನಾಗರಿಕ ಸಂಘಟನೆಗಳ ಆಕ್ರೋಶ ; ರಾಜ್ಯಾದ್ಯಂತ ಪ್ರತಿಭಟನೆ ಎಚ್ಚರಿಕೆ

ಮತದಾನದ ಹಕ್ಕು ಕಸಿಯುವ ಸಂಚು ಎಂದು ಆರೋಪ
ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಮೂಲಕ ಲಕ್ಷಾಂತರ ಜನರ ಮತದಾನದ ಹಕ್ಕು ಕಸಿಯುವ ಅಪಾಯ ಎದುರಾಗಿದೆ ಎಂದು ಆರೋಪಿಸಿರುವ ‘ನನ್ನ ಮತ ನನ್ನ ಹಕ್ಕು’ ಅಭಿಯಾನ ಮತ್ತು ಸಹಸ್ರಾರು ನಾಗರಿಕ ಸಂಘಟನೆಗಳು, ಭಾರತದ ಚುನಾವಣಾ ಆಯೋಗ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೌನವನ್ನು ಪ್ರಶ್ನಿಸಿವೆ. ಎಸ್‌ಐಆರ್

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಗಳ ಪ್ರತಿನಿಧಿಗಳು, ಚುನಾವಣಾ ಆಯೋಗವು 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಮೂರನೇ ಹಂತ ಜಾರಿಗೊಳಿಸಲು ಮುಂದಾಗಿದ್ದು, ಈಗಾಗಲೇ ಮೊದಲ ಹಾಗೂ ಎರಡನೇ ಹಂತಗಳಲ್ಲಿ ಮಹಿಳೆಯರು, ಆದಿವಾಸಿಗಳು, ದಲಿತರು, ಲೈಂಗಿಕ ಅಲ್ಪಸಂಖ್ಯಾತರು, ಮುಸ್ಲಿಮರು, ವಲಸೆ ಕಾರ್ಮಿಕರು ಸೇರಿದಂತೆ ಸುಮಾರು 7.5 ಕೋಟಿ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಟ್ರಾನ್ಸ್-ಫೆಮಿನಿಸ್ಟ್ ಕಲೆಕ್ಟಿವ್ ಸ್ಥಾಪಕಿ ಅಕ್ಕೈ ಪದ್ಮಶಾಲಿ ಮಾತನಾಡಿ, ಎಸ್‌ಐಆರ್ ಜಾರಿಯಾದರೆ ಲೈಂಗಿಕ ಅಲ್ಪಸಂಖ್ಯಾತರು, ದೇವದಾಸಿಯರು ಹಾಗೂ ಲೈಂಗಿಕ ಕಾರ್ಯಕರ್ತೆಯರು ಮತದಾನದ ಹಕ್ಕು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದರು.

“ಇತರ ರಾಜ್ಯಗಳಲ್ಲಿ ಈ ಪ್ರಕ್ರಿಯೆಯಿಂದ ಜನರಿಗೆ ಆಗಿರುವ ಅನ್ಯಾಯವನ್ನು ನೋಡಿದ್ದೇವೆ. ಕರ್ನಾಟಕದಲ್ಲಿ ನಾಗರಿಕರ ಹಕ್ಕು ಕಸಿಯದಂತೆ ನೋಡಿಕೊಳ್ಳಬೇಕು. ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ನಾಗರಿಕ ಸಂಘಟನೆಗಳ ಜೊತೆ ಮುಖ್ಯ ಚುನಾವಣಾಧಿಕಾರಿಗಳು ಸಮಾಲೋಚನೆ ನಡೆಸಬೇಕು” ಎಂದು ಒತ್ತಾಯಿಸಿದರು. ಎಸ್‌ಐಆರ್

ಇದನ್ನೂ ಓದಿ : ಮ್ಯಾಪಿಂಗ್‌ ಹೆಸರಿನ ಪರಿಷ್ಕರಣೆ – ಕರ್ನಾಟಕದಲ್ಲಿ ಎಸ್‌ಐಆರ್

ಬರಹಗಾರ ಮತ್ತು ಚಿಂತಕ ಶ್ರೀಪಾದ ಭಟ್ ಮಾತನಾಡಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲ್ಪಟ್ಟವರಿಗೆ ಸರ್ಕಾರದ ಕಲ್ಯಾಣ ಯೋಜನೆಗಳ ಸೌಲಭ್ಯವೂ ದೊರೆಯುವುದಿಲ್ಲ ಎಂಬ ಬಿಜೆಪಿ ಸಚಿವರ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

“ಕಾಂಗ್ರೆಸ್ ಪಕ್ಷವು ಮಹಿಳೆಯರು ಮತ್ತು ದಲಿತರ ಪರವಾಗಿ ನಿಲ್ಲಬೇಕು. ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಧ್ವನಿ ಎತ್ತದಿದ್ದರೆ ಅದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಮಾಡುವ ದ್ರೋಹವಾಗುತ್ತದೆ” ಎಂದು ಹೇಳಿದರು.

‘ನಾವೆದ್ದು ನಿಲ್ಲದಿದ್ದರೆ’ ಅಭಿಯಾನದ ಮಮತಾ ಯಜಮಾನ್ ಮಾತನಾಡಿ, “ಕುಟುಂಬದಿಂದ ಬಹಿಷ್ಕೃತಗೊಂಡ ಅಂತರ್ಜಾತಿ ಮತ್ತು ಅಂತರ್ಧರ್ಮೀಯ ವಿವಾಹವಾದ ಮಹಿಳೆಯರು ಎಸ್‌ಐಆರ್ ಪ್ರಕ್ರಿಯೆಯಲ್ಲಿ ಅಗತ್ಯ ದಾಖಲೆಗಳನ್ನು ಹೇಗೆ ಒದಗಿಸಬೇಕು?” ಎಂದು ಪ್ರಶ್ನಿಸಿದರು.

ಸ್ಲಂ ಜನಾರ ಸಂಘಟನೆ ಕರ್ನಾಟಕದ ರಾಜ್ಯ ಸಂಚಾಲಕ ಐಸಾಕ್ ಅಮೃತ್‌ರಾಜ್ ಮಾತನಾಡಿ, ಬಲವಂತದ ಸ್ಥಳಾಂತರಕ್ಕೆ ಒಳಗಾದ ಕೊಳಗೇರಿ ನಿವಾಸಿಗಳಿಗೆ 2002ರ ಮತದಾರರ ದಾಖಲೆಗಳನ್ನು ಒದಗಿಸುವುದು ಅಸಾಧ್ಯ ಎಂದು ಹೇಳಿದರು.

“ನಿರಂತರ ಸ್ಥಳಾಂತರಕ್ಕೆ ಒಳಗಾಗುತ್ತಿರುವ ಜನರು ತಮ್ಮ ಹಕ್ಕು ಉಳಿಸಿಕೊಳ್ಳಲು ಯಾವ ದಾಖಲೆ ನೀಡಬೇಕು ಎಂಬುದಕ್ಕೆ ಚುನಾವಣಾ ಆಯೋಗದ ಬಳಿ ಉತ್ತರ ಇಲ್ಲ” ಎಂದು ಆರೋಪಿಸಿದರು.

ಎಐಸಿಸಿಟಿಯು ರಾಜ್ಯ ಕಾರ್ಯದರ್ಶಿ ಮೈತ್ರೇಯಿ ಕೃಷ್ಣನ್ ಮಾತನಾಡಿ, ಉತ್ತರ ಕರ್ನಾಟಕದ ವಲಸೆ ಕಾರ್ಮಿಕರು ಎಸ್‌ಐಆರ್‌ನಿಂದ ಹೆಚ್ಚಾಗಿ ತೊಂದರೆಗೆ ಒಳಗಾಗಲಿದ್ದಾರೆ ಎಂದು ಎಚ್ಚರಿಸಿದರು.

ಮಾರ್ಗ ಕಲೆಕ್ಟಿವ್‌ನ ಕ್ವೀರ್ ಹಕ್ಕುಗಳ ಹೋರಾಟಗಾರ ಕ್ರಿಸ್ಟಿ ರಾಜ್ ಮಾತನಾಡಿ, ಲಿಂಗ ಪರಿವರ್ತನೆ ಹಾಗೂ ಹೆಸರು ಬದಲಾವಣೆ ಮಾಡಿಕೊಂಡಿರುವ ಟ್ರ್ಯಾನ್ಸ್‌ಜೆಂಡರ್ ಸಮುದಾಯಕ್ಕೆ ಅಗತ್ಯ ದಾಖಲೆಗಳನ್ನು ಪಡೆಯುವುದೇ ಕಷ್ಟಕರವಾಗಿದೆ ಎಂದರು.

“ಟಿಜಿ ಕಾರ್ಡ್‌ಗಳನ್ನು ನೀಡಿದ್ದರೂ, ಎಸ್‌ಐಆರ್‌ಗೆ ಅನುಮೋದಿಸಿರುವ 11 ದಾಖಲೆಗಳಲ್ಲಿ ಅದನ್ನು ಪರಿಗಣಿಸಿಲ್ಲ. ಇದು ಟ್ರ್ಯಾನ್ಸ್‌ಜೆಂಡರ್ ಸಮುದಾಯವನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ” ಎಂದು ಹೇಳಿದರು.

ಎಪಿಸಿಆರ್ ಕರ್ನಾಟಕದ ಸಂಚಾಲಕ ಮೊಹಮ್ಮದ್ ಪೀರ್ ಲಟಗೇರಿ ಮಾತನಾಡಿ, ಇತರ ರಾಜ್ಯಗಳಲ್ಲಿ ಎಸ್‌ಐಆರ್ ಬಗ್ಗೆ ವ್ಯಕ್ತವಾಗಿರುವ ಆತಂಕಗಳನ್ನು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.

“ಮತದಾರರನ್ನು ತಪ್ಪಾಗಿ ಪಟ್ಟಿಯಿಂದ ಹೊರಗಿಡದಂತೆ ಸರ್ಕಾರ ತುರ್ತಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಬೇಕು” ಎಂದು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆಗಳು ಎಚ್ಚರಿಸಿವೆ.

ಇದನ್ನೂ ನೋಡಿ :ಕರ್ನಾಟಕದ ಮತದಾರರ ಪಟ್ಟಿ ಪರಿಶೀಲನೆ – ಮ್ಯಾಪಿಂಗ್ ಆಗದ ಮತದಾರರು ಎಷ್ಟು? Janashakthi Media

Donate Janashakthi Media

Leave a Reply

Your email address will not be published. Required fields are marked *