ಡಿ.13-16 : ಕೇರಳದ ತ್ರಿಶೂರ್‌ ನಲ್ಲಿ ಎಐಕೆಎಸ್‌ ಅಖಿಲ ಭಾರತ ಸಮ್ಮೇಳನ

ದೇಶದ ಅತಿದೊಡ್ಡ ರೈತ ಸಂಘಟನೆ ಮತ್ತು ದೆಹಲಿಯ ಗಡಿಭಾಗದಲ್ಲಿ ನಡೆದ ರೈತರ ಐತಿಹಾಸಿಕ ಚಳುವಳಿಯ ನೇತೃತ್ವ ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ಭಾಗೀದಾರ ಸಂಘಟನೆ ಮತ್ತು ಈ ಚಳುವಳಿಯನ್ನು ದೇಶವ್ಯಾಪಿ ಹರಡಿಸಲು ಪ್ರಮುಖ ಪಾತ್ರ ವಹಿಸಿದ ಅಖಿಲ ಭಾರತ ಕಿಸಾನ್ ಸಭಾದ 35ನೇ ರಾಷ್ಟ್ರ ಸಮ್ಮೇಳನವು ಡಿಸೆಂಬರ್ 13-16 ವರೆಗೆ ಕೇರಳದ ತ್ರಿಶೂರಿನಲ್ಲಿ ನಡೆಯಲಿದೆ.

 

ಈ ಸಮ್ಮೇಳನದ ಅಂಗವಾಗಿ, ಡಿಸೆಂಬರ್ 5 ಮತ್ತು 6 ರಂದು ಕ್ರಮವಾಗಿ ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಉದ್ಘಾಟನೆಗೊಂಡ ಎರಡು ಹುತಾತ್ಮರ ಜ್ಯೋತಿ ಯಾತ್ರೆಗಳು ಡಿಸೆಂಬರ್ 8ರ ರಾತ್ರಿ ಸೇಲಂಗೆ ಆಗಮಿಸಿದವು. 1950 ಫೆಬ್ರವರಿ 11ರಂದು ಸೇಲಂ ಜೈಲಿನಲ್ಲಿ 22 ಜನ ಕಮ್ಯುನಿಸ್ಟರಾಗಿದ್ದ ರೈತ ಚಳವಳಿಯ ನಾಯಕರುಗಳನ್ನು ಪೋಲೀಸರು ಗುಂಡಿಕ್ಕಿ ಕೊಂದಿದ್ದರು. ಈ ಜೈಲಿನಲ್ಲಿ ಹುತಾತ್ಮರಿಗೆ ನಮಿಸಿದ ಎರಡೂ ಜಾತಾಗಳು ಒಟ್ಟಿಗೆ ಸಮ್ಮೇಳನ ನಡೆಯುವ ಕೇರಳದ ತ್ರಿಶೂರು ಕಡೆಗೆ ಪಯಣ ಆರಂಭಿಸಿದವು.

ತೆಲಂಗಾಣ ಸಶಸ್ತ್ರ ರೈತರ ಹೋರಾಟದ ಮೊದಲ ಹುತಾತ್ಮರಾದ ದೊಡ್ಡಿ ಕೊಮಾರಯ್ಯ ಅವರ ಗ್ರಾಮವಾದ ತೆಲಂಗಾಣದ ಕಡಿವೆಂಡಿಯಿಂದ ಮೊದಲ ಹುತಾತ್ಮರ ಜ್ಯೋತಿ ಯಾತ್ರೆ ಹೊರಟಿತು. ಎಐಕೆಎಸ್‌ನ ಹಣಕಾಸು ಕಾರ್ಯದರ್ಶಿ ಪಿ ಕೃಷ್ಣಪ್ರಸಾದ್ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯನ್ನು ಹಿರಿಯ ರೈತ ಮುಖಂಡ ಮತ್ತು ಎಐಕೆಎಸ್ ಉಪಾಧ್ಯಕ್ಷ ಎಸ್ ಮಲ್ಲಾ ರೆಡ್ಡಿ ಉದ್ಘಾಟಿಸಿದರು. ಯಾತ್ರೆಯ ಉಪನಾಯಕ ಟಿ.ಸಾಗರ್, ಮತ್ತು ಯಾತ್ರೆ ಮ್ಯಾನೆಜರ್ ಆಗಿ ಪ್ರಕಾಶನ್ ಮಾಸ್ಟರ್ ಇದ್ದರು. ಈ ಯಾತ್ರೆಯು ತೆಲಂಗಾಣದ ಹಲವು ಪ್ರದೇಶಗಳ ಮೂಲಕ ಕರ್ನಾಟಕದ ಬಾಗೇಪಲ್ಲಿಯನ್ನು ಪ್ರವೇಶಿಸಿ ಅಲ್ಲಿಂದ ಕೋಲಾರ ಮಾಲೂರು ಮೂಲಕ ತಮಿಳುನಾಡಿನ ಹೊಸೂರಿನ ಮೂಲಕ ಸೇಲಂಗೆ ಪ್ರವೇಶ ಪಡೆಯಿತು.

ಎರಡನೇ ಹುತಾತ್ಮರ ಜ್ಯೋತಿ ಯಾತ್ರೆಯು ನ್ಯಾಯಯುತ ವೇತನಕ್ಕಾಗಿ ಮತ್ತು ಜಾತಿ ದಬ್ಬಾಳಿಕೆಯ ವಿರುದ್ಧ ಹೋರಾಟಕ್ಕಾಗಿ ಮೇಲ್ ಜಾತಿಯ ಊಳಿಗಮಾನ್ಯ ಭೂಮಾಲೀಕರು ಮತ್ತು ಅವರ ಗೂಂಡಾಗಳಿಂದ 44 ಕೃಷಿ ಕಾರ್ಮಿಕರ ಹತ್ಯಾಕಾಂಡದ ಸ್ಥಳವಾದ ತಮಿಳುನಾಡಿನ ಕೀನ್ವನ್ಮಣಿಯಿಂದ ಹೊರಟಿತು. ಎಐಕೆಎಸ್‌ನ ಜಂಟಿ ಕಾರ್ಯದರ್ಶಿ ಡಾ. ವಿಜೂ ಕೃಷ್ಣನ್ ನೇತೃತ್ವದಲ್ಲಿ ನಡೆಯುತ್ತಿರುವ ಯಾತ್ರೆಯನ್ನು ಎಐಕೆಎಸ್‌ನ ಮಾಜಿ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಮ್ಯುನಿಸ್ಟ್ ಚಳವಳಿಯ ಹಿರಿಯ ನಾಯಕ 101ನೇ ವಯಸ್ಸಿನ ಎನ್. ಶಂಕರಯ್ಯ ಉದ್ಘಾಟಿಸಿದರು, ಅವರು ಜನವಿರೋಧಿ ಬಿಜೆಪಿ ಸರ್ಕಾರವನ್ನು ಸೋಲಿಸಲು ಕಾರ್ಮಿಕ-ರೈತ-ಕಾರ್ಮಿಕರ ಐಕ್ಯತೆ ಬಲವರ್ಧನೆಯಾಗಬೇಕೆಂದು ಕರೆ ನೀಡಿದರು.

ಎರಡೂ ಯಾತ್ರೆಗಳನ್ನು ರೈತರು, ಕಾರ್ಮಿಕರು ಮತ್ತು ಜನಸಾಮಾನ್ಯರು ಪ್ರಯಾಣದುದ್ದಕ್ಕೂ ಉತ್ಸಾಹದಿಂದ ಸ್ವಾಗತಿಸಿ, ಸಭೆಗಳನ್ನು ನಡೆಸಿದರು. ಹಲವೆಡೆ ರೈತರು ಕೃಷಿಗೆ ಸಂಬಂಧಿಸಿದ ತಮ್ಮ ಕುಂದುಕೊರತೆಗಳನ್ನು ಕಿಸಾನ್ ಸಭಾ ನಾಯಕರೊಂದಿಗೆ ಹಂಚಿಕೊಂಡರು.

ಕೇರಳ ರೈತ ಸಂಘದ ಅಧ್ಯಕ್ಷ ಎಂ.ವಿಜಯಕುಮಾರ್ ನೇತೃತ್ವದಲ್ಲಿ ಪುನ್ನಪ್ರಾ-ವಯಲಾರ್‌ನಿಂದ ಧ್ವಜ ಮೆರವಣಿಗೆಯನ್ನು ಡಿಸೆಂಬರ್ 9ರಂದು ಎಐಕೆಎಸ್ ಉಪಾಧ್ಯಕ್ಷ ಎಸ್ ರಾಮಚಂದ್ರನ್ ಪಿಳ್ಳೈ ಉದ್ಘಾಟಿಸಿದರು.

ಹುತಾತ್ಮ ಜ್ಯೋತಿ ಯಾತ್ರೆಗಳು ಮತ್ತು ಧ್ವಜ ಮೆರವಣಿಗೆ ಡಿಸೆಂಬರ್ 12ರಂದು ಕೇರಳದ ತ್ರಿಶೂರಿನಲ್ಲಿ ಸಮಾರೋಪಗೊಳ್ಳಲಿದ್ದು ಮರುದಿನ ಡಿಸೆಂಬರ್ 13 ರಿಂದ 16 ವರೆಗೆ ಅಖಿಲ ಭಾರತ ಕಿಸಾನ್ ಸಭಾದ 35 ನೇ ರಾಷ್ಟ್ರ ಸಮ್ಮೇಳನವು ನಡೆಯಲಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ದೇಶದ ಕೃಷಿ ಕ್ಷೇತ್ರದಲ್ಲಾಗಿರುವ ಬೆಳವಣಿಗೆ ಮತ್ತು ಬದಲಾವಣೆಗಳ ಕಿರಿತು ಲಿಖಿತ ವರದಿಯ ಆಧಾರದ ಮೇಲೆ ನಡೆಯುವ ಚರ್ಚೆಗಳಲ್ಲಿ ದೇಶದ ಎಲ್ಲಾ ರಾಜ್ಯಗಳನ್ನು ಪ್ರತಿನಿಧಿಸಿ ಸುಮಾರು ಒಂದು ಸಾವಿರದಷ್ಟು ಪ್ರತಿನಿಧಿಗಳು ಭಾಗವಹಿಸುತ್ತಾರೆ.

Donate Janashakthi Media

Leave a Reply

Your email address will not be published. Required fields are marked *