ಬೆಂಗಳೂರು: ಬೆಂಗಳೂರಿನಿಂದ 100 ಕಿ.ಮೀ. ವ್ಯಾಪ್ತಿಯ ಪ್ರಮುಖ ನಗರಗಳಿಗೆ ಚತುಷ್ಪಥ ರೈಲು ಮಾರ್ಗಗಳನ್ನು ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದ್ದು, ಕರಾವಳಿ ಭಾಗದ ಮಂಗಳೂರಿಗೂ ಇದೇ ರೀತಿಯ ಸಂಪರ್ಕ ಕಲ್ಪಿಸುವ ಬಗ್ಗೆ ಕೇಂದ್ರ ಸರ್ಕಾರ ಪರಿಗಣಿಸುತ್ತಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಚನ್ನಪಟ್ಟಣ ತಾಲೂಕಿನ ಎಲೆಕೇರಿ ಬಳಿ ನಿರ್ಮಿಸಲಾದ ರಸ್ತೆ ಮೇಲ್ಸೇತುವೆ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು ಪ್ರಸ್ತಾಪಿಸಿದ ರೈಲ್ವೆ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದರು.
ಬೆಂಗಳೂರು–ತುಮಕೂರು ಚತುಷ್ಪಥ ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಮುಂದಿನ ಒಂದೂವರೆ ರಿಂದ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹಾಗೆಯೇ ಬೆಂಗಳೂರು–ಮೈಸೂರು ಮಾರ್ಗದ ಚತುಷ್ಪಥ ನಿರ್ಮಾಣಕ್ಕೂ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ರಾಜ್ಯಗಳಲ್ಲಿ ಕಾಂಗ್ರೆಸ್ ಸಂಘಟನಾ ಪುನರ್ಸ್ಥಾಪನೆ ಆರಂಭ: ಪ್ರಮುಖ ನೇಮಕಾತಿಗಳ ಘೋಷಣೆ
ಬೆಂಗಳೂರು–ಕೋಲಾರ ನೇರ ರೈಲು ಸಂಪರ್ಕ ಕಲ್ಪಿಸುವ ಬೇಡಿಕೆಗೆ ಸ್ಪಂದಿಸಿದ ಸಚಿವರು, ಸದ್ಯ ವೈಟ್ಫೀಲ್ಡ್ ತನಕ ಇರುವ ನಾಲ್ಕು ಪಥದ ಮಾರ್ಗವನ್ನು ಮುಂದುವರಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕಾಗಿ ಅಗತ್ಯ ಭೂಸ್ವಾಧೀನವನ್ನು ಕೇಂದ್ರ ಸರ್ಕಾರವೇ ಕೈಗೊಳ್ಳಲಿದೆ ಎಂದು ಹೇಳಿದರು.
ಮಂಗಳೂರು ಸಂಪರ್ಕಕ್ಕೂ ಆದ್ಯತೆ
ಬೆಂಗಳೂರು–ಮಂಗಳೂರು ನಡುವೆ ವೇಗದ ರೈಲು ಸಂಪರ್ಕ ಅವಶ್ಯಕತೆಯನ್ನು ಉಲ್ಲೇಖಿಸಿದ ಸಚಿವರು, ಸಕಲೇಶಪುರ–ಗುಂಡ್ಯ ಭಾಗದಲ್ಲಿ ಸಮಾನಾಂತರ ರಸ್ತೆ ಮತ್ತು ರೈಲು ಮಾರ್ಗ ನಿರ್ಮಾಣದ ಸಲಹೆಯನ್ನು ಸ್ವಾಗತಿಸಿದರು. ಬಂದರು ನಗರ ಮಂಗಳೂರಿಗೆ ಉತ್ತಮ ಸಂಪರ್ಕ ಕಲ್ಪಿಸುವುದು ಆರ್ಥಿಕವಾಗಿ ಮಹತ್ವದ್ದಾಗಿದ್ದು, ಚತುಷ್ಪಥ ರೈಲು ಮಾರ್ಗ ಅಭಿವೃದ್ಧಿ ಆದ್ಯತೆಯಲ್ಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸದ ಡಾ.ಸಿ.ಎನ್. ಮಂಜುನಾಥ, ಶಾಸಕ ಸಿ.ಪಿ. ಯೋಗೀಶ್ವರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಪರಿಶೀಲನಾ ರೈಲಿನಲ್ಲಿ ಪ್ರಯಾಣ
ರೈಲ್ವೆ ಮೂಲಸೌಕರ್ಯದ ಗುಣಮಟ್ಟ ಮತ್ತು ಸುರಕ್ಷತೆ ಪರಿಶೀಲನೆಗಾಗಿ ಬಳಸುವ SPIC (Self-Propelled Inspection Car) ವಿಶೇಷ ರೈಲಿನಲ್ಲಿ ಸೋಮಣ್ಣ ಮತ್ತು ಪಾಟೀಲ ಅವರು ಬೆಂಗಳೂರುದಿಂದ ಚನ್ನಪಟ್ಟಣದವರೆಗೆ ಪ್ರಯಾಣಿಸಿ, ಪ್ರಗತಿಯಲ್ಲಿರುವ ಯೋಜನೆಗಳನ್ನು ಅವಲೋಕಿಸಿದರು.
ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್
ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭಿಸುವ ಬೇಡಿಕೆಗೆ ಸ್ಪಂದಿಸಿದ ಸಚಿವರು, ಇನ್ನೂ 3–4 ತಿಂಗಳಲ್ಲಿ ಈ ಸೇವೆ ಪ್ರಾರಂಭಿಸುವ ಸಾಧ್ಯತೆ ಇದೆ ಎಂದು ಹೇಳಿದರು. ಜೊತೆಗೆ ಬೆಂಗಳೂರು–ವಿಜಯಪುರ ವಿಶೇಷ ರೈಲನ್ನು ಕಾಯಂ ಮಾಡಲು ಹಾಗೂ ಸೌಲಭ್ಯಗಳನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದರ ಜೊತೆಗೆ ಬೆಂಗಳೂರು–ಪುಣೆ ನಡುವೆ ಹೈಸ್ಪೀಡ್ ರೈಲು ಸೇವೆ ಆರಂಭಿಸುವ ಬೇಡಿಕೆಯನ್ನು ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ನೋಡಿ: ದಲಿತ ಪ್ಯಾಂಥರ್ಸ್ ಮುಂದೆ ಆರೆಸ್ಸೆಸ್ ಮಂಡಿಯೂರಿದ್ದು ಹೇಗೆ? : ಕಾರವಾನ್ Janashakthi Media
