ಬಸ್‌ ಪ್ರಯಾಣ ದರ ಹೆಚ್ಚಳ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಸರಿಸುತ್ತಿರುವ ನೀತಿಗಳೇ ಕಾರಣ

ನಂದಿನಿ ಹಾಲು, ಮೊಸರಿನ ದರದಲ್ಲಿ ಹೆಚ್ಚಳವಾದ ಬೆನ್ನಲ್ಲೇ ಬಸ್‌ ಪ್ರಯಾಣ ದರದಲ್ಲೂ ಹೆಚ್ಚಳವಾಗಿದೆ. ಡೀಸಲ್‌ ದರದಲ್ಲಿ ಹೆಚ್ಚಳ, ಬಸ್ಸುಗಳ ನಿರ್ವಹಣಾ ವೆಚ್ಚದಲ್ಲಿ ಏರಿಕೆ ಇವು ಬಸ್‌ ಪ್ರಯಾಣ ದರ ಹೆಚ್ಚಳಕ್ಕೆ ಕಾರಣ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ನಿಗಮಗಳಲ್ಲಿ ನಡೆಯುವ ಭ್ರಷ್ಟಾಚಾರ, ಸೋರಿಕೆ, ಅವ್ಯವಹಾರಗಳ ಜೊತೆಗೆ, ಕೇಂದ್ರ ಸರ್ಕಾರದ ಫೇಮ್‌ ಯೋಜನೆಗಳ ಷರತ್ತುಗಳಿಗೆ ಒಪ್ಪಿ, ಖಾಸಗಿ ಎಲೆಕ್ಟ್ರಿಕ್‌ ಬಸ್ಸುಗಳ ಕಾರ್ಯಾಚರಣೆಗೆ ಸಾರಿಗೆ ನಿಗಮಗಳಲ್ಲಿ ಅವಕಾಶ ಕೊಟ್ಟಿರುವುದೂ ಸಾರಿಗೆ ಸಂಸ್ಥೆಗಳು ನಷ್ಟಹೊಂದಲು ಕಾರಣ. ಇವೆಲ್ಲಕ್ಕೂ ಮಿಗಿಲಾಗಿ, ಕ್ರಮೇಣ ಇಡೀ ಸಾರ್ವಜನಿಕ ಸಾರಿಗೆ ನಿಗಮಗಳು ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಹೋಗಲಿವೆ. ಆಗ, ಪ್ರಯಾಣ ದರ ನಿರ್ಧರಿಸುವುದು ಸರ್ಕಾರವಲ್ಲ, ಬದಲಿಗೆ ಖಾಸಗಿ ಕಂಪನಿಗಳು. ಬಸ್‌
-ಸಿ.ಸಿದ್ದಯ್ಯ

ಈಗಾಗಲೇ ಕಾಳುಗಳು, ಅಕ್ಕಿ, ರಾಗಿ, ಗೋಧಿ, ಸಕ್ಕರೆ, ಅಡುಗೆ ಎಣ್ಣೆ ಹಾಲು, ಮಾಂಸ, ಮೊಟ್ಟೆ ಸೇರಿದಂತೆ ಆಹಾರ ಧಾನ್ಯಗಳ ಬೆಲೆ ಏರಿಕೆಯು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳದಿಂದ ಜನಸಾಮಾನ್ಯರ ಜೀವನ ವೆಚ್ಚ ದುಬಾರಿಯಾಗಿದೆ.

ಗಾಯದ ಮೇಲೆ ಬರೆ ಎಳೆದಂತೆ, ರಾಜ್ಯ ಸರ್ಕಾರ 2026ರ ನವೆಂಬರ್‌ 5ರಿಂದ ಬಸ್ ಪ್ರಯಾಣ ದರಗಳನ್ನು ಹೆಚ್ಚಳಮಾಡಿದೆ. ಬಿಎಂಟಿಸಿ ಬಸ್ಸುಗಳ ಪ್ರಯಾಣ ದರ ಸರಾಸರಿ ಶೇ. 33 ರಿಂದ ಶೇ. 35 ರಷ್ಟು ಹೆಚ್ಚಳವಾದರೆ, ಇತರೆ ರಸ್ತೆ ಸಾರಿಗೆ ನಿಗಮಗಳಾದ KSRTC, KKRTC ಮತ್ತು NWKRTC ಗಳ ಪ್ರಯಾಣ ದರಗಳನ್ನು ಸರಾಸರಿ ಶೇ. 23 ರಷ್ಟು ಹೆಚ್ಚಳವಾಗಿದೆ. ಇದು ಉದ್ಯೋಗದ ಸ್ಥಳಕ್ಕೆ ಮತ್ತು ಇತರೆ ಅಗತ್ಯಗಳಿಗೆ ದಿನನಿತ್ಯ ಬಸ್ಸುಗಳಲ್ಲಿ ಪ್ರಯಾಣಿಸುವ ಬಡವರು ಮತ್ತು ಮದ್ಯಮ ವರ್ಗದ ಕುಟುಂಬಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸಾಮಾನ್ಯ ಜನರ ಆದಾಯ ಹೆಚ್ಚದಿದ್ದರೂ ಖರ್ಚುಗಳು ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಜೊತೆಗೆ ನಿರುದ್ಯೋಗ, ಖಾಯಂ ಉದ್ಯೋಗ ಇಲ್ಲದ ಕಾರಣ ನಿಗಧಿತ ಆದಾಯ ಇಲ್ಲದ ಹಲವು ಕುಟುಂಬಗಳನ್ನು ಈ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಗಳಿಗೆ ದೂಡಿದೆ.

ಡೀಸೆಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದರಗಳಲ್ಲಿ ಹೆಚ್ಚಳ ಮತ್ತು ಸಿಬ್ಬಂದಿ ವೇತನ ಸೇರಿದಂತೆ, ಬಸ್ಸುಗಳ ನಿರ್ವಹಣಾ ವೆಚ್ಚ ಹೆಚ್ಚಿರುವ ಕಾರಣದಿಂದಾಗಿ ಸಾರಿಗೆ ನಿಗಮಗಳು ನಷ್ಟದಲ್ಲಿವೆ, ಈ ಕಾರಣದಿಂದ ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎಂದು ಡಿ.ಕೆ.ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಹೇಳುತ್ತಿದೆ. ಅದು, ಎಲೆಕ್ಟ್ರಿಕ್‌ ಬಸ್ಸುಗಳ ಕಾರ್ಯಾಚರಣೆಯಿಂದ ಆಗುತ್ತಿರುವ ನಷ್ಟದ ಬಗ್ಗೆ ಹೇಳುತ್ತಿಲ್ಲ. ಮಾತ್ರವಲ್ಲ, ಕೇಂದ್ರ ಸರ್ಕಾರದ ಒತ್ತಡದಿಂದಾಗಿ, ದೇಶೀಯ/ಅಂತರರಾಷ್ಟ್ರೀಯ ಖಾಸಗಿ ಹೂಡಿಕೆದಾರರಿಗೆ (ಎಲೆಕ್ಟ್ರಿಕ್‌ ಬಸ್ಸುಗಳ ಮಾಲೀಕರಿಗೆ) ಮಾತ್ರ ಲಾಭದ ಖಾತರಿ ನೀಡಲಾಗುತ್ತದೆ ಮತ್ತು ಕ್ರಮೇಣ ಇಡೀ ಸಾರ್ವಜನಿಕ ಸಾರಿಗೆ ಕಂಪನಿಗಳನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಜನರ ಬಳಿ ಕೊಂಡೊಯ್ಯುತ್ತಿಲ್ಲ. ಬದಲಾಗಿ, ರಾಜ್ಯ ಸರ್ಕಾರವು ಖಾಸಗಿ ಎಲೆಕ್ಟ್ರಿಕ್ ಬಸ್ ನೀತಿಯನ್ನು ಉತ್ತೇಜಿಸಿ, ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುತ್ತಿದೆ.

ʼಶಕ್ತಿʼ ಯೋಜನೆ ಕಾರಣ ಎನ್ನುತ್ತಿರುವ ಬಿಜೆಪಿ!!

ಮತ್ತೊಂದೆಡೆ, ಮಹಿಳೆಯರಿಗೆ ʼಶಕ್ತಿʼ ಯೋಜನೆಯ ಮೂಲಕ ಉಚಿತ ಪ್ರಯಾಣ ಸೌಲಭ್ಯ ಒದಗಿಸುತ್ತಿರುವುದೇ ಸಾರಿಗೆ ನಿಗಮಗಳ ನಷ್ಟಕ್ಕೆ ಕಾರಣ ಎಂದು ಬಿಜೆಪಿ ನಾಯಕರು ಸುಳ್ಳು ಹೇಳತೊಡಗಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣದ ಹಣವನ್ನು ರಾಜ್ಯ ಸರ್ಕಾರ ನಿಗಮಗಳಿಗೆ ಕೊಡುತ್ತಿದೆ ಮತ್ತು ಟಿಕೆಟ್‌ ದರ ಅಥವಾ ಈಗ ಹೆಚ್ಚಳ ಮಾಡಿರುವ ಆದಾಯ ಸರ್ಕಾರಕ್ಕೆ ಹೋಗುವುದಿಲ್ಲ, ಅದು ನಿಗಮಗಳಿಗೆ ಹೋಗುತ್ತದೆ ಎಂದು ತಿಳಿಯದಷ್ಟು ಅವರು ದಡ್ಡರೇನಲ್ಲ. ಶಕ್ತಿ ಯೋಜನೆಯ ಪ್ರಯೋಜನ ಪಡೆಯುತ್ತಿರುವ ಮಹಿಳೆಯರ ವಿರುದ್ಧ ಜನರನ್ನು ಎತ್ತಿಕಟ್ಟುವ ಪ್ರಯತ್ನವನ್ನು ಸಂಘಪರಿವಾರ ಮಾಡುತ್ತಿದೆ. ಈ ಮೂಲಕ, ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಗಳನ್ನು ಮತ್ತು ಜನವಿರೋಧಿ ನೀತಿಗಳನ್ನು ಜನರಿಂದ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ.

ಸಾರಿಗೆ ನಿಗಮಗಳು ಸಂಪೂರ್ಣವಾಗಿ ಖಾಸಗಿಯವರ ತೆಕ್ಕೆಗೆ ಹೋಗಲಿವೆ

ಬೆಂಗಳೂರು ನಗರದಲ್ಲಿ ಬಿಎಂಟಿಸಿ ಯ ಒಟ್ಟು 6907 ಬಸ್ಸುಗಳ ಪೈಕಿ, ಜೆಸಿಸಿ (Gross cost contract̲ ̲ ಒಟ್ಟು ವೆಚ್ಚದ ಒಪ್ಪಂದ) ಮಾದರಿಯಲ್ಲಿ 1779 ಎಲೆಕ್ಟ್ರಿಕ್‌ ಬಸ್ಸುಗಳು ಕಾರ್ಯಾಚರಣೆ ನಡೆಸುತ್ತಿವೆ. (ಜೆಸಿಸಿ ಒಪ್ಪಂದವನ್ನು ವೆಚ್ಚಗಳು ಮತ್ತು ಪ್ರಯೋಜನಗಳನ್ನು ಒಳಗೊಂಡಂತೆ ನಿರ್ಧರಿಸಲಾಗುತ್ತದೆ.) ಮುಂದಿನ ದಿನಗಳಲ್ಲಿ ಇನ್ನೂ 4,500 ಎಲೆಕ್ಟ್ರಿಕ್‌ ಬಸ್ಸುಗಳು ಹಂತ-ಹಂತವಾಗಿ ನಗರದ ರಸ್ತೆಗಿಳಿಯಲಿವೆ.

ಕೇಂದ್ರ ಸರ್ಕಾರವು 2025ರ ಡಿಸೆಂಬರ್‌ನಲ್ಲಿ ‘ಪಿಎಂ ಇ-ಡ್ರೈವ್’ (PM E-DRIVE) ಯೋಜನೆಯಡಿ ಬೆಂಗಳೂರಿಗೆ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸುವ ಪ್ರಸ್ತಾವನೆಗೆ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿತ್ತು. ಆದರೆ, ಕರ್ನಾಟಕ ಸರ್ಕಾರವು ಅಗತ್ಯವಿರುವ ‘ಲೆಟರ್ ಆಫ್ ಅವಾರ್ಡ್’ (LoA) ಅನ್ನು ನೀಡಿರಲಿಲ್ಲ. ತಿಂಗಳುಗಟ್ಟಲೆ ವಿಳಂಬದ ನಂತರ, ಸೆಪ್ಟೆಂಬರ್ 2026ರಲ್ಲಿ ರಾಜ್ಯ ಸಚಿವ ಸಂಪುಟವು ಕೇಂದ್ರ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಇಷ್ಟು ಸಂಖ್ಯೆಯ ಬಸ್ಸುಗಳಿಗೆ ಕೇಂದ್ರ ಸರ್ಕಾರದಿಂದ ಸಿಗುವ ಸಬ್ಸಿಡಿ ಮೊತ್ತ 1,505 ಕೋಟಿ ರೂಪಾಯಿಗಳು. (ಸಾರ್ವಜನಿಕರ ತೆರಿಗೆ ಹಣದಿಂದ ನೀಡುವ ಈ ಸಬ್ಸಿಡಿ ಖಾಸಗಿ ಎಲೆಕ್ಟ್ರಿಕ್‌ ಬಸ್‌ ಮಾಲೀಕರಿಗೆ ಎಂಬುದು ನೆನಪಿರಲಿ.)

ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಟೆಂಡರ್‌ಗಳನ್ನು ಕರೆದು, ಆರು ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಪ್ರತಿ ಬಸ್ಸಿನ ವೆಚ್ಚವು 1.2 ಕೋಟಿ ರೂಪಾಯಿಯಿಂದ 1.5 ಕೋಟಿ ರೂಪಾಯಿಗಳಷ್ಟಿರುತ್ತದೆ. ಹವಾನಿಯಂತ್ರಿತ (ಎಸಿ) ಬಸ್‌ ಗಳಿಗಾಗಿ ‘ಗ್ರೀನ್‌ಸೆಲ್ ಮೊಬಿಲಿಟಿ’ (Greencell Mobility) ಸಂಸ್ಥೆಯು ಅತಿ ಕಡಿಮೆ ಬಿಡ್ ಸಲ್ಲಿಸುವ ಮೂಲಕ ಆಯ್ಕೆಯಾಗಿದೆ. ಹವಾನಿಯಂತ್ರಿತವಲ್ಲದ (ನಾನ್‌ ಎಸಿ) ಬಸ್‌ಗಳ ವಿಭಾಗದಲ್ಲಿ ‘ಚಾರ್ಟರ್ಡ್ ಸ್ಪೀಡ್’ (Chartered Speed) ಮತ್ತು ‘ಪಿಎಂಐ ಎಲೆಕ್ಟ್ರೋ ಮೊಬಿಲಿಟಿ’ (PMI Electro Mobility) ಸಂಸ್ಥೆಗಳು ಅತಿ ಕಡಿಮೆ ಬಿಡ್‌ಗಳನ್ನು ಸಲ್ಲಿಸಿವೆ. (ಮನಿಕಂಟ್ರೋಲ್‌: 03, ಸೆಪ್ಟೆಂಬರ್‌ 2026).

ಸಾರಿಗೆ ನಿಗಮವು ಪ್ರಸ್ತುತ ಸುಮಾರು 6,937 ಬಸ್‌ಗಳನ್ನು ನಿರ್ವಹಿಸುತ್ತಿದ್ದು, ಇದರಲ್ಲಿ 1,779 ಎಲೆಕ್ಟ್ರಿಕ್ ಬಸ್‌ಗಳು ಸೇರಿವೆ. ಅಲ್ಲದೆ, ಹಳೆಯದಾದ ಸುಮಾರು 1,000 ಬಸ್‌ಗಳನ್ನು ನಿಷ್ಕ್ರಿಯಗೊಳಿಸುವ (ಸ್ಕ್ರಾಪ್ ಮಾಡುವ) ಸಾಧ್ಯತೆಯೂ ಇದೆ. ಸಾವಿರ ಬಸ್ಸುಗಳನ್ನು ಸ್ಕ್ರಾಪ್‌ ಮಾಡಿದ ನಂತರ ಬಿಎಂಟಿಸಿ ಮಾಲೀಕತ್ವದ ಬಸ್ಸುಗಳ ಸಂಖ್ಯೆ 4158ಕ್ಕೆ (5158-1000=4158) ಇಳಿದರೆ, ಖಾಸಗಿ ಮಾಲೀಕತ್ವದ ಎಲೆಕ್ಟ್ರಿಕ್‌ ಬಸ್ಸುಗಳ ಸಂಖ್ಯೆ ಈಗಿನ 1779 ರಿಂದ 6279 ಕ್ಕೆ ಏರಿಕೆಯಾಗಿಲಿವೆ. ಅಲ್ಲಿಗೆ ಖಾಸಗಿ ಮಾಲೀಕತ್ವದ ಬಸ್ಸುಗಳ ಸಂಖ್ಯೆ ಸರಿಸುಮಾರು ಶೇ. 66 ರಷ್ಟಾಗುತ್ತದೆ.

ಬಿಜೆಪಿ ಲೋಕಸಭಾ ಸದಸ್ಯರಾದ ತೇಜಸ್ವಿಸೂರ್ಯ ಅವರು ಜೂನ್ 29, 2026 ರಲ್ಲಿ ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಿ, ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸುವ ನೆಪದಲ್ಲಿ, “ಬೆಂಗಳೂರಿಗೆ ಕೇಂದ್ರದಿಂದ ಅನುಮೋದಿತ 4,500 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಡುಗಡೆ ಮಾಡುವುದನ್ನು ಕರ್ನಾಟಕ ಸರ್ಕಾರವು ವಿಳಂಬ ಮಾಡುತ್ತಿದೆ” ಎಂದು ಬಸ್ ಪ್ರಯಾಣಿಕರಿಗೆ, ಅದರಲ್ಲೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹೇಳುತ್ತಿದ್ದರು. ಇದರ ಹಿಂದೆಯೂ, ಸಾರ್ವಜನಿಕ ಸಾರಿಗೆ ಸಂಸ್ಥೆಗಳನ್ನು ಸಾಧ್ಯವಾದಷ್ಟು ಬೇಗ ಖಾಸಗಿಯವರಿಗೆ ಒಪ್ಪಿಸಬೇಕು ಎಂಬ ತುಡಿತ ಇತ್ತು. ಬಸ್‌

ಇದನ್ನೂ ಓದಿ : 88 ಸಾವಿರ ಪತ್ರಿಕೆಗಳ ನೋಂದಣಿ ರದ್ದು: ಸಣ್ಣ ಪತ್ರಿಕೆಗಳ ಕತ್ತು ಹಿಸುಕುತ್ತಿದೆಯೇ ಹೊಸ ನಿಯಮ? ಅಂಚೆ ವೆಚ್ಚದ ಹೊರೆ!

ಏನಿದು FAME ಯೋಜನೆಗಳು

ಕೇಂದ್ರ ಸರ್ಕಾರವು 2015 ರಿಂದ FAME 1 ಮತ್ತು 2019 ರಿಂದ FAME 2 ಅನ್ನು ಪರಿಚಯಿಸಿತು (ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ಉತ್ಪಾದನೆ). ಫೇಮ್ 2ರ ನಿಯಮದೊಳಗೆ ಬಸ್ ಗಳ ಖರೀದಿ, ನಿರ್ವಹಣೆ ಹಾಗೂ ಚಾಲನೆಯನ್ನು ಖಾಸಗಿಯವರೇ ಮಾಡಬೇಕು ಎಂಬ ಷರತ್ತನ್ನು ಕೇಂದ್ರ ವಿಧಿಸಿದೆ. ಇದಕ್ಕಾಗಿ ಜಿಸಿಸಿ (ಒಟ್ಟು ವೆಚ್ಚದ ಒಪ್ಪಂದ).

ಎಲೆಕ್ಟ್ರಿಕ್ ಬಸ್‌ಗಳನ್ನು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಖರೀದಿಸುತ್ತಾರೆ. ಅವರಿಗೆ ಪೇಮ್ -2 ಯೋಜನೆಯ ಮೂಲಕ ಒಂದು ಬಸ್ಸು ಖರೀದಿಸಲು ಕೇಂದ್ರ ಸರ್ಕಾರ 30ರಿಂದ 50 ಲಕ್ಷದವರೆಗೂ ಸಹಾಯಧನ ನೀಡುತ್ತಿತ್ತು.

FAME -I (01.04.2015 ರಿಂದ 31.03.2019) ರಲ್ಲಿ ದೇಶದ ವಿವಿಧ ನಗರಗಳಲ್ಲಿ 425 ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಬಸ್‌ಗಳನ್ನು ಮಂಜೂರು ಮಾಡಿ ನಿಯೋಜಿಸಲಾಗಿದ್ದು, ಸರ್ಕಾರದ ಸುಮಾರು 280 ಕೋಟಿ ರೂ. ಪ್ರೋತ್ಸಾಹಧನ ನೀಡಲಾಗಿದೆ. FAME-II ಯೋಜನೆಯಡಿಯಲ್ಲಿ ನಗರದೊಳಗಿನ ಕಾರ್ಯಾಚರಣೆಗಾಗಿ ವಿವಿಧ ನಗರಗಳು/STUಗಳು/ರಾಜ್ಯ ಸರ್ಕಾರಿ ಘಟಕಗಳಿಗೆ 6,862 ವಿದ್ಯುತ್ ಬಸ್‌ಗಳನ್ನು ಮಂಜೂರು ಮಾಡಲಾಗಿದೆ. 6,862 ಇ-ಬಸ್‌ಗಳಲ್ಲಿ, 5,135 ಇ-ಬಸ್‌ಗಳನ್ನು 28.02.2025 ರವರೆಗೆ ಪೂರೈಸಲಾಗಿದೆ.

01.04.2024 ರಿಂದ ಜಾರಿಗೆ ಬಂದಿರುವ PM E-DRIVE ಯೋಜನೆಯಡಿಯಲ್ಲಿ ಒಂಬತ್ತು ಪ್ರಮುಖ ನಗರಗಳಲ್ಲಿ (ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಅಹಮದಾಬಾದ್, ಸೂರತ್, ಬೆಂಗಳೂರು, ಪುಣೆ ಮತ್ತು ಹೈದರಾಬಾದ್) 14,028 ಇ-ಬಸ್‌ಗಳ ನಿಯೋಜನೆಗೆ ರೂ. 4,391 ಕೋಟಿ ಅನುದಾನ ನೀಡಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. MoRTH ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸಾರಿಗೆ ನಿಗಮಗಳ ಹಳೆಯ ಬಸ್ಸುಗಳನ್ನು ಸ್ಕ್ರಾಪ್‌ ಮಾಡಿದ ನಂತರ ಇ-ಬಸ್‌ಗಳನ್ನು ಖರೀದಿಸುವ ನಗರಗಳಿಗೆ ಆದ್ಯತೆ ನೀಡಲಾಗುವುದು. (ಮಾಹಿತಿ ಮೂಲ: ಪಿಐಬಿ- ಭಾರತ ಸರ್ಕಾರ)

ಒಟ್ಟು ವೆಚ್ಚ ಒಪ್ಪಂದ (ಜಿಸಿಸಿ) ವಿಧಾನದ ಅಡಿಯಲ್ಲಿ

ಕೇಂದ್ರ ಸರ್ಕಾರ ತಂದಿರುವ ಎಲ್ಲಾ ಎಲೆಕ್ಟ್ರಿಕ್ ಬಸ್ ಯೋಜನೆಗಳು ಒಟ್ಟು ವೆಚ್ಚ ಒಪ್ಪಂದ (ಜಿಸಿಸಿ) ವಿಧಾನದ ಅಡಿಯಲ್ಲಿವೆ. ಬಸ್‌ಗಳ ಖರೀದಿ, ನಿರ್ವಹಣೆ ಮತ್ತು ಕಾರ್ಯಾಚರಣೆಯನ್ನು ಖಾಸಗಿ ಕಾರ್ಪೊರೇಟ್ ಕಂಪನಿಗಳು ನಿರ್ವಹಿಸುತ್ತವೆ. ಚಾಲಕರನ್ನು ಬಸ್ ಮಾಲೀಕರೇ ನೇಮಕ ಮಾಡಿಕೊಳ್ಳುತ್ತಾರೆ. ಕಂಡಕ್ಟರ್‌ ಮಾತ್ರ ಸಾರಿಗೆ ಸಂಸ‍್ಥೆಯ ನೌಕರರಾಗಿರುತ್ತಾರೆ. ಆರ್‌ಟಿಸಿ ಮಾಡಬೇಕಾಗಿರುವುದು ಬಸ್‌ಗಳು ಯಾವ ಮಾರ್ಗದಲ್ಲಿ ಓಡುತ್ತವೆ ಎಂಬುದನ್ನು ನಿರ್ಧರಿಸುವುದು, ಆ ಬಸ್‌ನಲ್ಲಿನ ಟಿಕೆಟ್‌ಗಳ ಆಧಾರದ ಮೇಲೆ ಆದಾಯ ಗಳಿಸುವುದು ಮತ್ತು ಮಾಡಿದ ಒಪ್ಪಂದದ ಪ್ರಕಾರ ಪ್ರತಿ ತಿಂಗಳು ಎಲೆಕ್ಟ್ರಿಕ್ ಬಸ್ ಕಂಪನಿಗೆ ಹಣ ಪಾವತಿಸುವುದು (ಆದಾಯವನ್ನು ಲೆಕ್ಕಿಸದೆ). ಒಪ್ಪಂದದ ಪ್ರಕಾರ, ನಿರ್ವಹಣಾ ಕಾರಣಗಳಿಂದ ಆರ್‌ಟಿಸಿ ಅದನ್ನು ರದ್ದುಗೊಳಿಸಿದರೂ ಸಹ ಹಣವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಮೂಲಸೌಕರ್ಯಗಳನ್ನು ರಚಿಸುವ ಜವಾಬ್ದಾರಿ ಆರ್‌ಟಿಸಿ ಆಡಳಿತದ ಮೇಲಿದೆ.

ದಿನವೊಂದಕ್ಕೆ ಕನಿಷ್ಟ 200 ಕಿಮೀ ಮತ್ತು ಪ್ರತಿ ಕಿಮೀ ಗೆ 51 ರೂ. ಹಣವನ್ನು ಬಿಎಂಟಿಸಿ ಪಾವತಿಸಬೇಕು. ಎಸಿ ಬಸ್ಸುಗಳಿಗೆ ಕಿಮೀ ದರದಲ್ಲಿ ವ್ಯತ್ಯಾಸ ಇದೆ. (ಕೆಎಸ್‌ ಆರ್‌ ಟಿಸಿ ಬಸ್ಸುಗಳಿಗೆ ದಿನವೊಂದಕ್ಕೆ ಕನಿಷ್ಟ 250 ಕಿ.ಮೀ.)

ಎಲೆಕ್ಟ್ರಿಕ್‌ ಬಸ್ಸುಗಳಿಂದ ಮಾತ್ರ ಮಾಲಿನ್ಯ ನಿಯಂತ್ರಣ ಸಾಧ್ಯವೇ?

ಭಾರತದಲ್ಲಿ ಮಾಲಿನ್ಯ ನಿಯಂತ್ರಣವನ್ನು ಆರ್‌ಟಿಸಿ ಬಸ್ಸುಗಳನ್ನು ಬದಲಾಯಿಸುವುದರಿಂದ ಸಾಧಿಸಬಹುದು ಎಂದು ಸರ್ಕಾರಗಳು ಪ್ರಚಾರ ಮಾಡುತ್ತಿವೆ. ದೇಶದಲ್ಲಿ 42 ಕೋಟಿ ವಾಹನಗಳಿದ್ದರೆ, ಅದರಲ್ಲಿ 30 ಕೋಟಿ ದ್ವಿಚಕ್ರ ವಾಹನಗಳು, 5 ಕೋಟಿ ಕಾರುಗಳು, ಜೀಪ್‌ಗಳು ಮತ್ತು 7 ಕೋಟಿ ಲಾರಿಗಳು ಮತ್ತು ಬಸ್‌ಗಳು. ನೀತಿ ಆಯೋಗದ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ 1,40,000 ಬಸ್‌ಗಳು ಅಂದರೆ, ಕೇವಲ 0.033 ಪ್ರತಿಶತ ವಾಹನಗಳು ಆರ್‌ಟಿಸಿ ಬಸ್‌ಗಳಾಗಿವೆ. ಸರ್ಕಾರವು ನಿಜವಾಗಿಯೂ ಪರಿಸರವನ್ನು ರಕ್ಷಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಬಯಸಿದರೆ, ಅದು ಖಾಸಗಿ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಸಾರಿಗೆಯನ್ನು ಅಭಿವೃದ್ಧಿಪಡಿಸಬೇಕು. ಸಾರ್ವಜನಿಕ ಸಾರಿಗೆಯನ್ನು ವಿಸ್ತರಿಸುವುದು ಮತ್ತು ಕೈಗೆಟುಕುವ ಬೆಲೆಯಲ್ಲಿ ದೈನಂದಿನ ಅಗತ್ಯಗಳಿಗಾಗಿ ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದು ಮೊದಲ ಕಾರ್ಯವಾಗಬೇಕು. ಸಾರ್ವಜನಿಕ ಸಾರಿಗೆಯನ್ನು ಲಾಭ ಮತ್ತು ನಷ್ಟದ ಪ್ರಮಾಣದಲ್ಲಿ ಅಳೆಯುವುದು ಸರಿಯಲ್ಲ.

ಸಾರಿಗೆ ನಿಗಮದ ಆಸ್ತಿ ಖಾಸಗಿ ಕಂಪನಿಗಳಿಗೆ

ಇನ್ನು ರಾಜ್ಯ ಸಾರಿಗೆ ನಿಗಮಗಳ ಆಸ್ತಿಗಳನ್ನೂ ಖಾಸಗಿ ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ ಹಸ್ತಾಂತರಿಸುವ ಮೂಲಕ, ಸಾರ್ವಜನಿಕರ ಕೋಟ್ಯಾಂತರ ರೂ ಮೌಲ್ಯದ ಆಸ್ತಿ ಖಾಸಗಿಯವರ ಪಾಲಾಗುತ್ತದೆ. ವಿದ್ಯುತ್ ಸಬ್‌ಸ್ಟೇಷನ್‌ಗಳನ್ನು ಸ್ಥಾಪಿಸುವ ಮತ್ತು ಮೂಲಸೌಕರ್ಯವನ್ನು ಸೃಷ್ಟಿಸುವ ಹೆಸರಿನಲ್ಲಿ ಆರ್‌ಟಿಸಿಗಳ ಭೂಮಿಯನ್ನು ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ಬಿಎಂಟಿಸಿಯ 12 ಡೀಸೆಲ್ ಡಿಪೋಗಳನ್ನು ಎಲೆಕ್ಟ್ರಿಕ್ ಡಿಪೋಗಳಾಗಿ ಪರಿವರ್ತಿಸಲಾಗುತ್ತಿದೆ. ತಮಿಳುನಾಡಿನಲ್ಲಿ 5 ಡಿಪೋಗಳು ಮತ್ತು ಆಂಧ್ರಪ್ರದೇಶದಲ್ಲಿ 19 ಡಿಪೋಗಳನ್ನು ಸಂಪೂರ್ಣವಾಗಿ ಖಾಸಗಿ ಎಲೆಕ್ಟ್ರಿಕ್ ಬಸ್ ಕಂಪನಿಗಳಿಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು. ದೇಶೀಯ/ಅಂತರರಾಷ್ಟ್ರೀಯ ಖಾಸಗಿ ಹೂಡಿಕೆದಾರರಿಗೆ ಮಾತ್ರ ಲಾಭದ ಖಾತರಿ ನೀಡಲಾಗುತ್ತದೆ ಮತ್ತು ಇಡೀ ಸಾರ್ವಜನಿಕ ಸಾರಿಗೆ ಕಂಪನಿಗಳನ್ನು ಅವರಿಗೆ ಹಸ್ತಾಂತರಿಸಲಾಗುತ್ತಿದೆ.

ಉದ್ಯೋಗ ಕಳೆದುಕೊಳ್ಳಲಿರುವ ಸಂಸ್ಥೆಯ ನೌಕರರು

ಎಲೆಕ್ಟ್ರಿಕ್ ಬಸ್ಸುಗಳ ಸಂಖ್ಯೆ ಹೆಚ್ಚಾದಂತೆ, ಈಗಿರುವ ಡೀಸಲ್ ಚಾಲಿತ ಬಸ್ಸುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿದಂತೆ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್ ಬಸ್‌ಗಳಾದರೆ, ಈಗ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಮತ್ತು ಬಿಎಂಟಿಸಿ ಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಾರೆ. ಇದರ ಪರಿಣಾಮ ಮೊದಲು ಮೆಕ್ಯಾನಿಕ್‌ಗಳ ಮೇಲೆ ಬೀರುತ್ತದೆ. ಅವರನ್ನು ಕಂಡಕ್ಟರ್‌ಗಳು ಮತ್ತು ಡ್ರೈವರ್‌ಗಳಾಗಿ ಮರು ವರ್ಗೀಕರಿಸಲು ನಿಗಮಗಳು ಕ್ರಮ ತೆಗೆದುಕೊಳ್ಳತ್ತಿವೆ. ಯಾವುದಾದರೂ ಹೆಸರಿನಲ್ಲಿ ಕೆಲವು ಹೊಂದಾಣಿಕೆಗಳನ್ನು ಮಾಡಿದರೂ, ಬಹುತೇಕ ಆರ್‌ಟಿಸಿ ಕಾರ್ಮಿಕರು ತಮ್ಮ ಕೆಲಸವನ್ನು ಕಳೆದುಕೊಳ್ಳಬೇಕಾಗುತ್ತದೆ.

ದುಬಾರಿ ಪ್ರಯಾಣ ದರದ ಅಪಾಯ

ಸಾರ್ವಜನಿಕ ಸಾರಿಗೆ ನಿಗಮಗಳು ಖಾಸಗಿಯವರ ವಶಕ್ಕೆ ಹೋದ ನಂತರ, ಬಸ್ ಪ್ರಯಾಣದರ ನಿಗದಿ ಸರ್ಕಾರದ ಕೈ ತಪ್ಪಿಹೋಗುತ್ತದೆ. ಖಾಸಗಿಯವರು ತಮಗೆ ಇಷ್ಟ ಬಂದಂತೆ ದರ ನಿಗದಿ ಮಾಡುತ್ತಾರೆ. ಟ್ಯಾಕ್ಸಿ ಮತ್ತು ಆಟೋರಿಕ್ಷಾ ಸೇವಾ ವಲಯದಲ್ಲಿ ಈಗಾಗಲೇ  ಬಹುತೇಕ ಏಕಸ್ವಾಮ್ಯ ಮಾಡಿಕೊಂಡಿರುವ ಒಲಾ, ಉಬರ್, ನಮ್ಮ ಯಾತ್ರಿ ಇಂತಹ ಸ್ವದೇಶಿ ಮತ್ತು ವಿದೇಶಿ ಸಂಸ್ಥೆಗಳನ್ನು ನಿಯಂತ್ರಿಸಲು ಸರ್ಕಾರ ಅಥವಾ ಸಾರಿಗೆ ಇಲಾಖೆಯಿಂದ ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು. ಜನರಿಗೆ ಸಾರಿಗೆ ಸೌಲಭ್ಯ ಒದಗಿಸುವ ಜವಾಬ್ದಾರಿಗಿಂತ ಲಾಭ ಗಳಿಸುವುದೇ ಮುಖ್ಯವಾಗಿರುವ ಕಾರಣದಿಂದ, ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಡೆಗಳಲ್ಲಿ ಬಸ್ ಸಂಚಾರವನ್ನು ಸ್ಥಗಿತಗೊಳಿಸುತ್ತಾರೆ. ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಗಳು ಏನೆಲ್ಲಾ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

ನೀತಿ ಬದಲಾವಣೆಗಳ ಅಗತ್ಯವಿದೆ

ಕೇಂದ್ರ ಸರ್ಕಾರ ತರುತ್ತಿರುವ ಎಲೆಕ್ಟ್ರಿಕ್ ಬಸ್ ಯೋಜನೆಯಲ್ಲಿ ಬದಲಾವಣೆಗಳನ್ನು ಮಾಡುವ ಅವಶ್ಯಕತೆಯಿದೆ. ಖಾಸಗಿ ಕಾರ್ಪೊರೇಟ್‌ಗಳಿಗೆ ನೀಡುವ ಸಬ್ಸಿಡಿಗಳನ್ನು ರಾಜ್ಯ ರಸ್ತೆ ಸಾರಿಗೆ ನಿಗಮ (ಆರ್‌ಟಿಸಿ)ಗಳಿಗೆ ನೀಡಬೇಕು ಮತ್ತು ಆರ್‌ಟಿಸಿಗಳು ನೇರವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸುವಂತೆ ನೀತಿಯನ್ನು ಬದಲಾಯಿಸಬೇಕು. ಅಲ್ಲದೆ, ಆ ಬಸ್‌ಗಳ ಖರೀದಿಗೆ ಅಗತ್ಯವಿರುವ ಹಣವನ್ನು ರಾಜ್ಯ ಸರ್ಕಾರವೇ ಒದಗಿಸಬೇಕು. ಆರ್‌ಟಿಸಿ ಬಸ್‌ಗಳ ನಿರ್ವಹಣಾ ವೆಚ್ಚ ಮತ್ತು ಪಡೆದ ಆದಾಯದ ನಡುವಿನ ವ್ಯತ್ಯಾಸವನ್ನು (ಕಾರ್ಯಸಾಧ್ಯತಾ ಅಂತರ ನಿಧಿ) ಸರ್ಕಾರ ಪಾವತಿಸಬೇಕು. ಆರ್‌ಟಿಸಿ ವಿಸ್ತರಣೆಗೆ ಸರ್ಕಾರ ಹಣ ಒದಗಿಸಬೇಕು. ಅಲ್ಲದೆ, ಸಾರ್ವಜನಿಕ ಸಾರಿಗೆಯನ್ನು ಬಳಸಲು ಪ್ರೋತ್ಸಾಹಿಸಲು ಯೋಜನೆಗಳನ್ನು ಮುಂದಿಡಬೇಕು.

ಅದಕ್ಕಾಗಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸಂವಿಧಾನದ ಪ್ರಕಾರ, ‘ಸಾರಿಗೆ’ ಸಮಕಾಲೀನ ಪಟ್ಟಿಯಲ್ಲಿದೆ. ಇಲ್ಲಿಯವರೆಗೆ, ಮಾರ್ಗಗಳ ವಿಸ್ತರಣೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಬಸ್‌ಗಳ ವಿಸ್ತರಣೆಯು ಆಯಾ ಆರ್‌ಟಿಸಿಗಳ (ರಾಜ್ಯ ಸರ್ಕಾರಗಳು) ಕೈಯಲ್ಲಿದೆ. ಆದರೆ, ಮೋಟಾರು ವಾಹನ ಕಾಯ್ದೆ ತಿದ್ದುಪಡಿ – 2019 ರೊಂದಿಗೆ, ಕೇಂದ್ರವು ಎಲೆಕ್ಟ್ರಿಕ್ ಬಸ್ ನೀತಿಯೊಂದಿಗೆ ಎಲ್ಲಾ ರಾಜ್ಯಗಳ ಹಕ್ಕುಗಳನ್ನು ತಾನೇ ಪಡೆದುಕೊಳ್ಳುತ್ತಿದೆ. ಇದು ಭಾರತದ ಸಂವಿಧಾನದ ವಿರುದ್ಧದ ಕ್ರಮವಾಗಿದೆ. ಆದ್ದರಿಂದ, ಈ ಎಲೆಕ್ಟ್ರಿಕ್ ಬಸ್ ನೀತಿಯಲ್ಲಿ ಖಂಡಿತವಾಗಿಯೂ ಬದಲಾವಣೆಗಳನ್ನು ಮಾಡಬೇಕು ಮತ್ತು ಆರ್‌ಟಿಸಿಗಳಿಗೆ ಅವಕಾಶಗಳನ್ನು ಒದಗಿಸಬೇಕು.

ಇದನ್ನೂ ನೋಡಿ : ಎಸ್‌ಐಆರ್‌ ರದ್ದತಿಗೆ ಪಟ್ಟು: ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್‌ ಪ್ರತಿಭಟನೆ Janashakthi

Donate Janashakthi Media

Leave a Reply

Your email address will not be published. Required fields are marked *