ಬೆಂಗಳೂರು ಹೊರವರ್ತುಲ ರಸ್ತೆ ಪೂರ್ಣಕ್ಕೆ ₹1,118 ಕೋಟಿ ಹೆಚ್ಚುವರಿ ಅನುದಾನ: ರಾಜ್ಯದ ರಸ್ತೆ ಅಭಿವೃದ್ಧಿಗೆ ₹20 ಸಾವಿರ ಕೋಟಿ

ಬೆಂಗಳೂರು: ಬೆಂಗಳೂರು ಹೊರವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ₹1,118.50 ಕೋಟಿ ಹೆಚ್ಚುವರಿ ಅನುದಾನ ನೀಡಲು ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಇದರೊಂದಿಗೆ ಯೋಜನೆಯ ಒಟ್ಟು ವೆಚ್ಚ ₹2,290.50 ಕೋಟಿಯಿಂದ ₹3,409 ಕೋಟಿಗೆ ಏರಿಕೆಯಾಗಿದೆ. ಆನೇಕಲ್‌ನಿಂದ ಸರ್ಜಾಪುರ, ದೊಮ್ಮಸಂದ್ರ, ಗುಂಜೂರು, ವರ್ತೂರು, ವೈಟ್‌ಫೀಲ್ಡ್ ಮತ್ತು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗವಾಗಿ ನೆಲಮಂಗಲವನ್ನು ಸಂಪರ್ಕಿಸುವ 134 ಕಿ.ಮೀ. ಉದ್ದದ ಈ ರಸ್ತೆ ಕಾಮಗಾರಿಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರು

ಹೆಚ್ಚುವರಿ ಅನುದಾನದಲ್ಲಿ ₹266.83 ಕೋಟಿಯನ್ನು ಭೂಸ್ವಾಧೀನಕ್ಕೆ ಮತ್ತು ₹347.54 ಕೋಟಿಯನ್ನು ದರ ಹೊಂದಾಣಿಕೆಗೆ ಬಳಸಲಾಗುತ್ತದೆ. ಭೂಸ್ವಾಧೀನ ವೆಚ್ಚ ಹೆಚ್ಚಳ, ಬೆಲೆ ಏರಿಕೆ, ಕಾಮಗಾರಿ ವಿಳಂಬ ಹಾಗೂ ಅನುಷ್ಠಾನದ ಸಂದರ್ಭದಲ್ಲಿ ಸೇರ್ಪಡೆಯಾದ ಹೆಚ್ಚುವರಿ ಕೆಲಸಗಳಿಂದ ಯೋಜನೆಯ ವೆಚ್ಚ ಹೆಚ್ಚಾಗಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. 2017ರಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ವರ್ತೂರಿನಲ್ಲಿ 1.92 ಕಿ.ಮೀ. ಉದ್ದದ ಎತ್ತರದ ರಸ್ತೆ ನಿರ್ಮಾಣವಾಗಲಿದ್ದು, ಗೊಲ್ಲಹಳ್ಳಿ, ಬಸವನಹಳ್ಳಿ, ರಾಜಾನುಕುಂಟೆ, ನಾರಾಯಣಪುರ, ಕಾಡುಗೋಡಿ ಮತ್ತು ವರ್ತೂರು ಸೇರಿದಂತೆ ಆರು ಕಡೆ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಾಕಿ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಇದನ್ನೂ ಓದಿ : ದೀಪಾವಳಿ ಪ್ರಯಾಣಕ್ಕೆ ಹೈರಾಣಾದ ಜನ: ಬಡ ಪ್ರಯಾಣಿಕರ ಸುರಕ್ಷತೆಗಿಲ್ಲವೇ ಆದ್ಯತೆ?

ರಾಜ್ಯದ ರಸ್ತೆ ಅಭಿವೃದ್ಧಿಗೆ ₹20 ಸಾವಿರ ಕೋಟಿ

ಇದೇ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರಸ್ತೆ, ಸೇತುವೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹20 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಐದನೇ ಹಂತದ ಎರಡನೇ ಪ್ಯಾಕೇಜ್ ಅಡಿಯಲ್ಲಿ 1,897 ಕಿ.ಮೀ. ಉದ್ದದ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ, ಸೇತುವೆ ಮತ್ತು ಕಟ್ಟಡ ಕಾಮಗಾರಿಗಳಿಗೆ ಅನುಬಂಧ-ಇ ಅಡಿಯಲ್ಲಿ ₹6 ಸಾವಿರ ಕೋಟಿ ಮೀಸಲಿಡಲಾಗಿದೆ. ರಸ್ತೆ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹3 ಸಾವಿರ ಕೋಟಿ ಒದಗಿಸಲು ತೀರ್ಮಾನಿಸಲಾಗಿದೆ.

ಜಿಲ್ಲಾ ಕೇಂದ್ರದಿಂದ ಮತ್ತೊಂದು ಜಿಲ್ಲಾ ಕೇಂದ್ರಕ್ಕೆ, ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಕ್ಕೆ ಹಾಗೂ ತಾಲೂಕು ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ಸುಮಾರು 3,986 ಕಿ.ಮೀ. ರಸ್ತೆ ಅಭಿವೃದ್ಧಿಗೆ ಹೊಸದಾಗಿ ₹6 ಸಾವಿರ ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಕಾಮಗಾರಿಗಳಿಂದ ರಾಜ್ಯದ ಪ್ರಮುಖ ರಸ್ತೆ ಸಂಪರ್ಕ ಜಾಲವನ್ನು ಸುಧಾರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ರಸ್ತೆ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸು ಇಲಾಖೆಯ ಅನುಮೋದನೆ ಹಾಗೂ ಅಗತ್ಯ ಹಣಕಾಸಿನ ವ್ಯವಸ್ಥೆ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ. ಬೆಂಗಳೂರು

ಇದನ್ನೂ ನೋಡಿ : ಎಸ್‌ಐಆರ್‌ ರದ್ದತಿಗೆ ಪಟ್ಟು: ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ‘ಇಂಡಿಯಾ’ ಕೂಟದಿಂದ ಬೃಹತ್‌ ಪ್ರತಿಭಟನೆ Janashakthi

Donate Janashakthi Media

Leave a Reply

Your email address will not be published. Required fields are marked *