– ನಾ ದಿವಾಕರ
ಅಂಗಳದ ಹಣತೆಗಳು
ನಂದಿಹೋಗುತ್ತಿವೆ
ಮಿಣುಕು ಹುಳುಗಳ ಬೆಳಕಲ್ಲಿ
ಹುಡುಕಬೇಕಿದೆ
ಛಿದ್ರ ಮನಗಳ ತುಣುಕುಗಳನ್ನು
ಭಗ್ನ ಬದುಕಿನ
ದುರ್ಭರ ಕ್ಷಣಗಳನ್ನು ; ಬುದ್ಧ
ಎತ್ತರದ ಪಂಜುಗಳು
ಬಯಲ ಬೆಳಕಾಗುತ್ತಿಲ್ಲ
ನೆಲಮೂಲದ ಗುರುತುಗಳ
ಭಸ್ಮ ಮಾಡುತ್ತಿವೆ
ತುತ್ತುಣಿಸುವ ತಾಯಿ
ಗೋಳಾಡುತ್ತಿದ್ದಾಳೆ
ಹಸಿದ ಕಂದಮ್ಮಗಳ ಅಳು
ಮಣ್ಣಾಗುತ್ತಿದೆ ;
ಇದನ್ನೂ ಓದಿ: “ಜಯಲಲಿತಾ ಇದ್ದರೆ ವಿರೋಧಿಸುತ್ತಿದ್ದರು”: ಸ್ಟಾಲಿನ್ ಬಿಜೆಪಿ ಮೇಲೆ ಕಿಡಿ
ಅರಸ ಕಣ್ತೆರೆಯಲಾರ
ಅಗಸ ಕೊಳೆ ತೆಗೆಯಲಾರ
ರಥದ ಮೂರುತಿಯ ಮೇಲೆ
ಪುಷ್ಪಮಳೆಗರೆಯುತಿದೆ
ಧ್ವಜಗಳ ಮೆರವಣಿಗೆಯಲಿ
ನಾಳೆಯ ಭರವಸೆಗಳಿವೆ
ಹಟ್ಟಿಯೊಳಗಿನ ಹೆಣ್ಣು
ಮುದುರಿ ಮೂಲೆಯಾಗಿದ್ದಾಳೆ ;
ಹೆಜ್ಜೆಗಳ ಸದ್ದಡಗಿಸಲು
ನಿದ್ದೆಗೆಡಿಸುವ ಪಡೆಗಳಿವೆ
ಹಕ್ಕಿಗಳ ಕೊರಳಿನಲಿ
ಗರಗಸದ ಶಬ್ಧವಡಗಿದೆ
ಸುಡುವ ಭುವಿ
ಬೂದಿಯಾಗುವ ಮುನ್ನ
ಹಸಿರ ನೆಡಬೇಕಿದೆ
ಬಯಲ ಆಲಯಗಳಲಿ
ಮನುಜನಿರಬೇಕಿದೆ ;
ಕರೆತನ್ನಿ ಅವನ
ಸ್ಥೂಪ ಮಂದಿರಗಳಿಂದಾಚೆ
ಇಲ್ಲಿರುವುದವನ ಮನೆ
ಅಲ್ಲಿರುವುದು ಭ್ರಮೆ !
ಇದನ್ನೂ ನೋಡಿ: ಶಿಕ್ಷಣ ಮೌಲ್ಯಕೇಂದ್ರಿತವಾಗದೇ ಹಣಕೇಂದ್ರಿತವಾಗಿದೆ: ರವಿಕುಮಾರ್ ಬಾಗಿ Janashakthi Media
