ಭಾಗ – 15 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ. ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಸಾವರ್ಕರ್‌ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮಿಥ್ಯೆ 1: ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಈ ಮಿಥ್ಯೆ ಎಂತಹ ಅರೆ ಸತ್ಯಗಳು ಮತ್ತು ಸುಳ್ಳುಗಳಿಂದ ಕೂಡಿದೆ ಎಂಬುದನ್ನು ಓದಿದ್ದೀರಿ. ಇದರಲ್ಲಿ, ತನ್ನ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರದಿದ್ದ, ಕೋಮು ಸಾಮರಸ್ಯದ ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿದ್ದ ಸಾವರ್ಕರ್, ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅಲ್ಲಿನ ಘೋರ ಯಾತನೆ ಕಂಡು ಕ್ಷಮಾಯಾಚನೆಯ ಅರ್ಜಿಯೊಂದಿಗೆ ಆರಂಭಿಸಿದ ಎರಡನೇ ಘಟ್ಟದಲ್ಲಿ ಬ್ರಿಟಿಷ್ ದೊರೆಗಳ ಒಡೆದು ಆಳುವ ಯೋಜನೆಯಲ್ಲಿ ನೆರವಾದರು, ಹೇಗೆ ಧರ್ಮದ ಹೆಸರಿನಲ್ಲಿ ದೇಶಾತೀತ ಸ್ವಾಮಿನಿಷ್ಠೆಯನ್ನು ಪ್ರದರ್ಶಿಸಿದ್ದರು, ರಾಷ್ಟ್ರೀಯ ಆಂದೋಲನ ಅಂಗೀಕರಿಸಿದ್ದ ತ್ರಿವರ್ಣ ಬಾವುಟದ ಕಡು ವಿರೋಧಿಸುತ್ತಲೇ ಇನ್ನೊಂದೆಡೆಯಲ್ಲಿ ಹೇಗೆ ಬ್ರಿಟಿಷರ ಬಂಟರಾಗಿದ್ದ ಹಿಂದೂ ರಾಜರುಗಳ ಮಹಾಸಮರ್ಥಕರಾಗಿದ್ದರು ಎಂಬುದನ್ನು ಓದಿದ್ದೀರಿ.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಮಿಥ್ಯೆ 2: ಸಾವರ್ಕರ್ ತಮ್ಮ ಬದುಕಿನ ಬಹುಭಾಗವನ್ನು ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಕಳೆದರು!

ಸಾವರ್ಕರ್ ನಿಜವಾಗಿಯೂ ಕ್ರಾಂತಿಕಾರಿಯಾಗಿದ್ದಾಗ ಅವರಿಗೆ ಬ್ರಿಟಿಷರು ಎರಡು ವಿಭಿನ್ನ ಪ್ರಕರಣಗಳಲ್ಲಿ ಒಟ್ಟು 50 ವರ್ಷ ಗಡೀಪಾರಿನ ಶಿಕ್ಷೆ ವಿಧಿಸಿದ್ದು ನಿಜ. ಆದರೆ ಅದರಲ್ಲಿ ಅವರು ಅಂಡಮಾನಿನ ಸೆಲ್ಯಲುರ್ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷ. ಆದರೆ ಸಾವರ್ಕರ್ ಅವರ ಸಮಕಾಲೀನರಲ್ಲಿ ಅವರಂತೆ ಮಾಫಿ ಪಡೆಯದ, ಮಾಫಿ ಕೇಳದ ಕ್ರಾಂತಿಕಾರಿಗಳ ದೊಡ್ಡ ಪಟ್ಟಿಯೇ ಸಿಗುತ್ತದೆ. ಅಂತಹ ಕರಾಳ ಪರಿಸ್ಥಿತಿಯಲ್ಲೂ ಹೋರಾಟ ಮುಂದುವರೆಸಿದ, ಜೈಲಿನಲ್ಲೇ ಅಕಾಲಿಕ ವೃದ್ಧರಾದವರ, ಹುತಾತ್ಮರಾದವರ ದೊಡ್ಡ ಪಟ್ಟಿಯೇ ಇದೆ. ಅಂಥಹ ಒಬ್ಬರ ಹೆಸರೂ ಸಾವರ್ಕರ್ ಭಕ್ತರಿಗೆ ಗೊತ್ತಿರಲು ಸಾಧ್ಯವಿಲ್ಲ. ಅಂಥಹ ಕೆಲವು ಸಾಹಸಿಗಳನ್ನು ಲೇಖಕರು ಇಲ್ಲಿ ನೆನಪಿಸಿಕೊಂಡಿದ್ದಾರೆ.

ವಸಾಹತುಶಾಹಿ ಆಳರಸರ ವಿರುದ್ಧ ಸೆಟೆದು ನಿಂತ ವೀರ ಕ್ರಾಂತಿಕಾರಿಗಳು

ಬಾಬಾ ಗುರ್‌ ಮುಖ್ ಸಿಂಗ್

ಇವರು ಲಾಹೋರ್ ಪಿತೂರಿ ಪ್ರಕರಣದಲ್ಲಿ ಮೊದಲ ಬಾರಿಗೆ ಶಿಕ್ಷೆಗೊಳಗಾಗಿ 1916 ರಲ್ಲಿ ಅಂಡಮಾನಿನ ಸೆಲ್ಯುಲರ್ ಜೈಲಿಗೆ ಬಂದರು. ಬಾಬಾ ಅವರ ವೀರೋಚಿತ ಸಾಹಸಗಳ ಬಗ್ಗೆ ಮಾನಿನಿ ಹೀಗೆ ವಿವರಿಸುತ್ತಾರೆ:

ಡಿಸೆಂಬರ್ 1919 ರಲ್ಲಿ ಕೆಲವು ಆಯ್ದ ಖೈದಿಗಳಿಗೆ ದೊರೆಯ ಕ್ಷಮಾದಾನ ಘೋಷಣೆಯಾದಾಗ ಗುರ್‌ ಮುಖ್ ಸಿಂಗ್ ಅವರನ್ನು ಭಾರತದ ಪ್ರಧಾನ ಭೂಭಾಗಕ್ಕೆ ಕಳಿಸಿಕೊಡುತ್ತಾರೆ, ಆದರೆ ಅವರು ಬಂಧನದಿಂದ ತಪ್ಪಿಸಿಕೊಂಡು ಪರಾರಿಯಾಗುವಲ್ಲಿ ಯಶಸ್ವಿಯಾಗುತ್ತಾರೆ. ಕರಿ ನೀರಿನ ಭೀಕರ ಶಿಕ್ಷೆಯಿಂದ ವಿಚಲಿತರಾಗದ ಬಾಬಾ ರಾಷ್ಟ್ರೀಯ ವಿಮೋಚನಾ ಚಳವಳಿಯಲ್ಲಿ ಭಾಗವಹಿಸುವುದನ್ನು ಮುಂದುವರಿಸುತ್ತಾರೆ. 1937 ರಲ್ಲಿ ಬಂಧಿಸಲ್ಪಟ್ಟ ಅವರನ್ನು ಮತ್ತೆ ಅಂಡಮಾನಿನ ಸೆಲ್ಯುಲರ್ ಜೈಲಿಗೆ ಹಾಕುತ್ತಾರೆ. ಅಲ್ಲಿ ಅವರು ಆಗಿನ್ನೂ ರೂಪುಗೊಳ್ಳುತ್ತಿದ್ದ ವೈಜ್ಞಾನಿಕ ಸಮಾಜವಾದದ ವಿಚಾರಗಳ ಬಗ್ಗೆ ʻಕ್ರಾಂತಿಕಾರಿ ಭಯೋತ್ಪಾದಕʼರಲ್ಲಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಪಂಡಿತ್ ರಾಮರಕ್ಷ

ಬರ್ಮಾ ಪಿತೂರಿ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ ಸೆಲ್ಯುಲರ್ ಜೈಲಿಗೆ ಬಂದ ಕ್ರಾಂತಿಕಾರಿಗಳಲ್ಲಿ ಪಂಡಿತ್ ರಾಮರಕ್ಷ ಒಬ್ಬರು. ಹೊಸದಾಗಿ ಜೈಲಿಗೆ ಬಂದವರು ಜನಿವಾರ ತೊಟ್ಟಿದ್ದರೆ ಅದನ್ನು ತೆಗೆದುಹಾಕುವುದು ಕಡ್ಡಾಯವಾಗಿತ್ತು. ಆದರೆ ರಾಮರಕ್ಷ ಅವರು ಆ ನಿಯಮ ಅನುಸರಿಸಲು ನಿರಾಕರಿಸಿದರು. ಬಲವಂತದಿಂದ ಜನಿವಾರ ತೆಗೆದುಹಾಕಿದಾಗ, ಉಪವಾಸ ಮುಷ್ಕರ ಮಾಡುವುದರ ಮೂಲಕ ಪ್ರತಿಭಟಿಸಿದರು. ಸತತ ಮೂರು ತಿಂಗಳ ಕಾಲ ಮುಷ್ಕರ ಮುಂದುವರಿಸಿದ ಅಂತಿಮವಾಗಿ ಜನಿವಾರವನ್ನು ಹಿಂತಿರುಗಿಸಬೇಕೆಂಬ ಬೇಡಿಕೆ ಇಟ್ಟು ತಮ್ಮ ಪ್ರಾಣವನ್ನೇ ಬಿಟ್ಟ ಮಹಾನ್ ಕ್ರಾಂತಿಕಾರಿ ಅವರು.

ಇಂದುಭೂಷಣ್ ರಾಯ್

ಅಲಿಪುರ್ ಬಾಂಬ್ ಪ್ರಕರಣದಲ್ಲಿ ಜೀವಾವಧಿ ಗಡೀಪಾರು ಶಿಕ್ಷೆಗೆ ಒಳಗಾಗಿದ್ದ ಬಂಗಾಳದ ಕ್ರಾಂತಿಕಾರಿಯಾಗಿದ್ದರು ಇಂದುಭೂಷಣ್ ರಾಯ್. ಬಲಾತ್ಕಾರದ ಆತ್ಮಹತ್ಯೆಗೆ ಬಲಿಯಾದವರು. ಅವರ ಆತ್ಮಹತ್ಯೆಗೆ ಕಾರಣವಾದ ಸಂದರ್ಭವನ್ನು ಬರೀಂದ್ರ ಘೋಷ್ ಅವರು ಮನಕರಗುವಂತೆ ವಿವರಿಸಿದ್ದಾರೆ.

ಕಟ್ಟುಮಸ್ತಾದ ಉತ್ತಮ ಆರೋಗ್ಯ ಹೊಂದಿದ್ದ ಇಂದುಭೂಷಣ್ ರಾಯ್ ಅವರು ಎಂತಹ ಕಠಿಣ ಕೆಲಸಕ್ಕೂ ಹೆದರುತ್ತಿರಲಿಲ್ಲ. ಆದರೆ ದಿನದಿಂದ ದಿನಕ್ಕೆ ಅವರು ಜೈಲಿನಲ್ಲಿ ಅನುಭವಿಸುತ್ತಿದ್ದ ಸಣ್ಣ ಸಣ್ಣ ಅವಮಾನಗಳು ಅವರ ತಾಳ್ಮೆಯನ್ನು ಪರೀಕ್ಷಿಸುತಿದ್ದವು. ಅವರು ಆಗಾಗ ಹೇಳುತ್ತಿದ್ದರು – ʻʻಈ ನರಕದಲ್ಲಿ ಹತ್ತು ವರ್ಷಗಳ ನನ್ನ ಬದುಕನ್ನು ಕಳೆಯುವುದು ಸಾಧ್ಯವೇ ಇಲ್ಲ.ʼʼ ಎಂದು. ಒಂದು ರಾತ್ರಿ ತಮ್ಮ ಅಂಗಿಯನ್ನು ಹರಿದುಕೊಂಡು ಅದನ್ನೇ ಹಗ್ಗವನ್ನಾಗಿ ಮಾಡಿಕೊಂಡು ಛಾವಣಿಯ ಕಿಟಕಿಗೆ ನೇಣು ಹಾಕಿಕೊಂಡರು. ಆ ದಿನ ರಾತ್ರಿಯೇ ಸೂಪರಿಂಟೆಂಡೆಂಟ್‌ಗೆ ಫೋನ್ ಮಾಡಿದರೂ ಅವರು ಬಂದಿದ್ದು ಮರುದಿನ ಬೆಳಿಗ್ಗೆ 8ಗಂಟೆಗೆ. ರಾಯ್ ಅವರ ಕುತ್ತಿಗೆಯಲ್ಲಿ ಒಂದು ಚೀಟಿಯಿತ್ತು ಎಂದು ಜೈಲರ್ ಅವರ ಕೊಠಡಿಗೆ ಹೋದ ಹಲವಾರು ಜೈಲಿನ ಸಿಬ್ಬಂದಿಗಳು ತಿಳಿಸಿದ್ದರು. ಆದರೆ ಅದರಲ್ಲೇನಿತ್ತು ಇಲ್ಲಿಯವರೆಗೂ ಕಂಡು ಹಿಡಿಯಲಾಗಲಿಲ್ಲ.

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಉಲ್ಲಾಸ್‌ಕರ್ ದತ್

ಉಲ್ಲಾಸ್‌ಕರ್ ದತ್ ಅವರಿಗೆ ಅಲಿಪುರ್ ಬಾಂಬ್ ಪ್ರಕರಣದಲ್ಲಿ 14 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಸೆಲ್ಯುಲರ್ ಜೈಲಿನಲ್ಲಿ ಅವರು ಅನುಭವಿಸಿದ ಭೀಕರ ದಿನಗಳನ್ನು ಅವರ ಆತ್ಮಕತೆಯಿಂದಲೇ ತಿಳಿದುಕೊಳ್ಳೋಣ:

ಭಾರತದಲ್ಲಿ ತೆಂಗು ಮತ್ತು ಎಳ್ಳಿನಿಂದ ಎಣ್ಣೆ ತೆಗೆಯಲು ಬಳಸಿದಂತೆಯೇ ಎಣ್ಣೆ ಗಿರಣಿಯ ಚಕ್ರದ ನೊಗಕ್ಕೆ ನನ್ನನ್ನು ಕಟ್ಟಿದ್ದರು. ಸಾಮಾನ್ಯವಾಗಿ ಆ ಕೆಲಸಕ್ಕೆ ಎತ್ತುಗಳನ್ನು ಕಟ್ಟುತ್ತಾರೆ. ಒಂದು ದಿನಕ್ಕೆ 16 ಪೌಂಡ್‌ ಗಿಂತ ಹೆಚ್ಚು ಸಾಸಿವೆ ಎಣ್ಣೆ ತೆಗೆಯುವುದು ಎತ್ತುಗಳಿಗೆ ಕೂಡ ಕಷ್ಟ. ಅಂಡಮಾನ್ ಜೈಲಿನಲ್ಲಿ ಆ ಚಕ್ರದ ನೊಗಕ್ಕೆ ಎತ್ತುಗಳ ಬದಲು ಮನುಷ್ಯರನ್ನು ಕಟ್ಟುತ್ತಿದ್ದರು ಮತ್ತು ದಿನಕ್ಕೆ ಕನಿಷ್ಠ 80 ಪೌಂಡ್ ಕೊಬ್ಬರಿ ಎಣ್ಣೆ ತೆಗೆಯಬೇಕೆಂದು ಬಲಾತ್ಕಾರ ಮಾಡುತ್ತಿದ್ದರು. ನೊಗಕ್ಕೆ ಮೂರು ಜನರನ್ನು ಕಟ್ಟುತ್ತಿದ್ದರು. ಸ್ನಾನ ಹಾಗೂ ಊಟದ ಮಧ್ಯಂತರವನ್ನು ಬಿಟ್ಟು ಉಳಿದಷ್ಟು ಸಮಯವನ್ನೂ ಅಂದರೆ ಬೆಳಗಿನಿಂದ ಸಂಜೆಯವರೆಗೂ ಸತತವಾಗಿ ಎಣ್ಣೆ ಗಿರಣಿಯ ಕೆಲಸವನ್ನು ನಮ್ಮ ಮೇಲೆ ಹೊರಿಸಿದ್ದರು. ಆ ಮಧ್ಯಂತರವೆಂದರೆ ಕೆಲವೇ ನಿಮಿಷಗಳಷ್ಟೆ. ಎತ್ತುಗಳು ನಿಧಾನಕ್ಕೆ ಸುತ್ತಿದರೆ ನಾವು ಆ ಚಕ್ರದ ಸುತ್ತ ಓಡಬೇಕೆಂದು ಒತ್ತಾಯಿಸುತ್ತಿದ್ದರು. ನಾವೇನಾದರೂ ನಿಧಾನ ಮಾಡಿದರೆ ಅಲ್ಲೇ ಇರುತ್ತಿದ್ದ ಜಮಾದಾರ ದೊಡ್ಡ ದೊಣ್ಣೆಯಿಂದ ನಮ್ಮನ್ನು ಹಿಡಿದು ಚಚ್ಚುತ್ತಿದ್ದರು. ಅದಕ್ಕೂ ಜಗ್ಗದಿದ್ದರೆ, ಕಾಲು ಮತ್ತು ಕೈ ಎರಡನ್ನೂ ಆ ನೊಗಕ್ಕೆ ಕಟ್ಟಿ ಇತರ ಖೈದಿಗಳು ವೇಗದಿಂದ ಸುತ್ತುವಂತೆ ಮಾಡಲಾಗುತ್ತಿತ್ತು. ಆ ಬಡ ವ್ಯಕ್ತಿಯನ್ನು ಕೆಲವೊಮ್ಮೆ ರಥದ ಗಾಲಿಗೆ ಕಟ್ಟಿದಂತೆ ಕಟ್ಟಿ ಎಳೆಸಲಾಗುತ್ತಿತ್ತು. ಮೈಯೆಲ್ಲಾ ಪರಚಿಹೋಗಿ ರಕ್ತ ಒಸರುತ್ತಿತ್ತು. ತಲೆಯನ್ನು ನೆಲಕ್ಕೆ ಚಚ್ಚಿ  ರಕ್ತ ಬರುವಂತೆ ಮಾಡಲಾಗುತ್ತಿತ್ತು. ಈ ರೀತಿಯಲ್ಲಿ ಕೆಲಸ ಮಾಡಿಸಿಕೊಳ್ಳುವುದನ್ನು ನಾನು ನನ್ನ ಕಣ್ಣಾರೆ ಕಂಡಿದ್ದೇನೆ. ಮನುಷ್ಯ ಮನುಷ್ಯನನ್ನು ದುಡಿಸಿಕೊಳ್ಳುವ ರೀತಿಯಿದು.

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಒಂದು ದಿನ, ಉಲ್ಲಾಸ್‌ಕರ್ ತಲೆ ಕೆಟ್ಟಂತಾಗಿ ಮೂರ್ಛೆರೋಗ ಬಂದಂತೆ ಮೈಯೆಲ್ಲಾ ನಡುಗುತ್ತಾ ಹಲ್ಲು ಒಸಡುಗಳು ಒತ್ತರಿಸಿಕೊಂಡವು. ಆದಾಗ್ಯೂ ಅವರನ್ನು ಬಿಡುಗಡೆ ಮಾಡದೆ ಅಂದಿನ ಮದ್ರಾಸ್‌ನಲ್ಲಿ (ಈಗಿನ ಚೆನ್ನೈನಲ್ಲಿ) ಹುಚ್ಚರ ಅನಾಥಾಲಯಕ್ಕೆ ಸೇರಿಸಿದರು. 14 ವರ್ಷಗಳ ಶಿಕ್ಷೆಯ ಪೂರ್ಣಾವಧಿ ಮುಗಿದ ಮೇಲೆಯೇ ಅವರನ್ನು ಬಿಡುಗಡೆ ಮಾಡಲಾಯಿತು. ಆ ನಂತರ ಅವರು ತಮ್ಮ ನೆನಪುಗಳನ್ನು ಬರವಣಿಗೆಯಲ್ಲಿ ಹಂಚಿಕೊಂಡರು.

ಜ್ಯೋತಿಶ್ ಚಂದ್ರ ಪಾಲ್

ಜ್ಯೋತಿಶ್ ಅವರು ಬಾಲೇಶ್ವರ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಅಮಾನುಷ ನಡವಳಿಕೆಯನ್ನು ಅವರು ಪ್ರತಿರೋಧಿಸುತ್ತಿದ್ದರು ಅದಕ್ಕಾಗಿ ಅವರನ್ನು ನಿರ್ದಯವಾಗಿ ಹೊಡೆಯುತ್ತಿದ್ದರು. ಒಂದು ಹಂತದಲ್ಲಿ ಅವರು ತಾಳ್ಮೆಗೆಟ್ಟು ಸಂಪೂರ್ಣವಾಗಿ ಜರ್ಜರಿತರಾದರು ಹಾಗೂ ಉಲಾಸ್‌ಕರ್ ಅವರ ರೀತಿಯಲ್ಲಿ ಹುಚ್ಚರಂತಾದರು. ಅವರನ್ನು ಹುಚ್ಚರ ಆಸ್ಪತ್ರೆಗೆ ಸೇರಿಸಲಾಯಿತು ಮತ್ತು ಬಂಗಾಳದ ಬೆರಾಂಪುರ್ ಜೈಲಿನಲ್ಲಿ (ಅದೀಗ ಒರಿಸ್ಸಾದಲ್ಲಿದೆ) ಡಿಸೆಂಬರ್ 4, 1924 ರಂದು ನಿಧನರಾದರು. ಸಾಯುವ ಮುನ್ನ ಅವರು ಈ ಕೆಳಗಿನಂತೆ ಒಂದು ಸಂದೇಶವನ್ನು ತನ್ನ ಮಿತ್ರರಿಗೆ ಹಾಗೂ ನೆಂಟರಿಸ್ಟರಿಗೆ ಬರೆದಿಟ್ಟಿದ್ದರು:

“ನನ್ನ ಆತ್ಮ ಸ್ವರ್ಗದಲ್ಲಿ ದೀರ್ಘ ನಿದ್ದೆಯಲ್ಲಿದೆ ಎಂದು ತಿಳಿಯಬೇಡಿ. ದೇಶಕ್ಕಾಗಿನ ನನ್ನ ಪ್ರೀತಿ ಭಾವೋದ್ವೇಗದಿಂದ ಹಾಗೂ ನಿಷ್ಠೆಯಿಂದ ಇರುವುದು ಹೌದಾದರೆ, ನಾನು ಮತ್ತೆ ಈ ಕೂಡಲೇ ಹುಟ್ಟುತ್ತೇನೆ ಮತ್ತು ನನ್ನ ದೇಶಕ್ಕೆ ಹಿಂತಿರುಗಿ ಬಂದು ಅವಳ ಸೇವೆ ಮಾಡುತ್ತೇನೆ. ಖಂಡಿತವಾಗಿಯೂ.”

ಪ್ರೇಮಾನಂದ್

(ಇವರು ಬ್ರಿಟಿಷ್-ವಿರೋಧಿ ನಡೆಗಳು ಅನುಮಾನಾಸ್ಪದವಾಗಿದ್ದ ಮತ್ತು ಸೆಲ್ಯುಲರ್ ಜೈಲಿನಲ್ಲಿ ಜೈಲಿನ ಅಧಿಕಾರಿಗಳೊಂದಿಗೆ ಸಲಿಗೆಯಿಂದಿದ್ದು ಅವರ ಸಮಕಾಲೀನ ಇತರ ಖೈದಿಗಳು ಅಸಹ್ಯಪಡುವಂತೆ ಇದ್ದ ಆರ್ಯ ಸಮಾಜದ ಭಾಯಿ ಪರಮಾನಂದ್/ಪ್ರೊಫೆಸರ್ ಪರಮಾನಂದ್ ಎಂದು ತಪ್ಪಾಗಿ ಗ್ರಹಿಸಬೇಡಿ.)

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ತ್ರೈಲೋಕ್ಯನಾಥ್ ಚಕ್ರವರ್ತಿಯವರು ಯುವ ಕ್ರಾಂತಿಕಾರಿ ಪ್ರೇಮಾನಂದರು ಸೆಲ್ಯುಲರ್ ಜೈಲಿನ ಕ್ರೌರ್ಯದ ವಿರುದ್ಧ ಸೆಟೆದುನಿಂತು ಧಿಕ್ಕರಿಸಿದ ಹೃದಯಕಲ್ಲಾಗುವಂಥ ಚಿತ್ರಣವನ್ನು ನೀಡಿದ್ದಾರೆ:

ಒಂದು ದಿನ ಖೈದಿಗಳ ಸಾಲಿನಲ್ಲಿ ತನ್ನ ಜಾಗದಲ್ಲಿ ನಿಂತಿರದ ತಪ್ಪಿಗಾಗಿ ಜೈಲರ್ ಪ್ರೇಮಾನಂದ ಅವರನ್ನು ತೀರಾ ಕೆಟ್ಟದಾಗಿ ಬೈಯುತ್ತಾನೆ. ಒಂದು ಹಂತದಲ್ಲಿ ಅದನ್ನು ಸಹಿಸಲಾಗದೆ ಎರಡೂ ಕಡೆಗಳಲ್ಲಿದ್ದ ಇತರ ವಾರ್ಡರುಗಳನ್ನು ಅತ್ತಿತ್ತ ತಳ್ಳಿಕೊಂಡು ಮುಂದೆ ನುಗ್ಗಿ ಜೈಲರನ ಕಪಾಳಕ್ಕೆ ಜೋರಾಗಿ ಬಾರಿಸುತ್ತಾರೆ ಮತ್ತು ಒದ್ದು ನೆಲಕ್ಕೆ ಬೀಳಿಸುತ್ತಾರೆ. ʻಬಾಂಬ್ ಎಸೆದ ಖೈದಿ ವಾರ್ಡರುಗಳನ್ನು ಹೊಡೆದು ಜೈಲರ್ ಬರ‍್ರಿಯನ್ನು ಸರಿಯಾಗಿ ಬಾರಿಸಿದʼನೆಂಬ ಆ ಘಟನೆಯ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಎಲ್ಲರೂ ಸೇರಿ ಪ್ರೇಮಾನಂದರನ್ನು ಹಿಡಿದು ದೇಹದೆಲ್ಲೆಡೆ ರಕ್ತ ಒಸರುವಂತೆ ಮನಬಂದಂತೆ ಕೋಲಿನಿಂದ ಮತ್ತು ಮುಷ್ಟಿಯಿಂದ ಬಾರಿಸುತ್ತಾರೆ. ಅದೂ ಸಾಲದೆಂಬಂತೆ ಬೆತ್ತದ ಕೋಲಿನಿಂದ ಇಪ್ಪತ್ತು ಬಾರಿ ಹೊಡೆಯುವ ಶಿಕ್ಷೆಗೆ ಒಳಪಡಿಸುತ್ತಾರೆ. ಪ್ರತಿಯೊಂದು ಹೊಡೆತವೂ ಅವರ ಮೈಮೇಲೆ ದೊಡ್ಡ ಗಾಯವನ್ನು ಉಂಟುಮಾಡುತ್ತದೆ ಮತ್ತು ಪ್ರತಿ ಗಾಯದಿಂದ ರಕ್ತ ಒಸರುತ್ತಲೇ ಇತ್ತು, ಆದರೆ ಪ್ರೇಮಾನಂದ ಒಂದೂ ಮಾತನಾಡಲಿಲ್ಲ ಅಥವಾ ಅಳುಕಲಿಲ್ಲ.

ಛಾತ್ರಾ ಸಿಂಗ್

ಬಂಧನಕ್ಕೆ ಒಳಗಾಗುವ ಮೊದಲು ಛಾತ್ರಾ ಸಿಂಗ್ ಲಾಯಲ್‌ಪುರದ (ಈಗ ಪಾಕಿಸ್ತಾನದಲ್ಲಿದೆ) ಖಾಲ್ಸಾ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರ ಕುರಿತು ಸವಿಸ್ತಾರವಾಗಿ ಬರೀಂದ್ರ ಘೋಷ್ ತಮ್ಮ ವೃತ್ತಾಂತದಲ್ಲಿ ಬರೆಯುತ್ತಾರೆ: ಅವರನ್ನು ಆರಂಭದಲ್ಲೇ ಒಂದು ಗೂಡಿನಲ್ಲಿ (ಸೆಲ್‌ನಲ್ಲಿ) ಕೂಡಿಹಾಕುತ್ತಾರೆ, ಏಕೆಂದರೆ ಅವರು ಮುಷ್ಕರ ನಡೆಯುತ್ತಿದ್ದಾಗ ಸೂಪರಿಂಟೆಂಡೆಂಟ್ ಮೇಲೆ ದಾಳಿ ಮಾಡುತ್ತಾರೆ. ಅದಕ್ಕಾಗಿ ವಾರ್ಡರುಗಳು ಅವರನ್ನು ಮನಸೋಇಚ್ಛೆ ಜ್ಞಾನ ತಪ್ಪುವಂತೆ ಹೊಡೆಯುತ್ತಾರೆ. ಆ ಹೊತ್ತಿನಿಂದ ಅವರನ್ನು ಒಂದು ಗೂಡಿನಲ್ಲಿಡುತ್ತಾರೆ ಮತ್ತು ಎರಡು ವರ್ಷಗಳಿಗೂ ಹೆಚ್ಚು ಕಾಲ ಹೊರಗಡೆ ಬಿಡುವುದಿಲ್ಲ. ಅವರಿಗಾಗಿಯೇ ವರಾಂಡಾದ ಒಂದು ಮೂಲೆಯಲ್ಲಿ ತಂತಿ ಬಲೆಗಳಿಂದ ಒಂದು ಬೋನನ್ನು ಸಿದ್ಧಪಡಿಸುತ್ತಾರೆ. ಅಲ್ಲೇ ತಿನ್ನಬೇಕು, ಅಲ್ಲೇ ಮಲಮೂತ್ರಗಳನ್ನು ಮಾಡಬೇಕು ಮತ್ತು ಅಲ್ಲಿಯೇ ಮಲಗಬೇಕು. ಅದರ ಪರಿಣಾಮವಾಗಿ ಅವರ ಆರೋಗ್ಯ ಹಾಳಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ, ಅವರು ಬಹುಮಟ್ಟಿಗೆ ಜೀವವಿಲ್ಲದಂತಾದರು. ಅದೇ ರೀತಿಯಲ್ಲಿ, ಮತ್ತೊಬ್ಬ ಸಿಖ್, ಅಮರ್ ಸಿಂಗ್ ಅವರೂ ಅದೇ ಗತಿಯಲ್ಲಿ ನರಳಬೇಕಾಯಿತು.

ಪುಲಿನ್‌ ಬಿಹಾರಿ ದಾಸ್

ಢಾಕಾ ಪಿತೂರಿ ಪ್ರಕರಣದಲ್ಲಿನ ಅವರ ಪಾತ್ರದ ಕಾರಣ ಏಳು ವರ್ಷಗಳ ಶಿಕ್ಷೆಗಾಗಿ ಪುಲಿನ್ ಬಿಹಾರಿ ದಾಸ್ ಅವರನ್ನು ಅಂಡಮಾನಿನ ಸೆಲ್ಯುಲರ್ ಜೈಲಿನಲ್ಲಿ ಬಂಧಿಸುತ್ತಾರೆ. ಗೌರ್ನರ್ ಜನರಲ್ ಕೌನ್ಸಿಲ್‌ನ ಗೃಹ ಸದಸ್ಯ ಸರ್ ರೆಜಿನಾಲ್ಡ್ ಕ್ರಡೊಕ್ ಅವರು ಅಂಡಮಾನ್ ಜೈಲಿಗೆ ಭೇಟಿ ನೀಡಿದಾಗ ಇಬ್ಬರು ಹಿರಿಯ ಕ್ರಾಂತಿಕಾರಿಗಳು – ವಿಡಿ ಸಾವರ್ಕರ್ ಮತ್ತು ಬರೀಂದ್ರ ಕುಮಾರ್ ಘೋಷ್ – ಕ್ಷಮಾದಾನಕ್ಕಾಗಿ ಗೋಗರೆಯುವುದನ್ನು ನಾವು ನೋಡಿದ್ದೇವೆ. ಆದರೆ, ಜೈಲಿಗೆ ಭೇಟಿ ನೀಡಿದ ಬಗ್ಗೆ ತನ್ನ ಟಿಪ್ಪಣಿಯಲ್ಲಿ ಕ್ರಡೊಕ್ ಅವರು ಹೀಗೆ ಬರೆದಿದ್ದರು: ʻʻಢಾಕ್ಕಾ ತಂಡದ ಮುಖಂಡ ಪುಲಿನ್ ಬಿಹಾರಿ ಒಂದು ಮಾತನ್ನೂ ಆಡಲಿಲ್ಲ.ʼʼ ಭಾರತದ ಪ್ರಧಾನ ಭೂಭಾಗಕ್ಕೆ ಬಹುತೇಕ ಕ್ರಾಂತಿಕಾರಿ ಖೈದಿಗಳನ್ನು ಸ್ಥಳಾಂತರಿಸಬೇಕು ಎಂದು ಜನವರಿ 6, 1914 ರಂದು ತೀರ್ಮಾನ ಮಾಡಿದಾಗ, ಬರೆದ ತಮ್ಮ ಆದೇಶದಲ್ಲಿ ʻʻಪುಲಿನ್‌ ಬಿಹಾರಿಯೊಬ್ಬನನ್ನೇ ಅಂಡಮಾನಿನಲ್ಲಿ ಇರಿಸಬೇಕೆಂದುʼʼ ಆದೇಶಿಸಿದ್ದರು.

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 7 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 8 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 9 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 10 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 11 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 12 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 13 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *