ಭಾಗ – 11 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಡಾ. ಶಮ್ಸುಲ್ ಇಸ್ಲಾಂ
ಅನು: ಟಿ. ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್ ರವರ ʻಸಾವರ್ಕರ್‌ ಅನ್‌ಮಾಸ್ಕ್ಡ್‌ʼ ಸಾವರ್ಕರ್ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮಿಥ್ಯೆ 1 ʻಸಾವರ್ಕರ್ ಒಬ್ಬದಂತ ಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಇದುವರೆಗೆ…

ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ… ಸಾವರ್ಕರ್ ಅಸಾಧಾರಣ ಧೈರ್ಯ ಪ್ರದರ್ಶಿಸಿದರು. ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎನ್ನುವ ಹಿಂದುತ್ವ ಪ್ರಚಾರಕರ ಮಿಥ್ಯೆಯನ್ನು ಪರಿಶೀಲಿಸುತ್ತ ಕಾಲಾಪಾನಿ ಅಥವಾ ಕರಿನೀರು ಎಂದು ಕರೆಯಲ್ಪಡುವ ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎನ್ನುವ ಲೇಖಕರು, ಸೆಲ್ಯುಲರ್ ಜೈಲು ಅಂದರೆ ಕೇವಲ ಸಾವರ್ಕರ್ ಕತೆ ಅಲ್ಲ ಎನ್ನುತ್ತಾರೆ. ಸ್ವತಃ ಸಾವರ್ಕರ್ ತಮ್ಮ ರಾಜಕೀಯ ಜೀವನದ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅವರು ಅಲ್ಲಿ ಪಡಬೇಕಾದ ಘೋರ ಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿದ ಅವರು ಕೋಮು ಸಾಮರಸ್ಯದ ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿ ಈಗ ಉಳಿಯಲಿಲ್ಲ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಆತಂಕಿತರಾಗಿದ್ದ ಬ್ರಿಟಿಷ್ ದೊರೆಗಳಿಗೆ ಕ್ಷಮಾಯಾಚನೆಯ ಅರ್ಜಿಯೊಂದಿಗೆ ತಮ್ಮ ರಾಜಕೀಯ ಬದುಕಿನ ಎರಡನೇ ಘಟ್ಟ ಆರಂಭಿಸಿದ ಸಾವರ್ಕರ್ ರಂತವರ ಸಹಾಯ ಬೇಕಿತ್ತು, ಅದಕ್ಕಾಗಿ ಅವರನ್ನು ಬಿಡುಗಡೆ ಮಾಡಿದರು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು. ಸಾವರ್ಕರ್ ಅವರ ಆವಶ್ಯಕತೆಯನ್ನು ಈಡೇರಿಸಿದರು. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಎಷ್ಟು ಪ್ರಬಲವಾಗಿ ಬ್ರಿಟಿಷರ ಬಾಲಬಡುಕರಾಗಿದ್ದರು ಎನ್ನುವುದನ್ನು ಹಿಂದೂ ಮಹಾಸಭಾವು ಸ್ವಾತಂತ್ರ್ಯ ಪೂರ್ವದಲ್ಲಿ ಹೊರತಂದ ಪುಸ್ತಕವನ್ನು ಇಣುಕಿ ನೋಡಿದರೆ ತಿಳಿಯುತ್ತದೆ. 1929ರಲ್ಲಿ ವಿದೇಶಿ ದೊರೆಗಳಿಂದ ಸಾವರ್ಕರ್ ಅವರಿಗೆ ನಿವೃತ್ತಿ ವೇತನ ಮಂಜೂರು ಮಾಡಿರುವುದು ಅವರ ಒಡೆದು ಆಳುವ ಯೋಜನೆಯಲ್ಲಿ ಸಾವರ್ಕರ್ ಅವರು ಎಷ್ಟು ಮುಖ್ಯವಾಗಿದ್ದರು ಎಂಬುದನ್ನೂ ತೋರಿಸುತ್ತದೆ.

ಮುಂದೆ ಓದಿ…

ಸಾವರ್ಕರ್ ಮಾದರಿ ʻದೇಶಾತೀತ ಸ್ವಾಮಿನಿಷ್ಠೆʼ: ಭಾರತವನ್ನು ನೇಪಾಳದ ರಾಜ ಆಳಬೇಕೆಂಬ ಬಯಕೆ!

ಭಾರತೀಯ ಮುಸ್ಲಿಮರದ್ದು ʻದೇಶಾತೀತ ನಿಷ್ಠೆʼ ಎಂದು ಸಾವರ್ಕರ್ ತೀವ್ರ ಟೀಕೆ ಮಾಡುತ್ತಿದ್ದರು. 1937ರಲ್ಲಿ ಹಿಂದೂ ಮಹಾಸಭಾದ 19ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಅವರು ಹೇಳುತ್ತಾರೆ:

ಒಬ್ಬ ಮೊಹಮ್ಮದನು ಅನೇಕ ವೇಳೆ ದೇಶಾತೀತ ಸ್ವಾಮಿನಿಷ್ಠೆಗೆ ಮಾನ್ಯತೆ ನೀಡುವುದನ್ನು ಕಾಣುತ್ತೇವೆ, ಒಂದು ದೇಶವಾಗಿ ಭಾರತದ ಬಗ್ಗೆ ಕಾಳಜಿ ವಹಿಸುವುದಕ್ಕಿಂತ, ಪ್ಯಾಲೆಸ್ತೀನಿನಲ್ಲಿನ ವಿದ್ಯಮಾನಗಳ ಬಗ್ಗೆ ಹೆಚ್ಚು ಅನುಕಂಪ ತೋರುತ್ತಾನೆ, ಭಾರತದ ನೆರೆಹೊರೆಯ ಹಿಂದೂಗಳ ಹಾಗೂ ದೇಶವಾಸಿಗಳ ಯೋಗಕ್ಷೇಮಕ್ಕಿಂತ ಅರಬರ ಯೋಗಕ್ಷೇಮದ ಬಗ್ಗೆ ಹೆಚ್ಚು ಚಡಪಡಿಸುತ್ತಾನೆ.

ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ʻಪವಿತ್ರ ಭೂಮಿʼಗಳು ಭಾರತದಿಂದ ಬಹಳ ದೂರದಲ್ಲಿರುವುದರಿಂದ ಅವರನ್ನು ಭಾರತೀಯ ಪ್ರಜೆಗಳೆಂದು ಒಪ್ಪಲು ಸಾವರ್ಕರ್ ನಿರಾಕರಿಸುತ್ತಾರೆ.

ಆದರೆ, ಅದೇ ಸಾವರ್ಕರ್ ಅವರಿಗೆ, ನೇಪಾಳದ ರಾಜನನ್ನು ಭಾರತದ ಹಾಗೂ ಜಗತ್ತಿನ ಹಿಂದೂಗಳ ರಾಜ ಎಂದು ಘೋಷಿಸಲು ಯಾವುದೇ ಧರ್ಮಶಂಕೆ ಅಥವಾ ಅಳುಕು ಇಲ್ಲ. ಇತರ ಹಿಂದುತ್ವ ಮುಖಂಡರುಗಳ ರೀತಿಯಲ್ಲಿ ಜಗತ್ತಿನ ಎಲ್ಲೆಡೆಯ ಹಿಂದೂಗಳು ನೇಪಾಳದ ರಾಜನ ಸಾರ್ವಭೌಮತ್ವದ ಅಡಿಯಲ್ಲಿ ಇದ್ದಾರೆ ಎಂದು ಸಾವರ್ಕರ್ ನಂಬುತ್ತಾರೆ. ಪ್ರತಿಯೊಂದು ಹಿಂದೂ ಮಹಾಸಭಾ ಅಧಿವೇಶನಗಳಲ್ಲಿ ನೇಪಾಳದ ರಾಜನ ಚಿತ್ರಪಟವನ್ನು ಎದ್ದುಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವಾಗಿತ್ತು. ಪ್ರತಿಯೊಂದು ಅಧಿವೇಶನವು ನೇಪಾಳದ ರಾಜನನ್ನು ಕೊಂಡಾಡುವುದರೊಂದಿಗೆ ಪ್ರಾರಂಭವಾಗುತ್ತಿತ್ತು ಮತ್ತು ಅವನಿಗೆ ತಮ್ಮ ನಿಷ್ಠೆಯನ್ನು ಸಾರಿ ಹೇಳುವ ಮೂಲಕ ಕೊನೆಯಾಗುತ್ತಿತ್ತು.

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಅಹಮದಾಬಾದಿನಲ್ಲಿ ಡಿಸೆಂಬರ್ 30, 1937ರಂದು ನಡೆದ ಹಿಂದೂ ಮಹಾಸಭಾದ 19ನೇ ಅಧಿವೇಶನದಲ್ಲಿ ಸಾವರ್ಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಹಿಂದೂ ಮಹಾಸಭಾವು ಪ್ರಕಟಿಸಿದ ಆ ಅಧಿವೇಶನದ ಕಾರ್ಯಕಲಾಪಗಳ ಪ್ರಕಾರ ಅಧ್ಯಕ್ಷೀಯ ಭಾಷಣವನ್ನು ಮಾಡುವಾಗ ಸಾವರ್ಕರ್ ಅವರು ಮೊದಲು ನೇಪಾಳದ ರಾಜನಿಗೆ ತಮ್ಮ ಗೌರವಗಳನ್ನು ಈ ರೀತಿಯಲ್ಲಿ ಸಲ್ಲಿಸುತ್ತಾರೆ:

ಮಹಾಪ್ರಭುಗಳಾದ ನೇಪಾಳದ ಮಹಾರಾಜ, ಘನತೆವೆತ್ತ ಶ್ರೀ ಯುದ್ಧ್ ಸಂಶೇರ್ ರಾಣಾಜಿ – ನೇಪಾಳದ ಪ್ರಧಾನ ಮಂತ್ರಿಗಳು ಹಾಗೂ ಅಲ್ಲಿನ ನಮ್ಮ ಸಹ ಧರ್ಮೀಯರು ಮತ್ತು ದೇಶವಾಸಿಗಳಿಗೆ ಎಲ್ಲಾ ಹಿಂದೂಗಳ ಪರವಾಗಿ ನಮ್ಮ ನಿಷ್ಠಾವಂತ ಹಾಗೂ ಪ್ರೀತಿಪೂರ್ವಕ ಶುಭಾಶಯಗಳನ್ನು ಮುನ್ನವೇ ಕಳಿಸುವುದು ನಾನು ಮಾಡಲೇಬೇಕಾದ ಕರ್ತವ್ಯವೆಂದು ನಾನು ಭಾವಿಸುತ್ತೇನೆ; ಏಕೆಂದರೆ ಅವರು ನಮ್ಮ ಇತಿಹಾಸದ ಕರಾಳ ಸಮಯದಲ್ಲಿ ಕೂಡ ಹಿಂದೂ ಅಧಿಕಾರವನ್ನು ಪಟ್ಟಾಗಿ ಹಿಡಿದಿಟ್ಟುಕೊಂಡಿದ್ದಾರೆ, ಹಿಂದೂ ಸ್ವಾತಂತ್ರ್ಯದ ಬಾವುಟವನ್ನು ಕಳಂಕಿತವಾಗದಂತೆ ಹಿಮಾಲಯದ ಪರ್ವತ ಶ್ರೇಣಿಯಲ್ಲಿ ಹಾರುತ್ತಿರುವಂತೆ ನೋಡಿಕೊಂಡಿದ್ದಾರೆ… ಈ ತಲೆಮಾರಿನ ಸರಿ ಸುಮಾರು ಇಪ್ಪತ್ತೈದು ಕೋಟಿ ನಮ್ಮ ಹಿಂದೂಗಳ ನಡುವೆ ಮಹಾಪ್ರಭುಗಳಾದ ನೇಪಾಳದ ಮಹಾರಾಜರು ಇವತ್ತು ಮೊಟ್ಟಮೊದಲಿಗರಾದ ಮತ್ತು ಒಬ್ಬರೇ ಹಿಂದೂಗಳಾದ ರಾಜರಾಗಿ ರಾಜರುಗಳ, ಚಕ್ರವರ್ತಿಗಳ ಹಾಗೂ ಜಗತ್ತಿನ ಎಲ್ಲಾ ಸ್ವತಂತ್ರ ದೇಶಗಳ ಅಧ್ಯಕ್ಷರ ಕೂಟದೊಳಗಡೆ ತಲೆಎತ್ತಿ ಬಗ್ಗಿರದೆ, ಸಮಾನರಲ್ಲಿ ಸಮಾನರಾಗಿ ಪ್ರವೇಶ ಮಾಡಬಲ್ಲವರಾಗಿದ್ದಾರೆ… ಪರಂಪರಾಗತವಾಗಿ ನಮ್ಮ ಸಮಾನ ತಾಯ್ನಾಡು, ಮತ್ತು ನಮ್ಮ ಸಮಾನ ಪವಿತ್ರ ನಾಡು ಮತ್ತು ಅತ್ಯಂತ ಪ್ರಿಯವಾದ ಸಮಾನ ಜನಾಂಗ ಹಾಗೂ ಧರ್ಮ ಮತ್ತು ಭಾಷೆ ಹಾಗೂ ಸಂಸ್ಕೃತಿಯ ಮೂಲಕ ನೇಪಾಳವು ಇಡಿಯಾಗಿ ಹಿಂದೂರಾಜ್ಯಕ್ಕೆ ಬದ್ಧವಾಗಿರುತ್ತದೆ. ನಮ್ಮ ಬದುಕು ಒಂದೇ.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಭಿಡೆಯವರ ಪುಸ್ತಕದ ಪ್ರಕಾರ, ನೇಪಾಳದ ರಾಜನನ್ನು ʻʻಸ್ವತಂತ್ರ ಹಿಂದೂಸ್ತಾನದ ಭಾವಿ ಚಕ್ರವರ್ತಿʼʼಯಾಗಿ ಹೊಂದುವುದು ನ್ಯಾಯಸಮ್ಮತವಾದುದು ಎಂದು ಕೂಡ ಸಾವರ್ಕರ್ ಅವರು ಪ್ರಚಾರ ಮಾಡಿದರು. ಸಾವರ್ಕರ್ ಅವರನ್ನು ಉಲ್ಲೇಖಿಸುವುದಾದರೆ:

ನಿಜಾಮರ ಆಳ್ವಿಕೆಯು ಹಾಗೆ ಕಾಣಬಹುದಾದರೆ ನೇಪಾಳದ ಹಿಂದೂರಾಜರ ಪರಮಾಧಿಕಾರವುಳ್ಳ ಆಳ್ವಿಕೆಯು ಕೊನೇ ಪಕ್ಷ ʻನೂರಕ್ಕೆ ನೂರರಷ್ಟು ಸ್ವದೇಶದ ಆಳ್ವಿಕೆಯಾಗುತ್ತದೆ, ಒಂದು ನಿಜವಾದ ಪ್ರಜಾಡಳಿತವಾಗುತ್ತದೆʼ ಎನ್ನುವುದನ್ನು ಗಾಂಧೀಜಿಯವರು ಕೂಡ ನಿರಾಕರಿಸುವ ಧೈರ್ಯಮಾಡುವುದಿಲ್ಲ! ಒಣ ತರ್ಕದ ಸಂಭವದ ಆಧಾರದಲ್ಲಿ ಇವತ್ತು ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ, ನೇಪಾಳದ ಸಾರ್ವಭೌಮ ರಾಜ, ಶಿಸೋಡಿಯಾದ ಮಹಾರಾಜ ಮಾತ್ರವೇ ಭಾರತದ ಚಕ್ರವರ್ತಿಯ ಕಿರೀಟವನ್ನು ಗೆಲ್ಲುವ ಅತ್ಯುತ್ತಮ ಸಾಧ್ಯತೆಯನ್ನು ಹೊಂದಿದ್ದಾರೆ. ಸೋಜಿಗವೆನಿಸಬಹುದಾದರೂ, ಹಿಂದೂಗಳಿಗಿಂತ ಬ್ರಿಟಿಷರಿಗೆ ಅದು ಚೆನ್ನಾಗಿ ಗೊತ್ತು.

ತನ್ನ ವಾದಕ್ಕೆ ಪೂರಕವಾಗಿ ಪರ್ಸಿವಾ ಲ್ಯಾಂಗ್‌ಡನ್ ಎಂಬೊಬ್ಬ ಪ್ರಖ್ಯಾತ ಬ್ರಿಟಿಷ್ ಸಂಪ್ರದಾಯವಾದಿ ಇತಿಹಾಸಕಾರನ ಮಾತುಗಳನ್ನು ಉಲ್ಲೇಖಿಸುತ್ತಾ, ಸಾವರ್ಕರ್ ಅವರು ಹೇಳುತ್ತಾರೆ:

ಭಾರತದ ಒಂದು ತುದಿಯಿಂದ ಮತ್ತೊಂದು ತುದಿಯವರೆಗಿರುವ ಕೋಮು ಗಲಭೆಗಳು ನೇಪಾಳಕ್ಕೆ ಒಂದು ಪ್ರಾಮುಖ್ಯತೆ ನೀಡುವುದನ್ನು ಕಡೆಗಣಿಸುವುದು ಮೂರ್ಖತನವಾದೀತು. ದಕ್ಷಿಣ ಏಶಿಯಾದ ಅನಿಶ್ಚಿತತೆಯಲ್ಲಿ ನೇಪಾಳವು ಹೊಂದಿರುವ ಉನ್ನತ ಸ್ಥಾನವನ್ನು ಮತ್ತು ಭಾರತವನ್ನು ಇಂದು ಆವರಿಸಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅದು ಭವಿಷ್ಯದಲ್ಲಿ ಹೊಂದಬಹುದಾದ ಪ್ರಧಾನ ಹಾಗೂ ಬಹುಮುಖ್ಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಇಂಗ್ಲಿಷರು ಪ್ರಯತ್ನ ಮಾಡಬೇಕು. ನೇಪಾಳವು ಇಂದು ಹೊಸ ಚೈತನ್ಯದ ಹೊಸ್ತಿಲಲ್ಲಿ ನಿಂತಿದೆ. ಅದರ ಭವಿಷ್ಯವು ಅದನ್ನು ಒಂದೇ ದಿಕ್ಕಿನತ್ತ ಕೊಂಡೊಯ್ಯುತ್ತಿದೆ. ಭಾರತದ ಹಣೆಬರಹವನ್ನು ನಿರ್ಧರಿಸಲು ಕೂಡ ನೇಪಾಳವನ್ನು ನೆಚ್ಚಿಕೊಂಡರೆ, ಅದು ಅಸಾಧ್ಯವೇನಲ್ಲ.

ತಮ್ಮ ಕೈಯಿಂದ ಜಾರಿ ಹೋಗುವ ಮೊದಲೇ ಭಾರತವನ್ನು ತಮ್ಮ ಮಿತ್ರರಾಷ್ಟ್ರ ನೇಪಾಳದ ರಾಜನ ಕೈಗೆ ಒಪ್ಪಿಸಿಬಿಡಿ ಎಂದು ಇಂಗ್ಲೆಂಡಿನ ರಾಣಿಯನ್ನು ಕೋರುವ ಮಟ್ಟಕ್ಕೂ ಹೋದರು ಸಾವರ್ಕರ್. ಭಾರತದ ಸ್ವಾತಂತ್ರ್ಯದ ಸಮಸ್ಯೆಗೆ ಅಸಾಧಾರಣವಾದ ʻಹಿಂದೂʼ ಪರಿಹಾರವಾಗಿ, ಭಾರತ ರಾಷ್ಟ್ರವು ತಮ್ಮ ಕಪಿಮುಷ್ಠಿಯಿಂದ ಕೈಜಾರುವ ಮೊದಲೇ ಅದನ್ನು ʻʻಬ್ರಿಟನ್ನಿನ ಸಮಾನ ಹಾಗೂ ಸ್ವತಂತ್ರ ಮಿತ್ರರಾಷ್ಟ್ರವಾದ ನೇಪಾಳದ ರಾಜನಂಥವರಿಗೆ ಒಪ್ಪಿಸಬೇಕು’’ ಎಂದು ಬ್ರಿಟಿಷ್ ರಾಣಿಯ ಮುಂದೆ ಸಾವರ್ಕರ್ ತಮ್ಮ ವಾದ ಮಂಡಿಸುತ್ತಾರೆ.

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಹೀಗೆ ಸಾವರ್ಕರ್ ಅವರು ಭಾರತವು ಹಿಂದೂರಾಷ್ಟ್ರವಾದ ನೇಪಾಳದ ದೊರೆಗಳ ಅಧೀನವಾಗಬೇಕೆಂದು ಸಾವರ್ಕರ್ ಬಯಸಿದ್ದರು. ಇದೇ ದೊರೆಗಳು 1857 ರ ವಿಮೋಚನಾ ಸಮರದ ಸಮಯದಲ್ಲಿ ಬ್ರಿಟಿಷರ ಜತೆ ಕೈಗೂಡಿಸಿದ್ದರು ಮತ್ತು ವಿಮೋಚನಾ ಸಮರವು ವಿಫಲವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ʻದಂಗೆʼ ಕುರಿತ ಸಮಕಾಲೀನ ಬ್ರಿಟಿಷ್ ದಾಖಲೆಗಳು ಈ ಬಗ್ಗೆ ಸಾಕಷ್ಟು ಪುರಾವೆಗಳನ್ನು ಒದಗಿಸುತ್ತವೆ. ಅದರ ಪ್ರಕಾರ ದೆಹಲಿ, ರೋಹಿಲ್ ಖಂಡ ಮತ್ತು ಅವಧ ಪ್ರದೇಶಗಳನ್ನು ಬ್ರಿಟಿಷರು ಗೆಲ್ಲಲು ದಂಗೆಯ ವಿರುದ್ಧ ನೇಪಾಳದ ರಾಜ ಜಂಗ್ ಬಹಾದೂರ್ 50 ಸಾವಿರ ಗೂರ್ಖಾ ಸಿಪಾಯಿಗಳನ್ನು ಬ್ರಿಟಿಷ್ ಸೇನೆಯ ಸಹಾಯಕ್ಕಾಗಿ ಕಳಿಸಿದ್ದರು. ಆ ಅವಧಿಯ ಬ್ರಿಟಿಷ್ ಗೆಜೆಟ್ ಪ್ರಕಾರ ಈ ಗೂರ್ಖಾ ಸೈನ್ಯವು ದೆಹಲಿ, ಅಜಂಗರ್, ಬಾರಬಂಕಿ, ಗೋರಖ್ ಪುರ್, ಬಸ್ತಿ, ಬರಾಯ್ಕ್, ಬುಲಂದ್ ಶಹರ್, ಬದೌನ್ ಮುಂತಾದ ಪ್ರದೇಶಗಳಲ್ಲಿ ದೇಶೀಯ ಕ್ರಾಂತಿಕಾರಿಗಳನ್ನು ಸೋಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಬ್ರಿಟಿಷ್ ಗೆಜೆಟ್ ಪ್ರಕಾರ ʻʻನೂರಾರು ದಂಗೆಕೋರರು ನೇಪಾಳದ ಸೇನೆಯಿಂದ ಹತರಾದರು.ʼʼ ಮತ್ತೊಂದು ಸಮಕಾಲೀನ ಬ್ರಿಟಿಷ್ ದಾಖಲೆಗಳ ಪ್ರಕಾರ ದಂಗೆಯನ್ನು ಬಗ್ಗುಬಡಿದ ನಂತರ ಜಂಗ್ ಬಹಾದೂರ್ ನೇತೃತ್ವದ ನೇಪಾಳದ ಸೇನೆಯು ಅಯೋಧ್ಯಾ ಮತ್ತು ಗೋರಖ್ ಪುರ್ ಮೂಲಕ ನೇಪಾಳಕ್ಕೆ ಹಿಂತಿರುಗುವಾಗ ಆ ಪ್ರಯಾಣವು ಬಹಳ ನಿಧಾನವಾಗಿ ಚಲಿಸುತ್ತಿತ್ತು. ಕಾರಣವೇನೆಂದರೆ, ಭಾರತದಿಂದ ಲೂಟಿ ಮಾಡಿದ ಸಂಪತ್ತಿನಿಂದ ತುಂಬಿ ತುಳುಕುತ್ತಿದ್ದ ಅಸಂಖ್ಯಾತ ಗಾಡಿಗಳು ಅಲ್ಲಿದ್ದವು. 1857 ರ ವಿಮೋಚನಾ ಸಮರವನ್ನು ಹತ್ತಿಕ್ಕುವಲ್ಲಿ ಸೇವೆ ಸಲ್ಲಿಸಿದ ಕಾರಣಕ್ಕಾಗಿ ನೇಪಾಳದ ರಾಜನಿಗೆ ಭಾರತದ ಬಹು ದೊಡ್ಡ ತರಿಜಮೀನನ್ನು ಬ್ರಿಟಿಷ್ ದೊರೆಗಳು ಬಹುಮಾನವಾಗಿ ನೀಡಿದ್ದರು ಎಂಬ ವಿವರಗಳೂ ಸಹ ಆ ಸಮಕಾಲೀನ ಬ್ರಿಟಿಷ್ ದಾಖಲೆಗಳಿಂದ ನಮಗೆ ತಿಳಿಯುತ್ತದೆ. ಈ ವಾಸ್ತವಾಂಶಗಳನ್ನು ತಿಳಿದಿದ್ದ ಭಾರತೀಯ ದಂಗೆಕೋರರ ಪ್ರಮುಖ ಅಧಿಪತಿಯಾಗಿದ್ದ ಬಿತೂರಿನ ನಾನಾ ಸಾಹೇಬ್ ಅವರು ದೇಶದ ಜನರಿಗೆ ಬರೆದ ತಮ್ಮ ಅಂತಿಮ ಪತ್ರದಲ್ಲಿ ಬಹಳ ಸ್ಪಷ್ಟವಾಗಿ ಬರೆದಿದ್ದರು: ದಂಗೆಯನ್ನು ಸೆದೆಬಡಿಯಲು ಬ್ರಿಟಿಷರು ಸಮರ್ಥರಾಗಿರಲಿಲ್ಲ, ಆದರೆ ಗೂರ್ಖಾಗಳು ಮತ್ತು ದೇಶೀಯ ರಾಜರುಗಳ ಸಹಾಯದಿಂದಾಗಿ ಬ್ರಿಟಿಷರು ಜಯಶಾಲಿಗಳಾದರು.

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ನೇಪಾಳದ ರಾಜನನ್ನು ಜಗತ್ತಿನ ಹಿಂದೂಗಳ ಚಕ್ರವರ್ತಿ ಎಂದು ಪರಿಗಣಿಸುವ ತಂತ್ರದಲ್ಲಿ ಹಿಂದುತ್ವ ಪಡೆಯು ಈಗಲೂ ಕೂಡ ಆಸಕ್ತಿ ಕಳೆದುಕೊಂಡಿಲ್ಲ. ವಿಶ್ವ ಹಿಂದೂ ಮಹಾಸಂಘವು (ವರ್ಲ್ಡ್ ಹಿಂದೂ ಫೆಡರೇಷನ್) ಜನವರಿ 23, 2004 ರಂದು ಕಟ್ಮಂಡುವಿನಲ್ಲಿ ಸಂಘಟಿಸಿದ್ದ ಕಾರ್ಯಕ್ರಮವೊಂದರಲ್ಲಿ ನೇಪಾಳದ ರಾಜ ಗ್ಯಾನೇಂದ್ರ ವೀರ ವಿಕ್ರಮ ಶಾ ಅವರನ್ನು ವಿಶ್ವದ ಎಲ್ಲೆಡೆಯ ಹಿಂದೂಗಳ ಏಕೈಕ ಚಕ್ರವರ್ತಿ ಎಂದು ದೈವೀಕರಿಸಿ ಕೊಂಡಾಡಿದರು. ಗೀತೆ ಮತ್ತು ಪುರಾಣಗಳಲ್ಲಿ ಹೇಳಿದಂತೆ ಅವರನ್ನು ದೇವತಾ ಸ್ವರೂಪ ಎಂದು ವೈಭವೀಕರಿಸಲಾಗಿದೆ. ಆಗಿನ ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಶೋಕ ಸಿಂಘಾಲ್ ಅವರನ್ನೂ ಒಳಗೊಂಡಂತೆ ಆರ್.ಎಸ್.ಎಸ್. ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೈವೀಕರಣದ ಆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಸಿಂಘಾಲ್ ಹೀಗೆ ಹೇಳಿದರು:

ಹಿಂದೂ ಸಾಮ್ರಾಟನನ್ನು ರಕ್ಷಿಸುವುದು ವಿಶ್ವದೆಲ್ಲೆಡೆ ಇರುವ 900 ಮಿಲಿಯನ್ ಹಿಂದೂಗಳ ಜವಾಬ್ದಾರಿಯಾಗಿದೆ… ಧರ್ಮವನ್ನು ರಕ್ಷಿಸಲು ದೇವರು ಅವರನ್ನು ಸೃಷ್ಟಿಸಿದ್ದಾರೆ.

ಹಿಂದೂಗಳ ಹಿತಕ್ಕಾಗಿ ಸೇವೆ ಸಲ್ಲಿಸುತ್ತಿರುವ ಸಿಂಘಾಲ್ ಅವರನ್ನು ಹಿಂದೂ ಸಾಮ್ರಾಟರು ಸನ್ಮಾನಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

 (ಮುಂದುವರೆಯುವುದು)

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 7 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 8 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 9 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 10 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *