ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರ ರಾವ್

ಡಾ.ಶಮ್ಸುಲ್ ಇಸ್ಲಾಂ

74 ವರ್ಷಗಳ ಹಿಂದೆ ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣರಾದವರೆಂದು ಹೇಳಿದ್ದ ವಿ.ಡಿ.ಸಾವರ್ಕರ್ ರವರನ್ನು ಇಂದು ದೇಶವನ್ನು ಆಳುತ್ತಿರುವ ಮಂದಿ ಸ್ವಾತಂತ್ರ್ಯ ಸಮರದ ‘ವೀರ’ ಎನ್ನುತ್ತಿದ್ದಾರೆ. ಈ ಕುರಿತ ಮಿಥ್ಯೆಗಳನ್ನು ಹೆಣೆಯುವ, ಪಸರಿಸುವ ಪ್ರಯತ್ನಗಳು ನಡೆಯುತ್ತಿವೆ, ಸಹಜವಾಗಿ ಈ ಮಿಥ್ಯೆಗಳನ್ನು ಬಯಲಿಗೆಳೆಯುವ ಪ್ರಯತ್ನಗಳೂ ನಡೆದಿವೆ. ಡಾ.ಶಮ್ಸುಲ್ ಇಸ್ಲಾಮ್ ರವರ ‘ಸಾವರ್ಕರ್ ಅನ್‌ಮಾಸ್ಕ್ಡ್’ ಅಂತಹ ಒಂದು ಪ್ರಮುಖ ಕೃತಿ. ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಈ ಕೃತಿ ಹಿಂದೂ ಮಹಾಸಭಾ, ಆರೆಸೆಸ್ ಮತ್ತು ಭಾರತ ಸರಕಾರದ ಪತ್ರಾಗಾರಗಳಲ್ಲಿ ಇರುವ ಮೂಲ ದಸ್ತಾವೇಜುಗಳು ಮತ್ತು ಅಂಡಮಾನ್ ಜೈಲಿನಲ್ಲಿ ಸಾವರ್ಕರ್ ಜತೆಗಿದ್ದ ಕ್ರಾಂತಿಕಾರಿಗಳ ಸ್ಮರಣೆಗಳನ್ನು ಆಧರಿಸಿದೆ. ಈ ಕೃತಿಯ ಪ್ರಸ್ತಾವನೆಯ ಮೊದಲ ಭಾಗದಲ್ಲಿ ಸಾವರ್ಕರ್ ಅವರನ್ನು ರಾಷ್ಟ್ರೀಯ ನೇತಾರನನ್ನಾಗಿ ಬಿಂಬಿಸುವ ಯಾವುದೇ ಯೋಜನೆ 1998ಕ್ಕೂ ಮುಂಚೆ ಹಿಂದುತ್ವ ಬ್ರಿಗೇಡಿಗೆ ಇರಲಿಲ್ಲ, ನಂತರ ಅದು ಮುನ್ನೆಲೆಗೆ ಬರುವಲ್ಲಿ ಕಾಂಗ್ರಸ್ ಪಕ್ಷದ ಪಾತ್ರವೂ ಇದೆ ಎಂಬುದನ್ನು ಪರಿಶೀಲಿಸುತ್ತ ಸಾವರ್ಕರ್ ಅವರ ಹೊಗಳುಭಟರ ತಂಡದಲ್ಲಿ ಕಾಂಗ್ರೆಸ್ ಕೂಡ ಸೇರಿಕೊಂಡದ್ದು ವಿಷಾದದ ಸಂಗತಿ ಎಂದು ಲೇಖಕರು ಹೇಳಿರುವುದನ್ನು ಓದಿದ್ದೀರಿ… ಮುಂದೆ ಓದಿ..

ನಿಜಾಂಶಗಳು ಮತ್ತು ಸುಳ್ಳುಪುರಾಣಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳಲು…..

ಭಾರತದ ಸ್ವಾತಂತ್ರ್ಯ ಚಳುವಳಿಯ ಇತಿಹಾಸವು ತೆರೆದುಕೊಂಡಂತೆ ಲಭ್ಯವಾದ ಕೆಲವು ಚಾರಿತ್ರಿಕ ವಾಸ್ತವಾಂಶಗಳನ್ನು ಮಂಡಿಸುವ ಸಲುವಾಗಿ ನಡೆಸಿದ ಪ್ರಾಮಾಣಿಕ ಹಂಬಲದ ಫಲವೇ ಈ ಪುಸ್ತಕ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ನೈಜ ಸಾವರ್ಕರ್ ಅವರನ್ನು ತಿಳಿಯುವ ಸಲುವಾಗಿ ಈ ಲೇಖಕರು ಹಿಂದೂ ಮಹಾಸಭಾ, ಆರ್.ಎಸ್.ಎಸ್. ಮತ್ತು ಭಾರತ ಸರ್ಕಾರದ ಸಾರ್ವಜನಿಕ ಪತ್ರಾಗಾರದ ಮೂಲ ದಾಖಲೆಗಳನ್ನು ಪ್ರಧಾನವಾಗಿ ಅವಲಂಬಿಸಿದ್ದಾರೆ. ಸಾವರ್ಕರ್ ಅವರ ಜತೆಯಲ್ಲಿ ಅಂಡಮಾನಿನ ಗೂಡು ಜೈಲಿನಲ್ಲಿದ್ದ ಕ್ರಾಂತಿಕಾರಿಗಳ ಆತ್ಮಕಥೆ ಅಥವಾ ಜೀವನ ವೃತ್ತಾಂತಗಳಲ್ಲಿನ ಮಾಹಿತಿಗಳನ್ನು ಕೂಡ ಅಮೂಲ್ಯ ಆಕರಗಳನ್ನಾಗಿ ಬಳಸಲಾಗಿದೆ. ಬಹುವಾಗಿ ಹಿಂದೂಮಹಾಸಭಾ ಪ್ರಕಟಿಸಿದ ಪುಸ್ತಕಗಳಲ್ಲಿ – ಸಮಗ್ರ ಸಾವರ್ಕರ್ ವಾಙ್ಮಯ- ಹಿಂದೂ ರಾಷ್ಟ್ರ ದರ್ಶನ (ಸಾವರ್ಕರ್ ಅವರ ಕಲೆಕ್ಟೆಡ್ ವರ್ಕ್ಸ್ – 1963) ಮತ್ತು ವಿನಾಯಕ್ ದಾಮೋದರ್ ಸಾವರ್ಕರ್ ವರ್ಲ್ವಿಂಡ್ ಪ್ರೊಪಗಾಂಡಾ: ಏಕ್ಸ್ರಾಕ್ಟ್ಸ್‌ ಫ್ರಂ ದಿ ಪ್ರಸಿಡೆಂಟ್ಸ್ ಡೈರಿ ಆಫ್ ಹಿಸ್ ಪ್ರೊಪಗಾಂಡಿಸ್ಟ್ ಟೂರ‍್ಸ್‌ ಇಂಟರ್‌ವ್ಯೂಸ್ ಫ್ರಂ ಡಿಸೆಂಬರ್ 1937 ಟು ಅಕ್ಟೋಬರ್ 1941, ಈ ಪುಸ್ತಕಗಳಲ್ಲಿ ಸಾವರ್ಕರ್ ಅವರ ದೇಶ ವಿರೋಧಿ ಪರಂಪರೆಯನ್ನು ಕಾಣಬಹುದು. ನಿಜವಾದ ಸಾವರ್ಕರ್ ಅವರನ್ನು ತಿಳಿದುಕೊಳ್ಳಲು ಈ ಎರಡನೇ ಪುಸ್ತಕವು ಬಹಳ ನಿರ್ಣಾಯಕವಾದುದು. ಅದನ್ನು 1941 ರಲ್ಲಿ ಪ್ರಕಟಿಸಲಾಗಿದೆ ಮತ್ತು ಅದನ್ನು ಅವರ ಆಪ್ತಮಿತ್ರ ಎ.ಎಸ್.ಭಿಡೆಯವರು ಸಂಪಾದಿಸಿದ್ದರು. ಆ ಪುಸ್ತಕದ ಮುನ್ನುಡಿಯ ಪ್ರಕಾರ:

‘ಅದು ಪ್ರಥಮತಃ ಬಹು ಮುಖ್ಯವಾಗಿ ಹಿಂದೂ ಮಹಾಸಭಾ ಚಳುವಳಿಯ ಪ್ರಚಾರಕರು, ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಮತ್ತು ಬಹುವಾಗಿ ಹಿಂದೂ ಜನಸಾಮಾನ್ಯರಿಗೆ ಒಂದು ಅಧಿಕಾರಯುತ ಪಠ್ಯ ಮತ್ತು ವಿಶ್ವಾಸಾರ್ಹವಾದ ಮಾರ್ಗದರ್ಶಿಯಾಗಿ ನೆರವಾಗುತ್ತದೆ; ಹಿಂದೂಗಳು ಇವತ್ತು ಎದುರಿಸುತ್ತಿರುವ ಹಲವಾರು ವಿಸ್ತೃತ ಪ್ರಶ್ನೆಗಳು ಹಾಗೂ ಸಮಸ್ಯೆಗಳಿಗೆ ಹಿಂದೂ ಸಂಘಟನಾ ಚಳುವಳಿಯ ಮೂಲಭೂತ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಅಳವಡಿಸುವ ವಿಧಾನಗಳ ಅರಿವು ಮೂಡಿಸುತ್ತದೆ.’

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಆ ಪುಸ್ತಕವನ್ನು ಹಿಂದೂ ಮಹಾಸಭಾದ ಪ್ರತಿಯೊಂದು ಘಟಕವೂ ಒಂದು ಕೈಪಿಡಿಯಾಗಿ ಇಟ್ಟುಕೊಳ್ಳುವುದು ಕಡ್ಡಾಯವಾಗಿತ್ತು ಮತ್ತು ಅದನ್ನು ಕಾರ್ಯಕರ್ತರ ರಾಜಕೀಯ ಶಿಕ್ಷಣಕ್ಕಾಗಿ ಮಾತ್ರವಲ್ಲದೇ ಹಲವಾರು ಪ್ರಶ್ನೆಗಳ ಮೇಲೆ ನಿಲುವುಗಳನ್ನು ಸ್ಪಷ್ಟಪಡಿಸಲು ಕೂಡ ಬಳಸಲಾಗುತ್ತಿತ್ತು. ಸ್ವಾತಂತ್ರ್ಯ ಚಳುವಳಿಯಲ್ಲಿ ಸಾವರ್ಕರ್ ಅವರ ಪ್ರಾಮುಖ್ಯತೆ ಹಾಗೂ ಸಾಕ್ಷ್ಯಾಧಾರಗಳ ಬಗ್ಗೆ ದೃಢವಾದ ನಂಬಿಕೆಯಿದ್ದರೆ ಅವರ ಈ ಕೃತಿಗಳನ್ನು ಬಹಿರಂಗಪಡಿಸಲಿ, ಸಂಬಂಧಪಟ್ಟವರಿಂದಲೇ ಅದು ಈ ದೇಶದ ಜನರಿಗೆ ತಿಳಿಯಲಿ; ಆಗ ಹಿಂದುತ್ವದ ಇತ್ತೀಚಿನ ಪೂಜನೀಯರ ಬಗ್ಗೆ ಜನರೇ ವಸ್ತುನಿಷ್ಠವಾಗಿ ನಿರ್ಧರಿಸಲು ಸಾಧ್ಯವಾಗುತ್ತದೆ.

ಸಾವರ್ಕರ್ ಅವರು ಮುಸ್ಲಿಂ ಲೀಗಿನ ರೀತಿಯಲ್ಲೇ ದ್ವಿರಾಷ್ಟ್ರ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ಆಚರಿಸುತ್ತಿದ್ದರು ಎಂಬುದನ್ನು ಹಿಂದೂಮಹಾಸಭಾದ ಪತ್ರಾಗಾರದಲ್ಲಿ ದೊರೆತ ಆಘಾತಕಾರಿ ದಾಖಲೆಗಳು ಸ್ಪಷ್ಟಪಡಿಸುತ್ತವೆ. 1937 ರಲ್ಲಿ ಹಿಂದೂಮಹಾಸಭಾದ 19ನೇ ಅಧಿವೇಶನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಸಾವರ್ಕರ್ ಅವರು ಹೀಗೆ ಹೇಳಿದರು:

“ಪರಸ್ಪರ ವಿರುದ್ಧವಾಗಿ ಕೆಲಸ ಮಾಡುವ ಎರಡು ದೇಶಗಳು ಭಾರತದಲ್ಲಿ ಈಗಾಗಲೇ ಇವೆ, ಭಾರತವು ಈಗಾಗಲೇ ಸಮರಸದಿಂದ ಬೆಸೆತುಕೊಂಡಿರುವ ದೇಶ ಅಥವಾ ಹಾಗೆಂದು ಬಯಸಿದ ಮಾತ್ರಕ್ಕೆ ಬೆಸೆತುಕೊಳ್ಳುತ್ತದೆ ಎಂದು ಭಾವಿಸುವ ಗಂಭೀರ ಪ್ರಮಾದವನ್ನು ಕೆಲವು ಬುದ್ಧಿಯಿಲ್ಲದ ರಾಜಕಾರಣಿಗಳು ಮಾಡುತ್ತಿದ್ದಾರೆ, ಇವೆಲ್ಲವೂ ಸದುದ್ದೇಶ ಉಳ್ಳದ್ದು ಆದರೆ ದೂರಾಲೋಚನೆಯಿಲ್ಲದ ಮಿತ್ರರು ಆ ಕನಸುಗಳನ್ನು ವಾಸ್ತವ ಎಂದು ತಿಳಿದುಕೊಂಡಿದ್ದಾರೆ. ಆದಕಾರಣ ಅವರು ಕೋಮುವಾದಿ ಗೋಜಲುಗಳ ಬಗ್ಗೆ ತಾಳ್ಮೆಗೆಟ್ಟಿದ್ದಾರೆ ಮತ್ತು ಅವುಗಳನ್ನು ಕೋಮುವಾದಿ ಸಂಘಟನೆಗಳೆಂದು ಆರೋಪಿಸುತ್ತಾರೆ. ಆದರೆ ನೆಚ್ಚಬಹುದಾದ ಸತ್ಯಾಂಶವೇನೆಂದರೆ ಕೋಮು ಪ್ರಶ್ನೆಗಳು ಎಂದು ಕರೆಯಬಹುದಾದವುಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ಶತ ಶತಮಾನಗಳ ಸಾಂಸ್ಕೃತಿಕ, ಧಾರ್ಮಿಕ ಹಾಗೂ ಜನಾಂಗೀಯ ವೈಷಮ್ಯಗಳ ಮೂಲಕ ಪಾರಂಪರಿಕವಾಗಿ ಹಸ್ತಾಂತರಿಸಲ್ಪಟ್ಟಿವೆ… ಅಹಿತಕರ ಸತ್ಯಾಂಶಗಳನ್ನು ಅವು ಇರುವಂತೆಯೇ ಹಾಗೆಯೇ ನಾವು ಧೈರ್ಯವಾಗಿ ಎದುರಿಸೋಣ. ಭಾರತವನ್ನು ಇವತ್ತು ಒಂದು ಏಕದೇವತಾರಾಧನೆಯ ಮತ್ತು ಸಮಾನಜಾತೀಯ ದೇಶವನ್ನಾಗಿ ಸ್ವೀಕರಿಸಲು ಸಾಧ್ಯವಿಲ್ಲ, ಆದರೆ ಅದಕ್ಕೆ ಪ್ರತಿಯಾಗಿ ಭಾರತದಲ್ಲಿ ಹಿಂದೂ ಹಾಗೂ ಮುಸ್ಲಿಮರು ಎಂಬ ಎರಡು ದೇಶಗಳಿವೆ.”

ಅವರ ಏಕಮೇವ ನಾಯಕತ್ವದಲ್ಲಿ ಹಿಂದೂ ಮಹಾಸಭಾವು 1940 ರಲ್ಲಿ ಮುಸ್ಲಿಂ ಲೀಗಿನೊಂದಿಗೆ ಮೈತ್ರಿ ಸರ್ಕಾರಗಳನ್ನು ನಡೆಸಿತ್ತು. ಮುಸ್ಲಿಂ ಲೀಗಿನೊಂದಿಗಿನ ಮೈತ್ರಿ ಸರ್ಕಾರವನ್ನು ಬಹಿರಂಗವಾಗಿ ಸಮರ್ಥಿಸಿದ ಸಾವರ್ಕರ್ 1942 ರಲ್ಲಿ ಕಾನ್ಪುರದಲ್ಲಿ ನಡೆದ ಹಿಂದೂ ಮಹಾಸಭಾದ 24 ನೇ ಅಧಿವೇಶನದ ಅಧ್ಯಕ್ಷೀಯ ಭಾಷಣ ಮಾಡುತ್ತಾ:

“ಪ್ರಾಯೋಗಿಕ ರಾಜಕೀಯದಲ್ಲಿ ಕೂಡ ನಾವು ವಿವೇಕಯುಕ್ತ ಸಂಧಾನಗಳ ಮೂಲಕ ಮುಂದೆ ಸಾಗಬೇಕು. ತೀರ ಇತ್ತೀಚೆಗಷ್ಟೆ ಸಿಂಧ್‌ನಲ್ಲಿನ ಸಂಗತಿಯನ್ನೇ ನೋಡಿ. ಅಲ್ಲಿ ಸಿಂಧ್-ಹಿಂದು-ಸಭಾವು ಮೈತ್ರಿ ಸರ್ಕಾರ ನಡೆಸುವ ಸಲುವಾಗಿ ಆಹ್ವಾನದ ಮೇರೆಗೆ ಮುಸ್ಲಿಂ ಲೀಗಿನೊಂದಿಗೆ ಕೈಜೋಡಿಸುವ ಜವಾಬ್ದಾರಿಯನ್ನು ಹೊತ್ತು ಕೊಳ್ಳಬೇಕಾಯಿತು. ಬಂಗಾಳದ ನಿದರ್ಶನ ಎಲ್ಲರಿಗೂ ಗೊತ್ತೇ ಇದೆ. ತಮ್ಮೆಲ್ಲಾ ಶರಣಾಗತಿ ಪ್ರವೃತ್ತಿಯ ಕಾಂಗ್ರೆಸ್ಸಿನವರೊಂದಿಗೆ ಕೂಡ ಒಡಂಬಡಿಕೆಗೆ ಒಪ್ಪದ ಅಸಂಸ್ಕೃತ/ಅನಾಗರಿಕ ಲೀಗಿನವರು ಹಿಂದೂ ಮಹಾಸಭಾದೊಂದಿಗೆ ಸಂಪರ್ಕಕ್ಕೆ ಬಂದಕೂಡಲೇ ವಿವೇಕಯುತ ಸಂಧಾನಕ್ಕೆ ಹಾಗೂ ಸ್ನೇಹಪರರಾಗಿ ವರ್ತಿಸಲು ಮುಂದಾದರು ಮತ್ತು ಮಿಸ್ಟರ್ ಫಜ್ಲುಲ್ ಹಕ್ ಅವರ ಪ್ರಧಾನಿ ಹುದ್ದೆಯಡಿ ಹಾಗೂ ನಮ್ಮ ಗೌರವಾನ್ವಿತ ಮಹಾಸಭಾದ ನಾಯಕರಾದ ಡಾ.ಶ್ಯಾಮ ಪ್ರಸಾದ್ ಮುಖರ್ಜಿಯವರ ದಕ್ಷ ಮುಖಂಡತ್ವದಲ್ಲಿ ಮೈತ್ರಿ ಸರ್ಕಾರವು ಎರಡೂ ಸಮುದಾಯದವರ ಅನುಕೂಲಕ್ಕಾಗಿ ಒಂದು ವರ್ಷ ಕಾಲ ಯಶಸ್ವಿಯಾಗಿ ನಡೆಯಿತು.”

ಸಾವರ್ಕರ್ ಅವರು ಸ್ವಾತಂತ್ರ್ಯ ಚಳುವಳಿಯಿಂದ ದೂರ ಉಳಿದಿದ್ದು ಮಾತ್ರವಲ್ಲ ಬ್ರಿಟಿಷರ ಹಿತಾಸಕ್ತಿಗಳ ವಿರುದ್ಧ ಹೋರಾಡಿದವರನ್ನು ದಮನ ಮಾಡುವಲ್ಲಿ ಬ್ರಿಟಿಷ್ ದೊರೆಗಳಿಗೆ ಸಹಾಯ ಮಾಡಿದರು ಕೂಡ. 1942 ರ ಭಾರತ ಬಿಟ್ಟು ತೊಲಗಿ ಚಳುವಳಿಯ ಸಮಯದಲ್ಲಿ ಇಡೀ ದೇಶ ವಸಾಹತುಶಾಹಿ ದೊರೆಗಳ ನಿರ್ದಯ ದಬ್ಬಾಳಿಕೆಯನ್ನು ಎದುರಿಸುತ್ತಿದ್ದಾಗ, ಸಾವರ್ಕರ್ ಹೇಳುತ್ತಾರೆ:

“ಎಲ್ಲಾ ಪ್ರಾಯೋಗಿಕ ರಾಜಕೀಯದಲ್ಲಿ ಹಿಂದೂ ಮಹಾಸಭಾವು (ಬ್ರಿಟಿಷ್ ಸರ್ಕಾರದೊಂದಿಗೆ) ಸ್ಪಂದನಾತ್ಮಕ ಸಹಕಾರದ ನೀತಿಯ ಮಾರ್ಗದರ್ಶಕ ಸೂತ್ರಕ್ಕೆ ಅಂಟಿಕೊಂಡಿರುತ್ತದೆ. ಅದರ ಆಧಾರದ ಮೇಲೆ, ಕೌನ್ಸಿಲರುಗಳಾಗಿ, ಸಚಿವರಾಗಿ, ಶಾಸಕರಾಗಿ ಮತ್ತು ಯಾವುದೇ ಮುನಿಸಿಪಲ್ ಅಥವಾ ಸಾರ್ವಜನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಹಿಂದೂ ಸಂಘಟನೆಯ ಎಲ್ಲರೂ ಹಿಂದೂಗಳ ನ್ಯಾಯಯುತ ಹಿತಾಸಕ್ತಿಗಳನ್ನು ಸಂರಕ್ಷಿಸಲು ಮತ್ತು ಬೆಂಬಲಿಸಲು ಕೂಡ ಆ ಸರ್ಕಾರಿ ಅಧಿಕಾರ ಕೇಂದ್ರಗಳನ್ನು ಬಳಸಿಕೊಳ್ಳುವ ಗುರಿ ಹೊಂದಿರಬೇಕು; ಅದೇ ಸಮಯದಲ್ಲಿ ಇತರರ ನ್ಯಾಯಯುತ ಹಿತಾಸಕ್ತಿಗಳಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು; ಈ ರೀತಿಯಲ್ಲಿ ಹಿಂದೂ ಮಹಾಸಭಾವು ನಮ್ಮ ದೇಶಕ್ಕೆ ಗೌರವಯುತ ದೇಶಭಕ್ತಿಯನ್ನು ಸಲ್ಲಿಸುತ್ತಿದೆ. ತಮ್ಮ ಕೆಲಸದ ಇತಿಮಿತಿಯನ್ನು ಅರಿತುಕೊಂಡು ಈ ಪರಿಸ್ಥಿತಿಯಲ್ಲಿ ಅವರು ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಮಹಾಸಭಾ ನಿರೀಕ್ಷಿಸುತ್ತದೆ ಮತ್ತು ಅಷ್ಟನ್ನಾದರೂ ಮಾಡುವಲ್ಲಿ ಅವರು ಸೋಲದಿದ್ದರೆ ಅವರು ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆಂದು ಮಹಾಸಭಾ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತದೆ. ಇತಿಮಿತಿಗಳು ಸಂಪೂರ್ಣವಾಗಿ ವಿಸರ್ಜನೆಯಾಗುವ ತನಕ ಹಂತ ಹಂತವಾಗಿ ತಾವಾಗಿಯೇ ಸೀಮಿತಗೊಳ್ಳುತ್ತಾ ಹೋಗಲೇಬೇಕು. ಸ್ಪಂದನಾತ್ಮಕ ಸಹಕಾರದ ನೀತಿಯು ಬೇಷರತ್ತಾದ ಸಹಕಾರದಿಂದ ಕ್ರಿಯಾಶೀಲ ಹಾಗೂ ಸಶಸ್ತ್ರ ಪ್ರತಿರೋಧದವರೆಗೂ ದೇಶಪ್ರೇಮೀ ಚಟುವಟಿಕೆಗಳ ಸಕಲ ಹರವನ್ನು ವ್ಯಾಪಿಸಿರುತ್ತದೆ; ಕಾಲದ ಅಗತ್ಯ, ನಮ್ಮ ವಶದಲ್ಲಿರುವ ಸಂಪನ್ಮೂಲಗಳು ಮತ್ತು ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ವಿಧಿಗೆ ತಕ್ಕಂತೆ ಅದು ತನ್ನನ್ನು ಹೊಂದಿಸಿಕೊಳ್ಳುತ್ತದೆ ಕೂಡ. (ಈ ಪದಗಳು ಮೂಲದಲ್ಲಿರುವಂತೆ ಇವೆ)

ಸುಭಾಷ್ ಚಂದ್ರ ಬೋಸ್ ಅವರು ಸೇನಾ ಕಾರ್ಯಾಚರಣೆ ಮೂಲಕ ಭಾರತವನ್ನು ವಿಮೋಚನೆಗೊಳಿಸಲು ಪ್ರಯತ್ನಿಸುತ್ತಿದ್ದಾಗ ಸಾವರ್ಕರ್ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಬ್ರಿಟಿಷರ ಯುದ್ಧ ಸನ್ನಾಹಗಳಿಗೆ ನೇರವಾಗಿ ಸಹಾಯ ಮಾಡುವ ಮಟ್ಟಕ್ಕೂ ಹೋಗುತ್ತಾರೆ. ಅವರು ಹೇಗೆ ಬ್ರಿಟಿಷರ ಗೆದ್ದೆತ್ತಿನ ಬಾಲ ಹಿಡಿದು ಅವರ ಯುದ್ಧ ತಂತ್ರಗಳಿಗೆ ಸಹಾಯ ಮಾಡಿದರು ಎಂಬುದು ಈ ಕೆಳಗಿನ ಅವರ ಮಾತುಗಳಿಂದ ಸ್ಪಷ್ಟವಾಗುತ್ತದೆ:

ಭಾರತದ ರಕ್ಷಣಾ ವಿಷಯದ ಮಟ್ಟಿಗೆ, ಸಹಾನುಭೂತಿ ಸಹಕಾರದ ಹುಮ್ಮಸ್ಸಿನಲ್ಲಿ ಭಾರತ ಸರ್ಕಾರದ ಯುದ್ಧ ಸನ್ನಾಹದೊಂದಿಗೆ, ಹಿಂದೂ ಹಿತಾಸಕ್ತಿಗಳೊಂದಿಗೆ ನಿಷ್ಠರಾಗಿರುವ ತನಕ ಹಿಂದೂರಾಜ್ಯವು ಹಿಂಜರಿಯದೇ ಜತೆಗೂಡಬೇಕು; ಭೂಸೇನೆ, ನೌಕಾದಳ ಹಾಗೂ ವಾಯುದಳಕ್ಕೆ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಬೇಕು ಮತ್ತು ಫಿರಂಗಿ, ಮದ್ದುಗುಂಡು ಹಾಗೂ ಯುದ್ಧ ತಂತ್ರಗಳ ಕಾರ್ಖಾನೆಗಳಿಗೆ ಪ್ರವೇಶಪಡೆಯಬೇಕು…

ಮತ್ತು ನಾವು ಗಮನಿಸಬೇಕಾದ್ದೇನೆಂದರೆ ಯುದ್ಧಕ್ಕೆ ಜಪಾನ್ ಪ್ರವೇಶ ಮಾಡಿರುವುದರಿಂದ ಅದು ಬ್ರಿಟಿಷರ ಶತೃಗಳಿಂದ ನೇರವಾದ ಹಾಗೂ ಹಠಾತ್ತಾದ ದಾಳಿಗೆ ನಮ್ಮನ್ನು ಈಡುಮಾಡಿದೆ. ಅದರ ಪರಿಣಾಮವಾಗಿ, ನಾವು ಇಷ್ಟಪಡುತ್ತೇವೋ ಬಿಡುತ್ತೇವೋ, ಯುದ್ಧದ ವಿನಾಶಕಾರಿ ದಾಳಿಗಳಿಂದ ನಾವು ನಮ್ಮದೇ ಆದ ಮನೆ ಮಾರುಗಳನ್ನು ರಕ್ಷಿಸಿಕೊಳ್ಳಬೇಕಾಗುತ್ತದೆ ಮತ್ತು ಭಾರತವನ್ನು ರಕ್ಷಿಸುವ ಸರ್ಕಾರದ ಯುದ್ಧ ಸನ್ನಾಹವನ್ನು ತೀವ್ರಗೊಳಿಸುವುದರಿಂದ ಮಾತ್ರವೇ ಇದು ಸಾಧ್ಯವಾಗುತ್ತದೆ. ಆದ್ದರಿಂದ ಹಿಂದೂ ಮಹಾಸಭಾದವರೆಲ್ಲರೂ ಒಂದು ನಿಮಿಷವನ್ನೂ ವ್ಯರ್ಥಮಾಡದೇ ಹಿಂದೂಗಳನ್ನು ವಿಶೇಷವಾಗಿ ಬಂಗಾಳ ಹಾಗೂ ಅಸ್ಸಾಮ್ ಪ್ರಾಂತಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಸಾಧ್ಯವೋ ಅಷ್ಟು ಎಚ್ಚರಿಸಿ ಎಲ್ಲಾ ಸಶಸ್ತ್ರ ಸೇನಾ ದಳಗಳನ್ನು ಪ್ರವೇಶಿಸಲು ಹುರಿದುಂಬಿಸಬೇಕು.

ಸಾವರ್ಕರ್ ಜಾತಿವಾದ ಹಾಗೂ ಜನಾಂಗವಾದದ ನಿಷ್ಠಾವಂತ ಹಠಮಾರಿಯಾಗಿ ಮತ್ತು ಜೀವನದುದ್ದಕ್ಕೂ ಸಾಮ್ರಾಜ್ಯವಾದದ ಬೆಂಬಲಿಗನಾಗಿ ಉಳಿದಿದ್ದರು. ಇಲ್ಲಿ ಮರೆಯಲೇ ಬಾರದ ಸತ್ಯ ಸಂಗತಿಯೇನೆಂದರೆ ಸಾವರ್ಕರ್ ಅವರಿಗೆ ಸಂಬಂಧಪಟ್ಟ ದಾಖಲೆಗಳನ್ನು ಸಾವರ್ಕರ್ ಬಂಟರು ಅಡಗಿಸಿಟ್ಟಿದ್ದಾರೆ, ಏಕೆಂದರೆ ದೇಶದ ಜನರಿಗೆ ನಿಜವಾದ ಸಾವರ್ಕರ್ ಗೊತ್ತಾದರೆ ಹಿಂದುತ್ವ ಬಂಟರಿಗೆ ದೊಡ್ಡ ಕೇಡಾಗುತ್ತದೆ ಮತ್ತು ಜನರು ಇದನ್ನು ಇತಿಹಾಸದ ಕಸದ ಬುಟ್ಟಿಗೆ ಎಸೆದಾರು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಸ್ವಾಭಿಮಾನ ಇರುವ ಹಾಗೂ ವಸಾಹತು ವಿರೋಧಿ ಪರಂಪರೆಯಲ್ಲಿ ಸ್ವಲ್ಪವಾದರೂ ನಂಬಿಕೆ ಇರುವ ಯಾವ ಭಾರತೀಯನೂ ‘ವೀರ’ ಸಾವರ್ಕರರ ವೈಭವೀಕರಣವನ್ನು ಸಹಿಸುವುದಿಲ್ಲ. ಹಿಂದುತ್ವ ಬಂಟರು ಈ ಕುಲಗೆಟ್ಟ ಪರಂಪರೆಯನ್ನು ಏಕೆ ಅಡಗಿಸಿಡುತ್ತಾರೆ ಎನ್ನುವುದು ಅರ್ಥವಾಗುವಂಥದೆ. ಆದರೆ ಪ್ರಜಾಸತ್ತಾತ್ಮಕ-ಜಾತ್ಯತೀತ ಭಾರತೀಯ ಸಮಾಜದ ಪರವಾಗಿ ಇರುತ್ತೇವೆ ಎನ್ನುವವರು ಏಕೆ ಸ್ವಾತಂತ್ರ್ಯಾನಂತರದ ಸರಿಸುಮಾರು ಒಂದು ಶತಮಾನದ ಕಾಲ ಈ ದಾಖಲೆಗಳನ್ನು ಬಹಿರಂಗಪಡಿಸದೆ ಇಟ್ಟರು ಎನ್ನುವುದು ಅಚ್ಚರಿಯ ಸಂಗತಿಯಾಗಿದೆ.

ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡುವ ಹಾಗೂ ವಂಚನೆಯಲ್ಲಿ ತೊಡಗಿರುವ ಹಿಂದುತ್ವ ಬಂಟರನ್ನು ಈ ದಾಖಲೆಗಳು ನಿಜಕ್ಕೂ ಧೈರ್ಯಗಡಿಸುತ್ತವೆ. ಮಾಹಿತಿ ಇಲ್ಲದ ಮುಖಂಡರು ಮತ್ತು ಈ ‘ವೀರ’ ಸಾವರ್ಕರರನ್ನು ವೈಭವೀಕರಿಸುವ ಜನರು ಈ ನಿಜಾಂಶಗಳು ಮತ್ತು ಸುಳ್ಳುಪುರಾಣಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳುತ್ತಾರೆ ಎಂಬ ಭರವಸೆ ಇದೆ.

(ಮುಂದುವರೆಯುವುದು)

Donate Janashakthi Media

Leave a Reply

Your email address will not be published. Required fields are marked *