ಭಾಗ – 12 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಡಾ.ಶಮ್ಸುಲ್ ಇಸ್ಲಾಂ
ಅನು: ಟಿ.ಸುರೇಂದ್ರರಾವ್

ಮಿಥ್ಯೆಗಳನ್ನು ಸತ್ಯಸಂಗತಿಗಳಿಂದ ಬೇರ್ಪಡಿಸುವ ಒಂದು ಪ್ರಾಮಾಣಿಕ ಆಕಾಂಕ್ಷೆಯಿಂದ ರಚಿಸಿರುವ ಡಾ.ಶಮ್ಸುಲ್ ಇಸ್ಲಾಮ್‌ ರವರ ʻಸಾವರ್ಕರ್ ಅನ್‌ಮಾಸ್ಕ್ಡ್‌ʼ ಸಾವರ್ಕರ್‌ ರವರನ್ನು ಕುರಿತ ಏಳು ಮಿಥ್ಯೆಗಳನ್ನು ದಾಖಲೆಗಳ ಬೆಳಕಿನಲ್ಲಿ ಪರಿಶೀಲಿಸುತ್ತದೆ.

ಮಿಥ್ಯೆ 1 – ʻಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರʼ!

ಇದುವರೆಗೆ…

ಸಾವರ್ಕರ್ ಒಬ್ಬ ದಂತಕತೆಯಾದ ಸ್ವಾತಂತ್ರ್ಯ ಹೋರಾಟಗಾರ., ಅವರು ಅಸಾಧಾರಣ ಧೈರ್ಯ ಪ್ರದರ್ಶಿಸಿದರು, ಬ್ರಿಟಿಷ್ ಆಳರಸರೊಂದಿಗೆ ಅವರು ಎಂದೂ ಶಾಮೀಲಾಗಲಿಲ್ಲ ಎಂಬುದು ಹಿಂದುತ್ವ ಪ್ರಚಾರಕರು ಹರಡುತ್ತಿರುವ ಮಿಥ್ಯೆ. ಅಂಡಮಾನಿನ ಭಯಂಕರ ಸೆಲ್ಯುಲರ್ ಜೈಲಿನಲ್ಲಿ ಗೂಡಿನಂತಿರುವ ಸಣ್ಣ ಕೋಣೆಯಲ್ಲಿ ಭೀಕರ ಕ್ರೌರ್ಯಗಳಿಗೆ ಒಳಗಾದವರು ಸಾವರ್ಕರ್ ಒಬ್ಬರೇ ಅಲ್ಲ. ಅಲ್ಲದೆ ಸಾವರ್ಕರ್ ತಮ್ಮ ರಾಜಕೀಯ ಜೀವನದ ಆ ಮೊದಲ ಘಟ್ಟದಲ್ಲಿ, ಭಾರತವು ಹಿಂದೂ ಮತ್ತು ಮುಸ್ಲಿಮರ ನಡುವಿನ ಘರ್ಷಣೆಯ ಕಣವಾಗಿತ್ತು ಎಂಬ ವಾದವನ್ನಾಗಲೀ ಅಥವಾ ಹಿಂದೂಗಳು ಮಾತ್ರ ಭಾರತದ ಸಹಜ ದೇಶಪ್ರೇಮಿಗಳು ಎಂಬ ನಂಬಿಕೆಯನ್ನಾಗಲೀ ಹೊಂದಿರಲಿಲ್ಲ. ಆದರೆ ಸೆಲ್ಯುಲರ್ ಜೈಲಿನಲ್ಲಿನ ಕಾರಾಗೃಹವಾಸ ಮತ್ತು ಅಲ್ಲಿನ ಘೋರಯಾತನೆಯಿಂದ ಸಂಪೂರ್ಣವಾಗಿ ಕುಗ್ಗಿದ ಅವರು, ನಂತರ ಕೋಮು ಸಾಮರಸ್ಯದ ಸ್ವತಂತ್ರ ಭಾರತದ ಆದರ್ಶಕ್ಕಾಗಿ ತುಡಿಯುತ್ತಿದ್ದ ಕ್ರಾಂತಿಕಾರಿಯಾಗಿ ಉಳಿಯಲಿಲ್ಲ. ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿನ ಹಿಂದೂ-ಮುಸ್ಲಿಂ ಐಕ್ಯತೆಯಿಂದ ಆತಂಕಿತರಾಗಿದ್ದ ಬ್ರಿಟಿಷ್ ದೊರೆಗಳಿಗೆ ಕ್ಷಮಾಯಾಚನೆಯ ಅರ್ಜಿ ಸಲ್ಲಿಸುವುದರೊಂದಿಗೆ ತಮ್ಮ ರಾಜಕೀಯ ಬದುಕಿನ ಎರಡನೇ ಘಟ್ಟ ಆರಂಭಿಸಿದ ಸಾವರ್ಕರ್‌ರಂತವರ ಸಹಾಯ ಆ ದೊರೆಗಳಿಗೆ ಬೇಕಿತ್ತು, ಅದಕ್ಕಾಗಿ ಅವರನ್ನು ಬಿಡುಗಡೆಮಾಡಿದರು ಎನ್ನುವುದನ್ನು ಯಾರೂ ಅರ್ಥಮಾಡಿಕೊಳ್ಳಬಲ್ಲರು. ಸಾವರ್ಕರ್ ಅವರ ಆವಶ್ಯಕತೆಯನ್ನು ಈಡೇರಿಸಿದರು.

1929ರಲ್ಲಿ ವಿದೇಶಿ ದೊರೆಗಳು ಅವರಿಗೆ ನಿವೃತ್ತಿ ವೇತನ ಮಂಜೂರು ಮಾಡಿರುವುದು ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಎಷ್ಟು ಪ್ರಬಲವಾಗಿ ಬ್ರಿಟಿಷರ ಬಾಲಬಡುಕರಾಗಿದ್ದರು ಎನ್ನುವುದನ್ನು ಮತ್ತು ಅವರ ಒಡೆದು ಆಳುವ ಯೋಜನೆಯಲ್ಲಿ ಅವರು ಎಷ್ಟು ಮುಖ್ಯವಾಗಿದ್ದರು ಎಂಬುದನ್ನೂ ತೋರಿಸುತ್ತದೆ. ಇಷ್ಟೇ ಅಲ್ಲ, ಹಿಂದುತ್ವದ ಮಂದಿ ಅಲ್ಪಸಂಖ್ಯಾತರದ್ದು ʻದೇಶಾತೀತ ಸ್ವಾಮಿನಿಷ್ಠೆʼಎಂದು ದೂಷಿಸಿದ್ದ ಅವರೇ ಸ್ವತಃ ಭಾರತವನ್ನು ನೇಪಾಳದ ರಾಜ ಆಳಬೇಕೆಂದು ಬಯಸಿದ್ದವರು, ಈ ಮೂಲಕ ಅದಕ್ಕೆ ತಮ್ಮದೇ ʻಮಾದರಿʼಯನ್ನು ಪ್ರಸ್ತುತ ಪಡಿಸಿದ್ದರು!

ಮುಂದೆ ಓದಿ…

ತ್ರಿವರ್ಣಧ್ವಜದ ಕಡುವಿರೋಧಿ ಮತ್ತು ಬ್ರಿಟಿಷರ ಬಂಟರಾಗಿದ್ದ ಹಿಂದೂ ರಾಜರುಗಳ ಮಹಾ ಸಮರ್ಥಕ

ಬ್ರಿಟಿಷ್ ಆಳ್ವಿಕೆಯ ವಿರುದ್ಧ ಭಾರತೀಯರು ನಡೆಸಿದ ಐಕ್ಯ ಹೋರಾಟಗಳ ಪ್ರತಿಯೊಂದು ಸಂಕೇತಗಳನ್ನು ಆರ್.ಎಸ್.ಎಸ್. ನಂತೆ ಸಾವರ್ಕರ್ ಕೂಡ ಸಹಿಸುತ್ತಿರಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಬಾವುಟ ಅಥವಾ ರಾಷ್ಟ್ರೀಯ ಬಾವುಟವಾಗಿ ತ್ರಿವರ್ಣ (ಆಗ ಅದರ ಮಧ್ಯೆ ಚರಕ ಅಥವಾ ನೂಲುವ ಚಕ್ರ ಇತ್ತು) ಧ್ವಜವನ್ನು ಒಪ್ಪಲು ಅವರು ನಿರಾಕರಿಸಿದರು. ಸೆಪ್ಟೆಂಬರ್ 22, 1941 ರಂದು ಹಿಂದೂ ಮಹಾಸಭಾ ಕಾರ್ಯಕರ್ತರಿಗಾಗಿ ನೀಡಿದ ಹೇಳಿಕೆಯಲ್ಲಿ ಅವರು ಹೀಗೆ ಹೇಳಿದ್ದರು:

ಇದನ್ನು ಓದಿ: ಭಾಗ -1 ‘ವೀರ’ ಸಾವರ್ಕರ್-ಏಳು ಮಿಥ್ಯೆಗಳು

ಬಾವುಟಕ್ಕೆ ಸಂಬಂಧಪಟ್ಟಂತೆ ಹಿಂದೂಗಳಿಗೆ ತಿಳಿದಿರುವುದು ಒಟ್ಟಾಗಿ ಹಿಂದುತ್ವವನ್ನು ಪ್ರತಿನಿಧಿಸುವ ʻಓಂ ಮತ್ತು ಸ್ವಸ್ತಿಕ್ʼ ಚಿತ್ರವನ್ನು ಹೊಂದಿರುವ ʻಕುಂಡಲಿನಿ ಕೃಪಾಂಕಿತʼ ಹಿಂದೂ ಮಹಾಸಭಾ ಬಾವುಟವಲ್ಲದೇ ಬೇರಾವುದೂ ಅಲ್ಲ. ತಲೆತಲಾಂತರದಿಂದ ಹಿಂದೂಸ್ತಾನದಾದ್ಯಂತ ಗೌರವಿಸಲ್ಪಟ್ಟ ಹಿಂದೂ ಜನಾಂಗ ಮತ್ತು ರಾಜ್ಯನೀತಿಯ ಅತ್ಯಂತ ಪ್ರಾಚೀನ ಲಾಂಛನವದು. ಇವತ್ತು ಹರಿದ್ವಾರದಿಂದ ರಾಮೇಶ್ವರದವರೆಗೆ ಇರುವ ಮಿಲಿಯಾಂತರ ಹಿಂದೂಗಳ ಅನುಮೋದನೆ ಪಡೆದ ಮತ್ತು ಅಂಗೀಕರಿಸಲ್ಪಟ್ಟ ಮತ್ತು ಪ್ರತಿಯೊಂದೂ ಹಿಂದೂ ಮಹಾಸಭಾದ ಸಾವಿರ ಸಾವಿರಗಟ್ಟಲೆ ಶಾಖೆಗಳ ಮೇಲೆ ಹಾರಾಡುತ್ತಿರುವ ಬಾವುಟವದು. ಆದ್ದರಿಂದ, ಸರ್ವ ಹಿಂದೂಗಳ ಬಾವುಟವನ್ನು ಗೌರವಿಸದ ಮತ್ತು ಹಾರಿಸದ ಯಾವುದೇ ಸ್ಥಳ ಅಥವಾ ಸಮಾರಂಭವನ್ನು ಏನೇ ಆಗಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಬಹಿಷ್ಕರಿಸಬೇಕು… ಬಹಳ ಹೆಚ್ಚೆಂದರೆ ಚರಕ ಬಾವುಟವು ಖಾದಿ-ಭಂಡಾರವನ್ನು ಪ್ರತಿನಿಧಿಸಬಹುದಷ್ಟೆ, ಚರಕವು ಎಂದಿಗೂ ಹಿಂದೂಗಳಂತಹ ಹೆಮ್ಮೆಯ ಹಾಗೂ ಪ್ರಾಚೀನ ರಾಷ್ಟ್ರದ ಚೇತನವನ್ನು ಪ್ರತಿನಿಧಿಸಲಾರದು. ಆದಾಗ್ಯೂ, ಅದನ್ನು ಇಷ್ಟಪಡುವವರು ಅದರ ಪರವಾಗಿ ನಿಲ್ಲಬಹುದು. ಆದರೆ ಹಿಂದೂ ಸಂಘಟನೆಯವರಾದ ನಾವು ಮಾತ್ರ ಪ್ರಾಚೀನ ಹಿಂದೂ ಬಾವುಟವಲ್ಲದೇ ಬೇರಾವುದೇ ಬಾವುಟವನ್ನು ಸಮರ್ಥಿಸಲು ಮತ್ತು ಗೌರವಿಸಲು ಸಾಧ್ಯವಿಲ್ಲ.

1938ರಲ್ಲಿ ಒಮ್ಮೆ ಹಿಂದುತ್ವ ಕಾರ್ಯಕರ್ತರು ತ್ರಿವರ್ಣಧ್ವಜವನ್ನು ಹರಿದು ಹಾಕಿದ ಘಟನೆಗೆ ಪ್ರಸಿದ್ಧ ಸಮಾಜವಾದಿ ಮುಖಂಡ ಎನ್.ಜಿ.ಗೋರೆಯವರು ಸಾಕ್ಷಿಯಾಗಿದ್ದರು. ಆ ದುರ್ಘಟನೆಗೆ ಸಾವರ್ಕರ್ ಮತ್ತು ಹೆಡ್ಗೆವಾರ್ ಅವರೇ ನೇರ ಹೊಣೆಗಾರರು ಎಂದು ಹೇಳಿದ್ದರು. ಮೇ ದಿನಾಚರಣೆಯ ಮೆರವಣಿಗೆಯ ಮೇಲೆ ದಾಳಿಮಾಡಿದ್ದರು, ಸೇನಾಪತಿ ಬಾಪಟ್ ಹಾಗೂ ಗಜಾನನ ಕಾನಿಟ್ಕರ್ ಅವರ ಮೇಲೆ ಹಲ್ಲೆ ಮಾಡಿದ್ದರು, ಅಷ್ಟೇ ಅಲ್ಲ, ರಾಷ್ಟ್ರಧ್ವಜವನ್ನು ಹರಿದು ಬಿಸಾಕಿದ್ದರು. ಹಿಂದೂ ಮಹಾಸಭಾದ ಹಾಗೂ ಹೆಡ್ಗೆವಾರ್ ಅವರ ಹುಡುಗರು ಅದನ್ನೆಲ್ಲಾ ಮಾಡಿದ್ದರು. ಮುಸ್ಲಿಮರನ್ನು, ಕಾಂಗ್ರೆಸ್ಸನ್ನು ಮತ್ತು ಅದರ ಬಾವುಟವನ್ನು ದ್ವೇಷಿಸಲು ಆ ಹುಡುಗರಿಗೆ ಕಲಿಸಲಾಗಿದೆ. ಅವರಿಗೆ ಅವರದೇ ಆದ ಒಂದು ಬಾವುಟವಿದೆ, ಅದೇ ’ಭಗವಾಧ್ವಜʼ, ಅದು ಮರಾಠಿಗರ ಶ್ರೇಷ್ಠತೆಯ ಸಂಕೇತ.

ಇದನ್ನು ಓದಿ: ಭಾಗ – 2 `ವೀರ’ ಸಾವರ್ಕರ್- ಏಳು ಮಿಥ್ಯೆಗಳು

ಹಿಂದೂ ರಾಜರುಗಳ ಸಮರ್ಥಕರಾಗಿ ಸಾವರ್ಕರ್

ಭಾರತವನ್ನು ಆಳುತ್ತಿದ್ದ ಹಿಂದೂ ರಾಜರುಗಳ ಮಹಾನ್ ಸಮರ್ಥಕರಾಗಿದ್ದರು ಸಾವರ್ಕರ್. ಅವರ ಪ್ರಕಾರ, ಹಿಂದೂ ರಾಜರುಗಳು ಸಹಧರ್ಮೀಯರು ಮಾತ್ರವಲ್ಲ, ಅವರು ನಮ್ಮ ಹಿಂದಿನ ವೀರ ಹಿಂದೂ ರಾಜರುಗಳ ವಂಶಸ್ಥರು ಮತ್ತು ಅವರ ʻಆಪತ್ಕಾಲದ ಶಕ್ತಿʼ. ನಿಜ ಹೇಳಬೇಕೆಂದರೆ, ಬ್ರಿಟಿಷ್ ದೊರೆಗಳ ಜತೆ ಶಾಮೀಲಾಗಿದ್ದ ಭಾರತದಲ್ಲಿ ಆಳುತ್ತಿದ್ದ ರಾಜರುಗಳು ಹಿಂದೂವಾದದ ʻಶಕ್ತಿ-ಸ್ಥಾನʼ (ಶಕ್ತಿಕೇಂದ್ರ) ಎಂದು ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್. ಎರಡೂ ಹೆಮ್ಮೆಯಿಂದ ಬಣ್ಣಿಸುತ್ತವೆ. ನಾವು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ 1857ರಲ್ಲಿ ʻದಂಗೆʼಯನ್ನು ಬಗ್ಗುಬಡಿಯುವಲ್ಲಿ ವಿದೇಶಿ ದೊರೆಗಳಿಗೆ ಜನರನ್ನು ಮತ್ತು ಸಾಮಗ್ರಿಯನ್ನು ನಿಷ್ಠೆಯಿಂದ ಒದಗಿಸುತ್ತಿದ್ದ ರಾಜರುಗಳನ್ನು (ಹಿಂದೂ ಹಾಗೂ ಮುಸ್ಲಿಂ ಇಬ್ಬರೂ) ಮಾತ್ರವೇ ದೇಶೀಯ ರಾಜರುಗಳು ಎಂದು ವಸಾಹತುಶಾಹಿ ಧಣಿಗಳು ಉಳಿಸಿಕೊಂಡಿದ್ದರು.

ಬಿಳಿ ದೊರೆಗಳ ನಂಬುಗೆಯ ಬಂಟರಾಗಿದ್ದ ಈ ಹಿಂದೂ ರಾಜರುಗಳು ತಮ್ಮ ಸಂಸ್ಥಾನಗಳಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಚಟುವಟಿಕೆಗಳಿಗೆ ಅವಕಾಶ ನೀಡಲಿಲ್ಲ. ಈ ಸಂಸ್ಥಾನಗಳಲ್ಲಿ ಮೂಲಭೂತ ಮಾನವ ಹಕ್ಕುಗಳನ್ನು ಕೇಳಿದ ಸಕ್ರಿಯ ರಾಜಕೀಯ ಕಾರ್ಯಕರ್ತರ ಮೇಲೆ ಅತ್ಯಾಚಾರ, ಕೊಲೆ, ಕಿರುಕುಳಗಳ ಅನಂತ ಉದಾಹರಣೆಗಳಿವೆ. ಮೈಸೂರು ಸಂಸ್ಥಾನದಲ್ಲಿ ತ್ರಿವರ್ಣಧ್ವಜಕ್ಕೆ ಸಾರ್ವಜನಿಕವಾಗಿ ಗೌರವ ಸಲ್ಲಿಸಿದ ಕಾರಣಕ್ಕಾಗಿ 26 ಜನರು ಅಲ್ಲಿಯ ಹಿಂದೂ ದೊರೆಗಳ ಸಶಸ್ತ್ರ ಸೇನೆಯಿಂದ ಕಗ್ಗೊಲೆಗೆ ಒಳಗಾದರು ಮತ್ತು ಅಸಂಖ್ಯಾತ ಜನರು ಗಾಯಗೊಂಡರು. ಈ ಕಗ್ಗೊಲೆಗೆ ಸಂಬಂಧಪಟ್ಟಂತೆ ಸಾವರ್ಕರ್ ಏಪ್ರಿಲ್ 17, 1941 ರಂದು ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಹಿಂದೂ ಮಹಾಸಭಾದ ಅಧಿವೇಶನಕ್ಕೆ ಈ ಕೆಳಗಿನಂತೆ ಸಂದೇಶ ಕಳಿಸಿರುವುದನ್ನು ಗಮನಿಸಿದರೆ, ಸ್ವಾತಂತ್ರ್ಯ ಚಳುವಳಿಗಾರರ ಕಗ್ಗೊಲೆಯನ್ನು ಸಮರ್ಥಿಸಿರುವುದು ಸ್ವಾತಂತ್ರ್ಯ ಚಳುವಳಿ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಅವರ ಪಾಶವೀ ಧೋರಣೆಯನ್ನು ಬಯಲುಮಾಡುತ್ತದೆ:

ʻಹಿಂದೂ ಸಂಸ್ಥಾನದ ಹಿಂದೂ ಶಕ್ತಿಯನ್ನು ಕ್ರೋಢೀಕರಿಸುವುದು ಹಾಗೂ ಬಲಪಡಿಸುವುದು ಮತ್ತು ಮಹಾರಾಜರು ಹಾಗೂ ಹಿಂದೂ ಸಂಸ್ಥಾನದ ಶ್ರೇಯಸ್ಸಿಗಾಗಿ ಅವರ ಪರವಾಗಿ ನಿಲ್ಲುವುದು ಮೈಸೂರು ಸಂಸ್ಥಾನದ ಹಿಂದೂ ಸಭಾದ ಮುಖ್ಯಗುರಿಯಾಗಿರಬೇಕು. ಹಿಂದೂಯೇತರ ಶಕ್ತಿಗಳು ಅಥವಾ ಖೋಟಾರಾಷ್ಟ್ರೀಯತೆಯ ಸಂಘಟನೆಗಳ ವಂಚಕ ಹಿಂದೂಗಳ ಯಾವುದೇ ವಿಧ್ವಂಸಕ ಚಟುವಟಿಕೆಗಳ ವಿರುದ್ಧ ಅವರಿಗೆ ಅತ್ಯಂತ ನಿಷ್ಠಾವಂತ ಹಾಗೂ ದೇಶಪ್ರೇಮದ ಬೆಂಬಲವನ್ನು ನೀಡುವ ಮೂಲಕ ರಾಜರು ಹಾಗೂ ಸಂಸ್ಥಾನವನ್ನು ಸಮರ್ಥಿಸಬೇಕು.ʼ

ಇದನ್ನು ಓದಿ: ಭಾಗ – 3 ‘ವೀರ’ ಸಾವರ್ಕರ್ – ಏಳು ಮಿಥ್ಯೆಗಳು

ಈ ರಾಜರುಗಳ ಅಮಾನುಷ ಆಳ್ವಿಕೆಗಳ ಬಗ್ಗೆ ಸರ್ದಾರ್ ವಲ್ಲಭಬಾಯ್ ಪಟೇಲರಿಗೆ ಬಹಳ ಚೆನ್ನಾಗಿ ಗೊತ್ತಿತ್ತು. ಅವರು ಬಿಕಾನೆರ್ ಆಳರಸನಿಗೆ ಜುಲೈ 24, 1946 ರಂದು ಬರೆದ ಪತ್ರ ಹೀಗಿದೆ: ʻʻರಾಜರುಗಳು ಮತ್ತು ಅವರ ಪ್ರಜೆಗಳ ನಡುವಿನ ಅನ್ಯೋನ್ಯ ಸಂಬಂಧಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬರುವ ಪ್ರಮುಖ ಸಮಸ್ಯೆಯೆಂದರೆ, ಜನರ ಮೂಲಭೂತ ಹಕ್ಕುಗಳನ್ನು ಹಾಗೂ ನಾಗರಿಕ ಸ್ವಾತಂತ್ರ್ಯಗಳನ್ನು ಮತ್ತು ಜವಾಬ್ದಾರಿ ಸರ್ಕಾರಕ್ಕಾಗಿನ ಜನರ ಸಹಜ ಬೇಡಿಕೆಗಳನ್ನು ಮಾನ್ಯ ಮಾಡುವಲ್ಲಿ ಬಹುತೇಕ ರಾಜ್ಯಗಳಲ್ಲಿ ಇಷ್ಟವಿಲ್ಲದಿರುವುದು.ʼʼ84

ನವಾನಗರದ ಮಹಾರಾಜ (ಚಾನ್ಸಲರ್ ಆಫ್ ಚೇಂಬರ್  ಆಫ್ ಪ್ರಿನ್ಸೆಸ್-ದೇಶೀ ರಾಜರುಗಳ ಸಂಸ್ಥೆಯ ಮುಖ್ಯಸ್ಥ) 1947 ರಲ್ಲಿ ದೇಶೀಯ ರಾಜರುಗಳು ತಮ್ಮ ಆಳ್ವಿಕೆಯನ್ನು ಉಳಿಸಿಕೊಳ್ಳುವ ಬಗ್ಗೆ ಮುಸ್ಲಿಂಲೀಗಿನೊಂದಿಗೆ ಸಂಧಾನ ನಡೆಸಿದ್ದರು ಎಂಬ ಸಂಗತಿಯಿಂದ ಐಕ್ಯ ಭಾರತಕ್ಕೆ ಬದ್ಧತೆಯ ಕುರಿತು ಈ ಹಿಂದೂ ರಾಜರುಗಳ ಬದ್ಧತೆ ಏನೆಂಬುದನ್ನು ತಿಳಿಯಬಹುದು.

ʻʻನಾನು ಲೀಗನ್ನು ಏಕೆ ಬೆಂಬಲಿಸಬಾರದು? ಜಿನ್ನಾರವರು ನಮ್ಮ ಅಸ್ತಿತ್ವವನ್ನು ಸಹಿಸಲು ಸಿದ್ಧರಾಗಿದ್ದಾರೆ, ಆದರೆ ನೆಹರೂರವರು ರಾಜರುಗಳ ಅಳಿವನ್ನು ಬಯಸುತ್ತಿದ್ದಾರೆ…ʼʼ

ಎಂದು ಈ ರಾಜರುಗಳ ಮುಖಂಡ ವಾದ ಮಾಡಿದ್ದರು.

ಒಂದುಕಡೆ ಹಿಂದೂ ಮಹಾಸಭಾ ಮತ್ತು ಆರ್.ಎಸ್.ಎಸ್., ಮತ್ತೊಂದೆಡೆ ಹಿಂದೂ ರಾಜರುಗಳು, ಇವರ ನಡುವಿನ ಅಕ್ರಮ ಹಾಗೂ ದುರುದ್ದೇಶಪೂರಿತ ನಂಟು 1948 ರಲ್ಲಿ ಗಾಂಧಿಯವರ ಹತ್ಯೆಯ ನಂತರ ಮತ್ತೊಮ್ಮೆ ಬಯಲಾಯಿತು. ಆರ್.ಎಸ್.ಎಸ್. ಜತೆ ಸ್ನೇಹಪರ ಸಂಬಂಧ ಹೊಂದಿದ್ದ ಗ್ವಾಲಿಯರ್, ಭರತ್ ಪುರ್ ಮತ್ತು ಅಲ್ವಾರ್ ಸಂಸ್ಥಾನಗಳಲ್ಲಿ ಗಾಂಧಿಯವರ ಹತ್ಯೆಯನ್ನು ಸಿಹಿ ಹಂಚುವುದರ ಮೂಲಕ ಸಂಭ್ರಮಿಸಿದರು. ಈ ವಿಷಯವನ್ನು ಸ್ವತಃ ಜವಾಹರ್‌ಲಾಲ್ ನೆಹರೂರವರು ಗೃಹ ಸಚಿವ ಸರ್ದಾರ್ ಪಟೇಲ್ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಿದ್ದರು.

ಇದನ್ನು ಓದಿ: ಭಾಗ – 4 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಪ್ರಧಾನವಾಗಿ ಹಿಂದೂಗಳನ್ನೇ ಹೊಂದಿರುವ ಭಾರತೀಯರ ಅಭಿವೃದ್ಧಿ ಮತ್ತು ದೇಶದ ಸ್ವಾತಂತ್ರ್ಯ ಎರಡೂ ವಸಾಹತುಶಾಹಿ ಹಾಗೂ ಅದರ ಬಾಲಬಡುಕರ ನಾಶದ ಮೇಲೆ ಅವಲಂಬಿತವಾಗಿತ್ತು. ಆದರೆ ಸಾವರ್ಕರ್ ಮತ್ತು ಆರ್.ಎಸ್.ಎಸ್., ಈ ನಿರಂಕುಶ ಪಾಳೇಗಾರಿ ವಿಭಾಗಗಳೊಂದಿಗೆ ಸೇರಿಕೊಂಡು ಅವರ ಸಾರ್ವಭೌಮತ್ವವನ್ನು ಮರುಸ್ಥಾಪಿಸಬೇಕೆಂದು ಒತ್ತಾಯಿಸುತ್ತ, ವಾಸ್ತವವಾಗಿ ಈ ರಾಜರುಗಳ ನಿಜವಾದ ಪೋಷಕರಾಗಿದ್ದ ಬ್ರಿಟಿಷ್ ದೊರೆಗಳ ಪರವಾಗಿ ಅವರು ನಿಂತಿದ್ದರು. ಹಿಂದೂ ಮಹಾಸಭಾ ಮತ್ತು ಸ್ಥಳೀಯ ದೊರೆಗಳ ನಡುವಿನ ನಂಟು ಮತ್ತೊಮ್ಮೆ ಸ್ವಾತಂತ್ರ್ಯ ಚಳುವಳಿಗೆ ಕೇಂಡುಂಟುಮಾಡುವ ಸಾವರ್ಕರ್ ಧೋರಣೆಯನ್ನು ಸಾಬೀತುಮಾಡುತ್ತಿದೆ.

ಹಿಂದೂ ಮಹಾಸಭಾ ಕುರಿತ ಭಿಡೆಯವರ ಅಧಿಕೃತ ದಾಖಲಾತಿಗಳಲ್ಲಿ ಸಾವರ್ಕರ್ ಅವರ ಆ ಕಾಲದ ಬರಹಗಳು ಹಾಗೂ ಅಧಿಕೃತ ಸಂದೇಶಗಳು ಈ ಕೆಟ್ಟ ನಿರಂಕುಶಾಧಿಪತಿಗಳ ಜತೆ ಅವರಿಗಿರುವ ಅನ್ಯೋನ್ಯ ಸಂಬಂಧಗಳನ್ನು ಬಹಿರಂಗಪಡಿಸುತ್ತವೆ. ʻಎಲ್ಲಾ ಹಿಂದೂ  ಸಂಸ್ಥಾನಗಳು ಮತ್ತು ಅಲ್ಲಿರುವ ಜನರ ಒಳಿತು ಹಾಗೂ ದೇಶಭಕ್ತಿಯಿಂದ ಕೂಡಿದ ಪ್ರಗತಿಯೊಂದಿಗೆ ಯಾವಾಗಲೂ ಸದಾಶಯಗಳನ್ನು ಹೊಂದಿರುವುದು ಮತ್ತು ಅವರ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶ ಮಾಡದಿರುವುದು ಹಿಂದೂ ಮಹಾಸಭಾದ ಕಾರ್ಯನೀತಿಯಾಗಿದೆʼ ಎಂದು ಜುಲೈ 19, 1938 ರಂದು ಸಾವರ್ಕರ್ ಅವರೇ ಸಹಿ ಮಾಡಿದ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜ ಸಂಸ್ಥಾನಗಳಲ್ಲಿದ್ದ ಜನರ ನಾಗರಿಕ ಹಕ್ಕುಗಳನ್ನು ಮರುಸ್ಥಾಪಿಸುವ ಚಳುವಳಿಯನ್ನು ಕಾಂಗ್ರೆಸ್ ಆರಂಭಿಸಿದಾಗ ದೇಶೀಯ ಹಿಂದೂ ನಿರಂಕುಶ ದೊರೆಗಳ ಪರವಾಗಿ ನಿಂತ ಸಾವರ್ಕರ್ ಕೋಪದಿಂದ ಹೀಗೆ ಪ್ರತಿಕ್ರಿಯಿಸುತ್ತಾರೆ: ʻರಾಜ್‌ಕೋಟ್, ಜೈಪುರ್, ತಿರುವಾಂಕೂರ್ ಮತ್ತು ಇತರ ಕೆಲವು ಹಿಂದೂ ಸಂಸ್ಥಾನಗಳಲ್ಲಿ ಕಾಂಗ್ರೆಸ್ಸಿನ ನಾಗರಿಕ ಪ್ರತಿರೋಧ ಚಳುವಳಿ ಕುರಿತು ನನ್ನ ಅಭಿಪ್ರಾಯಗಳ ಬಗ್ಗೆ ಕೆಲವು ಪತ್ರಿಕೆಗಳು ತಪ್ಪು ವರದಿಗಳನ್ನು ನೀಡುತ್ತಿರುವ ಕಾರಣ ನಾನು ಹೀಗೆ ಹೇಳಿಕೆ ಕೊಡಬೇಕಾದ ಅನಿವಾರ್ಯತೆ ಬಂದಿದೆ. ನಾನು ಹಿಂದೂ ಮಹಾಸಭಾದ ಅಧ್ಯಕ್ಷನಾಗಿ ಹಿಂದೂ ಮಹಾಸಭಾವು ಹಿಂದೂ ಸಂಸ್ಥಾನಗಳಿಗೆ ಸಂಬಂಧಪಟ್ಟಂತೆ ಅಂಗೀಕರಿಸಿದ ನಿರ್ಣಯದ ಪರವಾಗಿ ನಿಲುವು ತಳೆಯಬೇಕಾದ ಪರಿಮಿತಿಗೆ ಒಳಪಟ್ಟಿದ್ದೇನೆ. ಹಿಂದೂ ಸಂಸ್ಥಾನಗಳ ಬಗ್ಗೆ ಹಿಂದೂ ಮಹಾಸಭಾದ ನೀತಿಯು ಉಪಕಾರ ಬುದ್ಧಿಯ ತಟಸ್ಥ ನಿಲುವಾಗಿದೆ. ಆದ್ದರಿಂದ ಹಿಂದೂ ರಾಜರುಗಳನ್ನು ಗುರಿಯಾಗಿಸಿ ಮತ್ತು ಅವರ ಅಸ್ತಿತ್ವಕ್ಕೇ ಅಥವಾ ಸಾಮರ್ಥ್ಯಕ್ಕೇ ಗಂಡಾಂತರ ಉಂಟುಮಾಡುವ ಮತ್ತು ಒಟ್ಟಾರೆಯಾಗಿ ಆ ಸಂಸ್ಥಾನಗಳಲ್ಲಿರುವ ಹಿಂದೂಗಳ ಹಿತಾಸಕ್ತಿಗಳಿಗೆ ವಿರುದ್ಧವಾದ ಪರಿಣಾಮ ಉಂಟುಮಾಡುವ ಯಾವುದೇ ಚಳುವಳಿಯನ್ನು ಬೆಂಬಲಿಸಲು ಸಾಧ್ಯವಿಲ್ಲ.ʼ

ಇದನ್ನು ಓದಿ: ಭಾಗ – 5 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ದೇಶೀ ಸಂಸ್ಥಾನಗಳ ಹಿಂದೂ ರಾಜರುಗಳು ತಮ್ಮ ಹಿಂದುತ್ವ ಯೋಜನೆಯಲ್ಲಿ ಕೈಜೋಡಿಸಿದ್ದಾರೆ ಎಂಬುದನ್ನು ಸಾರ್ವರ್ಕರ್ ಸ್ವಾಗತಿಸಿದ್ದರು. ಇದನ್ನು ಅವರು ಹಿಂದೂ ಮಹಾಸಭಾದ 22ನೇ ಅಧಿವೇಶನದ ಅಧ್ಯಕ್ಷೀಯ ಭಾಷಣದಲ್ಲಿ ವ್ಯಕ್ತಪಡಿಸಿದ್ದರು.

ನಾವು ಗಮನಿಸಬೇಕಾದ ಅಂಶವೆಂದರೆ ಸಾವರ್ಕರ್ ಅವರಿಗೆ ಪ್ರಿಯವಾದ ಹಿಂದೂ ರಾಜರುಗಳು ಬ್ರಿಟಿಷರ ಬಂಟರಾಗಿದ್ದವರು. ಮೊದಲ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆದಾಗ ಭಾರತೀಯ ಹೋರಾಟಗಾರರನ್ನು ಸೋಲಿಸಲು ವಿದೇಶಿ ದೊರೆಗಳಿಗೆ ಬೆಂಬಲ ನೀಡಿದ್ದವರು. ʻʻಇದು ಇಡೀ ದೇಶದ ಸೋಲು, ನನ್ನೊಬ್ಬನದ್ದಷ್ಟೇ ಅಲ್ಲ. ಅದು ಸಂಭವಿಸಿದ್ದು ಗೂರ್ಖಾಗಳು, ಸಿಖ್ಖರು ಮತ್ತು ದೇಶೀ ಸಂಸ್ಥಾನಗಳಿಂದಾಗಿʼʼ ಎಂದು ಸ್ವತಃ ಆ ಸ್ವಾತಂತ್ರ್ಯ ಸಂಗ್ರಾಮದ ನೇತಾರರಲ್ಲಿ ಒಬ್ಬರಾದ ಬಿಥನೂರಿನ ನಾನಾಸಾಹೇಬ್ ದೇಶದ ಸಾಮಾನ್ಯ ಜನತೆಯನ್ನುದ್ದೇಶಿಸಿ 1858ರಲ್ಲಿ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಭಗತ್ ಸಿಂಗ್‌ ರಂತಹ ಕ್ರಾಂತಿಕಾರಿಗಳು ಮತ್ತು ಸಾವರ್ಕರ್

ಭಗತ್ ಸಿಂಗ್ ಮತ್ತವರ ಸಂಗಾತಿಗಳು ಸಾವರ್ಕರ್‌ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಮತ್ತು ಸಾವರ್ಕರ್ ಅವರನ್ನು ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟದ ಸಂಕೇತವಾಗಿದ್ದರು ಎಂದು ಪರಿಗಣಿಸಿದ್ದರು ಎಂದು ಹಿಂದುತ್ವ ಸಂಘಟನೆಗಳು ಕೆಲವು ವೇಳೆ ವಾದ ಮಾಡುವುದುಂಟು. ಎಲ್ಲರನ್ನೂ ಒಳಗೊಂಡ ಐಕ್ಯ ಸ್ವಾತಂತ್ರ್ಯ ಹೋರಾಟ ಎಂದು ನಂಬಿ ಹೋರಾಡುತ್ತಿದ್ದ ಸಾವರ್ಕರ್ ಅವರ ಮೊದಲ ಹಂತದ ರಾಜಕೀಯ ಬದುಕಿನಲ್ಲಿ ಅದು ನಿಜವೇ ಆಗಿತ್ತು. ನಾವು ನೆನಪಿಡಬೇಕಾದ ಸಂಗತಿಯೆಂದರೆ ಸಾವರ್ಕರ್ ಅವರು ಮೊದಲು ಆರಂಭಿಸಿದ ಕ್ರಾಂತಿಕಾರಿ ಸಂಘಟನೆ ಅಭಿನವ್ ಭಾರತ್ ಮುಸ್ಲಿಮರನ್ನೂ ಸದಸ್ಯರನ್ನಾಗಿ ಹೊಂದಿತ್ತು. ಸಾವರ್ಕರ್ ಅವರ 1857ನ್ನು ಕುರಿತ ಪುಸ್ತಕವನ್ನು ಬ್ರಿಟಿಷ್ ರಾಜನ ಆಳ್ವಿಕೆಯಿದ್ದಲ್ಲಿ ಪ್ರಕಟಿಸಲು ಅವಕಾಶ ನೀಡಲಿಲ್ಲ. ಅದನ್ನು ರಹಸ್ಯವಾಗಿ ಹಾಲೆಂಡಿನಲ್ಲಿ ಪ್ರಕಟಿಸಲಾಯಿತು. ʻಅಭಿನವ್ ಭಾರತʼದ ಮುಸ್ಲಿಂ ಸದಸ್ಯರಾಗಿದ್ದ ಸಿಕಂದರ್ ಹಯಾತ್ ಖಾನ್ (ನಂತರದಲ್ಲಿ ಪಂಜಾಬಿನ ಮುಖ್ಯಮಂತ್ರಿಯಾದವರು) ಅವರು ಆ ಪ್ರತಿಗಳನ್ನು ತಮ್ಮ ಚೀಲದ ಕೆಳಗಡೆ ಹುಸಿ ಜಾಗದಲ್ಲಿ ಇಟ್ಟುಕೊಂಡು ಯಾರಿಗೂ ಕಾಣದಂತೆ ಅಡಗಿಸಿಕೊಂಡು ತಂದಿದ್ದರು.93 ಸಾವರ್ಕರ್ ಅವರ ಆ ರೂಪವನ್ನು ಕ್ರಾಂತಿಕಾರಿಗಳು ಒಪ್ಪಿಕೊಂಡಿದ್ದರು. ಈ ಕಾರಣದಿಂದಾಗಿಯೇ ಬ್ರಿಟಿಷ್ ಪೋಲಿಸರು ಭಗತ್ ಸಿಂಗ್ ಮತ್ತು ಅವರ ಜತೆಗಾರರನ್ನು ಸಾವರ್ಕರ್ ಅವರ 1857ರ ಪುಸ್ತಕದ ನಾಲ್ಕನೇ ಆವೃತ್ತಿಯೊಂದಿಗೆ ಬಂಧಿಸಿದ್ದರು. ಭಗತ್ ಸಿಂಗ್ ಮತ್ತು ಅವರ ಜತೆಗಾರರು ಯಾರೂ ಎಂದೂ ಹಿಂದುತ್ವ ರಾಜಕೀಯವನ್ನು ಒಪ್ಪಿದವರಾಗಿರಲಿಲ್ಲ, ಪ್ರತಿಯಾಗಿ, ಕೋಮುವಾದವನ್ನು ಅವರುಗಳು ಖಡಾಖಂಡಿತವಾಗಿ ತಿರಸ್ಕರಿಸಿದ್ದರು.

(ಮುಂದುವರೆಯುವುದು)

ಇದನ್ನು ಓದಿ: ಭಾಗ – 6 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 7 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 8 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ –  9 ʻವೀರʼ ಸಾವರ್ಕರ್‌ – ಏಳು ಮಿಥ್ಯೆಗಳು

ಇದನ್ನು ಓದಿ: ಭಾಗ – 10 ʻವೀರʼ ಸಾವರ್ಕರ್ – ಏಳು ಮಿಥ್ಯೆಗಳು

Donate Janashakthi Media

Leave a Reply

Your email address will not be published. Required fields are marked *