ಬೆಂಗಳೂರು : ಬೆಂಗಳೂರು ನಗರದ ಪ್ರಮುಖ ಐಟಿ ಕಾರಿಡಾರ್ ಆಗಿರುವ ಹೊರ ವರ್ತುಲ ರಸ್ತೆ (ಒಆರ್‌ಆರ್)ಯ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರಂವರೆಗಿನ 17.1 ಕಿಮೀ ರಸ್ತೆ ಭಾಗವನ್ನು ಕಾಂಕ್ರೀಟೀಕರಣಗೊಳಿಸಲು ₹378 ಕೋಟಿ ವೆಚ್ಚದ ಬೃಹತ್ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ ಈ ಕಾಮಗಾರಿಯಿಂದ ಮುಂದಿನ ಒಂದು ವರ್ಷ ನಗರದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಬೆಂಗಳೂರು
ಈ ಯೋಜನೆಯಡಿ ಹಳೆಯ ಡಾಂಬರು ರಸ್ತೆಯನ್ನು ತೆಗೆದು 190 ಮಿಮೀ ದಪ್ಪದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುತ್ತದೆ. ಸಿಲ್ಕ್ ಬೋರ್ಡ್, ಇಬ್ಲೂರು (5.4 ಕಿಮೀ) ಹಾಗೂ ಇಬ್ಲೂರು, ಕೆ.ಆರ್.ಪುರಂ (11.6 ಕಿಮೀ) ಎಂದು ಎರಡು ಹಂತಗಳಲ್ಲಿ ಕಾಮಗಾರಿ ನಡೆಯಲಿದೆ. ಪ್ರತಿದಿನ ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ವಾಹನ ಸಂಚಾರ ಇರುವ ಈ ಮಾರ್ಗದಲ್ಲಿ 450ಕ್ಕೂ ಹೆಚ್ಚು ಐಟಿ ಕಂಪನಿಗಳು ಹಾಗೂ ಅನೇಕ ಟೆಕ್ ಪಾರ್ಕ್‌ಗಳು ಇದ್ದು, ಕಾಮಗಾರಿ ಅವಧಿಯಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುವ ಭೀತಿ ವ್ಯಕ್ತವಾಗಿದೆ.
ಸಿಲ್ಕ್ ಬೋರ್ಡ್, ಅಗರ, ಇಬ್ಲೂರು, ಮಾರತಹಳ್ಳಿ ಹಾಗೂ ಕೆ.ಆರ್.ಪುರಂ ಭಾಗಗಳಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಮೆಟ್ರೋ ಕಾಮಗಾರಿ ಹಾಗೂ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ಸಂಕಷ್ಟ ಅನುಭವಿಸುತ್ತಿರುವ ಪ್ರಯಾಣಿಕರಿಗೆ ಈ ಕಾಮಗಾರಿ ಮತ್ತೊಂದು ತಲೆನೋವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಭಾರೀ ಮಳೆ: ಜಲಾವೃತ ಸ್ಥಿತಿ; ಟ್ರಾಫಿಕ್ ಗದ್ದಲ ತೀವ್ರ
ಟ್ರಾಫಿಕ್ ನಿರ್ವಹಣೆಗೆ ಮೊದಲು ಸರ್ವಿಸ್ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಬಳಿಕ ಮುಖ್ಯ ರಸ್ತೆಯ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಯೋಜನೆಯಲ್ಲಿ ಒಳಚರಂಡಿ, ಫುಟ್‌ಪಾತ್, ಬೀದಿ ದೀಪ, ಸೈಕಲ್ ಟ್ರ್ಯಾಕ್ ಹಾಗೂ ಯುಟಿಲಿಟಿ ಡಕ್ಟ್‌ಗಳ ನಿರ್ಮಾಣವೂ ಸೇರಿದೆ.
ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇಟ್ಟಿದ್ದರೂ, ಒಂಬತ್ತು ತಿಂಗಳಲ್ಲಿ ಮುಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬಿ-ಸ್ಮೈಲ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಐಟಿ ಕಾರಿಡಾರ್‌ನ ದಿನನಿತ್ಯದ ಸಂಚಾರದ ಮೇಲೆ ಇದರ ಪರಿಣಾಮ ಗಂಭೀರವಾಗಲಿದೆ ಎಂಬ ಆತಂಕ ಈಗಾಗಲೇ ವ್ಯಕ್ತವಾಗಿದೆ.
ಇದನ್ನೂ ನೋಡಿ : ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಅಡ್ಡಿ – ನಾಯಕರು ಏನಂತಾರೆ? Janashakthi Media
