ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ‘ಇಡಿ’ಯನ್ನು ದುರುಪಯೋಗ ಮಾಡಲಾಗುತ್ತಿದೆ ಎಂದು ವಿಪಕ್ಷಗಳು ಪದೇ ಪದೇ ಆರೋಪಿಸುತ್ತಲೆ ಬಂದಿವೆ
ನವದೆಹಲಿ: ”ಸುಮ್ಮನಿರಿ, ಇಲ್ಲದಿದ್ದರೆ ಜಾರಿ ನಿರ್ದೇಶನಾಲಯ (ಇಡಿ) ನಿಮ್ಮ ಮನೆಗೆ ಬರುತ್ತದೆ” ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರು ಸದನದಲ್ಲಿ ಸಂಸದರೊಬ್ಬರನ್ನು ಬೆದರಿಸಿದ ಘಟನೆ ಗುರುವಾರ ನಡೆದಿದೆ. ಸದನದಲ್ಲಿ ತಮ್ಮ ಭಾಷಣಕ್ಕೆ ಅಡ್ಡಿಪಡಿಸುವುದನ್ನು ನಿಲ್ಲಿಸುವಂತೆ ಕೇಳಿಕೊಳ್ಳುವ ವೇಳೆ ವಿರೋಧ ಪಕ್ಷದ ಸಂಸದರಿಗೆ ಅವರು ಈ ರೀತಿಯಾಗಿ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಲೋಕಸಭೆಯಲ್ಲಿ ದೆಹಲಿ ಸೇವೆಗಳ ಮಸೂದೆಯ ಚರ್ಚೆಯ ಸಂದರ್ಭದಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ವಿರೋಧ ಪಕ್ಷದ ಸಂಸದರಿಗೆ, “ನಿಮ್ಮ ಮನೆಗೆ ಇಡಿ ಬರದೆ ಇರಲು ಒಂದು ನಿಮಿಷ ಸುಮ್ಮನಿರಿ” ಎಂದು ಹೇಳಿದ್ದಾರೆ. ಈ ವೇಳೆ ಅವರ ಹೇಳಿಕೆಗೆ ಆಕ್ಷೇಪಣೆಗಳು ವ್ಯಕ್ತವಾದಾಗ ತಮಾಷೆಗಾಗಿ ಈ ಹೇಳಿಕೆ ನೀಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: ತೀಸ್ತಾ ಸೆಟಲ್ವಾಡ್ ಅವರ ಅರ್ಜಿ ವಿಚಾರಣೆಯಿಂದ ಹಿಂದೆ ಸರಿದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ!
ಸಚಿವೆ ಲೇಖಿ ಅವರು ಕೇಂದ್ರ ಸರ್ಕಾರ ಮಂಡಿಸಿರುವ ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಟೀಕಿಸಿದ ಅವರು, ಅರವಿಂದ್ ಕೇಜ್ರಿವಾಲ್ ಅವರು ರಾಷ್ಟ್ರ ರಾಜಧಾನಿಯ ನಾಲ್ಕನೇ ಒಂದು ಭಾಗಕ್ಕೆ ಮಾತ್ರ ಮುಖ್ಯಮಂತ್ರಿಯಾಗಿದ್ದು, ದೆಹಲಿ ಒಂದು ಸಂಪೂರ್ಣ ರಾಜ್ಯವಲ್ಲ ಎಂದು ಹೇಳಿದರು.
ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದ ನಂತರ ಲೋಕಸಭೆಯು ಗುರುವಾರ ”ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದ ಸರ್ಕಾರದ (ತಿದ್ದುಪಡಿ) ಮಸೂದೆ”ಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಿತು. ದೆಹಲಿ ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್‌ಗೆ ಸಂಬಂಧಿಸಿದ ಶಿಫಾರಸುಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಈ ಕಾನೂನು ಅಧಿಕಾರ ನೀಡುತ್ತದೆ.
ದೆಹಲಿಯ ಎಎಪಿ ಸರ್ಕಾರವನ್ನು ಟೀಕಿಸುವ ವೇಳೆ ಕೆಲವು ವಿರೋಧ ಪಕ್ಷದ ಸಂಸದರು, ವಿಪಕ್ಷದ ನಾಯಕರನ್ನು ಗುರಿಯಾಗಿಸಲು ಕೇಂದ್ರ ಸರ್ಕಾರವು ಇಡಿಯನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಲೇಖಿ ಅವರು, ಸುಮ್ಮನಿರಿ, ಇಲ್ಲವೆಂದರೆ ನಿಮ್ಮ ಮನೆಗೂ ಇಡಿ ಬರಲಿದೆ ಎಂದು ಬೆದರಿಸಿದ್ದಾರೆ.
ಇದನ್ನೂ ಓದಿ: ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿ : ಆರಗಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಲೇಖಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಆಮ್ ಆದ್ಮಿ ಪಕ್ಷ, “ಮೋದಿ ಸರ್ಕಾರದ ಅಧಿಕಾರದ ಅಮಲಿನ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ನೋಡಿ. ನಕಲಿ ಇಡಿ ದಾಳಿಗಳ ಮೂಲಕ ಸಂಸತ್ತಿನಲ್ಲಿ ವಿರೋಧ ಪಕ್ಷದ ಸಂಸದರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಈ ಬೆದರಿಕೆ ಹೇಳಿಕೆಯು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲು ಪ್ರಧಾನಿ ಮೋದಿ ಇಡಿ ದಾಳಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸ್ಪಷ್ಟಪಡಿಸುತ್ತದೆ” ಎಂದು ಹೇಳಿದೆ.
"ಸುಮ್ಮನಿರಿ, ಇಲ್ಲದಿದ್ದರೆ 'ಇಡಿ' ನಿಮ್ಮ ಮನೆಗೆ ಬರುತ್ತದೆ"
ಸದನದಲ್ಲೆ ಸಂಸದನಿಗೆ ಬೆದರಿಕೆ ಹಾಕಿದ ಸಚಿವೆ ಮೀನಾಕ್ಷಿ ಲೇಖಿ
'Be quiet or #ED may visit your house'
Minister Meenakshi #Lekhi threatened the MP in the parliament#Democracy #BJPDictatorship #Shame pic.twitter.com/C2r3LbYFYA— Baapu Ammembala (@BaapuAmmembala) August 4, 2023
ಟಿಎಂಸಿ ಕೂಡ ಲೇಖಿ ಅವರ ಹೇಳಿಕೆಯನ್ನು ಖಂಡಿಸಿದ್ದು, “ಬಿಜೆಪಿ ನಾಯಕರು ನಾಚಿಕೆಯಿಲ್ಲದೆ ಪ್ರಜಾಪ್ರಭುತ್ವದ ಶತ್ರುಗಳಂತೆ ತಮ್ಮ ನಿಜವಾದ ಬಣ್ಣವನ್ನು ಪ್ರದರ್ಶಿಸುತ್ತಾರೆ! ಬಿಜೆಪಿ ಸರ್ಕಾರದ ವಿರುದ್ಧ ದನಿ ಎತ್ತಿದರೆ ಇಡಿ ದಾಳಿ ನಡೆಸುವುದಾಗಿ ವಿರೋಧ ಪಕ್ಷದ ಸಂಸದರನ್ನು ನಿರ್ಲಜ್ಜವಾಗಿ ಬೆದರಿಕೆ ಹಾಕುತ್ತಿರುವ ಸಚಿವೆ ಮೀನಾಕ್ಷಿ ಲೇಖಿ ಅವರು ಲೈವ್ ಆಗಿ ಸೆರೆಯಾಗಿದ್ದಾರೆ.” ಎಂದು ಹೇಳಿದೆ.
ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಮತ್ತು ಪ್ರತಿಪಕ್ಷಗಳ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರವು ‘ಇಡಿ’ಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕರು ಪದೇ ಪದೇ ಆರೋಪಿಸುತ್ತಲೆ ಬಂದಿದ್ದಾರೆ. ಮೇ ತಿಂಗಳ ವೇಳೆ, ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿರುವಾಗ ಪ್ರತಿಭಟನೆಯ ಕುರಿತು ಪತ್ರಕರ್ತರು ಪ್ರಶ್ನೆ ಕೇಳಿದಾಗ, ಸಚಿವೆ ಲೇಖಿ ಅವರು, ಪತ್ರಕರ್ತರಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದರು.
ವಿಡಿಯೊ ನೋಡಿ: ನನ್ನ ಮಗಳನ್ನು ಕೊಂದವರಿಗೆ ಶಿಕ್ಷೆಯಾಗಬೇಕು – ಸೌಜನ್ಯ ತಾಯಿ Janashakthi Media