ಕಲಬುರ್ಗಿ:ಕನಿಷ್ಟ ವೇತನ (ಮಾಸಿಕ 226 ಸಾವಿರ) ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಅಂಗನವಾಡಿ ಕಾರ್ಯಕರ್ತೆಯರು ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ(ಸಿಐಟಿಯು) ವತಿಯಿಂದ ಇಲ್ಲಿನ ಸುವರ್ಣ ವಿಧಾನಸೌಧ ಬಳಿ ಡಿ.17ರಂದು ಪ್ರತಿಭಟನೆ ನಡೆಸಲಾಗುವುದು’ ಎಂದು ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ ತಿಳಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಯ ಸಿಬ್ಬಂದಿ ಬೆಳಗಾವಿಯ ಸುವರ್ಣವಿಧಾನಸೌಧದ ಎದುರು, ಉಳಿದವರು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಎರಡು ದಿನ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
‘ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚಿನ ವೇತನ ನೀಡುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಹೆಚ್ಚಿನ ಹಣ ಮೀಸಲಿಡಬೇಕು. 2023ರ ಆದೇಶದಂತೆ ಗ್ರಾಚ್ಯುಟಿ ಹಣ ಬಿಡುಗಡೆಗೊಳಿಸಬೇಕು.
ಇದನ್ನೂ ಓದಿ : ವಿಮಾ ವಲಯದಲ್ಲಿ ಎಫ್‌ಡಿಐ ಮಿತಿಯನ್ನು ಶೇ. 100ಕ್ಕೆ ಹೆಚ್ಚಿಸಲು ಪ್ರಸ್ತಾಪ; ವಿಮಾ ಕಾಯ್ದೆ ತಿದ್ದುಪಡಿಗಳು ಯಾರಿಗಾಗಿ?
ಗುಜರಾತ್ ಹೈಕೋರ್ಟಿನ ತೀರ್ಪಿನಂತೆ ಅಂಗನವಾಡಿ ನೌಕರರನ್ನು ‘ಸಿ’ ಅಥವಾ ‘ಡಿ’ ದರ್ಜೆ ನೌಕರರಾಗಿ ಪರಿಗಣಿಸಿ, ಸೇವೆ ಕಾಯಂಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಬೇಕು. ಖಾಲಿ ಇರುವ ಹುದ್ದೆಗಳನ್ನು 3 ತಿಂಗಳೊಳಗೆ ಭರ್ತಿ ಮಾಡಬೇಕು. ಇಲ್ಲದಿದ್ದರೆ ಈಗ ಕಾರ್ಯ ನಿರ್ವಹಿಸುತ್ತಿರುವವರಿಗೆ ಹೆಚ್ಚುವರಿ ವೇತನ ಕೊಡಬೇಕು’ ಎಂದು ಆಗ್ರಹಿಸಿದರು.
‘ಪ್ರತಿಬಾರಿ ಅಧಿವೇಶನದಲ್ಲಿ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತ ಬಂದಿದ್ದೇವೆ. ಈ ಪೈಕಿ ಒಂದಿಷ್ಟು ಬೇಡಿಕೆ ಈಡೇರಿವೆ, ಈ ಸಲದ ಹೋರಾಟದಲ್ಲೂ ಸರ್ಕಾರದಿಂದ ನಮಗೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ’ ಎಂದರು.
ಈ ವೇಳೆ ಗೌರಮ್ಮ ಪಾಟೀಲ್, ರಾಜಮತಿ ಪಾಟೀಲ್ ಶೇಖಮ್ಮ ಕುರಿ, ಎಂ.ಬಿ.ಸಜ್ಜನ್ ಹಾಜರಿದ್ದರು.
ಇದನ್ನೂ ನೋಡಿ : ಕಿರು ಸಾಲಗಳಿಂದ ಮುಕ್ತಿ ಹೇಗೆ? ಹೋರಾಟಗಾರ ಬಿಎಂ ಭಟ್ ಹೇಳುವುದೇನು? Janashakthi Media