ಬೆಂಗಳೂರು: ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಲೋಕಸಭೆಯಲ್ಲಿ ಮಂಡನೆ ಆಗುತ್ತಿರುವುದನ್ನು ನಾನು ಮುಕ್ತವಾಗಿ ಸ್ವಾಗತಿಸುತ್ತೇನೆ. 27 ವರ್ಷಗಳ ನಂತರ ಎಚ್.ಡಿ. ದೇವೇಗೌಡರ ಕನಸಿಗೆ ಮರುಜೀವ ಬಂದಿರುವುದು ನನಗೆ ಸಂತೋಷ ಉಂಟು ಮಾಡಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಮಹಿಳಾ ಮೀಸಲಾತಿ ಸಂಬಂಧ ಸೆ-19 ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 1995ರಲ್ಲಿ ಮಾನ್ಯ ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲು ನೀಡಿ, ಅಧಿಕಾರ ನಡೆಸುವ ಹಕ್ಕು ಕಲ್ಪಿಸಿ ಮಹಿಳಾ ಸಬಲೀಕರಣದ ಸುವರ್ಣ ಅಧ್ಯಾಯಕ್ಕೆ ನಾಂದಿ ಹಾಡಿದ್ದರು. ಅಂದು ನಮ್ಮ ರಾಜ್ಯದಲ್ಲಿ ಘಟಿಸಿದ ಈ ಕ್ರಾಂತಿಕಾರಿ ವಿದ್ಯಮಾನವನ್ನು ಇಡೀ ದೇಶವೇ ಬೆರಗು ಕಂಗಳಿಂದ ನೋಡಿತ್ತು. ಇಂದು ಮಹಿಳಾ ಮೀಸಲು ಮಸೂದೆ ಲೋಕಸಭೆಯಲ್ಲಿ ಅಂಗೀಕಾರ ಆಗುವುದು ಖಚಿತವಾಗಿದ್ದು, ಈ ಮೂಲಕ ಮಾಜಿ ಪ್ರಧಾನಿಗಳ ಕನಸು ನನಸಾಗುತ್ತಿದೆ.
ಇದನ್ನೂ ಓದಿ:ವಿಪಕ್ಷಗಳ ಸಭೆಗೆ ನಮಗೆ ಆಹ್ವಾನ ನೀಡಿಲ್ಲ ನಾವು ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ: ಹೆಚ್ ಡಿ ಕುಮಾರಸ್ವಾಮಿ
1996 ಸೆಪ್ಟೆಂಬರ್ 12ರಂದು ರಾಜ್ಯಸಭೆಯಲ್ಲಿ ಈ ಐತಿಹಾಸಿಕ ಬಿಲ್ ಅನ್ನು ಮಂಡಿಸಲಾಗಿತ್ತು. ಆದರೆ, ಅವರ ಸಂಯುಕ್ತರಂಗ ಸರಕಾರದ ಮೈತ್ರಿಕೂಟದ ಕೆಲ ಮಿತ್ರಪಕ್ಷಗಳೇ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣಕ್ಕೆ ಆ ಮಸೂದೆ ಅಂಗೀಕಾರ ಆಗಲಿಲ್ಲ. ಇವತ್ತು ಕಾಂಗ್ರೆಸ್ಸಿನ I.N.D.I.A. ಮೈತ್ರಿಕೂಟವನ್ನು ಸೇರಿಕೊಂಡಿರುವ ನಾಯಕರೇ ಅಂದು ಈ ಮಸೂದೆಗೆ ತಡೆ ಒಡ್ಡಿದ್ದರು ಎಂದು ಹೇಳಿದ್ದಾರೆ.
ಮಹಿಳೆಯರಿಗೆ ಸಮಾನ ಹಕ್ಕು, ಅವಕಾಶಗಳನ್ನು ಕಲ್ಪಿಸುವುದು ಇಂದಿನ ತುರ್ತು. ಪ್ರಧಾನಿ ಮೋದಿ ಸಂಪುಟ ಕೈಗೊಂಡಿರುವ ನಿರ್ಧಾರ ಶ್ಲಾಘನೀಯ. ಈ ಮಸೋದೆಯನ್ನು ಎಲ್ಲಾ ಪಕ್ಷಗಳು ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಾರೆ.
ವಿಡಿಯೋ ನೋಡಿ:ಜನಮತ 2023 : ಎದ್ದೇಳು ಕರ್ನಾಟಕದ ಪ್ರಣಾಳಿಕೆಯಲ್ಲಿ ಏನಿದೆ? Janashakthi Media