ನವದೆಹಲಿ: ಬಿಜೆಪಿ ಅಧಿಕಾರಿದ ದುರಾಸೆಯಲ್ಲಿ ಮಹಿಳೆಯರ ಘನತೆ ಹಾಗೂ ದೇಶದ ಆತ್ಮಗೌರವದೊಂದಿಗೆ ಆಟವಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಈ ಕುರಿತು ರಾಹುಲ್ ಫೇಸ್ಬುಕ್ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯು ಎಫ್ಐ) ನಿರ್ಗಮಿತ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಆರೋಪ, ಮಣಿಪುರದಲ್ಲಿ ಮಹಿಳೆಯರನ್ನು ನಗ್ನಗೊಳಿಸಿ, ಮೆರವಣಿಗೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿರುವುದು, ಇತ್ಯಾದಿ ಘಟನೆಗಳನ್ನು ವಿಡಿಯೊದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:ಮಣಿಪುರ ಉದ್ರಿಕ್ತರು- ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ: ಇಬ್ಬರು ಸಿಬ್ಬಂದಿಗೆ ಗಾಯ
ಅಧಿಕಾರದ ದುರಾಸೆಯಲ್ಲಿ ಬಿಜೆಪಿ ಮಹಿಳೆಯರ ಘನತೆ ಮತ್ತು ದೇಶದ ಆತ್ಮಗೌರವದೊಂದಿಗೆ ಆಟವಾಡುತ್ತಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.ಮಹಿಳೆಯರನ್ನು ಗೌರವಿಸದ ದೇಶ ಎಂದಿಗೂ ಪ್ರಗತಿ ಹೊಂದಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ಬಿಜೆಪಿ ಏನು ಬೇಕಾದರೂ ಮಾಡಲು ಸಿದ್ದವಿದೆ. ಮಹಿಳೆಯರನ್ನು ಕೆಟ್ಟ ರೀತಿಯಲ್ಲಿ ನಡೆಸುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿಗೆ ರವಾನಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.